ದೇಶದ ಯುವಜನರು ಶಿಕ್ಷಣಕ್ಕಾಗಿ ಎಲ್ಲಿ ಹೋಗುತ್ತಾರೆ?; ನೀತಿ ಆಯೋಗದ ವರದಿಯಲ್ಲೇನಿದೆ?
ಕಳೆದ ಆಗಸ್ಟ್ನಲ್ಲಿ ನೀತಿ ಆಯೋಗವು 'ವಿಕಸಿತ ಭಾರತ @2047' ಉದ್ಯೋಗ ಮತ್ತು ಕೌಶಲ್ಯ ತರಬೇತಿಯನ್ನು ಮರುರೂಪಿಸುವ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿತು. ಇದು ಯುವಕರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವ ಸಂಪೂರ್ಣ ವಿಧಾನವನ್ನೇ ಬದಲಾಯಿಸಲು ಕರೆ ನೀಡಿದೆ. 'ವಿಶಾಲ ಜನಸಂಖ್ಯೆಯನ್ನೇ ಮೂಲ ಬಂಡವಾಳವನ್ನಾಗಿ ನಂಬಿಕೊಂಡಿರುವ ಭಾರತದಲ್ಲಿ, ಯುವಜನರು ಶಿಕ್ಷಣಕ್ಕಾಗಿ ಎಲ್ಲಿಗೆ

ಕಳೆದ ಆಗಸ್ಟ್ನಲ್ಲಿ ನೀತಿ ಆಯೋಗವು 'ವಿಕಸಿತ ಭಾರತ @2047' ಉದ್ಯೋಗ ಮತ್ತು ಕೌಶಲ್ಯ ತರಬೇತಿಯನ್ನು ಮರುರೂಪಿಸುವ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿತು. ಇದು ಯುವಕರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವ ಸಂಪೂರ್ಣ ವಿಧಾನವನ್ನೇ ಬದಲಾಯಿಸಲು ಕರೆ ನೀಡಿದೆ. 'ವಿಶಾಲ ಜನಸಂಖ್ಯೆಯನ್ನೇ ಮೂಲ ಬಂಡವಾಳವನ್ನಾಗಿ ನಂಬಿಕೊಂಡಿರುವ ಭಾರತದಲ್ಲಿ, ಯುವಜನರು ಶಿಕ್ಷಣಕ್ಕಾಗಿ ಎಲ್ಲಿಗೆ ಹೋಗುತ್ತಿದ್ದಾರೆ?' ಎನ್ನುವ ಮಹತ್ವದ ಪ್ರಶ್ನೆಯನ್ನು ಈ ವರದಿ ಎತ್ತಿ ಹಿಡಿದಿದೆ.ಭಾರತದ ಯುವಕರು ಶಿಕ್ಷಣ ಪಡೆಯುತ್ತಿರುವ ಸ್ಥಳಗಳನ್ನು ದೇಶದ ನಕ್ಷೆಯಲ್ಲಿ ಗುರುತಿಸಿ ನೋಡಿದರೆ, ವಿಶ್ವವಿದ್ಯಾಲಯಗಳ ತೀವ್ರ ಕೊರತೆ ಎದ್ದು ಕಾಣುತ್ತದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಬಿಹಾರದಲ್ಲಿ 3 ರಿಂದ 17 ವರ್ಷ ವಯಸ್ಸಿನ ಪ್ರತಿ 10.3 ಲಕ್ಷ ಮಕ್ಕಳಿಗೆ ಕೇವಲ ಒಂದು ವಿಶ್ವವಿದ್ಯಾಲಯವಿದೆ. ಹಾಗೆಯೇ ಉತ್ತರ ಪ್ರದೇಶದಲ್ಲಿ ಪ್ರತಿ ಆರು ಲಕ್ಷ ಮಕ್ಕಳಿಗೆ ಒಂದೇ ವಿಶ್ವವಿದ್ಯಾಲಯವಿದೆ. ಈ ಎರಡೂ ರಾಜ್ಯಗಳು ಬೃಹತ್ ಯುವ ಜನಸಂಖ್ಯೆಯನ್ನು ಹೊಂದಿದ್ದರೂ, ಉನ್ನತ ಶಿಕ್ಷಣ ನೀಡುವ ಸಾಮರ್ಥ್ಯದಲ್ಲಿ ಹಿಂದುಳಿದಿವೆ. ಇದು ಕೇವಲ ಶಿಕ್ಷಣ ಕ್ಷೇತ್ರದ ಸಮಸ್ಯೆಯಷ್ಟೇ ಅಲ್ಲ, ಭಾರತದ ಭವಿಷ್ಯದ ಅಭಿವೃದ್ಧಿಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ.ಶಿಕ್ಷಣ ಸಂಸ್ಥೆಗಳ ಕೇಂದ್ರೀಕರಣ ಮತ್ತು ಭೌಗೋಳಿಕ ಕಂದಕ: ಭಾರತದಲ್ಲಿ ನಿಜವಾದ ಕೊರತೆ ಇರುವುದು ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲ. ದೇಶದಲ್ಲಿರುವ ಒಟ್ಟು 1,405 ವಿಶ್ವವಿದ್ಯಾಲಯಗಳಲ್ಲಿ ಸುಮಾರು ಶೇ. 70ರಷ್ಟು ಸಂಸ್ಥೆಗಳು 2001ರ ನಂತರವೇ ಸ್ಥಾಪನೆಯಾಗಿವೆ. ಇದೇ ಅವಧಿಯಲ್ಲಿ 18 ರಿಂದ 23 ವರ್ಷ ವಯಸ್ಸಿನ ಯುವಕರ ಸಂಖ್ಯೆ ಶೇ. 11ರಷ್ಟು ಮಾತ್ರ ಹೆಚ್ಚಾಗಿದ್ದರೂ, ಪ್ರತಿ ಲಕ್ಷ ಯುವಕರಿಗೆ ಲಭ್ಯವಿರುವ ಕಾಲೇಜುಗಳ ಸಂಖ್ಯೆ 9 ರಿಂದ 37ಕ್ಕೆ ಏರಿಕೆಯಾಗಿದೆ. ಆದರೆ, ಹೆಚ್ಚಿನ ನೂತನ ಶಿಕ್ಷಣ ಸಂಸ್ಥೆಗಳು ಈಗಾಗಲೇ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲೇ ಕೇಂದ್ರೀಕೃತವಾಗಿವೆ. ದೇಶದ ಶೇ. 28ರಷ್ಟು ವಿಶ್ವವಿದ್ಯಾಲಯಗಳು ಕೇವಲ 20 ಜಿಲ್ಲೆಗಳಲ್ಲಿ ಸ್ಥಾಪಿತವಾಗಿವೆ. ಇನ್ನು ಶೇ. 49ರಷ್ಟು ವಿಶ್ವವಿದ್ಯಾಲಯಗಳು ಹಾಗೂ ಶೇ. 66ರಷ್ಟು ಕಾಲೇಜುಗಳು ಕೇವಲ ಏಳು ರಾಜ್ಯಗಳಲ್ಲಿವೆ.ಈ ಬೆಳವಣಿಗೆಗೆ ಮುಖ್ಯ ಕಾರಣ ರಾಜ್ಯ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳ ಹೂಡಿಕೆ. ಸಂಸ್ಥೆಗಳನ್ನು ಸಾಮಾನ್ಯವಾಗಿ ಈಗಾಗಲೇ ಶೈಕ್ಷಣಿಕ ಬೇಡಿಕೆ, ಮೂಲಸೌಕರ್ಯ, ಬೋಧಕ ಸಿಬ್ಬಂದಿ ಹಾಗೂ ಸೂಕ್ತ ಆರ್ಥಿಕ ವಾತಾವರಣವಿರುವ ಸ್ಥಳಗಳಲ್ಲೇ ನಿರ್ಮಿಸಲಾಗುತ್ತದೆ. ಪರಿಣಾಮವಾಗಿ, ಇಂದು ಶೈಕ್ಷಣಿಕ ಸಾಮರ್ಥ್ಯ ಎಲ್ಲಿದೆ ಮತ್ತು ನಾಳೆ ಅದರ ಅಗತ್ಯ ಎಲ್ಲಿದೆ ಎಂಬುದರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಗಿದೆ.