ಪ್ರಜಾಪ್ರಭುತ್ವ ಅಂದ್ರೆ ಅರಾಜಕತೆ ಹರಡಲು ಪಡೆದ ಲೈಸೆನ್ಸ್ ಅಲ್ಲ – ರಾಗಾ ವಿರುದ್ಧ ರಾಜನಾಥ್ ಸಿಂಗ್ ಕೆಂಡ
– ನೇಹಾ ಬೋರಾ ಹೇಳಿಕೆಗೂ ಆಕ್ಷೇಪ – ಕಾಂಗ್ರೆಸ್ ಬಾಂಗ್ಲಾ ಮಾದರಿಯ ಆಡಳಿತ ಬಯಸುತ್ತಿದೆ ಎಂದು ವಾಗ್ದಾಳಿ ಲಕ್ನೋ: ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹಚರರು ಪ್ರಜಾಪ್ರಭುತ್ವವೆಂದರೆ ಅರಾಜಕತೆ ಸೃಷ್ಟಿಸಲು, ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನ ಕುಂದಿಸಲು ಅಥವಾ ಭಾರತದ ಅಭಿವೃದ್ಧಿಯ ಪಯಣಕ್ಕೆ ಅಡ್ಡಿಪಡಿಸಲು ಸಿಕ್ಕಿರುವ ಲೈಸೆನ್ಸ್ ಅಲ್ಲ ಅನ್ನೋದನ್ನ

– ನೇಹಾ ಬೋರಾ ಹೇಳಿಕೆಗೂ ಆಕ್ಷೇಪ – ಕಾಂಗ್ರೆಸ್ ಬಾಂಗ್ಲಾ ಮಾದರಿಯ ಆಡಳಿತ ಬಯಸುತ್ತಿದೆ ಎಂದು ವಾಗ್ದಾಳಿ ಲಕ್ನೋ: ರಾಹುಲ್ ಗಾಂಧಿ (Rahul Gandhi) ಮತ್ತು ಅವರ ಸಹಚರರು ಪ್ರಜಾಪ್ರಭುತ್ವವೆಂದರೆ ಅರಾಜಕತೆ ಸೃಷ್ಟಿಸಲು, ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನ ಕುಂದಿಸಲು ಅಥವಾ ಭಾರತದ ಅಭಿವೃದ್ಧಿಯ ಪಯಣಕ್ಕೆ ಅಡ್ಡಿಪಡಿಸಲು ಸಿಕ್ಕಿರುವ ಲೈಸೆನ್ಸ್ ಅಲ್ಲ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಎಚ್ಚರಿಕೆ ನೀಡಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (CEC Gyanesh Kumar) ಅವರ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. 2024ರ ಜುಲೈನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಜನಾಂದೋಲನದ ಮಾದರಿಲ್ಲೇ ಭಾರತದಲ್ಲೂ ಆಡಳಿತ ಬದಲಾವಣೆಗೆ ವಿಪಕ್ಷಗಳ ಮೈತ್ರಿಕೂಟ ಪ್ರಯತ್ನಿಸುತ್ತಿವೆ. ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆದ ಆಂದೋಲನದಿಂದಾಗಿಯೇ ಅಂದಿನ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪತನಗೊಂಡಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಲಕ್ನೋದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಖಿಲ ಭಾರತ ವಿದ್ಯಾರ್ಥಿಗಳ ಸಂಘದ (AISA) ಅಧ್ಯಕ್ಷೆ ನೇಹಾ ಬೋರಾ (Neha Bora) ಬಾಂಗ್ಲಾದೇಶದ ಪ್ರತಿಭಟನೆಗಳಿಂದ ಸ್ಫೂರ್ತಿ ಪಡೆದಿದ್ದಾರೆ ಎಂದು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದರು. ಈ ಹೇಳಿಕೆಯು ವಿಪಕ್ಷಗಳ ಮೈತ್ರಿಕೂಟವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನ ದುರ್ಬಲಗೊಳಿಸಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಬಯಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷಗಳು