ಗದಗ: ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಬಿಗಿ ಪಟ್ಟು, ಜಿಲ್ಲಾಡಳಿತಕ್ಕೆ ಎಚ್ಚರಿಕೆ
ಗದಗ: ನಗರದ ಡಂಬಳ ನಾಕಾ ಬಳಿ ಗುರುತಿಸಿರುವ ಜಾಗದಲ್ಲಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸದಿದ್ದರೆ, ಜಿಲ್ಲಾಡಳಿತ ಆಚರಿಸುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲಾಗುವುದೆಂದು ವಾಲ್ಮೀಕಿ ನಾಯಕ ಸಮಾಜದವರು ಎಚ್ಚರಿಕೆ ನೀಡಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ, ಸಮಾ

ಗದಗ: ನಗರದ ಡಂಬಳ ನಾಕಾ ಬಳಿ ಗುರುತಿಸಿರುವ ಜಾಗದಲ್ಲಿ ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಶೀಘ್ರ ಕ್ರಮ ವಹಿಸದಿದ್ದರೆ, ಜಿಲ್ಲಾಡಳಿತ ಆಚರಿಸುವ ವಾಲ್ಮೀಕಿ ಜಯಂತಿಯನ್ನು ಬಹಿಷ್ಕರಿಸಲಾಗುವುದೆಂದು ವಾಲ್ಮೀಕಿ ನಾಯಕ ಸಮಾಜದವರು ಎಚ್ಚರಿಕೆ ನೀಡಿದರು.ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ, ಸಮಾಜದವರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಸಮಯ ಸಭೆಯಲ್ಲಿ ಗದ್ದಲ ಉಂಟಾಯಿತು.‘ಡಂಬಳ ನಾಕಾ ಬಳಿ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಿಸುವ ಕುರಿತು ಹಲವು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿದೆ. ಪ್ರತಿ ವರ್ಷ ಈ ಬಗ್ಗೆ ಭರವಸೆ ನೀಡಲಾಗುತ್ತಿದೆಯೇ ಹೊರತು, ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಆ ಜಾಗವು ತ್ಯಾಜ್ಯ, ವಾಹನಗಳ ನಿಲುಗಡೆಯ ತಾಣವಾಗಿದೆ. ವೃತ್ತ ನಿರ್ಮಾಣ ವಿಚಾರದಲ್ಲಿ ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.‘ವೃತ್ತ ನಿರ್ಮಾಣಕ್ಕೆ ಗುರುತಿಸಿದ ಜಾಗ ಭೀಷ್ಮಕೆರೆ ಹಾಗೂ ಸಿಂಹದ ಕೆರೆ ವ್ಯಾಪ್ತಿಯಲ್ಲಿದೆ. ಈ ಜಾಗದ ವ್ಯಾಜ್ಯೆಯು ನ್ಯಾಯಾಲಯದಲ್ಲಿದೆ ಎಂದು ಹೇಳುತ್ತಾ ಬರಲಾಗುತ್ತಿದೆ. ವಿವಾದಿತ ಜಾಗವಾಗಿದ್ದರೂ ಬೇರೊಂದು ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೂ ಹೇಗೆ? ವೃತ್ತ ನಿರ್ಮಾಣ ಹಾಗೂ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ನೆಪ ಹೇಳದೆ, ಕೂಡಲೇ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.