‘ಇಸ್ಲಾಂಗೆ ಮತಾಂತರ: ಒಬಿಸಿ ಮೀಸಲಾತಿ ಇಲ್ಲ’
ನವದೆಹಲಿ (ಪಿಟಿಐ): ಹಿಂದುಳಿದ ವರ್ಗಗಳಿಗೆ ಸೇರಿದ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ, ಆ ವರ್ಗಕ್ಕೆ ನೀಡಲಾಗುವ ಮೀಸಲಾತಿ ಪ್ರಯೋಜನವನ್ನು ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.‘ಈ ಮೊದಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನುಭವಿಸಿದ್ದ ಹಿಂದುಳಿದಿರುವಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ ಇಲ್ಲ’ ಎಂದೂ ಸ್ಪಷ್ಟಪಡಿಸಿದೆ.ಈ ಕುರಿತು ಮದ

ನವದೆಹಲಿ (ಪಿಟಿಐ): ಹಿಂದುಳಿದ ವರ್ಗಗಳಿಗೆ ಸೇರಿದ ಹಿಂದೂಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ, ಆ ವರ್ಗಕ್ಕೆ ನೀಡಲಾಗುವ ಮೀಸಲಾತಿ ಪ್ರಯೋಜನವನ್ನು ಕೇಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.‘ಈ ಮೊದಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನುಭವಿಸಿದ್ದ ಹಿಂದುಳಿದಿರುವಿಕೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ ಇಲ್ಲ’ ಎಂದೂ ಸ್ಪಷ್ಟಪಡಿಸಿದೆ.ಈ ಕುರಿತು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ ನೀಡಿ ತಮಿಳುನಾಡು ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಿದೆ.ಈ ವಿಚಾರವಾಗಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದಿರುವ ನ್ಯಾಯಮೂರ್ತಿಗಳಾದ ಪ್ರಶಾಂತಕುಮಾರ್ ಮಿಶ್ರಾ ಹಾಗೂ ಶ್ರೀ ಚಂದ್ರಶೇಖರ್ ಅವರು ಇದ್ದ ಪೀಠ, ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನೂ ವಜಾಗೊಳಿಸಿದೆ.ಈ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ಪೂರ್ಣಗೊಳಿಸಿದ್ದ ಪೀಠ, ಆಗಸ್ಟ್ 7ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.‘ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮ ಹೊರತುಪಡಿಸಿದಂತೆ ಉಳಿದ ಧರ್ಮವನ್ನು ಪಾಲನೆ ಮಾಡುವ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದವನು ಎಂಬುದಾಗಿ ಪರಿಗಣಿಸಲು ಸಾಧ್ಯ ಇಲ್ಲ’ ಎಂದೂ ಪೀಠ ಹೇಳಿದೆ.‘ಒಬ್ಬ ವ್ಯಕ್ತಿಯು, ಹಿಂದೂ ಸಾಮಾಜಿಕ ವ್ಯವಸ್ಥೆಯಿಂದ ಹಿಂದೂಯೇತರ ಸಾಮಾಜಿಕ ವ್ಯವಸ್ಥೆಯೊಂದಕ್ಕೆ ಮತಾಂತರಗೊಂಡ ಸಂದರ್ಭದಲ್ಲಿ, ಮತಾಂತರಕ್ಕೂ ಮುನ್ನ ತಾನು ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವನಾಗಿದ್ದೆ ಎಂಬ ಆಧಾರದಡಿ, ಸಂವಿಧಾನದ 16(4) ವಿಧಿ ಅನ್ವಯ ಮೀಸಲಾತಿ, ರಕ್ಷಣೆ ಅಥವಾ ಇತರ ಹಕ್ಕುಗಳನ್ನು ಕೇಳುವಂತಿಲ್ಲ’ ಎಂದು ಹೇಳಿದೆ.ಪ್ರಕರಣ ಏನು? ಹಿಂದೂ ಧರ್ಮಕ್ಕೆ ಸೇರಿದ್ದ ವ್ಯಕ್ತಿ 2015ರಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಸಮೀರ್ ಅಹ್ಮದ್ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಈ ಕುರಿತು 2016ರಲ್ಲಿ ಗೆಜೆಟ್ನಲ್ಲಿ ಅಧಿಸೂಚನೆಯೂ ಪ್ರಕಟಗೊಂಡಿತ್ತು. ಇಸ್ಲಾಂ ಧರ್ಮದ ಪದ್ಧತಿಯಂತೆ ಮದುವೆಯೂ ಆಗಿದ್ದರು. ತಾನು ‘ಮುಸ್ಲಿಂ ಲೆಬ್ಬೈ’ ಸಮುದಾಯಕ್ಕೆ ಸೇರಿದ್ದಾಗಿ ಗುರುತಿಸಿಕೊಂಡಿದ್ದ ಅವರು ಹಿಂದುಳಿದ ವರ್ಗದಡಿ ಮೀಸಲಾತಿ ಪ್ರಯೋಜನ ಪಡೆಯುವುದಕ್ಕಾಗಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿ ಪರಿಗಣಿಸಿ ತಮಿಳುನಾಡು ಸರ್ಕಾರ ಅವರಿಗೆ ಪ್ರಮಾಣಪತ್ರ ನೀಡಿತ್ತು. ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದ ತಮಿಳುನಾಡು ಸರ್ಕಾರ ‘ತಮಿಳುನಾಡು ಹಿಂದುಳಿದ ವರ್ಗಗಳ ಆಯೋಗದ ವರದಿ ಆಧಾರದಲ್ಲಿ ಈ ಪ್ರಮಾಣಪತ್ರ ನೀಡಿದ್ದಾಗಿ’ ಹೇಳಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ‘ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯು ಹಿಂದುಳಿದ ವರ್ಗದಡಿ ಮೀಸಲಾತಿ ಪಡೆಯುವ ಹಕ್ಕು ಹೊಂದಿಲ್ಲ’ ಎಂದು ಹೇಳಿತ್ತಲ್ಲದೇ ಈ ಕುರಿತು 2024ರ ಮಾರ್ಚ್ 9ರಂದು ತಮಿಳುನಾಡು ಸರ್ಕಾರ ಹೊರಡಿಸಿದ್ದ ಆದೇಶ ಅಸಾಂವಿಧಾನಿಕ ಎಂದು ಹೇಳಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಹಾಗೂ ಸಮೀರ್ ಅಹ್ಮದ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.