ಆಳ-ಅಗಲ: ಬ್ಯಾರಿಕೇಡ್ಗಳಲ್ಲಿ ಬಂದಿಯೇ ಭಿನ್ನಮತ?
ದೆಹಲಿ ಪೊಲೀಸರು ಪ್ರತಿಭಟನೆಗೆ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿರುವಂತೆ, ದೇಶದ ಹಲವು ನಗರಗಳಲ್ಲಿಯೂ ಹೋರಾಟ, ಧರಣಿ, ಮುಷ್ಕರಗಳನ್ನು ಕೆಲವು ಸ್ಥಳಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಸರ್ಕಾರಗಳು ಇದಕ್ಕೆ ಹಲವು ಕಾರಣಗಳನ್ನು ನೀಡುತ್ತವೆ. ಅದರಲ್ಲಿ ವಾಸ್ತವಾಂಶವೂ ಇದೆ. ಆದರೆ, ಇಂಥ ಸ್ಥಳದಲ್ಲಿ ಮಾತ್ರವೇ ಪ್ರತಿಭಟನೆ ಮಾಡಬ

ದೆಹಲಿ ಪೊಲೀಸರು ಪ್ರತಿಭಟನೆಗೆ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿರುವಂತೆ, ದೇಶದ ಹಲವು ನಗರಗಳಲ್ಲಿಯೂ ಹೋರಾಟ, ಧರಣಿ, ಮುಷ್ಕರಗಳನ್ನು ಕೆಲವು ಸ್ಥಳಗಳಿಗಷ್ಟೇ ಸೀಮಿತಗೊಳಿಸಲಾಗಿದೆ. ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಸರ್ಕಾರಗಳು ಇದಕ್ಕೆ ಹಲವು ಕಾರಣಗಳನ್ನು ನೀಡುತ್ತವೆ. ಅದರಲ್ಲಿ ವಾಸ್ತವಾಂಶವೂ ಇದೆ. ಆದರೆ, ಇಂಥ ಸ್ಥಳದಲ್ಲಿ ಮಾತ್ರವೇ ಪ್ರತಿಭಟನೆ ಮಾಡಬೇಕು ಎನ್ನುವುದು ಹೋರಾಟಕ್ಕೆ ದಿಗ್ಬಂಧನ ವಿಧಿಸಿದಂತೆ. ಇದರಿಂದ ಭಿನ್ನಮತದ ತೀವ್ರತೆ ಮತ್ತು ಪ್ರಜಾಪ್ರಭುತ್ವದ ಚೈತನ್ಯ ಎರಡಕ್ಕೂ ಪೆಟ್ಟು ಬೀಳುತ್ತದೆ; ಸರ್ಕಾರಗಳು ಜನರ ಕಷ್ಟಗಳಿಗೆ ಹೆಚ್ಚು ಜಡವಾಗುತ್ತಿದ್ದು, ಜನ ಪ್ರತಿಭಟನೆ ಮೂಲಕ ನ್ಯಾಯ ಪಡೆಯಲು ಕಷ್ಟವಾಗುತ್ತದೆ ಎನ್ನುವ ಅಭಿಪ್ರಾಯ ಇದೆ2022ಕ್ಕೂ ಮುಂಚೆ ಬೆಂಗಳೂರಿನಲ್ಲಿ ಮೈಸೂರು ಬ್ಯಾಂಕ್ ವೃತ್ತ, ನೃಪತುಂಗ ರಸ್ತೆ, ಪುರಭವನ, ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಸೇರಿದಂತೆ ನಗರದ ಹೃದಯ ಭಾಗದಲ್ಲಿರುವ ಹಲವು ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರತಿಭಟನೆಯನ್ನು ನಡೆಸುವುದೇ ಸಮಸ್ಯೆಗಳತ್ತ ಜನರ ಗಮನ ಸೆಳೆಯಲು; ಅದಕ್ಕಿಂತಲೂ ಮುಖ್ಯವಾಗಿ, ಸರ್ಕಾರದ ಗಮನ ಸೆಳೆದು, ಅವುಗಳಿಗೆ ಪರಿಹಾರ ಪಡೆಯಲು. ಈ ಉದ್ದೇಶ ಈಡೇರುವಲ್ಲಿ ಪ್ರತಿಭಟನೆ ನಡೆಸುವ ಸ್ಥಳಗಳೂ ಮುಖ್ಯ ಪಾತ್ರ ವಹಿಸುತ್ತಿದ್ದವು. ದೂರದ ಊರುಗಳಿಂದ ಬಂದ ರೈತರ ಪ್ರತಿಭಟನೆ, ದಲಿತರ ಜಾಥಾ, ಮಹಿಳೆಯರ ಧರಣಿ ಎಲ್ಲವೂ ನಗರದ ಜನರ ಕಣ್ಣಿಗೆ ಬೀಳುತ್ತಿದ್ದವು.ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳಗಳು ನಗರದ ಹೃದಯ ಭಾಗದಲ್ಲಿದ್ದರೆ, ಸಂಚಾರ ದಟ್ಟಣೆ ಹೆಚ್ಚಾಗುತ್ತದೆ, ಜನರ ದೈನಂದಿನ ಕಾರ್ಯಗಳಿಗೆ ಅಡ್ಡಿಯುಂಟಾಗುತ್ತದೆ ಎನ್ನುವ ದೂರುಗಳು ವ್ಯಕ್ತವಾದವು. ಆಂಬುಲೆನ್ಸ್ಗಳು ಸಂಚರಿಸಲೂ ಕಷ್ಟವಾದ ಸಂದರ್ಭಗಳುಂಟು. ಈ ದಿಸೆಯಲ್ಲಿ, 2022ರ ಜನವರಿಯಲ್ಲಿ ರಾಜ್ಯ ಗೆಜೆಟ್ನಲ್ಲಿ ‘ಪ್ರತಿಭಟನೆಗಳು, ಪ್ರದರ್ಶನಗಳು ಮತ್ತು ಪ್ರತಿಭಟನಾ ಮೆರವಣಿಗೆಗಳ (ಬೆಂಗಳೂರು ನಗರ) ಆದೇಶ 2021’ ಹೊರಡಿಸಲಾಯಿತು. ಅದರ ಅನ್ವಯ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಸ್ವಾತಂತ್ರ್ಯ ಉದ್ಯಾನವನ್ನು (ಫ್ರೀಡಂ ಪಾರ್ಕ್) ಅಧಿಕೃತ ಸ್ಥಳವಾಗಿ ಗುರುತಿಸಲಾಯಿತು ಮತ್ತು ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯುವುದನ್ನು ಕಡ್ಡಾಯಗೊಳಿಸಲಾಯಿತು. ಸ್ವಾತಂತ್ರ್ಯ ಉದ್ಯಾನವು ಹಿಂದೆ ಸೆಂಟ್ರಲ್ ಜೈಲ್ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿ ಹೊಸ ಜೈಲು ನಿರ್ಮಾಣವಾದ ನಂತರ ಇದನ್ನು ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ.2022ರ ಆಗಸ್ಟ್ನಲ್ಲಿ ಹೈಕೋರ್ಟ್, ಇದನ್ನೇ ಪುರಸ್ಕರಿಸಿ ಆದೇಶ ಹೊರಡಿಸಿತು. ಅಂದಿನಿಂದ ಬೆಂಗಳೂರಿನಲ್ಲಿ ಪ್ರತಿಭಟನೆ ಎಂದರೆ, ಸ್ವಾತಂತ್ರ್ಯ ಉದ್ಯಾನ ಎನ್ನುವಂತಾಗಿದೆ. ಹಾಗೆಂದು ಬೇರೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲೇಬಾರದು ಎಂದೇನಲ್ಲ. ಸಂದರ್ಭ, ಸ್ವರೂಪ ಇತ್ಯಾದಿ ಅಂಶಗಳನ್ನು ಪರಿಗಣಿಸಿ ನಗರ ಪೊಲೀಸ್ ಆಯುಕ್ತರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಸುಮಾರು ನಾಲ್ಕು ವರ್ಷಗಳಿಂದ ನಗರದಲ್ಲಿ ನಡೆಯುವ ಬಹುತೇಕ ಎಲ್ಲ ಪ್ರತಿಭಟನೆಗಳೂ ಸ್ವಾತಂತ್ರ್ಯ ಉದ್ಯಾನದಲ್ಲಿಯೇ ನಡೆಯುತ್ತಿವೆ.