ಪ್ರತಿಭಟನೆಯ ಹಕ್ಕು: ಹೋರಾಟಗಳಿಂದ ಕಾಂಗ್ರೆಸ್ನ ದ್ವಂದ್ವ ನಿಲುವು ಬಯಲು
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಜನರಲ್ಲಿ; ಅವರು ಸಂವಿಧಾನವನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡಿದಾಗ ಪ್ರಜಾಪ್ರಭುತ್ವ ನಿಜವಾಗಿಯೂ ಉಸಿರಾಡಿದಂತೆಯೇ ಎಂಬುದನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಸ್ಪಷ್ಟಪಡಿಸಿವೆ.ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ. ಈ ಎ

ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಇರುವುದು ಜನರಲ್ಲಿ; ಅವರು ಸಂವಿಧಾನವನ್ನು ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಡಿದಾಗ ಪ್ರಜಾಪ್ರಭುತ್ವ ನಿಜವಾಗಿಯೂ ಉಸಿರಾಡಿದಂತೆಯೇ ಎಂಬುದನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ಸ್ಪಷ್ಟಪಡಿಸಿವೆ.ಬೆಂಗಳೂರು ಸೇರಿದಂತೆ ಬೇರೆ ನಗರಗಳಲ್ಲೂ ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ. ಈ ಎಲ್ಲ ಹೋರಾಟಗಳು ದೇಶದ ಜನಸಾಮಾನ್ಯರಲ್ಲಿ ‘ನಾವು ಭಾರತೀಯರು’ ಎಂಬ ಏಕ ಭಾವ ಮೂಡಿಸಿವೆ.ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಕರಡಿನಲ್ಲಿರುವ ‘ಸಂತೋಷದ ಅನ್ವೇಷಣೆ’ ಎಂದರೆ ವೈಯಕ್ತಿಕ ಬದುಕನ್ನು ಉತ್ತಮಗೊಳಿಸಿಕೊಳ್ಳುವುದಷ್ಟೇ ಅಲ್ಲ; ಉತ್ತಮ ಸಮಾಜಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಡುವುದು ಎಂದು ಚಿಂತಕಿ ಹನ್ನಾ ಅರೆಂಟ್ ಪ್ರತಿಪಾದಿಸಿದ್ದಾರೆ. ಇದೀಗ ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳೂ ಹಾಗೆಯೇ, ಉತ್ತಮ ಭಾರತ ನಿರ್ಮಾಣದ ಕನಸನ್ನು ಜೀವಂತವಾಗಿಸಿವೆ. ಅದರಿಂದ ಸಂವಿಧಾನಕ್ಕೂ ಮತ್ತೆ ಕಳೆ ಬಂದಂತಾಗಿದೆ.ಆದರೆ, ‘ಜನರು’ ದೇಶದ ಪ್ರಜಾಪ್ರಭುತ್ವಕ್ಕೆ ಜೀವ ತುಂಬಲು ಮುಂದಾದಾಗಲೆಲ್ಲಾ ಸರ್ಕಾರಗಳು ಅದನ್ನು ಬಲವಾಗಿ ಹತ್ತಿಕ್ಕುವ ಪ್ರಯತ್ನ ಮಾಡಿವೆ. ದೆಹಲಿಯ ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳವೇ ಅಲ್ಲ ಎಂದು ಘೋಷಿಸಿರುವುದು ಅದಕ್ಕೆ ಇತ್ತೀಚಿನ ಉದಾಹರಣೆ.ಸಂವಿಧಾನಕ್ಕೆ ಅಪಾಯವಿದೆ ಎನ್ನುವಂತಹ ಪರಿಸ್ಥಿತಿ ಬಂದಾಗ, ಜನರೇ ಬೀದಿಗಿಳಿದು ಹೋರಾಡುವ ಮೂಲಕ ಸಂವಿಧಾನವನ್ನು ಕಾಪಾಡುವ ಭರವಸೆ ಉಳಿಸಿದ್ದಾರೆ. ಹೋರಾಟಗಳ ಸಂದರ್ಭದಲ್ಲಿ, ಪೊಲೀಸರ ನಿರ್ಬಂಧಗಳನ್ನೂ ಲೆಕ್ಕಿಸದೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು, ಆಕಾಶವಾಣಿ ಭವನದ ಆವರಣದಲ್ಲಿ ಪ್ರತಿಭಟಿಸುವ ಮೂಲಕ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಮನ ಸೆಳೆದಿದ್ದಾರೆ.ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಬಣದ ಇತರ ನಾಯಕರು, ಸಾವಿರಾರು ಕಾರ್ಯಕರ್ತರು, ಜನರೊಂದಿಗೆ ಅಕ್ಟೋಬರ್ 12 ರಂದು ಪೊಲೀಸರ ನಿರ್ಬಂಧಗಳನ್ನೂ ಮೀರಿ ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ ನಡೆಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರುದ್ಧ ಮನವಿ ಸಲ್ಲಿಸಿದ್ದಾರೆ.ಆದರೆ, ಅದೇ ದಿನ ಅದಕ್ಕೆ ತದ್ವಿರುದ್ಧವಾದ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ. ಕಾಂಗ್ರೆಸ್ ನಾಯಕರು ದೆಹಲಿಯ ಬೀದಿಗಳಲ್ಲಿ ತಮ್ಮ ಹಕ್ಕಿಗಾಗಿ ಹೋರಾಡಿದರೆ, ಅದೇ ಪಕ್ಷದ ಸರ್ಕಾರವಿರುವ ಕರ್ನಾಟಕದ ಬೆಂಗಳೂರಲ್ಲಿ ಜನರಿಗೆ ಬೀದಿಗಿಳಿಯಲು ಅವಕಾಶ ನಿರಾಕರಿಸಲಾಗಿತ್ತು. ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದ ನೂರಾರು ಜನರನ್ನು ಪೊಲೀಸರು ತಡೆದರು. ವಿದ್ಯಾರ್ಥಿಗಳು, ವಕೀಲರು, ಜನಸಾಮಾನ್ಯರು ಮತ್ತು ಪತ್ರಕರ್ತರೊಂದಿಗೆ ಘರ್ಷಣೆ ನಡೆಯಿತು. ಲಾಠಿ ಪ್ರಹಾರವೂ ಆಯಿತು. ಹಲವರನ್ನು ವಶಕ್ಕೆ ಪಡೆದ ಘಟನೆಯೂ ಜರುಗಿತು.ದೆಹಲಿಯಲ್ಲಿ ರಾಹುಲ್ ಮಾಡುತ್ತಿದ್ದ ಹೋರಾಟಕ್ಕೆ ಸಂಪೂರ್ಣ ವಿರುದ್ಧ ಎಂಬಂತೆ ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ಅಷ್ಟು ಕ್ರೂರವಾಗಿ ನಡೆಸಿಕೊಂಡದ್ದು ಏಕೆ?ಅಚ್ಚರಿಯ ಸಂಗತಿ ಏನೆಂದರೆ, ಬೆಂಗಳೂರಿನಲ್ಲಿ ಪೊಲೀಸರು ಜನರ ಮೇಲೆ ಲಾಠಿ ಬೀಸಿದ್ದ ದಿನ ಕರ್ನಾಟಕದ ಮುಖ್ಯಮಂತ್ರಿಯೂ ದೆಹಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ ಸರ್ಕಾರ ಇದ್ದಾಗ, ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸಿ 2021ರಲ್ಲಿ ಆದೇಶ ಹೊರಡಿಸಲಾಗಿತ್ತು. ಆ ಆದೇಶವನ್ನು ಹಿಂಪಡೆಯಬೇಕು ಎಂಬ ಕೂಗು 2023ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದಾಗಿನಿಂದ ನಿರಂತರವಾಗಿ ಕೇಳಿಬರುತ್ತಿದೆ.2023ರ ಮಹಾತ್ಮ ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆ ಎದುರು ಜಮಾಯಿಸಿದ್ದ ಪ್ರತಿಭಟನಾಕಾರರು ‘ಗಾಂಧೀಜಿಗೆ ದಂಡಿ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಉದ್ಯಾನದ ನಾಲ್ಕು ಗೋಡೆಗಳ ಒಳಗೇ ಮಾಡುವಂತೆ ಹೇಳಲಾಗಿತ್ತೇ?’ ಎಂದು ಪ್ರಶ್ನಿಸಿದ್ದರು. ಆದರೆ, ಹಾಗೆ ಪ್ರತಿಭಟಿಸಿದ್ದವರ ವಿರುದ್ಧವೇ ಪ್ರಕರಣಗಳು ದಾಖಲಾದವು. ಸಾಂವಿಧಾನಿಕವಲ್ಲದ ಈ ನಿರ್ಬಂಧ ಈಗಲೂ ಮುಂದುವರಿದೆ.ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಎಸ್ಐಆರ್ ವಿರುದ್ಧ ಮನವಿ ಸಲ್ಲಿಸದಂತೆ ಅಕ್ಟೋಬರ್ 12ರಂದು ಪ್ರತಿಭಟನಾಕಾರರನ್ನು ನಿರ್ಬಂಧಿಸಿದ ಕ್ರಮವನ್ನು ಸಮರ್ಥಿಸಿಕೊಂಡಿರುವ ಪೊಲೀಸರು, ‘ಪ್ರತಿಭಟನಾಕಾರರು ಅನುಮತಿ ಪಡೆಯದೆ ಜಮಾಯಿಸಿದ್ದರು’ ಎಂದು ಹೇಳಿದ್ದರು.ದೇಶದಾದ್ಯಂತ ಪ್ರತಿಭಟನೆಗಳನ್ನು ಹತ್ತಿಕ್ಕುವ ಮಾದರಿಯನ್ನೇ ಬೆಂಗಳೂರು ಪೊಲೀಸರೂ ಅನುಸರಿಸಿದ್ದಾರೆ. ಪ್ರತಿಭಟನೆಗಳನ್ನು ಜನರ ಹಕ್ಕು ಎಂದು ಪರಿಗಣಿಸದ ಸರ್ಕಾರಗಳು, ತಮಗೆ ಬೆದರಿಕೆ ಎಂಬಂತೆಯೇ ನೋಡುತ್ತಿವೆ. ಪ್ರತಿಭಟನೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವುದು, ಸ್ಥಳ, ಸಮಯವನ್ನು ನಿಗದಿ ಮಾಡುವುದರ ಜೊತೆಗೆ, ಯಾವ ರೀತಿಯ ಘೋಷಣೆಗಳನ್ನು ಕೂಡಬೇಕು, ಯಾವ ಪೋಸ್ಟರ್ಗಳನ್ನು ಬಳಸಬೇಕು ಎಂಬುದನ್ನು ನಿಯಂತ್ರಿಸಲು ಹೊರಟಿವೆ.‘ರಾಜ್ಯವೆಂದರೆ ಆತ್ಮವಿಲ್ಲದ ಯಂತ್ರ. ಅದು ಹಿಂಸೆಯನ್ನು ಕೇಂದ್ರೀಕೃತ ಮತ್ತು ಸಂಘಟಿತ ರೂಪದಲ್ಲಿ ಪ್ರತಿನಿಧಿಸುತ್ತದೆ. ಹಿಂಸೆಯಿಂದಲೇ ಅಸ್ತಿತ್ವಕ್ಕೆ ಬಂದ ರಾಜ್ಯವು ಎಂದಿಗೂ ಅದರಿಂದ ಪ್ರತ್ಯೇಕಗೊಳ್ಳದು’ ಎಂಬುದಾಗಿ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದರು.ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗಳೂ ಅದೇ ಪಾಠವನ್ನು ಹೇಳುತ್ತಿವೆ. ಹಿಂಸೆಗೆ ಒಗ್ಗಿಕೊಂಡಿರುವ ರಾಜ್ಯವನ್ನು ಅದರಿಂದ ಹೊರಗೆ ತರುವುದು ಅಷ್ಟು ಸುಲಭವಲ್ಲ.ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬದ್ಧತೆಯ ಕುರಿತು ಈ ಹಿಂದೆಯೇ ಹೇಳಿರುವಂತೆ ‘ದ್ವಂದ್ವ ನಿಲುವು ತಳೆಯುವುದಿಲ್ಲ’ ಎನ್ನುವ ಮಾತನ್ನು ಪ್ರತಿಭಟನೆಯ ಹಕ್ಕಿನ ವಿಚಾರದಲ್ಲಿ ಉಳಿಸಿಕೊಳ್ಳಬೇಕು. ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ಸೀಮಿತಗೊಳಿಸುವ 2021ರ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ‘ಭಾರತೀಯರಾದ ನಾವು’ ಶಾಂತಿಯುತವಾಗಿ ಒಗ್ಗೂಡಿ ಪ್ರತಿಭಟಿಸುವ ಹಕ್ಕನ್ನು ಮತ್ತೆ ಜೀವಂತಗೊಳಿಸಬೇಕು. ಏಕೆಂದರೆ, ಅದೇ ನಮ್ಮ ಸಂವಿಧಾನದ ಆತ್ಮ.(ಲೇಖಕ: ಅಧ್ಯಕ್ಷರು, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ – ಕರ್ನಾಟಕ)