ಡ್ರಿಪ್ ತೆಗೆಯುವಾಗ ಮಗುವಿನ ಬೆರಳು ತುಂಡು: FIR ರದ್ದುಪಡಿಸಲು ಹೈಕೋರ್ಟ್ ನಕಾರ
ಬೆಂಗಳೂರು: ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ತುಂಡಾದ ಆರೋಪಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.ಎಫ್ಐಆರ್ ರದ್ದುಪಡಿಸುವಂತೆ ಕೋರಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಯು.ಸುಧೀರ್ ಮತ್ತು ಆಡಳಿತ

ಬೆಂಗಳೂರು: ಆರು ತಿಂಗಳ ಹೆಣ್ಣು ಮಗುವಿನ ಕೈಯಿಂದ ಡ್ರಿಪ್ ತೆಗೆಯುವಾಗ ಕಿರುಬೆರಳು ತುಂಡಾದ ಆರೋಪಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.ಎಫ್ಐಆರ್ ರದ್ದುಪಡಿಸುವಂತೆ ಕೋರಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಯು.ಸುಧೀರ್ ಮತ್ತು ಆಡಳಿತ ಮಂಡಳಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.‘ಘಟನೆಯ ಬಳಿಕ ಮಗುವನ್ನು ನಾಲ್ಕು ಗಂಟೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಇರಿಸಲಾಗಿತ್ತು. ಈ ಅವಧಿಯಲ್ಲಿ ನಿಖರವಾಗಿ ಏನಾಯಿತು ಮತ್ತು ವೈದ್ಯಕೀಯ ಶಿಷ್ಟಾಚಾರ ಪಾಲಿಸಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.‘ಪ್ರಕರಣದ ಬಗ್ಗೆ ವಸ್ತುನಿಷ್ಠ ತನಿಖೆ ನಡೆಸಬೇಕು. ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವೇ ಎಂಬುದನ್ನು ನಿರ್ಧರಿಸಲು ತನಿಖಾಧಿಕಾರಿ ವಿಷಯ ತಜ್ಞರ ನೆರವು ಪಡೆದು, ನಂತರ ಸೂಕ್ತ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ.ಪ್ರಕರಣ: ‘ಅನಾರೋಗ್ಯದ ಕಾರಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ಮಗುವಿಗೆ ಡ್ರಿಪ್ ಹಾಕಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆ ಮಾಡಲು ವೈದ್ಯರು ಸೂಚಿಸಿದ್ದರು. ನರ್ಸ್ ಡ್ರಿಪ್ ತೆಗೆಯುವಾಗ ಮಗುವಿನ ಕಿರುಬೆರಳು ತುಂಡಾಗಿದೆ’ ಎಂಬುದು ಆರೋಪ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ; ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 125(ಬಿ) ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.