₹4,106 ಕೋಟಿ ಮೊತ್ತದ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಸಹಿ
ನವದೆಹಲಿ: ಭಾರತೀಯ ವಾಯುಪಡೆಗೆ ಸಂವಹನ ಉಪಗ್ರಹ ಖರೀದಿ ಮತ್ತು ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಾಧುನಿಕ ಟಾರ್ಪಿಡೊಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ₹4,106 ಕೋಟಿ ಮೊತ್ತದ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದೆ.ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಭಾಗವಾಗಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ

ನವದೆಹಲಿ: ಭಾರತೀಯ ವಾಯುಪಡೆಗೆ ಸಂವಹನ ಉಪಗ್ರಹ ಖರೀದಿ ಮತ್ತು ನೌಕಾಪಡೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಅತ್ಯಾಧುನಿಕ ಟಾರ್ಪಿಡೊಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯವು ₹4,106 ಕೋಟಿ ಮೊತ್ತದ ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದೆ.ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯ ಭಾಗವಾಗಿ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಎರಡು ಒಪ್ಪಂದಗಳು ಮಹತ್ವದ ಹೆಜ್ಜೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.ಸಂವಹನ ಉಪಗ್ರಹ ‘ಜಿಸ್ಯಾಟ್–7ಸಿ’ಗಾಗಿ ಬೆಂಗಳೂರಿನ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಕಂಪನಿ ಜತೆ ₹2,563 ಕೋಟಿ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.‘ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ ಉಪಗ್ರಹವು ಭಾರತೀಯ ವಾಯುಪಡೆಯ ಸುರಕ್ಷಿತ ಮತ್ತು ತಡೆರಹಿತ ಸಂವಹನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಈ ಮೂಲಕ ತನ್ನ ಕಾರ್ಯಾಚರಣೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ನೆರವಾಗಲಿದೆ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.₹1,543 ಕೋಟಿ ಮೌಲ್ಯದ ‘ವರುಣಾಸ್ತ್ರ ಟಾರ್ಪಿಡೊ’ಗಳಿಗಾಗಿ ಹೈದರಾಬಾದ್ನ ಭಾರತ್ ಡೈನಮಿಕ್ಸ್ ಲಿಮಿಟೆಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.‘ವರುಣಾಸ್ತ್ರ’ವು ನೇವಲ್ ಸೈನ್ಸ್ ಅಂಡ್ ಟೆಕ್ನಾಲಜಿಕಲ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದ, ಯುದ್ಧನೌಕೆಯಿಂದ ಉಡಾಯಿಸಬಹುದಾದ ಜಲಾಂತರ್ಗಾಮಿ ನಾಶಕ ಟಾರ್ಪಿಡೊ ಆಗಿದೆ. ಕ್ಷಿಪ್ರ ವೇಗದಲ್ಲಿ ಸಾಗಬಲ್ಲ ಇವು, ತುಂಬಾ ದೂರದಲ್ಲಿರುವ ಶತ್ರು ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಬಲ್ಲದು. ಇದು ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ನಾಶಕ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ’ ಎಂದು ಪ್ರಕಟಣೆ ತಿಳಿಸಿದೆ.261016-51-1868249128