ಕೋಮಲ್ ನಟನೆಯ ರಿಲ್ಯಾಕ್ಸ್ ಸಿನಿಮಾದ ಸಾಂಗ್ ರಿಲೀಸ್
ನಟ ಕೋಮಲ್ ಕುಮಾರ್ (Komal) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ (Rolex) ಚಿತ್ರದ ಶೀರ್ಷಿಕೆಯನ್ನು ಈಗ ‘ರಿಲ್ಯಾಕ್ಸ್’ (Relax) ಎಂದು ಬದಲಾಯಿಸಲಾಗಿದೆ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ನಿರ್ಮಾಪಕ ಅಂಬಟಿ ಮಧು ಮೋಹನ್ ಬಿಡುಗಡೆ ಮಾಡಿದರು. ಬಳ

ನಟ ಕೋಮಲ್ ಕುಮಾರ್ (Komal) ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ರೋಲೆಕ್ಸ್’ (Rolex) ಚಿತ್ರದ ಶೀರ್ಷಿಕೆಯನ್ನು ಈಗ ‘ರಿಲ್ಯಾಕ್ಸ್’ (Relax) ಎಂದು ಬದಲಾಯಿಸಲಾಗಿದೆ. ಇತ್ತೀಚೆಗೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿರುವ ಈ ಚಿತ್ರದ ಹಾಡುಗಳನ್ನು ನಿರ್ಮಾಪಕ ಅಂಬಟಿ ಮಧು ಮೋಹನ್ ಬಿಡುಗಡೆ ಮಾಡಿದರು. ಬಳಿಕ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ಹಾಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಅಂಬಟಿ ಮಧು ಮೋಹನ್, ‘ರಿಲ್ಯಾಕ್ಸ್’ ಚಿತ್ರದ ಹಾಡುಗಳು ಬಹಳ ಸುಮಧುರವಾಗಿ ಮೂಡಿಬಂದಿವೆ. ಖ್ಯಾತ ಗಾಯಕ-ಗಾಯಕಿಯರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಆಂಧ್ರಪ್ರದೇಶದಲ್ಲೂ ಚಿತ್ರದ ಹಾಡುಗಳಿಗೆ ಜನರು ಮನಸೋತಿದ್ದಾರೆ. ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಸೇರಿದಂತೆ ಎಲ್ಲ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಅದ್ಭುತವಾಗಿದೆ. ಎಲ್ಲರೂ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು. ನಿರ್ದೇಶಕ ಶ್ರೀನಿವಾಸ್ ಮಂಡ್ಯ ಮಾತನಾಡಿ, ‘ರೋಲೆಕ್ಸ್’ ಎಂದು ಆರಂಭವಾದ ಚಿತ್ರ ಈಗ ‘ರಿಲ್ಯಾಕ್ಸ್’ ಎಂಬ ಹೆಸರಿನೊಂದಿಗೆ ಪ್ರೇಕ್ಷಕರ ಮುಂದೆ ಬರಲಿದೆ. ಆಂಧ್ರಪ್ರದೇಶ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರೂ ಆಗಿರುವ ನಿರ್ಮಾಪಕ ಅಂಬಟಿ ಮಧು ಮೋಹನ್ ಯಾವುದೇ ಕೊರತೆಯಾಗದಂತೆ ಅದ್ದೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈಗಾಗಲೇ ಮೂರು ಹಾಡುಗಳು ಬಿಡುಗಡೆಯಾಗಿವೆ. ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ಹೆಸರಾಂತ ಗಾಯಕ-ಗಾಯಕಿಯರು ಹಾಡುಗಳನ್ನು ಹಾಡಿದ್ದಾರೆ. ಛಾಯಾಗ್ರಾಹಕ ರಾಕೇಶ್ ತಿಲಕ್ ಸೇರಿದಂತೆ ಎಲ್ಲ ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ಪ್ರೇಕ್ಷಕರು ಒಳ್ಳೆಯ ಚಿತ್ರವನ್ನು ನೋಡಿ ಹಾರೈಸಬೇಕು ಎಂದರು. ನಟ ಕೋಮಲ್ ಕುಮಾರ್ ಮಾತನಾಡಿ, ‘ರೋಲೆಕ್ಸ್’ ಎಂದು ಶೀರ್ಷಿಕೆ ಇಟ್ಟಾಗಲೇ ಯಾವುದಾದರೂ ಬ್ರ್ಯಾಂಡ್ ಹೆಸರನ್ನು ಬಳಸಿದರೆ ಮುಂದೆ ತೊಂದರೆಯಾಗಬಹುದು ಎಂದು ಹೇಳಿದ್ದೆ. ‘ರಿಲ್ಯಾಕ್ಸ್’ ನಮ್ಮ ಚಿತ್ರದ ಅಡಿಬರಹವಾಗಿತ್ತು. ಈಗ ಅದೇ ಚಿತ್ರದ ಶೀರ್ಷಿಕೆಯಾಗಿರುವುದು ಸೂಕ್ತವಾಗಿದೆ. ಬಹಳ ವರ್ಷಗಳ ಬಳಿಕ ಈ ಜಾನರ್ನ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ನಿರ್ಮಾಪಕ ಅಂಬಟಿ ಮಧು ಮೋಹನ್ ಪ್ರೀತಿಯಿಂದ ಚಿತ್ರ ನಿರ್ಮಿಸಿದ್ದಾರೆ. ಶ್ರೀನಿವಾಸ್ ಮಂಡ್ಯ ಅವರ ನಿರ್ದೇಶನ, ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳನ್ನು ಒಳಗೊಂಡಿರುವ ಈ ಚಿತ್ರ ಶೀಘ್ರದಲ್ಲೇ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದರು. ಇದನ್ನೂ ಓದಿ: ಹಾಸ್ಟೆಲ್ನ 6ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು ನಟಿ ಸೋನಾಲ್ ಮೊಂತೆರೊ ಮಾತನಾಡಿ, ಚಿತ್ರೀಕರಣದ ಸಂಪೂರ್ಣ ಅವಧಿಯಲ್ಲಿ ನಿರ್ಮಾಪಕರು ತಮ್ಮನ್ನು ಮಗಳಂತೆ ನೋಡಿಕೊಂಡಿದ್ದಾರೆ. ಇಡೀ ಚಿತ್ರತಂಡ ಕುಟುಂಬದಂತಿತ್ತು. ಇದೇ ಮೊದಲ ಬಾರಿಗೆ ಕೋಮಲ್ ಕುಮಾರ್ ಅವರೊಂದಿಗೆ ನಟಿಸಿದ್ದು, ಅವರ ಜೊತೆ ಕೆಲಸ ಮಾಡಿರುವುದು ಸಾಕಷ್ಟು ಕಲಿಯಲು ಸಹಕಾರಿಯಾಯಿತು. ಮತ್ತೆ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದರು. ಕಾರ್ಯಕಾರಿ ನಿರ್ಮಾಪಕ ಮುರುಳಿ ಕೃಷ್ಣ, ಛಾಯಾಗ್ರಾಹಕ ರಾಕೇಶ್ ತಿಲಕ್, ಸಂಕಲನಕಾರ ಅರವಿಂದ ರೆಡ್ಡಿ, ಕ್ರಿಯೇಟಿವ್ ಹೆಡ್ ರಾಜೇಶ್ ವರ್ಮ ಸೇರಿದಂತೆ ಚಿತ್ರತಂಡದ ಹಲವು ಸದಸ್ಯರು ಚಿತ್ರದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಅಸ್ಸಾಂ ಭವನ’ ಲೋಕಾರ್ಪಣೆ – ರಾಹುಲ್ ವಿರುದ್ಧ ಹಿಮಾಂತ ಕಿಡಿ