ಸಂಭ್ರಮ ಕಸಿದ ಮಳೆ: ಯುವ ದಸರಾ ಕಾರ್ಯಕ್ರಮ ರದ್ದು
ಮೈಸೂರು: ಉತ್ತನಹಳ್ಳಿಯಲ್ಲಿ ನಡೆಯುತ್ತಿರುವ ಯುವದಸರಾ ಕಾರ್ಯಕ್ರಮದ ಮೂರನೇ ದಿನ ಸುರಿದ ಭಾರೀ ಮಳೆ ಸಂಭ್ರಮ ಕಸಿಯಿತು. ಗಾಳಿ ರಭಸಕ್ಕೆ ವೇದಿಕೆಯ ಎರಡೂ ಬದಿಯಲ್ಲಿದ್ದ ಬೃಹತ್ ಸ್ಪೀಕರ್ ಟವರ್ ವೇದಿಕೆ ಎಲ್ಇಡಿ ವಾಲ್ಗೆ ಉರುಳಿತು.ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. ವಿವಿಧ ನೃತ್ಯ ತಂಡಗಳು ನೃತ್ಯ ಪ್ರದರ್ಶನ ನೀಡಿದವು. ಗಾಯಕ ಸಿದ್ ಶ್ರೀರಾಮ ಆಗಮ
ಮೈಸೂರು: ಉತ್ತನಹಳ್ಳಿಯಲ್ಲಿ ನಡೆಯುತ್ತಿರುವ ಯುವದಸರಾ ಕಾರ್ಯಕ್ರಮದ ಮೂರನೇ ದಿನ ಸುರಿದ ಭಾರೀ ಮಳೆ ಸಂಭ್ರಮ ಕಸಿಯಿತು. ಗಾಳಿ ರಭಸಕ್ಕೆ ವೇದಿಕೆಯ ಎರಡೂ ಬದಿಯಲ್ಲಿದ್ದ ಬೃಹತ್ ಸ್ಪೀಕರ್ ಟವರ್ ವೇದಿಕೆ ಎಲ್ಇಡಿ ವಾಲ್ಗೆ ಉರುಳಿತು.ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆರಂಭವಾಯಿತು. ವಿವಿಧ ನೃತ್ಯ ತಂಡಗಳು ನೃತ್ಯ ಪ್ರದರ್ಶನ ನೀಡಿದವು. ಗಾಯಕ ಸಿದ್ ಶ್ರೀರಾಮ ಆಗಮನಕ್ಕೆ ಕೆಲವೇ ನಿಮಿಷ ಇರುವಾಗ ರಾತ್ರಿ 7.45ಕ್ಕೆ ಜೋರಾಗಿ ಗಾಳಿ ಬೀಸಿತು, ಸ್ಪೀಕರ್ ಟವರ್ ಬಿದ್ದಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿತು. ರಾತ್ರಿ 7.50ಕ್ಕೆ ಜೋರು ಮಳೆಯಾಯಿತು. ಪ್ರೇಕ್ಷಕರು ತಾವು ಕುಳಿತಿದ್ದ ಕುರ್ಚಿಯನ್ನು ತಲೆಯ ಮೇಲಿಟ್ಟು ಆಶ್ರಯ ಪಡೆದರು. ಬಯಲು ಮೈದಾನದಲ್ಲಿ ಸುರಿದ ಗಾಳಿ– ಮಳೆಯಿಂದ ಆಯೋಜಕರಿಗೂ ದಿಕ್ಕು ತೋಚದಂತಾಯಿತು. ಲೈಟ್, ಧ್ವನಿವರ್ಧಕಗಳಿಗೆ ಟಾರ್ಪಾಲ್ ಮುಚ್ಚಿದರು. ಮಳೆಯ ನಡುವೆಯೇ ಹಲವರು ವಾಹನಗಳಲ್ಲಿ ಹೊರಟ ಕಾರಣ ಸಂಚಾರ ದಟ್ಟಣೆ ಉಂಟಾಯಿತು. ರಸ್ತೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ರಸ್ತೆಯಲ್ಲೇ ನೀರು ನಿಂತು ಜನರ ಓಡಾಟಕ್ಕೂ ತೊಂದರೆಯಾಯಿತು. ಕಾರ್ಯಕ್ರಮ ರದ್ದು: ನಿರಂತರವಾಗಿ ಮಳೆ ಸುರಿಯುತ್ತಿರುವುದನ್ನು ಕಂಡು ಆಯೋಜಕರು ರಾತ್ರಿ 8.45ಕ್ಕೆ ಕಾರ್ಯಕ್ರಮ ರದ್ದುಗೊಳಿಸಿದರು. ಪೊಲೀಸರು ವಿಶಲ್ ಊದುತ್ತಾ, ಒಳಗಿದ್ದವರನ್ನು ಹೊರಕಳಿಸಿದರು.ವಿವಿಧ ಕಡೆಗಳಿಂದ ತೆರಳಿದ ಕಾರಣ, ಜನರಿಗೆ ಯಾವ ಭಾಗದಿಂದ ತೆರಳಬೇಕು ಎಂದು ಗೊಂದಲ ಉಂಟಾಯಿತು. ವೇದಿಕೆ ಹಿಂಭಾಗದಲ್ಲಿರುವ ಆಗಮನ ದ್ವಾರದಿಂದ ಮುಖ್ಯ ರಸ್ತೆಗೆ ತೆರಳಲು ದೂರವಿರುವ ಕಾರಣ ಪೊಲೀಸರು ಆಂಬುಲೆನ್ಸ್ ಹಾಗೂ ಪೊಲೀಸ್ ವಾಹನದಲ್ಲಿ ರಸ್ತೆಯವರೆಗೆ ಕರೆದೊಯ್ದರು. ಹಲವರು ಕುರ್ಚಿಗಳ ಆಸರೆ ಪಡೆಯುತ್ತಾ, ವಾಹನ ನಿಲ್ದಾಣ ಸ್ಥಳ ತಲುಪಿದರು. ವೇದಿಕೆ ಮುಂಭಾಗವಿರುವ ರಸ್ತೆಗಳು ಮೈದಾನದ ಮೂಲೆ, ಮೂಲೆಯಲ್ಲಿ ಬಿಸಾಡಿ ತೆರಳಿದ್ದಾರೆ. ಧ್ವನಿವರ್ಧಕ, ಎಲ್ಇಡಿ, ಕ್ಯಾಮೆರಾಗಳಿಗಾಗಿ ಅಳವಡಿಸಿರುವ ಅಲ್ಯೂಮಿನಿಯಂ ವಾಲ್ಗಳು ಗಾಳಿಯನ್ನು ತಡೆಯುವಂತೆ ಗಟ್ಟಿಯಾಗಿ ಅಳವಡಿಸದಿರುವುದು ಜನರ ಆತಂಕಕ್ಕೆ ಕಾರಣವಾಯಿತು. ಪೊಲೀಸರ ಸಮಯ ಪ್ರಜ್ಞೆ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಂತೆ ಮಾಡಿದು. ಪೊಲೀಸ್ ವರಿಷ್ಠಾಧಿಕಾರಿಗಳಾದ ಮಲ್ಲಿಕಾರ್ಜುನ ಬಾಲದಂಡಿ, ಬಿಂದುಮಣಿ, ಶುಭನ್ವಿತಾ ಮಳೆ ಹೆಚ್ಚಾಗುತ್ತಿದ್ದಂತೆ ತಮ್ಮ ತಂಡದ ಸಹಾಯದೊಂದಿಗೆ ಜನರನ್ನು ಹೊರಕಳಿಸಿದರು. ವಾಹನ ಇಲ್ಲದಿದ್ದ ಮಹಿಳೆಯರು ಹಾಗೂ ಮಕ್ಕಳನ್ನು ಪೊಲೀಸ್ ವಾಹನದಲ್ಲಿ ಕಳುಹಿಸಿದರು.ಗಾಯಕ ಸಿದ್ ಶ್ರೀರಾಮ್ ಅವರ ಮಧುರ ಧ್ವನಿಯಲ್ಲಿ ಹಾಡುಗಳನ್ನು ಆಲಿಸಲು ಆಗಮಿಸಿದ್ದ ಸಾವಿರಾರು ಜನ ನಿರಾಸೆಯಿಂದ ಹಿಂದಿರುಗಿದರು.