ಗುರಿಯಿಲ್ಲದ ಓಟದಲ್ಲಿ ಕಳೆದುಹೋಗುತ್ತಿರುವ ಯುವಕರು ಮಾಡಬೇಕಾದದ್ದು ಏನು?
ಪ್ರಸ್ತುತ ದಿನಗಳಲ್ಲಿ ಯುವಜನರು ಸಾವಿರಾರು ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಬದುಕಿನ ದಾರಿ ಹುಡುಕುತ್ತಾ ಓಡುತ್ತಿದ್ದಾರೆ. ಯಾರಿಗೆ ತಾನೇ ಬದುಕಿನಲ್ಲಿ ದೊಡ್ಡವರಾಗಬೇಕು, ಏನಾದರೂ ಸಾಧಿಸಬೇಕು ಎಂಬ ಆಸೆ ಇರುವುದಿಲ್ಲ ಹೇಳಿ? ಒಬ್ಬರಿಗೆ ಸರ್ಕಾರಿ ಅಧಿಕಾರಿಯಾಗುವ ಹಂಬಲವಿದ್ದರೆ, ಮತ್ತೊಬ್ಬರಿಗೆ ದೊಡ್ಡ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಬೇಕು. ಇನ್ನು ಕೆಲವರಿಗೆ ವಿದೇ

ಪ್ರಸ್ತುತ ದಿನಗಳಲ್ಲಿ ಯುವಜನರು ಸಾವಿರಾರು ಕನಸುಗಳನ್ನು ಕಣ್ಣಲ್ಲಿ ತುಂಬಿಕೊಂಡು ಬದುಕಿನ ದಾರಿ ಹುಡುಕುತ್ತಾ ಓಡುತ್ತಿದ್ದಾರೆ. ಯಾರಿಗೆ ತಾನೇ ಬದುಕಿನಲ್ಲಿ ದೊಡ್ಡವರಾಗಬೇಕು, ಏನಾದರೂ ಸಾಧಿಸಬೇಕು ಎಂಬ ಆಸೆ ಇರುವುದಿಲ್ಲ ಹೇಳಿ? ಒಬ್ಬರಿಗೆ ಸರ್ಕಾರಿ ಅಧಿಕಾರಿಯಾಗುವ ಹಂಬಲವಿದ್ದರೆ, ಮತ್ತೊಬ್ಬರಿಗೆ ದೊಡ್ಡ ಕಂಪನಿಯಲ್ಲಿ ದೊಡ್ಡ ಸಂಬಳದ ಕೆಲಸ ಬೇಕು. ಇನ್ನು ಕೆಲವರಿಗೆ ವಿದೇಶಕ್ಕೆ ಹಾರಬೇಕು, ಸ್ವಂತ ಬಿಸಿನೆಸ್ ಮಾಡಿ ಉದ್ಯಮಿಯಾಗಬೇಕು ಎಂಬ ಕನಸಿರುತ್ತದೆ. ಸಿನಿಮಾ, ರಾಜಕೀಯ, ಕಲೆಯೋ ಅಥವಾ ಸಮಾಜ ಸೇವೆ ಹೀಗೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದಲ್ಲ ಒಂದು ರೀತಿಯ ಆಸೆಗಳ ರಾಶಿಯೇ ಇರುತ್ತದೆ. ಆದರೆ ಇಷ್ಟೆಲ್ಲಾ ಕನಸುಗಳ ಮಧ್ಯೆ, ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಬ್ಬ ಯುವಜನನ್ನು ಕಾಡುವ ಒಂದೇ ಒಂದು ಗೊಂದಲವೆಂದರೆ, ‘ನನ್ನ ನಿಜವಾದ ಗುರಿ ಯಾವುದು?’ ಎನ್ನುವುದು.ನನ್ನ ನಿಜವಾದ ಗುರಿ ಯಾವುದು?