ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ರಾವುತ್, ವಾಗ್ಲೆಗೆ ‘ಸುಪ್ರೀಂ’ ನೋಟಿಸ್
ನವದೆಹಲಿ (ಪಿಟಿಐ): ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮತ್ತು ಪತ್ರಕರ್ತ ನಿಖಿಲ್ ವಾಗ್ಲೆ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಶೋ–ಕಾಸ್ ನೋಟಿಸ್ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘ

ನವದೆಹಲಿ (ಪಿಟಿಐ): ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಾಂಗದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಿವಸೇನಾ (ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್ ಮತ್ತು ಪತ್ರಕರ್ತ ನಿಖಿಲ್ ವಾಗ್ಲೆ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಶೋ–ಕಾಸ್ ನೋಟಿಸ್ ಜಾರಿಗೊಳಿಸಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್ಸಿಬಿಎ) ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ, ಸಿಜೆಐ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ಅವರನ್ನೊಳಗೊಂಡ ಪೀಠವು ನೋಟಿಸ್ ಜಾರಿ ಮಾಡಿತು.ಆದಾಗ್ಯೂ ರಾವುತ್ ಮತ್ತು ವಾಗ್ಲೆ ಅವರಿಗೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿ ನೀಡಿದ ಪೀಠ, ಮೊದಲು ಅವರು ನೀಡುವ ವಿವರಣೆಗಳನ್ನು ಗಮನಿಸೋಣ ಎಂದು ಹೇಳಿತು.‘ಸಂಸದ ರಾವುತ್ ಮತ್ತು ಪತ್ರಕರ್ತ ವಾಗ್ಲೆ ಅವರ ಹೇಳಿಕೆಗಳು ನ್ಯಾಯಯುತ ಟೀಕೆಯ ಪರಿಮಿತಿಯನ್ನು ಮೀರಿವೆ. ಅವು ಸುಪ್ರೀಂ ಕೊರ್ಟ್ ಬಗ್ಗೆ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸುವಂತಿವೆ’ ಎಂದು ಎಸ್ಸಿಬಿಎ ಅಧ್ಯಕ್ಷ ಮತ್ತು ಹಿರಿಯ ವಕೀಲ ಪ್ರದೀಪ್ ರಾಯ್ ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.ನ್ಯಾಯಾಂಗವನ್ನು ಗುರಿಯಾಗಿಸಿಕೊಂಡ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಜೆಐ, ನ್ಯಾಯಾಲಯಗಳು ನಿರಂತರವಾಗಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿದಿವೆ. ಹೀಗಿರುವಾಗ ಸಂಸ್ಥೆಯ ವಿರುದ್ಧದ ಹೇಳಿಕೆಗಳು ದುರದೃಷ್ಟಕರ ಎಂದರು. ವಿರೋಧ ಪಕ್ಷಗಳ ನಿಯೋಗವು ಸಿಜೆಐ ಅನ್ನು ಖುದ್ದಾಗಿ ಭೇಟಿ ಮಾಡಲು ಇತ್ತೀಚೆಗೆ ಮನವಿ ಮಾಡಿತ್ತು. ಆದರೆ ಭೇಟಿಗೆ ನಿರಾಕರಿಸಿದ್ದ ಸಿಜೆಐ ಅವರು, ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸೂಚಿಸಿದ್ದರು. ಆ ನಂತರ ವಾಗ್ಲೆ ಮತ್ತು ರಾವುತ್ ಅವರು ಸಿಜೆಐ ವಿರುದ್ಧ ಕೆಲ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಎಸ್ಸಿಬಿಎ ಆರೋಪಿಸಿದೆ. ತುರ್ತು ವಿಚಾರಣೆಗೆ ನಕಾರ ನವದೆಹಲಿ (ಪಿಟಿಐ): ಇಲ್ಲಿನ ಕನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಅನ್ನು ಮುಚ್ಚುವ ಕುರಿತು ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಹೊರಡಿಸಿದ್ದ ಆದೇಶದ ವಿರುದ್ಧದ ಅರ್ಜಿಯ ತುರ್ತು ವಿಚಾರಣೆಯನ್ನು ಶುಕ್ರವಾರ ನಿರಾಕರಿಸಿದ ಸುಪ್ರೀಂ ಕೋರ್ಟ್ ‘ಎಲ್ಲರೂ ವಿವೇಕದಿಂದ ನಡೆದುಕೊಳ್ಳಲಿ’ ಎಂದು ಆಶಿಸುವುದಾಗಿ ತಿಳಿಸಿತು. ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ಅವರ ಪೀಠವು ‘ಈ ದಿನಗಳಲ್ಲಿ ಸಣ್ಣ ಅಂಗಡಿಯವರು ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ. ಅವರ ಕುಟುಂಬಗಳು ಎದುರಿಸುವ ಕಷ್ಟ ಮತ್ತು ತೊಂದರೆಗಳು ನಮಗೆ ತಿಳಿದಿವೆ’ ಎಂದಿತು. ‘ಎಲ್ಲರೂ ವಿವೇಕದಿಂದ ನಡೆದುಕೊಂಡರೆ ಎಲ್ಲವೂ ಸುಗಮವಾಗಿ ಸಾಗುತ್ತದೆ’ ಎಂದು ಪೀಠ ಇದೇ ವೇಳೆ ಅಭಿಪ್ರಾಯಪಟ್ಟಿತು. ‘ಪ್ರತಿಭಟಿಸುವ ಹಕ್ಕು ವ್ಯಾಪಾರ ವಹಿವಾಟು ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ಹಲವು ಸಮಸ್ಯೆಗಳು ಪ್ರತಿಭಟನೆಯ ಸುತ್ತ ಆವರಿಸಿವೆ. ಇವು ಪರಸ್ಪರ ಸಂಬಂಧ ಹೊಂದಿವೆ ಎಂಬುದನ್ನು ಗಮನಿಸಲಾಗಿದೆ’ ಎಂದು ಪೀಠ ಇದೇ ವೇಳೆ ತಿಳಿಸಿತು. ‘ಯಾರಾದರೂ ಪ್ರತಿಭಟಿಸಲು ಬಯಸಿದರೆ ಅದೇ ವೇಳೆ ಕೆಲವರು ಶೇಂಗಾ ಮಾರಲು ಬಯಸುತ್ತಾರೆ. ಮತ್ತೂ ಕೆಲವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಬಯಸುತ್ತಾರೆ. ಇವೆಲ್ಲ ಒಂದಕ್ಕೊಂದು ಸಂಬಂಧ ಹೊಂದಿವೆ’ ಎಂದು ಸಿಜೆಐ ಹೇಳಿದರು. ವ್ಯಾಪಾರಕ್ಕೆ ನಷ್ಟವಾದರೆ ಮಧ್ಯಪ್ರವೇಶ: ‘ಈ ಪರಿಸ್ಥಿತಿಯು ವ್ಯಾಪಾರಕ್ಕೆ ನಷ್ಟಕ್ಕೆ ಕಾರಣವಾದರೆ ನ್ಯಾಯಾಲಯವು ತನ್ನ ಸಾಂವಿಧಾನಿಕ ಅಧಿಕಾರವನ್ನು ಚಲಾಯಿಸಲು ಅವಕಾಶವಿದೆ. ಆ ಪರಿಸ್ಥಿತಿ ಬಂದಾಗ ನೋಡೋಣ’ ಎಂದು ಪೀಠ ಹೇಳಿತು. ಎನ್ಡಿಎಂಸಿ ಗುರುವಾರ ತಡರಾತ್ರಿ ಸೆಂಟ್ರಲ್ ಪಾರ್ಕ್ ಅನ್ನು ಮುಚ್ಚಲು ಆದೇಶ ಹೊರಡಿಸಿದೆ. ಇದರಿಂದ ಅಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಅಡೆತಡೆಯಾಗಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಆಗ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಾಗ್ಚಿ ‘ಒಂದು ವೇಳೆ ಈ ಕುರಿತು ಕೈಗೊಂಡ ಕ್ರಮಗಳು ಅಸಮಂಜಸವಾಗಿದ್ದಲ್ಲಿ ಸಾರ್ವಜನಿಕ ಕಾನೂನು ಮತ್ತು ಪರಿಹಾರ ಕಾಯ್ದೆ ಅಡಿಯಲ್ಲಿನ ಅಧಿಕಾರ ಬಳಸಿಕೊಂಡು ನ್ಯಾಯಾಲಯ ಮಧ್ಯ ಪ್ರವೇಶಿಸಲು ಸಾಕಷ್ಟು ಅವಕಾಶವಿದೆ’ ಎಂದು ಹೇಳಿದರು. ಈ ಕುರಿತು ಅರ್ಜಿಯನ್ನು ಇದೇ 26 ಅಥವಾ 27ರಂದು ವಿಚಾರಣಾ ಪಟ್ಟಿಯಲ್ಲಿ ಸೇರಿಸಬಹುದು ಎಂದು ಪೀಠ ತಿಳಿಸಿತು.