ಭಾರತದ ಯುವಜನರ ಶಕ್ತಿಯನ್ನು ಅರಾಜಕತೆ ಹರಡಲು ಬಳಸಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನವನ್ನ ನೇರವಾಗಿಯೂ ಪರೋಕ್ಷವಾಗಿಯೂ ನಡೆಸಲಾಗುತ್ತಿದೆ ಎಂದು ಹೇಳಿದರು. ರಾಹುಲ್ ಗಾಂಧಿ ಮತ್ತು ಅವರ ಸಹಚರರು ಪ್ರಜಾಪ್ರಭುತ್ವವೆಂದರೆ ಅರಾಜಕತೆ ಸೃಷ್ಟಿಸಲು, ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಕುಂದಿಸಲು ಅಥವಾ ಭಾರತದ ಅಭಿವೃದ್ಧಿಯ ಪಯಣಕ್ಕೆ ಅಡ್ಡಿಪಡಿಸಲು ಸಿಕ್ಕಿರುವ ಲೈಸೆನ್ಸ್ ಅಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಿನ್ನೆ ಸುಪ್ರೀಂ ಕೋರ್ಟ್ ನೀಡಿದ ಅಭಿಪ್ರಾಯ ಕೂಡ ಇದನ್ನೇ ಸೂಚಿಸುತ್ತೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಅತ್ಯಗತ್ಯ. ರಾಜಕೀಯ ಸ್ವಾರ್ಥಕ್ಕಾಗಿ ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನ ಬಲಿಸಲು ಸಾಧ್ಯವಿಲ್ಲ. ಈ ವಾಸ್ತವವನ್ನ ಅರ್ಥಮಾಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು. ತುರ್ತುಪರಿಸ್ಥಿತಿ ಕ್ಷಮಿಸಲಾಗದ ಅಪರಾಧ ಇದೇ ವೇಳೆ 1975ರಲ್ಲಿ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಉಲ್ಲೇಖಿಸಿದ ರಾಜನಾಥ್ ಸಿಂಗ್, ತುರ್ತು ಪರಿಸ್ಥಿತಿ ಮತ್ತು 1984ರ ಗಲಭೆಗಳು ʻಕ್ಷಮಿಸಲಾಗದ ಅಪರಾಧʼ. 1990ರಲ್ಲಿ ರಾಮಭಕ್ತರು ಮತ್ತು ಕರಸೇವಕರ ರಕ್ತಪಾತಕ್ಕೆ ಕಾರಣರಾದವರನ್ನ ಬೆಂಬಲಿಸುವ ಮೂಲಕ ಕಾಂಗ್ರೆಸ್ ತನ್ನ ಸರ್ಕಾರವನ್ನ ಉಳಿಸಿಕೊಂಡಿತು ಎಂದೂ ಆರೋಪಿಸಿದರು. ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದಾ ಸಂವಿಧಾನದ ಪ್ರತಿಯನ್ನ ತಮ್ಮೊಂದಿಗೆ ಇಟ್ಟುಕೊಳ್ಳುತ್ತಾರೆ. ಆದರೆ, ಈಗ ಅವರು ಭಾರತದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದೇ ವೇಳೆ ಚುನಾವಣಾ ಆಯೋಗದ ನೇಮಕಾತಿ ವಿಚಾರ ಪ್ರಸ್ತಾಪಿಸಿದ ಸಚಿವರು, 1993ರಲ್ಲಿ ಕಾಂಗ್ರೆಸ್ ರಾತ್ರೋರಾತ್ರಿ ಇಬ್ಬರು ಹೊಸ ಚುನಾವಣಾ ಆಯುಕ್ತರನ್ನ ನೇಮಿಸಿತ್ತು. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ಅವರು, ಚುನಾವಣಾ ಆಯುಕ್ತ ನವೀನ್ ಚಾವ್ಲಾ ಅವರು ಕಾಂಗ್ರೆಸ್ ನಾಯಕರೊಂದಿಗೆ ʻಸೂಕ್ಷ್ಮ ಮಾಹಿತಿಯನ್ನುʼ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ, ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ರಾಷ್ಟ್ರಪತಿಗೆ ಪತ್ರ ಬರೆದಿದ್ದರು ಎಂಬುದನ್ನೂ ನೆನಪಿಸಿದರು.