ಬದುಕಿನ ಈ ಹಾದಿಯಲ್ಲಿ ನಮ್ಮ ಮನಸ್ಸು ಕ್ಷಣಕ್ಷಣಕ್ಕೂ ತನ್ನ ಬಣ್ಣ ಮತ್ತು ದಿಕ್ಕನ್ನು ಬದಲಾಯಿಸುತ್ತಿರುತ್ತದೆ. ಬೆಳಿಗ್ಗೆ ಯಾವುದೋ ಒಂದು ಪುಸ್ತಕ ಓದಿ ನಾನೂ ದೊಡ್ಡ ಅಧಿಕಾರಿಯಾಗುತ್ತೇನೆ ಎಂದುಕೊಂಡರೆ, ಮಧ್ಯಾಹ್ನ ಯಶಸ್ವಿ ಉದ್ಯಮಿಯೊಬ್ಬರ ಕಥೆ ನೋಡಿ ಬಿಸಿನೆಸ್ ಮಾಡಬೇಕೆನಿಸುತ್ತದೆ. ಸಂಜೆ ಯಾವುದೋ ಸ್ನೇಹಿತನ ವಿದೇಶಿ ಫೋಟೋ ನೋಡಿದಾಗ ನಮ್ ಬದುಕೂ ಹೀಗೇ ಇರಬೇಕಿತ್ತಲ್ಲ ಅನಿಸುತ್ತದೆ. ಮೊಬೈಲ್ ಕೈಗೆತ್ತಿಕೊಂಡರೆ ಸಾಕು, ಹತ್ತು ಜನರ ಯಶಸ್ಸು, ಐದು ಜನರ ಪ್ರವಾಸ, ಮತ್ತೊಬ್ಬರ ಹೊಸ ಕಾರು ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಅವರ ಬದುಕಿನ ಆ ಒಂದೇ ಒಂದು ಸುಂದರ ಕ್ಷಣವನ್ನು ನೋಡಿ, ನಮ್ಮ ಇಡೀ ಬದುಕನ್ನು ಅವರೊಂದಿಗೆ ಹೋಲಿಕೆ ಮಾಡಿಕೊಂಡು ಕೊರಗಲು ಶುರು ಮಾಡುತ್ತೇವೆ. ಇನ್ನು ಪೋಷಕರ ಕಾಳಜಿಯ ಮಾತುಗಳು ಮತ್ತು ಸಮಾಜದ ನಿರೀಕ್ಷೆಗಳ ಭಾರ ಬೇರೆ ನಮ್ಮನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸುತ್ತದೆ. ಸ್ನೇಹಿತರು ಯಾವುದೋ ದಾರಿಯಲ್ಲಿ ಹೊರಟಿದ್ದಾರೆ ಎಂದ ಮಾತ್ರಕ್ಕೆ ನಾವೂ ಅದೇ ದಾರಿಯಲ್ಲಿ ಓಡಬೇಕು ಎನ್ನುವ ನಿಯಮವಿಲ್ಲ. ಆದರೆ ದುರಾದೃಷ್ಟವೆಂದರೆ, ನಾವು ಬದುಕುತ್ತಿರುವುದು ನಮ್ಮ ಸ್ವಂತ ಆಸೆಯ ಬದುಕನ್ನೋ ಅಥವಾ ಬೇರೆಯವರು ನಮಗಾಗಿ ಆಯ್ಕೆ ಮಾಡಿದ ಬದುಕನ್ನೋ ಎಂಬ ಅರಿವೇ ನಮಗೆ ಇಲ್ಲದಂತಾಗಿದೆ. ಓಟದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳಿಹಾಗಾದರೆ ಇದಕ್ಕೆ ಪರಿಹಾರವೇನು? ಈ ಗೊಂದಲದಿಂದ ಹೊರಬರಲು ನಾವು ಮಾಡಬೇಕಾದ ಮೊದಲ ಕೆಲಸವೆಂದರೆ ಈ ಅತಿವೇಗದ ಓಟದಿಂದ ಸ್ವಲ್ಪ ಸಮಯ ನಿಲ್ಲುವುದು. ಮೊಬೈಲ್ ಬದಿಗಿಟ್ಟು, ಜಗತ್ತಿನ ಹಂಗನ್ನು ತೊರೆದು, ಸ್ವಲ್ಪ ಹೊತ್ತು ನಮ್ಮೊಂದಿಗೆ ನಾವೇ ಮಾತನಾಡಿಕೊಳ್ಳಬೇಕು. ಯಾರ ಅನುಕರಣೆಯೂ ಇಲ್ಲದೆ, ಯಾರೊಂದಿಗೂ ನಮ್ಮನ್ನು ಹೋಲಿಸಿಕೊಳ್ಳದೆ ಒಂಟಿಯಾಗಿ ಕೂತು ಯೋಚಿಸಬೇಕು. ನನಗೆ ನಿಜವಾಗಿಯೂ ಏನು ಇಷ್ಟ? ಯಾವ ಕೆಲಸವನ್ನು ಮಾಡಿದಾಗ ನನಗೆ ಸಮಯ ಕಳೆದದ್ದೇ ತಿಳಿಯುವುದಿಲ್ಲ? ನನ್ನ ಸಾಮರ್ಥ್ಯವೇನು, ದೌರ್ಬಲ್ಯವೇನು? ಎಂದು ನಮ್ಮೊಳಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಸ್ವಂತ ಇಚ್ಛೆಯಿಂದ ಆಲೋಚಿಸಿಬದುಕಿನಲ್ಲಿ ಗುರಿ ಎಂದರೆ ಎಲ್ಲರಂತೆ ದೊಡ್ಡ ಕೋಟ್ಯಾಧಿಪತಿಯಾಗುವುದು ಅಥವಾ ಸಮಾಜದಲ್ಲಿ ಯಾರೋ ಮೆಚ್ಚುವಂತಹ ದೊಡ್ಡ ಸಾಧನೆ ಮಾಡುವುದೇ ಆಗಬೇಕೆಂದೇನಿಲ್ಲ. ಒಬ್ಬರಿಗೆ ಒಳ್ಳೆಯ ಶಿಕ್ಷಕರಾಗುವುದು ಗುರಿಯಾಗಬಹುದು, ಮತ್ತೊಬ್ಬರಿಗೆ ಪ್ರಾಮಾಣಿಕ ಪತ್ರಕರ್ತನಾಗುವುದು ಖುಷಿ ಕೊಡಬಹುದು, ಇನ್ನು ಕೆಲವರಿಗೆ ತಮ್ಮ ವೃದ್ಧ ತಂದೆ-ತಾಯಿಯನ್ನು ನೆಮ್ಮದಿಯಿಂದ ನೋಡಿಕೊಳ್ಳುವುದು ಅಥವಾ ತಮ್ಮ ಊರಿನಲ್ಲಿ ಯಾವುದಾದರೂ ಸಣ್ಣದೊಂದು ಒಳ್ಳೆಯ ಕೆಲಸ ಮಾಡುವುದು ದೊಡ್ಡ ಗುರಿಯಾಗಿರಬಹುದು. ಗುರಿಯ ಮೌಲ್ಯ ಅದರ ದೊಡ್ಡ ಗಾತ್ರದಲ್ಲಿಲ್ಲ, ಬದಲಿಗೆ ಅದು ನಮ್ಮ ಮನಸ್ಸಿನಿಂದ, ನಮ್ಮ ಸ್ವಂತ ಇಚ್ಛೆಯಿಂದ ಬಂದಿದೆಯೇ ಎಂಬುದರಲ್ಲಿದೆ.ಜೀವನವೆಂದರೆ ಎಲ್ಲರೂ ಒಂದೇ ಸಮಯದಲ್ಲಿ ಉತ್ತರಿಸಬೇಕಾದ ಯಾವದೂ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲ. ಪ್ರತಿಯೊಬ್ಬರ ಸಮಯ ಮತ್ತು ಬದುಕಿನ ವೇಗ ಬೇರೆ ಬೇರೆಯಾಗಿರುತ್ತದೆ. ಹಾಗಾಗಿ, ಸಾವಿರ ಕನಸುಗಳನ್ನು ಕಾಣುವುದು ತಪ್ಪಲ್ಲ, ಆ ಕನಸುಗಳ ಬೆನ್ನತ್ತಿ ಹೊರಡುವುದು ಕೂಡ ತಪ್ಪಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ಎಲ್ಲರಂತೆ ಗುಂಪಿನಲ್ಲಿ ಗೋವಿಂದ ಎನ್ನುವಂತೆ ಓಡುವುದನ್ನು ಬಿಟ್ಟು, ನಮಗೆ ಸೇರಿದ ದಾರಿಯಲ್ಲಿ, ನಮ್ಮತನಕ್ಕೆ ಒಪ್ಪುವ ಬದುಕಿನ ಕಡೆಗೆ ವಿಶ್ವಾಸದಿಂದ ಹೆಜ್ಜೆ ಹಾಕಿ ನಡೆಯುವುದೇ ನಿಜವಾದ ಬದುಕಿನ ಸಾರ್ಥಕತೆ.(ಲೇಖಕ: ಜಿ. ಎಸ್. ಶರಣು: ಉಪನ್ಯಾಸಕ, ಪತ್ರಿಕೋದ್ಯಮ ವಿಭಾಗ, ವಿವಿ ಕಲಾ ಕಾಲೇಜು, ತುಮಕೂರು)