ಎತ್ತಿನಹೊಳೆ ಹೆಸರಿನಲ್ಲಿ ಹಣ ಲೂಟಿ: ಎಚ್.ಡಿ ಕುಮಾರಸ್ವಾಮಿ
ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಯಿತು. ಆಗ ಮುಂದಿನ ಎರಡು ಮೂರು ವರ್ಷಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದರು. ಆದರೆ ಅಂದೇ ನಾನು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.ನಗರದಲ್ಲಿ ಆಗ್ನೇಯ ಪದವೀಧರ ಕ

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಗೆ 2014ರಲ್ಲಿ ಚಿಕ್ಕಬಳ್ಳಾಪುರದಲ್ಲಿಯೇ ಶಂಕುಸ್ಥಾಪನೆ ನೆರವೇರಿಸಲಾಯಿತು. ಆಗ ಮುಂದಿನ ಎರಡು ಮೂರು ವರ್ಷಗಳಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಎತ್ತಿನಹೊಳೆ ನೀರು ಹರಿಸಲಾಗುವುದು ಎಂದರು. ಆದರೆ ಅಂದೇ ನಾನು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೆ ಎಂದು ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.ನಗರದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ ಸುರೇಶ್ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಗುರುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.2026 ಆದರೂ ಈ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಯಲಿಲ್ಲ. ₹ 23 ಸಾವಿರ ಕೋಟಿ ಯೋಜನೆಯಲ್ಲಿ ಹರಿದು ಹೋಯಿತು. ಯಾರು ಯಾರು ಎಷ್ಟು ಹಣ ತಿಂದಿದ್ದಾರೊ? ಜನರ ತೆರಿಗೆ ಹಣವನ್ನು ನೀರಾವರಿ ಯೋಜನೆಯ ಹೆಸರಿನಲ್ಲಿ ಲೂಟಿ ಹೊಡೆದರು. ಇದನ್ನು ಪ್ರತಿ ಹಳ್ಳಿಗಳ ಜನರಿಗೆ ತಲುಪಿಸಬೇಕು ಎಂದರು. ಕೆಪಿಎಸ್ಸಿಯಿಂದ ಹಣ ಲೂಟಿ ಮಾಡಲಾಗುತ್ತಿದೆ. ಪದವೀಧರರ ಬದುಕಿನ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಉದ್ಯೋಗ ನೇಮಕಾತಿಗೆ ಆಗ್ರಹಿಸಿ ಧಾರವಾಡದಲ್ಲಿ ಯುವ ಸಮುದಾಯ ಪ್ರತಿಭಟನೆ ನಡೆಸಿತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 75 ಸಾವಿರ ಉದ್ಯೋಗ ಭರ್ತಿ ಮಾಡುತ್ತೇವೆ ಎಂದರು. ಆದರೆ ಇಲ್ಲಿಯವರೆಗೂ ಉದ್ಯೋಗ ಭರ್ತಿ ನಡೆದಿಲ್ಲ ಎಂದರು.ಹೂಡಿಕೆದಾರರನ್ನು ನಮ್ಮ ರಾಜ್ಯಕ್ಕೆ ಬನ್ನಿ ಎಂದರೆ ಅವರು ಕೈ ಮುಗಿಯುವರು. ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಶೇ 50ರಷ್ಟು ಸಹಾಯಧನ ನೀಡುವರು. ಆದರೆ ನಿಮ್ಮಲ್ಲಿ ಸಬ್ಸಿಡಿ ಇಲ್ಲ ಎಂದು ಕೈಗಾರಿಕೋದ್ಯಮಿಗಳು ಹೇಳುವರು ಎಂದರು.ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ರಾಜ್ಯದಲ್ಲಿ ಎಲ್ಲಿಯವರೆಗೆ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಇರುತ್ತದೆಯೊ ಅಲ್ಲಿಯವರೆಗೂ ನಮ್ಮದೇ ಸರ್ಕಾರವಿರುತ್ತದೆ. ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ಈಗ ಚುನಾವಣೆ ನಡೆಯುತ್ತಿದೆ. ಎರಡು ಪಕ್ಷವರು ಒಮ್ಮತದಿಂದ ಅಭ್ಯರ್ಥಿ ನಿಲ್ಲಿಸಿದ್ದೇವೆ. ಸೋತರೆ ನಮಗೆ ನೈತಿಕವಾಗಿ ಕಷ್ಟವಾಗುತ್ತದೆ ಎಂದರು. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಮಾತನಾಡಿ, ಬೆಂಗಳೂರಿನಲ್ಲಿ ಸುರಂಗ ಮಾರ್ಗ, ಬಿಡದಿ ಟೌನ್ಶಿಪ್ ಮತ್ತು ಬೆಂಗಳೂರಿನ ಕಸದ ಟೆಂಡರ್ನಲ್ಲಿ ₹ 25 ಸಾವಿರ ಕೋಟಿ ಸಂಗ್ರಹಿಸಬೇಕು. ಆ ಹಣದಿಂದ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಕಾಂಗ್ರೆಸ್ ಹೊರಟಿದೆ. ರಾಜ್ಯದಲ್ಲಿ ನಡೆಯುವ ಎಲ್ಲ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದರು.ಎನ್ಡಿಎ ಅಭ್ಯರ್ಥಿ ಕೆ.ಎಂ ಸುರೇಶ್, ಶಾಸಕರಾದ ವೆಂಕಟಶಿವಾರೆಡ್ಡಿ, ಡಾ.ಸಿ.ಎನ್.ಅಶ್ವತ್ಥನಾರಾಯಣ ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮಾಜಿ ಸದಸ್ಯರಾದ ಶಿವಶಂಕರ್, ತೂಪಲ್ಲಿ ಚೌಡರೆಡ್ಡಿ, ವೈ.ಎ ನಾರಾಯಣಸ್ವಾಮಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮುಖಂಡರಾದ ಕೆ.ವಿ.ನವೀನ್ ಕಿರಣ್, ಕೆ.ವಿ ನವೀನ್ ಕಿರಣ್, ಸಿ.ಎಂ. ಆರ್ ಶ್ರೀನಾಥ್, ರಮೇಶ್ ಗೌಡ, ಮಾಜಿ ಶಾಸಕ ರಾಜಣ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುನಿಯಪ್ಪ, ಬಿಜೆಪಿ ಜಿಲ್ಲಾ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಹಾಗೂ ಎರಡೂ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು.