ಸಿಜೆಪಿಯ ದಾಸ್, ರಾಂಕಾಗೆ ನ್ಯಾಯಾಂಗ ಬಂಧನ
ನವದೆಹಲಿ: ಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಬಂಧಿಸಿ, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ ಜೈಲಿಗೆ ಬುಧವಾರ ಕಳುಹಿಸಲಾಯಿತು.ಜಂತರ್ ಮಂತರ್ಗೆ ದಾಸ್, ರಾಂಕಾ ಮತ್ತು ಅಜಿಂಕ್ಯ ಶಿಂಧೆ ಸೇರಿದಂತೆ ಇತರರು ತ್ರಿವರ್ಣ ಧ್ವಜದೊಂದಿಗೆ ಪ್ರವೇಶಿಸಿದ್ದರು ಮತ್ತು ಅವರನ್ನು

ನವದೆಹಲಿ: ಜಂತರ್ ಮಂತರ್ಗೆ ‘ಅತಿಕ್ರಮ ಪ್ರವೇಶ’ ಮಾಡಿದ್ದಕ್ಕಾಗಿ ಸಿಜೆಪಿ ನಾಯಕರಾದ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ಬಂಧಿಸಿ, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ತಿಹಾರ ಜೈಲಿಗೆ ಬುಧವಾರ ಕಳುಹಿಸಲಾಯಿತು.ಜಂತರ್ ಮಂತರ್ಗೆ ದಾಸ್, ರಾಂಕಾ ಮತ್ತು ಅಜಿಂಕ್ಯ ಶಿಂಧೆ ಸೇರಿದಂತೆ ಇತರರು ತ್ರಿವರ್ಣ ಧ್ವಜದೊಂದಿಗೆ ಪ್ರವೇಶಿಸಿದ್ದರು ಮತ್ತು ಅವರನ್ನು ತಕ್ಷಣವೇ ವಶಕ್ಕೆ ಪಡೆಯಲಾಗಿತ್ತು. ಬುಧವಾರ ಬೆಳಿಗ್ಗೆ ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಶಿಂಧೆ ಅವರನ್ನು ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ ಆದೇಶಿಸಿದರು. ಉಳಿದ ಇಬ್ಬರನ್ನು ಐದು ದಿನಗಳಿಗೆ ತಿಹಾರ್ ಜೈಲಿಗೆ ಕಳುಹಿಸಿದರು.ನ್ಯಾಯಾಂಗ ಆದೇಶದ ಕುರಿತು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಅವರ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಕ್ಸ್ನಲ್ಲಿ, ‘ಶಾಂತಿಯುತ ಪ್ರತಿಭಟನೆ ನಡೆಸುತ್ತಾ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವಲ್ಲ. ಇದಕ್ಕಾಗಿ ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನದ ಕೆಲಸ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು, ಇಂಡಿಯಾ ಮೈತ್ರಿಕೂಟ - ವಿವಿಧ ಬ್ಯಾನರ್ಗಳು, ಆದರೆ, ಉದ್ದೇಶ ಒಂದೇ. ಎಲ್ಲ ಪ್ರತಿಭಟನೆಗಳೂ ಒಂದೇ: ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕೇಳುತ್ತಿದ್ದಾರೆ. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ನಾವು ಅದನ್ನು ಮರಳಿ ಪಡೆಯುತ್ತೇವೆ’ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ದೀಪ್ಕೆ, ‘ಸ್ವಲ್ಪ ಧೈರ್ಯ ತೋರಿಸಿ... ಭಿನ್ನಾಭಿಪ್ರಾಯ ಹತ್ತಿಕ್ಕಲು ನೀವು ಅಷ್ಟು ದೃಢನಿಶ್ಚಯ ಹೊಂದಿದ್ದರೆ, ಇಂತಹ ಹೇಡಿತನದ ತಂತ್ರಗಳ ಹಿಂದೆ ಅಡಗಿಕೊಳ್ಳುವ ಬದಲು ಅಧಿಕೃತವಾಗಿ ತುರ್ತು ಪರಿಸ್ಥಿತಿ ಘೋಷಿಸುವ ಧೈರ್ಯ ಮಾಡಿ’ ಎಂದು ಸವಾಲು ಎಸೆದಿದ್ದಾರೆ. ಅತಿಕ್ರಮ ಪ್ರವೇಶ, ನಿಷೇಧಾಜ್ಞೆಗಳ ಉಲ್ಲಂಘನೆ, ಶಾಂತಿ ಪಾಲನೆಯ ಮುಚ್ಚಳಿಕೆ ಉಲ್ಲಂಘನೆ ಮತ್ತು ಸಾರ್ವಜನಿಕ ಸೇವಕರೊಬ್ಬರು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸಿಜೆಪಿ ನಾಯಕರ ವಿರುದ್ಧ ದೆಹಲಿ ಪೊಲೀಸರು ಮಂಗಳವಾರ ರಾತ್ರಿ ಪ್ರಕರಣ ದಾಖಲಿಸಿದ್ದರು. ಕಳೆದ ಮೂರು ದಿನಗಳಲ್ಲಿ ದಾಸ್ ಹಾಗೂ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು ಇದು ಎರಡನೇ ಬಾರಿ. ಇನ್ನೊಂದೆಡೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಯುವ ಕಾಂಗ್ರೆಸ್ ಮತ್ತು ಎಸ್ಎಫ್ಐ-ಡಿವೈಎಫ್ಐ ಸಂಘಟನೆಗಳು ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿದವು.