ಅಕ್ರಮ ವಲಸೆ ತಡೆಗೆ ಸಮಿತಿ: ಹೈಕೋರ್ಟ್
ಬೆಂಗಳೂರು: ‘ಅಕ್ರಮ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಮೂರು ತಿಂಗಳ ಒಳಗಾಗಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಟಿ.ನಾಗೇಂದ್ರಪ್ಪ ವಿರುದ್ಧ ದಾಖಲಾಗಿದ್ದ ಎರಡು ಎಫ್ಐಆರ್ ಗಳನ್ನು ವಜಾಗೊಳಿಸಿರುವ ನ್ಯಾಯಮೂ

ಬೆಂಗಳೂರು: ‘ಅಕ್ರಮ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಮೂರು ತಿಂಗಳ ಒಳಗಾಗಿ ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ ಟಿ.ನಾಗೇಂದ್ರಪ್ಪ ವಿರುದ್ಧ ದಾಖಲಾಗಿದ್ದ ಎರಡು ಎಫ್ಐಆರ್ ಗಳನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.‘ಈ ಆದೇಶದ ಪ್ರತಿ ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಒಳಗಾಗಿ ಅಕ್ರಮ ವಲಸೆಯನ್ನು ನಿಭಾಯಿಸಲು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಬೇಕು. ಈ ಸಂಬಂಧದ ಅನುಪಾಲನಾ ವರದಿಯನ್ನು ಹೈಕೋರ್ಟ್ ರಿಜಿಸ್ಟ್ರಿಗೆ ಸಲ್ಲಿಸಬೇಕು’ ಎಂದು ನ್ಯಾಯಪೀಠ ತಾಕೀತು ಮಾಡಿದೆ.ಪ್ರಕರಣ: ‘ಬೆಂಗಳೂರಿನ ಡಿಎಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ಸಮೀಪ ಆರು ಮಂದಿ ಬಾಂಗ್ಲಾ ದೇಶದ ಪ್ರಜೆಗಳು ಪಾಸ್ಪೋರ್ಟ್ ಅಥವಾ ವೀಸಾ ಇಲ್ಲದೆ ನೆಲೆಸಿದ್ದಾರೆ’ ಎಂದು ನಾಗೇಂದ್ರಪ್ಪ 2026ರ ಜುಲೈ 22ರಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.ಬಳಿಕ ಪೊಲೀಸರು ಆ ವ್ಯಕ್ತಿಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ (ಎಫ್ಆರ್ಆರ್ಒ) ಕರೆದೊಯ್ದಿದ್ದರು. ಇದಾದ 15 ನಿಮಿಷಗಳ ಅಂತರದಲ್ಲೇ ಬಾಂಗ್ಲಾದೇಶಿ ಮಹಿಳೆಯೊಬ್ಬರು ನಾಗೇಂದ್ರಪ್ಪ ವಿರುದ್ಧ ಹಲ್ಲೆಯ ಆರೋಪದಡಿ ದೂರು ದಾಖಲಿಸಿದ್ದರು.ಪೊಲೀಸರು; ಭಾರತೀಯ ನ್ಯಾಯ ಸಂಹಿತಾ–2023ರ ಕಲಂ (ಬಿಎನ್ಎಸ್) 74, 79, 115(2), 126(2), 351(2), 351(3) ಮತ್ತು 352ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಅಂತೆಯೇ, ವರ್ತೂರು ಪೊಲೀಸ್ ಠಾಣೆಯಲ್ಲೂ ಮತ್ತೊಂದು ದೂರು ದಾಖಲಾಗಿತ್ತು.