‘ವಾಲ್ಮೀಕಿ ಭವನದೊಳಗಿನ ವ್ಯವಸ್ಥೆ, ಹೊರಗೆ ಕಾಂಪೌಂಡ್ ಸರಿಯಾಗಿಲ್ಲ. ಭವನಕ್ಕೆ ತೆರಳುವ ರಸ್ತೆ, ಉದ್ಯಾನ ಹದಗೆಟ್ಟಿದೆ. ಅಲ್ಲಿ ಅಳವಡಿಸಿದ ಹೈಮಾಸ್ಟ್ ದೀಪ ಬೆಳಗುತ್ತಿಲ್ಲ. ವಾಲ್ಮೀಕಿ ಜಯಂತಿ ಆಚರಣೆಗೆ ಸರ್ಕಾರದಿಂದ ಅನುದಾನ ನೀಡಲಾಗುತ್ತದೆ. ಆದರೆ, ಅಂದು ಪ್ರದರ್ಶನ ನೀಡುವ ಕಲಾತಂಡಗಳಿಗೆ ಹಣ ನೀಡುತ್ತಿಲ್ಲ. ಸಮಾಜದವರೇ ಹಣ ನೀಡುವಂತಾಗಿದೆ’ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ವಾಲ್ಮೀಕಿ ವೃತ್ತ ನಿರ್ಮಾಣಕ್ಕೆ ಗುರುತಿಸಿದ ಜಾಗವು ಕೆರೆಯ ವ್ಯಾಪ್ತಿಗೆ ಬರುತ್ತದೋ, ಇಲ್ಲವೋ ಎಂಬುದನ್ನು ಅಳತೆ ಮಾಡಿ, ಒಂದು ವಾರದಲ್ಲಿ ವರದಿ ನೀಡಲು ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಅವರಿಗೆ ಸೂಚಿಸಿದರು. ಅಲ್ಲಿ ಸಾರ್ವಜನಿಕರು ಕಸ ಹಾಕದಂತೆ ಕ್ರಮ ವಹಿಸಲು ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ್ ಅವರಿಗೆ ತಿಳಿಸಿದರು.‘ನಿಯೋಜಿತ ಜಾಗವು ಕೆರೆ ವ್ಯಾಪ್ತಿಯಿಂದ ಹೊರಗಿದ್ದರೆ ವೃತ್ತ, ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತದೆ. ಕೆರೆ ವ್ಯಾಪ್ತಿ ಒಳಗಿದ್ದರೆ ಸರ್ಕಾರಕ್ಕೆ ಪತ್ರ ಬರೆದು, ವೃತ್ತ ಹಾಗೂ ಪ್ರತಿಮೆ ಪ್ರತಿಷ್ಠಾಪನೆಗೆ ಸಹಕರಿಸಲಾಗುತ್ತದೆ. ಜಾಗದ ಸುತ್ತ ತಂತಿ ಬೇಲಿ ಹಾಕಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಲೂ ಕ್ರಮ ವಹಿಸಲಾಗುತ್ತದೆ’ ಎಂದು ಭರವಸೆ ನೀಡಿದರು.ಜಿಲ್ಲಾ ಪಂಚಾಯಿತಿ ಸಿಇಒ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಹೆಚ್ಚುವರಿ ಜಿಲ್ಲಾಧಿಕಾರಿ ದುರಗೇಶ್ ಕೆ.ಆರ್., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ,ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಅಧ್ಯಕ್ಷ ಅನಿಲಕುಮಾರ ಫ. ಸಿದ್ದಮ್ಮನಹಳ್ಳ, ವಾಲ್ಮೀಕಿ ನಾಯಕ ಸೇವಾ ಸಂಘದ ಅಧ್ಯಕ್ಷ ಬಸವರಾಜ ಬೆಳದಡಿ, ಆದಪ್ಪ ಮಾರೆಪ್ಪನವರು, ವಸಂತ ಸಿದ್ದಮನಹಳ್ಳಿ, ಮಂಜುನಾಥ ತಳವಾರ ಇದ್ದರು.‘ಸಾಂಕೇತಿಕವಾಗಿ ಜಯಂತಿ ಆಚರಣೆ’‘ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಕ್ಟೋಬರ್ 26ರಂದು ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.‘ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಣೆ ಮಾಡಬೇಕಿತ್ತು. ಆದರೆ, ಪಶ್ಚಿಮ ಪದವೀಧರರ ಚುನಾವಣೆ ಇರುವುದರಿಂದ ಈ ಕ್ರಮ ವಹಿಸಲಾಗಿದೆ. ಚುನಾವಣೆ ನಂತರ ಸಮಾಜದವರು ಅದ್ದೂರಿಯಾಗಿ ಆಚರಣೆ ಮಾಡಬಹುದು’ ಎಂದರು.261016-23-739852593