ಸಂಪಾದಕೀಯ: ಪ್ರತಿಭಟನೆ–ಭಿನ್ನಮತಕ್ಕೂ ಷರತ್ತು ಪ್ರಜಾಪ್ರಭುತ್ವ ವಿರೋಧಿ ನಿಲುವು
ಪ್ರತಿಭಟನೆ ಮತ್ತು ಭಿನ್ನಮತದ ರೂಪಕವಾಗಿ ದೆಹಲಿಯ ಜಂತರ್ ಮಂತರ್ ಅನೇಕ ವರ್ಷಗಳಿಂದ ಗುರ್ತಿಸಿಕೊಂಡಿದೆ. ಅದನ್ನು ಪ್ರತಿಭಟನೆ ನಡೆಸಬಹುದಾದ ಸ್ಥಳಗಳ ಪಟ್ಟಿಯಿಂದ ಕೈಬಿಡುವ ಸರ್ಕಾರದ ನಿರ್ಧಾರವು, ಭಿನ್ನಮತ ಮತ್ತು ಪ್ರತಿಭಟನೆಗಳ ವಿರುದ್ಧದ ಕ್ರಮವಾಗಿದೆ. 1993ರಿಂದಲೂ ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಅಲ್ಪಸಂಖ್ಯಾತ ಸಮುದಾಯಗಳು, ರಾಜಕೀಯ ಕಾರ್ಯಕರ್ತರು, ಕಲಾವಿದರು

ಪ್ರತಿಭಟನೆ ಮತ್ತು ಭಿನ್ನಮತದ ರೂಪಕವಾಗಿ ದೆಹಲಿಯ ಜಂತರ್ ಮಂತರ್ ಅನೇಕ ವರ್ಷಗಳಿಂದ ಗುರ್ತಿಸಿಕೊಂಡಿದೆ. ಅದನ್ನು ಪ್ರತಿಭಟನೆ ನಡೆಸಬಹುದಾದ ಸ್ಥಳಗಳ ಪಟ್ಟಿಯಿಂದ ಕೈಬಿಡುವ ಸರ್ಕಾರದ ನಿರ್ಧಾರವು, ಭಿನ್ನಮತ ಮತ್ತು ಪ್ರತಿಭಟನೆಗಳ ವಿರುದ್ಧದ ಕ್ರಮವಾಗಿದೆ. 1993ರಿಂದಲೂ ಮಹಿಳೆಯರು, ವಿದ್ಯಾರ್ಥಿಗಳು, ರೈತರು, ಅಲ್ಪಸಂಖ್ಯಾತ ಸಮುದಾಯಗಳು, ರಾಜಕೀಯ ಕಾರ್ಯಕರ್ತರು, ಕಲಾವಿದರು, ಭ್ರಷ್ಟಾಚಾರ ವಿರೋಧಿ ಹೋರಾಟಗಾರರು ಸೇರಿದಂತೆ ವಿವಿಧ ವರ್ಗಗಳ ನಾಗರಿಕರ ಪ್ರತಿಭಟನೆಗಳಿಗೆ ಜಂತರ್ ಮಂತರ್ ಸಾಕ್ಷಿಯಾಗಿದೆ. ನ್ಯಾಯ–ಅನ್ಯಾಯ, ಸರಿ–ತಪ್ಪುಗಳ ಕುರಿತ ಧ್ವನಿಯನ್ನು ಆಡಳಿತ ವರ್ಗಕ್ಕೆ ಹಾಗೂ ಜಗತ್ತಿಗೆ ಕೇಳಿಸುವ, ಅಭಿಪ್ರಾಯ–ಅಹವಾಲುಗಳಿಗೆ ಉತ್ತರ ಅಥವಾ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸುವ ಭಾರತದ ಆಶಯಕ್ಕೆ ಜಂತರ್ ಮಂತರ್ ಅಭಿವ್ಯಕ್ತಿಯಾಗಿದೆ. ಪ್ರಾಯೋಗಿಕವಾಗಿ ಹೇಳುವುದಾದರೆ, ಪ್ರಜಾಪ್ರಭುತ್ವದ ಮೂಲಭೂತ ಅಭಿವ್ಯಕ್ತಿ ವೇದಿಕೆ ಇದಾಗಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 