ಇದು ಬೆಂಗಳೂರಿಗೆ ಸೀಮಿತವಾದ ವಿದ್ಯಮಾನವೇನಲ್ಲ. ಹಲವು ರಾಜ್ಯಗಳ ಹಲವು ನಗರಗಳಲ್ಲಿ ಪ್ರತಿಭಟನೆಗೆ ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಲಾಗಿದೆ.ಮುಂಬೈನ ಆಜಾದ್ ಮೈದಾನ ಮುಂಬೈನ ಆಜಾದ್ ಮೈದಾನದಕ್ಷಿಣ ಮುಂಬೈನ ಆಜಾದ್ ಮೈದಾನವು ನಗರದಲ್ಲಿ ಸರ್ಕಾರವು ಗುರುತಿಸಿರುವ ಏಕೈಕ ಪ್ರತಿಭಟನಾ ಸ್ಥಳವಾಗಿದೆ. ಸುಮಾರು 25 ಎಕರೆಯ ಬೃಹತ್ ವಿಸ್ತೀರ್ಣದ ಆಜಾದ್ ಮೈದಾನವು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರನ್ನು ಗಲ್ಲಿಗೇರಿಸುವ ಸ್ಥಳವಾಗಿತ್ತು. ನಂತರ ಸ್ವಾತಂತ್ರ್ಯ ಹೋರಾಟದ ಅನೇಕ ಪ್ರತಿಭಟನೆಗಳು, ಸಭೆಗಳು, ಧರಣಿಗಳು ಇಲ್ಲಿ ನಡೆದಿವೆ. 1931ರಲ್ಲಿ, ನಾಗರಿಕ ಅಸಹಕಾರ ಚಳವಳಿಯ ಸಮಯದಲ್ಲಿ, ಮಹಾತ್ಮ ಗಾಂಧಿ ಅವರು ಇಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. 1960ರಲ್ಲಿ ಇದಕ್ಕೆ ಆಜಾದ್ ಮೈದಾನ ಎಂದು ನಾಮಕರಣ ಮಾಡಲಾಯಿತು. 1997ರಲ್ಲಿ ಬಾಂಬೆ ಹೈಕೋರ್ಟ್ ಆದೇಶದಂತೆ ಇದನ್ನು ಪ್ರತಿಭಟನೆಯ ಸ್ಥಳ ಎಂದು ಗುರುತಿಸಲಾಯಿತು.ಆಜಾದ್ ಮೈದಾನವು ಛತ್ರಪತಿ ಶಿವಾಜಿ ಟರ್ಮಿನಸ್ ರೈಲು ನಿಲ್ದಾಣ, ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ), ಸಚಿವಾಲಯವೂ ಸೇರಿದಂತೆ ನಗರದ ಹಲವು ಪ್ರಮುಖ ಸ್ಥಳಗಳಿಗೆ ಹತ್ತಿರದಲ್ಲಿದೆ. ಆದರೆ, ಈ ಬೃಹತ್ ಮೈದಾನವು ಇತರ ಹಲವು ಚಟುವಟಿಕೆಗಳ ಕೇಂದ್ರವೂ ಆಗಿದೆ. ಮುಂಬೈ ಕ್ರಿಕೆಟ್ನ ನೆಚ್ಚಿನ ಸ್ಥಳವಾಗಿರುವ ಇಲ್ಲಿ ಸುಮಾರು 22 ಕ್ರಿಕೆಟ್ ಪಿಚ್ಗಳಿವೆ. ಬಾಂಬೆ ಜಿಮ್ಕಾನಾ ಸೇರಿದಂತೆ ಹಲವು ಕ್ಲಬ್ಗಳು ಇವೆ. ಹಲವು ರೀತಿಯ ಧಾರ್ಮಿಕ ಸಮಾರಂಭಗಳಿಗೂ ಸ್ಥಳವನ್ನು ನೀಡಲಾಗುತ್ತದೆ. ಮೇಲಾಗಿ, ದೊಡ್ಡ ವಿಸ್ತೀರ್ಣದ ಈ ಸ್ಥಳದಲ್ಲಿ ಹಲವು ಪ್ರತಿಭಟನೆಗಳು ಒಮ್ಮೆಗೇ ನಡೆವಾಗ, ಹೋರಾಟಗಾರರು, ಘೋಷಣೆಗಳು, ಕ್ರಿಕೆಟ್ ಎಲ್ಲವೂ ಒಂದಕ್ಕೊಂದು ಸೇರಿ ಕಲಸುಮೇಲೋಗರದ ವಾತಾವರಣ ನಿರ್ಮಾಣವಾಗುವುದಿದೆ.