ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಡುಗಡೆ ಇಲ್ಲ – ಕ್ಷಮಾದಾನ ಅರ್ಜಿ ರಿಜೆಕ್ಟ್
ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಕುಖ್ಯಾತ ರಿಂಗ್ ರೋಡ್ ಶುಭಾ(Ring Road Shuba) ಕೊಲೆ ಪ್ರಕರಣದ ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು(Mercy Petitions) ರಾಜ್ಯ ಸರ್ಕಾರ ತಿರಸ್ಕರಿಸಿದೆ. ಭಾವಿ ಪತಿಯನ್ನೇ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶುಭಾ ಶಂಕರನಾರಾಯಣ್(Shubha Shankaranaraya

ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ಕುಖ್ಯಾತ ರಿಂಗ್ ರೋಡ್ ಶುಭಾ(Ring Road Shuba) ಕೊಲೆ ಪ್ರಕರಣದ ಅಪರಾಧಿಗಳ ಕ್ಷಮಾದಾನ ಅರ್ಜಿಯನ್ನು(Mercy Petitions) ರಾಜ್ಯ ಸರ್ಕಾರ ತಿರಸ್ಕರಿಸಿದೆ. ಭಾವಿ ಪತಿಯನ್ನೇ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶುಭಾ ಶಂಕರನಾರಾಯಣ್(Shubha Shankaranarayana) ಮತ್ತು ಆಕೆಯ ಪ್ರಿಯಕರ ಡಿ. ಅರುಣ್ ವರ್ಮಾ ಅವರ ಬಿಡುಗಡೆ ಭಾಗ್ಯಕ್ಕೆ ಸರ್ಕಾರ ಕೊಕ್ ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ(Cabinet Meeting) ಈ ಅರ್ಜಿಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಅಪರಾಧದ ತೀವ್ರತೆ ಹಾಗೂ ಸಮಾಜದ ಮೇಲೆ ಬೀರಿದ ಪರಿಣಾಮವನ್ನು ಪರಿಗಣಿಸಿದ ಸಚಿವ ಸಂಪುಟ, ಯಾವುದೇ ಕಾರಣಕ್ಕೂ ಕ್ಷಮಾದಾನ ನೀಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದು ಅರ್ಜಿಯನ್ನು ತಿರಸ್ಕರಿಸಿದೆ. ಸಂಪುಟದ ಈ ಶಿಫಾರಸನ್ನು ಇದೀಗ ಅಧಿಕೃತ ಅಂಕಿತಕ್ಕಾಗಿ ರಾಜ್ಯಪಾಲರ ಅಂಗಳಕ್ಕೆ ರವಾನಿಸಲಾಗುತ್ತದೆ. ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್(Supreme Court) ಎತ್ತಿಹಿಡಿದ ಬಳಿಕ, ಶಿಕ್ಷೆಯಿಂದ ವಿನಾಯಿತಿ ಹಾಗೂ ಕ್ಷಮಾದಾನ ಕೋರಿ ಶುಭಾ ಶಂಕರನಾರಾಯಣ್ ಮತ್ತು ಅರುಣ್ ವರ್ಮಾ ನೇರವಾಗಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರ ಸಚಿವಾಲಯವು ನಿಯಮಾನುಸಾರ ವರದಿ ನೀಡುವಂತೆ ಗೃಹ ಇಲಾಖೆಗೆ ಈ ಕಡತವನ್ನು ಕಳುಹಿಸಿಕೊಟ್ಟಿತ್ತು. ಗೃಹ ಇಲಾಖೆಯು ಕಾರಾಗೃಹ ಅಧಿಕಾರಿಗಳು ಹಾಗೂ ಪೊಲೀಸರಿಂದ ಅಭಿಪ್ರಾಯ ಪಡೆದು ಕಡತವನ್ನು ಸಚಿವ ಸಂಪುಟದ ಮುಂದಿಟ್ಟಿತ್ತು. ಸಂಪುಟವು ಅರ್ಜಿಯನ್ನು ಸಂಪೂರ್ಣವಾಗಿ ತಳ್ಳಿಹಾಕುವ ಮೂಲಕ ಅಪರಾಧಿಗಳಿಗೆ ಕಾನೂನಿನ ಹಿನ್ನಡೆ ಉಂಟುಮಾಡಿದೆ. ಏನಿದು ಪ್ರಕರಣ? 2003ರಲ್ಲಿ ನಡೆದ ಈ ಭೀಕರ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕಾನೂನು ವಿದ್ಯಾರ್ಥಿನಿಯಾಗಿದ್ದ ಶುಭಾ ಶಂಕರನಾರಾಯಣ್ಗೆ ಸಾಫ್ಟ್ವೇರ್ ಇಂಜಿನಿಯರ್ ಬಿ.