ಬದಲಾಗುತ್ತಿರುವ ಆರ್ಥಿಕ ಭೂಗೋಳ ಮತ್ತು ಸಣ್ಣ ನಗರಗಳು:ಭಾರತದ ಆರ್ಥಿಕ ಭೂಗೋಳ ವೇಗವಾಗಿ ಬದಲಾಗುತ್ತಿರುವುದರಿಂದ ಈ ಅಸಮಾನತೆಯು ಮತ್ತಷ್ಟು ಆತಂಕಕಾರಿಯಾಗಿದೆ. ಈ ವರ್ಷ ಬಿಡುಗಡೆಯಾದ ಟಾಟಾ ಸನ್ಸ್ ಸಂಸ್ಥೆಯ '100 ಭಾರತೀಯ ನಗರಗಳ ಅಧ್ಯಯನ'ದ ಪ್ರಕಾರ, ದೇಶದ ಅತ್ಯಂತ ಹೆಚ್ಚು ವೆಚ್ಚ ಮಾಡುವ ಪ್ರದೇಶಗಳು ಕೇವಲ ಮೆಟ್ರೊ ನಗರಗಳಷ್ಟೇ ಅಲ್ಲ. ಜೊತೆಗೆ, 4.83 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಮೇಲಿನ ‘ಕ್ಯುಎಸ್ ಕಾರ್ಪ್’ ಅಧ್ಯಯನದಂತೆ, ಶೇ. 69ರಷ್ಟು ವೇತನ ಆಧಾರಿತ ಉದ್ಯೋಗಗಳು ಈಗ ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಲಭ್ಯವಿವೆ. ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಹೆಚ್ಚುತ್ತಿರುವ ಗ್ರಾಹಕರ ಬೇಡಿಕೆಯಿಂದಾಗಿ ಸಣ್ಣ ನಗರಗಳು ತಮ್ಮದೇ ಆದ ವಿಶಿಷ್ಟ ಆರ್ಥಿಕ ಗುರುತನ್ನು ಪಡೆದುಕೊಳ್ಳುತ್ತಿವೆ. ಉದ್ಯಮಗಳು ಹೊಸ ಸ್ಥಳಗಳಿಗೆ ವಿಸ್ತರಿಸುತ್ತಿರುವಾಗ, ಅಲ್ಲಿನ ಜನರನ್ನು ಕೆಲಸಕ್ಕೆ ಸಿದ್ಧಗೊಳಿಸುವ ಶಿಕ್ಷಣ ಸಂಸ್ಥೆಗಳ ಕುರಿತು ನಾವು ಹೆಚ್ಚು ಜಾಗರೂಕರಾಗಿ ಯೋಚಿಸಬೇಕಿದೆ.ಕಾರ್ಖಾನೆಯನ್ನು ತಕ್ಷಣವೇ ನಿರ್ಮಿಸಬಹುದು, ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಕಂಪನಿಗಳನ್ನು ಹೂಡಿಕೆಗೆ ಒಪ್ಪಿಸಬಹುದು. ಆದರೆ, ಕೌಶಲ್ಯಯುತ ಕಾರ್ಯಪಡೆಯನ್ನು ಸಿದ್ಧಪಡಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸ್ಥಳೀಯವಾಗಿ ಸರಿಯಾದ ಪ್ರತಿಭೆ ಲಭ್ಯವಿಲ್ಲದಿದ್ದರೆ, ಉದ್ಯಮಗಳು ಹೊರಗಿನಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತವೆ, ಸ್ಥಳೀಯ ಉದ್ಯೋಗಗಳನ್ನು ಸ್ವಯಂಚಾಲಿತಗೊಳಿಸುತ್ತವೆ ಅಥವಾ ಉನ್ನತ ಮಟ್ಟದ ಕೆಲಸಗಳನ್ನು ಬೇರೆಡೆಗೆ ಒಯ್ಯುತ್ತವೆ. ಇದರಿಂದ ನಗರಕ್ಕೆ ಹೂಡಿಕೆ ಹರಿದುಬಂದರೂ, ಅದರ ಸಂಪೂರ್ಣ ಪ್ರಯೋಜನ ಸ್ಥಳೀಯರಿಗೆ ಸಿಗುವುದಿಲ್ಲ.ಶಿಕ್ಷಣ ವಲಸೆಯ ಮಿತಿ ಮತ್ತು 'ಸಾಮೀಪ್ಯ'ದ ಪ್ರಾಮುಖ್ಯತೆ:ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ವಲಸೆ ಹೋಗುವುದಕ್ಕೂ ತನ್ನದೇ ಆದ ಮಿತಿಗಳಿವೆ. 2011ರ ಜನಗಣತಿ ದತ್ತಾಂಶದ ಪ್ರಕಾರ, ಭಾರತದಲ್ಲಿ ಶಿಕ್ಷಣಕ್ಕಾಗಿ ನಡೆಯುವ ಶೇ. 83ರಷ್ಟು ವಲಸೆಯು ವಿದ್ಯಾರ್ಥಿಯ ಸ್ವಂತ ರಾಜ್ಯದ ವ್ಯಾಪ್ತಿಯೊಳಗೇ ನಡೆಯುತ್ತದೆ. ಅನೇಕ ಕುಟುಂಬಗಳಿಗೆ ಬೇರೆ ರಾಜ್ಯಗಳಿಗೆ ಹೋಗಿ ಕಲಿಯುವುದು ಕಷ್ಟಸಾಧ್ಯ. ಸ್ಥಳಾಂತರದ ವೆಚ್ಚ, ಕೌಟುಂಬಿಕ ಜವಾಬ್ದಾರಿಗಳು ಮತ್ತು ಮನೆಯನ್ನು ತೊರೆಯುವ ಹಿಂಜರಿಕೆಗಳೇ ಈ ನಿರ್ಧಾರಗಳನ್ನು ರೂಪಿಸುತ್ತವೆ. ದೂರದಲ್ಲೆಲ್ಲೋ ಇರುವ ಉತ್ತಮ ವಿಶ್ವವಿದ್ಯಾಲಯವು ರಾಷ್ಟ್ರೀಯ ಅಂಕಿಅಂಶಗಳನ್ನು ಸುಧಾರಿಸಬಹುದೇ ಹೊರತು, ಅಲ್ಲಿಗೆ ತಲುಪಲು ಸಾಧ್ಯವಾಗದ ವಿದ್ಯಾರ್ಥಿಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ಇಲ್ಲಿ 'ಸಾಮೀಪ್ಯ' ಎಂಬುದು ಕೇವಲ ಸೌಕರ್ಯವಲ್ಲ, ಬದಲಿಗೆ ಶಿಕ್ಷಣದ ಹಕ್ಕಿನ ಪ್ರಮುಖ ಭಾಗವಾಗಿದೆ.ಭವಿಷ್ಯದ ಹಾದಿ:ಇದರರ್ಥ ಪ್ರತಿಯೊಂದು ಜಿಲ್ಲೆಯಲ್ಲೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದಾಗಲಿ ಅಥವಾ ಜನಸಂಖ್ಯೆಯ ಆಧಾರದ ಮೇಲಷ್ಟೇ ಸಂಸ್ಥೆಗಳನ್ನು ನಿರ್ಮಿಸಬೇಕು ಎಂದಾಗಲಿ ಅಲ್ಲ. ವಿಶ್ವವಿದ್ಯಾಲಯಗಳಿಗೆ ಅನುಭವಿ ಬೋಧಕ ಸಿಬ್ಬಂದಿ, ಆರ್ಥಿಕ ಸುಸ್ಥಿರತೆ ಮತ್ತು ಬಲವಾದ ಶೈಕ್ಷಣಿಕ ವಾತಾವರಣದ ಅಗತ್ಯವಿರುತ್ತದೆ. ಇವು ಒಂದೆಡೆ ಕಲೆತು ಬೆಳೆಯುವುದರಲ್ಲೇ ನಿಜವಾದ ಅನುಕೂಲವಿದೆ.ಇದಕ್ಕೆ ಸೂಕ್ತ ಪರಿಹಾರವೆಂದರೆ, ಅಗತ್ಯವಿರುವ ಆಯ್ದ ಸ್ಥಳಗಳಲ್ಲಿ ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು, ಬಲವಾದ ಕಾಲೇಜು ಜಾಲಗಳನ್ನು ರೂಪಿಸುವುದು ಮತ್ತು ಉದ್ಯಮಗಳೊಂದಿಗೆ ನಿಕಟವಾಗಿ ಕಾರ್ಯಾಚರಿಸುವ ಸಂಸ್ಥೆಗಳನ್ನು ಬೆಳೆಸುವುದಾಗಿದೆ. ಈ ಎಲ್ಲಾ ನಿರ್ಧಾರಗಳನ್ನು ಯುವಕರು ಎಲ್ಲಿ ವಾಸಿಸುತ್ತಿದ್ದಾರೆ ಮತ್ತು ಆರ್ಥಿಕ ಅವಕಾಶಗಳು ಎಲ್ಲಿ ಮೂಡಿಬರುತ್ತಿವೆ ಎಂಬ ಸ್ಪಷ್ಟ ಚಿತ್ರಣದೊಂದಿಗೆ ತೆಗೆದುಕೊಳ್ಳಬೇಕಿದೆ. ಹೂಡಿಕೆಗಾಗಿ ಸ್ಪರ್ಧಿಸುವ ರಾಜ್ಯಗಳು ಉದ್ಯಮಗಳಿಗೆ ಬೇಕಾದ ಮೂಲಸೌಕರ್ಯಗಳ ಜೊತೆಗೆ ಭವಿಷ್ಯದ ಕಾರ್ಯಪಡೆ ಎಲ್ಲಿಂದ ಬರಲಿದೆ ಎಂದೂ ಯೋಚಿಸಬೇಕು. ಶಿಕ್ಷಣ ಯೋಜಕರು ಪ್ರಸ್ತುತ ದಾಖಲಾತಿಯನ್ನು ಮೀರಿ, ಮುಂಬರುವ ಆರ್ಥಿಕತೆಯ ಕಡೆಗೆ ಗಮನ ಹರಿಸಬೇಕಾಗಿದೆ.ಉನ್ನತ ಶಿಕ್ಷಣವನ್ನು ಅತ್ಯಂತ ವೇಗವಾಗಿ ವಿಸ್ತರಿಸಬಲ್ಲೆವು ಎಂಬುದನ್ನು ಭಾರತ ಈಗಾಗಲೇ ನಿರೂಪಿಸಿದೆ. ಆದರೆ ಮುಂದಿನ ಹಂತಕ್ಕೆ ಮತ್ತಷ್ಟು ದೂರದೃಷ್ಟಿಯ ಅಗತ್ಯವಿದೆ. ಕೇವಲ ಸಂಸ್ಥೆಗಳನ್ನು ನಿರ್ಮಿಸುವುದಷ್ಟೇ ಅಲ್ಲದೆ, ಎಲ್ಲಿ ಮತ್ತು ಏನನ್ನು ನಿರ್ಮಿಸುತ್ತಿದ್ದೇವೆ ಎಂಬುದರ ಕುರಿತು ಚಿಂತಿಸಬೇಕಿದೆ. 'ಜನಸಂಖ್ಯಾ ಲಾಭಾಂಶ' ಎಂಬುದು ಕೇವಲ ಯುವಜನರ ಸಂಖ್ಯೆಯಿಂದ ಸೃಷ್ಟಿಯಾಗುವುದಿಲ್ಲ. ಯುವಕರಿಗೆ ಅಗತ್ಯ ಶಿಕ್ಷಣ ಸಿಗುತ್ತಿದೆಯೇ ಮತ್ತು ಅವರು ಕಲಿತದ್ದನ್ನು ದೇಶದ ಆರ್ಥಿಕತೆಯು ಬಳಸಿಕೊಳ್ಳುತ್ತಿದೆಯೇ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಪ್ರಾದೇಶಿಕ ಹೂಡಿಕೆಯ ಮುಂದಿನ ಅಲೆ ಬರುವ ಮುನ್ನವೇ ಉನ್ನತ ಶಿಕ್ಷಣದ ಈ ಭೌಗೋಳಿಕ ಅಸಮಾನತೆಯ ಕುರಿತು ಗಂಭೀರ ಚರ್ಚೆ ನಡೆಯಬೇಕಿದೆ.