ಯೋಗ, ಧ್ಯಾನದಿಂದ ಮಾನಸಿಕ ಆರೋಗ್ಯ ಸುಧಾರಣೆ: ನ್ಯಾಯಾಧೀಶ ಈಶ್ವರ್
ಚಾಮರಾಜನಗರ: ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದ್ದು, ಪ್ರತಿದಿನ ಯೋಗ, ಧ್ಯಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಆಯೋಜಿ

ಚಾಮರಾಜನಗರ: ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಬಹಳ ಮುಖ್ಯವಾಗಿದ್ದು, ಪ್ರತಿದಿನ ಯೋಗ, ಧ್ಯಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಆಯೋಜಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಬೇಕಿದ್ದು, ಈ ನಿಟ್ಟಿನಲ್ಲಿ ಅರಿವು ಮೂಡಿಸಬೇಕು. ದೈಹಿಕವಾಗಿ ಆರೋಗ್ಯವಾಗಿದ್ದರೂ ಮಾನಸಿಕವಾಗಿ ದುರ್ಬಲವಾಗಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುವುದು ಅಗತ್ಯ ಎಂದರು.ಮನಸ್ಸಿಗೆ ಹಿತ ನೀಡುವ ಆಲೋಚನೆಗಳು, ಭಾವನೆಗಳು ಮತ್ತು ನಡವಳಿಕೆಗಳು ಇರಬೇಕು. ಇದಕ್ಕಾಗಿ ನಿಯಮಿತವಾಗಿ ವ್ಯಾಯಾಮ, ಧ್ಯಾನ ಮಾಡುವ ಮೂಲಕ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ನಿತ್ಯ 8 ಗಂಟೆಗಳ ಕಾಲ ನಿದ್ರೆ, ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವನೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆರೋಗ್ಯಕ್ಕೆ ಮಾರಕವಾದ ಮದ್ಯಪಾನ, ಧೂಮಪಾನ ಹಾಗೂ ಇತರೆ ಕೆಟ್ಟ ಅಭ್ಯಾಸಗಳಿಂದ ದೂರವಿದ್ದು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಚಂದ್ರಶೇಖರ್ ಮಾತನಾಡಿ, ಸದೃಢ ಆರೋಗ್ಯವೆಂದರೆ ರೋಗಗಳಿಲ್ಲದಂತೆ ಜೀವಿಸುವುದಲ್ಲ, ಸಾಮಾಜಿಕ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಕ್ಷೇಮವೂ ಒಳಗೊಂಡಂತೆ ಸದೃಢ ಆರೋಗ್ಯ ಪಡೆಯಬೇಕು. ಜೀವನದಲ್ಲಿ ಸಂತಸ, ನೆಮ್ಮದಿಯಿಂದ ಬದುಕಲು ಮಾನಸಿಕ ಆರೋಗ್ಯ ಬಹಳ ಮುಖ್ಯ ಎಂದು ಪ್ರತಿಪಾದಿಸಿದರು.ಕೆಲವರು ಮಾನಸಿಕ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳದೆ ನೋವು ಅನುಭವಿಸುತ್ತಾರೆ, ಚಿಕಿತ್ಸೆ ಪಡೆಯಲೂ ಹಿಂಜರಿಯುತ್ತಾರೆ. ಮಾನಸಿಕ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ತಿಳಿಸಿದರು.ಇದೇವೇಳೆ ಜೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿಗಳು ಮಾನಸಿಕ ಆರೋಗ್ಯದ ಬಗ್ಗೆ ಜನಜಾಗೃತಿ ಮೂಡಿಸುವ ನಾಟಕ ಪ್ರದರ್ಶಿಸಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ, ಜಿಲ್ಲಾ ಮಾನಸಿಕ ವೈದ್ಯೆ ಡಾ.ಮೇರಿ ಅಂಜಲ, ಸರ್ಕಾರಿ ನರ್ಸಿಂಗ್ ಕಾಲೇಜು, ಜೆ.ಎಸ್.ಎಸ್ ನರ್ಸಿಂಗ್ ಕಾಲೇಜು, ಮನೋನಿಧಿ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಘೋಷಣೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆಯಿರಿಮನೋರೋಗ ಗುಣಪಡಿಸಿಕೊಳ್ಳಲು ಚಿಕಿತ್ಸೆ ಲಭ್ಯವಿದೆ. ಸಮಸ್ಯೆ ಉಲ್ಬಣಗೊಳ್ಳುವವರೆಗೆ ಕಾಯದೆ ಆರಂಭಿಕ ಹಂತದಲ್ಲಿ ಮಾನಸಿಕ ಸಮಸ್ಯೆಗಳ ಲಕ್ಷಣಗಳನ್ನು ಗುರುತಿಸಿ ತಜ್ಞರಿಂದ ಸಲಹೆ, ಚಿಕಿತ್ಸೆ ಪಡೆಯಬೇಕು. ಮಾನಸಿಕ ಆರೋಗ್ಯದ ಪ್ರತಿಯೊಬ್ಬರು ಜಾಗೃತರಾಗಿರಬೇಕು, ಪರಿಚಿತರಿಗೂ ಅರಿವು ಮೂಡಿಸಬೇಕು. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಮಂಗಳವಾರ ಮತ್ತು ಶುಕ್ರವಾರ ಮನೋಚೈತನ್ಯ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿದ್ದು ಮಾನಸಿಕ ಸಮಸ್ಯೆಗೆ ಚಿಕಿತ್ಸೆ ನೀಡುತ್ತವೆ. ಅಗತ್ಯವಿದ್ದವರು ಸೇವೆಯನ್ನು ಬಳಸಿಕೊಳ್ಳಬಹುದು, ಚಿಕಿತ್ಸೆ ಅಗತ್ಯವಿದ್ದವರನ್ನು ಕ್ಲಿನಿಕ್ಗಳಿಗೆ ಕರೆ ತರಬಹುದು ಎಂದು ಡಾ.ಚಂದ್ರಶೇಖರ್ ತಿಳಿಸಿದರು.261016-37-1827116442