ದೇವನಹಳ್ಳಿ ನಿವೇಶನ ವಂಚನೆ: 400ಕ್ಕೂ ಹೆಚ್ಚು ಜನರಿಂದ ಪ್ರತಿಭಟನೆ
ದೇವನಹಳ್ಳಿ: ತಾಲ್ಲೂಕಿನ ಬೊಮ್ಮವಾರ ಗ್ರಾಮದ ಬಳಿ ಕಡಿಮೆ ದರದಲ್ಲಿ ನಿವೇಶನ ನೀಡುವುದಾಗಿ ನಂಬಿಸಿ, 400ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ.ಹಣ ಪಾವತಿಸಿ 10ರಿಂದ 12 ವರ್ಷಗಳು ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಹಣ ಪಾವತಿಸಿದವರು ಅಮೃತಹಳ್ಳಿ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಬಿಎಸ್

ದೇವನಹಳ್ಳಿ: ತಾಲ್ಲೂಕಿನ ಬೊಮ್ಮವಾರ ಗ್ರಾಮದ ಬಳಿ ಕಡಿಮೆ ದರದಲ್ಲಿ ನಿವೇಶನ ನೀಡುವುದಾಗಿ ನಂಬಿಸಿ, 400ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ.ಹಣ ಪಾವತಿಸಿ 10ರಿಂದ 12 ವರ್ಷಗಳು ಕಳೆದರೂ ನಿವೇಶನ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿ ಹಣ ಪಾವತಿಸಿದವರು ಅಮೃತಹಳ್ಳಿ ಪೊಲೀಸ್ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಬಿಎಸ್ಎನ್ಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಮಾಹಿತಿ ತಂತ್ರಜ್ಞಾನ ನೌಕರರ ಹಾಗೂ ನಿವೃತ್ತ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹೆಸರಿನಲ್ಲಿ ನಿವೇಶನ ಹಂಚಿಕೆ ಭರವಸೆ ನೀಡಲಾಗಿತ್ತು. ಈ ಸಂಬಂಧ ಸಂಘದ ಅಧ್ಯಕ್ಷ ಬಿ.ಎಸ್.ಸುರೇಂದ್ರ, ಉಪಾಧ್ಯಕ್ಷ ಬಿ.ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಶಿವಸ್ವಾಮಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.ಬೊಮ್ಮವಾರ ಬಳಿ 12 ಎಕರೆಯಲ್ಲಿ ‘ಕ್ರೆಡೆನ್ಸಿ ಫೇಸ್–1’ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಲಾಗಿತ್ತು. ಬಡಾವಣೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರಿಂದ ಯೋಜನೆಯನ್ನು ನಂಬಿದ ನೂರಾರು ಮಂದಿ ತಲಾ ₹10 ಲಕ್ಷದಿಂದ ₹25 ಲಕ್ಷದವರೆಗೆ ಪಾವತಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಹಲವರು ತಮ್ಮ ಉಳಿತಾಯದ ಹಣವನ್ನು ಎರಡು ಮತ್ತು ಮೂರು ಕಂತುಗಳಲ್ಲಿ ಪಾವತಿಸಿದ್ದರು. ಆದರೆ, ವರ್ಷಗಳು ಕಳೆದರೂ ನಿವೇಶನ ಹಂಚಿಕೆ ಮಾಡದೆ, ಹಣವನ್ನೂ ಹಿಂದಿರುಗಿಸದೆ ಸಂಘದ ಪದಾಧಿಕಾರಿಗಳು ಸಬೂಬು ಹೇಳುತ್ತಾ ಬಂದಿದ್ದಾರೆ ಎಂದು ದೂರಿದ್ದಾರೆ.ಯಲಹಂಕದ ನಾಗೇನಹಳ್ಳಿ ನಿವಾಸಿ ಸಂಪತ್ ಕುಮಾರ್ ನೀಡಿದ ದೂರಿನ ಮೇರೆಗೆ ಜುಲೈ 18ರಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿವೇಶನಕ್ಕಾಗಿ 2015 ಮತ್ತು 2016ರಲ್ಲಿ ಎರಡು ಕಂತುಗಳಲ್ಲಿ ಒಟ್ಟು ₹6.92 ಲಕ್ಷ ಪಾವತಿಸಿದ್ದರೂ ನಿವೇಶನ ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.ನಿವೇಶನ ಹಂಚಿಕೆ ವಿಚಾರವಾಗಿ ಹಲವು ಬಾರಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದ್ದು, ಸಂಘದ ಆಡಳಿತ ಮತ್ತು ಲೆಕ್ಕಪರಿಶೋಧನೆಯಲ್ಲಿನ ಲೋಪಗಳ ಬಗ್ಗೆಯೂ ಪರಿಶೀಲನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿವರಿಸಿದ್ದಾರೆ.ಠಾಣೆ ಎದುರು ಪ್ರತಿಭಟನೆ‘ಹತ್ತು–ಹನ್ನೆರಡು ವರ್ಷಗಳಿಂದ ನಿವೇಶನ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ಸ್ವಂತ ನಿವೇಶನದ ಆಸೆಯಿಂದ ಲಕ್ಷಾಂತರ ರೂಪಾಯಿ ಪಾವತಿಸಿದ್ದೇವೆ. ಈಗ ನಿವೇಶನವೂ ಇಲ್ಲ, ಹಣವೂ ಇಲ್ಲ’ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.ನಿವೇಶನ ಹಂಚಿಕೆ ಹೆಸರಿನಲ್ಲಿ ಸಂಗ್ರಹಿಸಿರುವ ಹಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಹಣ ಪಾವತಿಸಿದವರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.261015-15-552349557