ಮಂಡ್ಯ: ತಮಿಳು ಕಾಲೊನಿ ನಿವಾಸಿಗಳ ಒಕ್ಕಲೆಬ್ಬಿಸಬೇಡಿ ಎಂದು ಪ್ರತಿಭಟನೆ
ಮಂಡ್ಯ: ತಮಿಳು ಕಾಲೊನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಮತ್ತು ಮೂಲಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ತಮಿಳು ಕಾಲೊನಿಯಲ್ಲಿ ಜಮಾವಣೆಗೊಂಡ ಕಾರ್ಯಕರ

ಮಂಡ್ಯ: ತಮಿಳು ಕಾಲೊನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಮತ್ತು ಮೂಲಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು ಎಂದು ಆಗ್ರಹಿಸಿ ಜಿಲ್ಲಾ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ತಮಿಳು ಕಾಲೊನಿಯಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಬೆಂಗಳೂರು– ಮೈಸೂರು ಹಳೇ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಕಾಲೊನಿಯಲ್ಲಿ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಸುಸಜ್ಜಿತ ಶೌಚಾಲಯ, ಚರಂಡಿ ವ್ಯವಸ್ಥೆ ಮಾಡಿಕೊಡುವ ಮೂಲಕ ಘನತೆಯ ಬದುಕು ಕಲ್ಪಿಸಬೇಕು. ತಮಿಳು ಕಾಲೊನಿಯಲ್ಲಿ ಮೂರು ಅಂಗನವಾಡಿ ಕೇಂದ್ರಗಳಿವೆ. ಅವುಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ತಕ್ಷಣ ಸ್ವಂತ ಕಟ್ಟಡ ನಿರ್ಮಿಸಬೇಕು. ಮಕ್ಕಳು ಮತ್ತು ಗರ್ಭಿಣಿಯರು, ಬಾಣಂತಿಯರು, ಕಿಶೋರಿ ಅವರನ್ನು ಆದ್ಯೆಯಾಗಿ ಪರಿಗಣಿಸಿ ಸಮಗ್ರ ಶಿಶು ಅಭಿವೃದ್ಧಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಟಿ.ಎಲ್. ಕೃಷ್ಣೇಗೌಡ ಮಾತನಾಡಿ, ‘ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಮಾನತೆ ಮೂಲಭೂತ ಹಕ್ಕಾಗಿದೆ. ಬದುಕು ಎಂದರೆ ಕೇವಲ ಜೀವಂತವಾಗಿರುವುದಲ್ಲ. ಮನುಷ್ಯನಿಗೆ ತಕ್ಕ ಘನತೆ ಮತ್ತು ಗೌರವದಿಂದ ಬದುಕುವುದು. ಕಾಲೊನಿಯಲ್ಲಿ ಸಾಮಾಜಿಕ ನ್ಯಾಯ ಎತ್ತಿಹಿಡಿಯಬೇಕು’ ಎಂದು ಆಗ್ರಹಿಸಿದರು.ಸಿಪಿಎಂ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ತಮಿಳು ಕಾಲೊನಿಯಲ್ಲಿ ವಾಸಿಸುತ್ತಿರುವ ನಿವಾಸಿಗಳ ಮನೆಗೆ ವಿದ್ಯುತ್ ಸಂಪರ್ಕ ನಿರಂತರವಾಗಿರಬೇಕು. ಅದನ್ನು ಸ್ಥಗಿತಗೊಳಿಸಬಾರದು. ಅವರ ಬದುಕು ಹಕ್ಕನ್ನು ಕಿತ್ತುಕೊಳ್ಳಬಾರದು. ಇದು ಮುಂದವರಿದರೆ ನಿರಂತರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಡರಾದ ಗುರುಪ್ರಸಾದ್ ಕೆರಗೋಡು, ಬಿ.ಟಿ. ವಿಶ್ವನಾಥ್, ಬಿ.ಹನುಮೇಶ್, ಕೃಷ್ಣ, ಚೆಲುವಕುಮಾರ್, ನಾಗವೇಣಿ, ಕುಪ್ಪಮ್ಮ, ಸಂತೋಷ್ ಭಾಗವಹಿಸಿದ್ದರು.261015-40-357263398