ವಿ. ಗಿರೀಶ್ ಅವರೊಂದಿಗೆ 2003 ರ ನವೆಂಬರ್ 30 ರಂದು ಮದುವೆ ನಿಶ್ಚಯವಾಗಿತ್ತು. ಆದರೆ ಶುಭಾಗೆ ತನ್ನ ಕಾಲೇಜು ಪ್ರೇಮಿ ಅರುಣ್ ವರ್ಮಾ ಜೊತೆ ಇರಲು ಇಷ್ಟವಿತ್ತು. ನಿಶ್ಚಿತಾರ್ಥ ಮುಗಿದ ಕೆಲವೇ ದಿನಗಳಲ್ಲಿ (ಡಿಸೆಂಬರ್ 3) ಶುಭಾ ತನ್ನ ಭಾವಿ ಪತಿ ಗಿರೀಶ್ನನ್ನು ಡಿನ್ನರ್ ನೆಪದಲ್ಲಿ ಜಕ್ಕೂರು ಬಳಿಯ ರಿಂಗ್ ರೋಡ್ಗೆ ಕರೆದೊಯ್ದಳು. ಶುಭಾ ಆ ದಿನ ರಾತ್ರಿ ಗಿರೀಶ್ ಅವರನ್ನು ವಿಮಾನಗಳನ್ನು ನೋಡುವ ನೆಪದಲ್ಲಿ ಹೆಣ್ಣೂರು-ಜಕ್ಕೂರು ಸಂಪರ್ಕಿಸುವ ರಿಂಗ್ ರೋಡ್ನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಕಾರು ನಿಲ್ಲಿಸಿ ಇಬ್ಬರೂ ಮಾತನಾಡುತ್ತಾ ರಸ್ತೆ ಬದಿಯಲ್ಲಿ ನಿಂತಿದ್ದಾಗ, ಮೊದಲೇ ಹೊಂಚು ಹಾಕಿ ಸಂಚು ರೂಪಿಸಿದ್ದ ಅರುಣ್ ವರ್ಮಾ ಮತ್ತು ಆತನ ಸಹಚರ ವೆಂಕಟೇಶ್ ಹಿಂದಿನಿಂದ ಬಂದು ಕಬ್ಬಿಣದ ರಾಡ್ನಿಂದ ಗಿರೀಶ್ ತಲೆಗೆ ಬಲವಾಗಿ ಹೊಡೆದಿದ್ದರು. ಗಿರೀಶ್ ರಕ್ತದ ಮಡುವಿನಲ್ಲಿ ಕೆಳಗೆ ಬೀಳುತ್ತಿದ್ದಂತೆ, ಅವರ ದೇಹವನ್ನು ಅದೇ ರಸ್ತೆಯ ಬದಿಯಲ್ಲೇ ಎಸೆದು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಕೊಲೆಯ ನಂತರ ನಂತರ ಶುಭಾ ತನಗೇನೂ ತಿಳಿಯದಂತೆ ನಾಟಕವಾಡಿ, ಅಪರಿಚಿತರು ಬಂದು ಗಿರೀಶ್ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ ಎಂದು ಪೊಲೀಸರನ್ನು ಹಾದಿ ತಪ್ಪಿಸಲು ಯತ್ನಿಸಿದ್ದಳು. ಪ್ರಕರಣದ ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಶುಭಾ, ಅರುಣ್ ವರ್ಮಾ ಸೇರಿದಂತೆ ನಾಲ್ವರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದ್ದವು. ಆ ಸಮಯದಲ್ಲಿ ಇಡೀ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಪ್ರಮುಖ ಆಧಾರವಾಗಿದ್ದು ಮೊಬೈಲ್ ಕರೆಗಳ ವಿವರಗಳು (CDR) ಮತ್ತು SMS ಸಂದೇಶಗಳು. ಕೊಲೆ ನಡೆದ ದಿನ ಶುಭಾ ಮತ್ತು ಅರುಣ್ ವರ್ಮಾ ನಡುವೆ ನಿರಂತರವಾಗಿ ಸಂದೇಶಗಳು ರವಾನೆಯಾಗಿದ್ದವು. ಗಿರೀಶ್ನನ್ನು ಕರೆದುಕೊಂಡು ತಾನು ಎಲ್ಲಿದ್ದೀನಿ ಎಂಬುದನ್ನು ಶುಭಾ ಸಂದೇಶದ ಮೂಲಕ ಅರುಣ್ಗೆ ಲೊಕೇಷನ್ ಮಾಹಿತಿ ನೀಡುತ್ತಿದ್ದಳು. ಇದು ನ್ಯಾಯಾಲಯದಲ್ಲಿ ಪ್ರಮುಖ ಡಿಜಿಟಲ್ ಸಾಕ್ಷ್ಯವಾಗಿ ಪರಿಣಮಿಸಿತ್ತು.