19ನೇ ವಿಧಿಗೆ ಒಂದು ಚಹರೆ ಹಾಗೂ ಸ್ವರೂಪವನ್ನು ನೀಡಿದ ಸ್ಥಳ ಇದಾಗಿದೆ. ಇಂತಹ ಸ್ಥಳವನ್ನು ಪ್ರತಿಭಟನೆಗಳಿಂದ ದೂರವಿರಿಸುವ ನಿರ್ಧಾರದ ಹಿಂದೆ ಪ್ರಜಾಪ್ರಭುತ್ವ ವಿರೋಧಿ ನಿಲುವು ಹಾಗೂ ಜನರ ಧ್ವನಿಗೆ ಓಗೊಡದಿರುವ ಮನೋಧರ್ಮ ಅಡಗಿದೆ.ದೆಹಲಿಯ ರಾಮ್ಲೀಲಾ, ಬುರಾರಿ ಹಾಗೂ ಸಿಬಿಡಿ ಮೈದಾನಗಳಿಗೆ ಪ್ರತಿಭಟನಕಾರರನ್ನು ಸ್ಥಳಾಂತರಿಸಲು ಸರ್ಕಾರ ಬಯಸಿದೆ. ಈ ಸ್ಥಳಗಳು ದೇಶದ ರಾಜಧಾನಿಯ ಕೇಂದ್ರ ಭಾಗಗಳಿಂದ ಬಹಳ ದೂರದಲ್ಲಿವೆ. ರಾಮ್ಲೀಲಾ, ದಸರಾ ಮತ್ತು ದೀಪಾವಳಿಯಂತಹ ಉತ್ಸವಗಳು ನಡೆಯುವ ರಾಮ್ಲೀಲಾ ಮೈದಾನವು ಪ್ರತಿಭಟನೆಗಳಿಗೆ ದೊರೆಯುವ ಸಾಧ್ಯತೆ ಬಹಳ ಕಡಿಮೆ. ಅದರ ಕಾಯ್ದಿರಿಸುವಿಕೆ ಶುಲ್ಕವೂ ದುಬಾರಿಯಾಗಿದೆ. ಬುರಾರಿ ಮತ್ತು ಸಿಬಿಡಿ ಮೈದಾನಗಳು ನಗರದ ಪ್ರಮುಖ ಪ್ರದೇಶಗಳಿಂದ ಸುಮಾರು 15–20 ಕಿ.ಮೀ. ದೂರದಲ್ಲಿವೆ. ಅಲ್ಲಿ ನಡೆಯುವ ಪ್ರತಿಭಟನೆಗಳು ಮತ್ತು ಪ್ರದರ್ಶನಗಳು ಸ್ಥಳೀಯರು ಹಾಗೂಪ್ರತಿಭಟನಕಾರರನ್ನು ಹೊರತುಪಡಿಸಿ ಉಳಿದವರಿಗೆ ಸುಲಭವಾಗಿ ತಿಳಿಯುವುದಿಲ್ಲ. ಪ್ರತಿಭಟನೆಗಳು ಸಾಮಾಜಿಕ ಹಾಗೂ ಸಾಮೂಹಿಕ ಕ್ರಿಯೆಗಳಾಗಿದ್ದು,ಅಧಿಕಾರಸ್ಥರ ಮತ್ತು ಸಮುದಾಯದ ಗಮನಸೆಳೆಯುವುದು ಅವುಗಳ ಉದ್ದೇಶವಾಗಿದೆ. ಸಮುದಾಯವನ್ನುಒಗ್ಗೂಡಿಸಿ, ಅದರ ಬೆಂಬಲ ಪಡೆಯುವುದು ಎಲ್ಲ ಪ್ರತಿಭಟನೆಗಳ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. ಪ್ರತಿಭಟನೆಗಳು ಪರಿಣಾಮಕಾರಿಯಾಗಲು ಅವುಗಳು ಕಾಣಿಸುವಂತಿರಬೇಕು ಹಾಗೂ ಅವುಗಳ ಧ್ವನಿ ಸಮಾಜ–ಸರ್ಕಾರಕ್ಕೆ ಕೇಳಿಸುವಂತಿರಬೇಕು. ಈ ಪ್ರಕ್ರಿಯೆಯ ಮೂಲಕವೇ ಪ್ರತಿಭಟನೆಗಳು ಪ್ರಜಾಸತ್ತಾತ್ಮಕ ಸ್ವರೂಪವನ್ನು ಪಡೆದುಕೊಳ್ಳುತ್ತವೆ.ಸರ್ಕಾರವೊಂದು ಪ್ರತಿಭಟನೆಗಳನ್ನು ಇಷ್ಟಪಡದೆ ಹೋದಾಗ ಹಾಗೂ ಅವುಗಳನ್ನು ತಪ್ಪು ಮತ್ತು ಕೆಡುಕಿನ ರೂಪದಲ್ಲಿ ನೋಡಿದಾಗ, ಜನರ ಕಣ್ಣಿಗೆ ಬೀಳದಂತೆ ದೂರದ ಸ್ಥಳಗಳಿಗೆ ಅವುಗಳನ್ನು ತಳ್ಳಲು ಮತ್ತು ಸಾರ್ವಜನಿಕ ಚರ್ಚೆಗೆ ಬಾರದಂತೆ ತಡೆಯಲು ಪ್ರಯತ್ನಿಸುತ್ತದೆ. ಪ್ರಸ್ತುತ ಪ್ರತಿಭಟನಕಾರರ ಮೇಲೆ ಸರ್ಕಾರ ಕೈಗೊಂಡಿರುವ ದಮನಕಾರಿ ಕ್ರಮಗಳೇ ಪ್ರತಿಭಟನೆ ಮತ್ತು ಭಿನ್ನಮತ ಕುರಿತಾದ ಅದರ ನೀತಿಯನ್ನು ಸ್ಪಷ್ಟಪಡಿಸುವಂತಿವೆ. ಪ್ರತಿಭಟನೆ, ಧರಣಿ, ಪ್ರದರ್ಶನಗಳಿಂದ ಸಂಚಾರ ವ್ಯವಸ್ಥೆಗೆ ಅಡಚಣೆಯಾಗುತ್ತದೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎನ್ನುವುದು ನಿಜ. ಆದರೆ, ಈ ಅಡಚಣೆಗಳಿಗಿಂತಲೂ ಪ್ರತಿಭಟನೆಯ ಪ್ರಜಾಸತ್ತಾತ್ಮಕ ಹಕ್ಕು ಮಹತ್ವದ್ದಾಗಿದೆ. ಪ್ರಜಾಪ್ರಭುತ್ವವು ಗದ್ದಲದಿಂದ ಕೂಡಿರಬಹುದು, ಅಸ್ತವ್ಯಸ್ತವೂ ಆಗಿರಬಹುದು ಮತ್ತು ದುಬಾರಿಯಾಗಿಯೂ ಪರಿಣಮಿಸಬಹುದು. ಆದರೆ, ಸರ್ವಾಧಿಕಾರದ ಮೌನ, ಶಿಸ್ತು ಮತ್ತು ಕಡಿಮೆ ವೆಚ್ಚಗಳಿಗಿಂತಲೂ ಪ್ರಜಾಪ್ರಭುತ್ವವೇ ಅತ್ಯುತ್ತಮವಾದುದಾಗಿದೆ. ಅಧಿಕಾರ ಕೇಂದ್ರಕ್ಕೆ ಸಮೀಪವಾಗಿರುವುದು ಹಾಗೂ ನಗರದ ಹೃದಯಭಾಗದಲ್ಲಿ ಇರುವುದು ಪ್ರತಿಭಟನಾ ಸ್ಥಳದ ಮುಖ್ಯ ಅರ್ಹತೆಯಾಗಿದೆ. ಮಾದರಿ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಸೇರಿದ ಯಾವುದೇ ಸ್ಥಳವೂ ನಾಗರಿಕರ ಪ್ರತಿಭಟನೆಗೆ ವೇದಿಕೆಯಾಗಬಹುದು. ಸಾರ್ವಜನಿಕರಿಗೆ ಸೇರಿದ ಎಲ್ಲ ಸ್ಥಳಗಳಿಂದಲೂ ಪ್ರತಿಭಟನೆಯ ಧ್ವನಿ ಮೊಳಗಿಸುವ ಹಕ್ಕು ನಾಗರಿಕರಿಗಿದೆ. ಷರತ್ತುಗಳಿಗೆ ಅನುಗುಣವಾಗಿಯಷ್ಟೇ ಜನರ ಮಾತುಗಳನ್ನು ಆಲಿಸುತ್ತೇನೆ ಎಂದು ಸರ್ಕಾರ ಹಟ ಹಿಡಿಯಬಾರದು.