ಪಟ್ನಾದ ಗಾಂಧಿಬಾಗ್ ಪಟ್ನಾದ ಗಾಂಧಿಬಾಗ್ಗಾಂಧಿಬಾಗ್ ಅಥವಾ ಗಾಂಧಿ ಮೈದಾನವು ಬ್ರಿಟಿಷರು ಸೇನಾ ಪರೇಡ್ಗಾಗಿ, ಕುದುರೆ ರೇಸ್ ಮತ್ತು ತರಬೇತಿಗಾಗಿ ಅಭಿವೃದ್ಧಿಪಡಿಸಿದ ಸ್ಥಳ. ಇದು ಪೋಲೋ, ಗಾಲ್ಫ್ ಮೈದಾನವಾಗಿಯೂ ಬಳಕೆಯಾಗುತ್ತಿತ್ತು. ಗಂಗಾನದಿಯ ದಂಡೆಯಲ್ಲಿರುವ, 62 ಎಕರೆ ವಿಸ್ತೀರ್ಣದ ಈ ಸ್ಥಳವು ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ– ಮುಖ್ಯವಾಗಿ ಚಂಪಾರಣ್ ಮತ್ತು ಕ್ವಿಟ್ ಇಂಡಿಯಾ ಚಳವಳಿಯಲ್ಲಿ– ಹೋರಾಟದ ನೆಲವಾಯಿತು. ಹಲವು ಚಾರಿತ್ರಿಕ ಹೋರಾಟ, ಮುಷ್ಕರಗಳಿಗೆ ಸಾಕ್ಷಿಯಾಯಿತು. ಮಹಮದ್ ಅಲಿ ಜಿನ್ನಾ ಅವರು 1938ರಲ್ಲಿ ಮುಸ್ಲಿಂ ಲೀಗ್ ಸಮಾವೇಶ ನಡೆಸಿದರೆ, 1939ರಲ್ಲಿ ಸುಭಾಷ್ಚಂದ್ರ ಬೋಸ್ ಅವರು ಫಾರ್ವರ್ಡ್ ಬ್ಲಾಕ್ ಸಭೆ ನಡೆಸಿದ್ದರು. ಸ್ವಾತಂತ್ರ್ಯಾನಂತರ ಜಯಪ್ರಕಾಶ್ ನಾರಾಯಣ್ ಅವರು ತುರ್ತುಪರಿಸ್ಥಿತಿ ವಿರೋಧಿಸಿ ‘ಸಂಪೂರ್ಣ ಕ್ರಾಂತಿ’ ಆಂದೋಲನ ಆರಂಭಿಸಿದ್ದು ಇಲ್ಲಿಂದಲೇ. ಜಗತ್ತಿನಲ್ಲಿಯೇ ಅತಿ ಎತ್ತರದ ಗಾಂಧಿ ಪ್ರತಿಮೆ (72 ಅಡಿ) ಇಲ್ಲಿದೆ.ಚೆನ್ನೈನ ತಿಲಕ್ ಘಾಟ್ಚೆನ್ನೈ ನಗರದಲ್ಲಿ ಪ್ರತಿಭಟನೆಗಳಿಗೆಂದೇ ಖ್ಯಾತಿ ಪಡೆದಿರುವ ಸ್ಥಳ ತಿಲಕ್ ಘಾಟ್. ಮರೀನಾ ಬೀಚ್ಗೆ ಹೊಂದಿಕೊಂಡಿರುವ ಇದು, ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಪ್ರತಿಭಟನೆಗಳಿಗೆ ಹೆಸರಾಗಿದೆ. ಮಹಾತ್ಮ ಗಾಂಧಿ ಸೇರಿದಂತೆ ಹಲವರು ಇಲ್ಲಿ ಸಭೆ, ಸಮಾವೇಶ ನಡೆಸಿದ್ದಾರೆ. ಆದರೆ, ಇದು ಪ್ರತಿಭಟನೆಗಳಿಗೆಂದು ಸರ್ಕಾರದಿಂದ ಅಧಿಸೂಚಿತವಾದ ಸ್ಥಳವಲ್ಲ. ವಳ್ಳುವರ್ ಕೊಟ್ಟಮ್ ಮತ್ತು ಸ್ವಾಮಿ ಶಿವಾನಂದ ಸಾಲೈ– ನಗರದ ಇನ್ನೆರಡು ಪ್ರತಿಭಟನಾ ಸ್ಥಳಗಳಾಗಿದ್ದವು. 2025ರ ಮಾರ್ಚ್ನಿಂದ ವಳ್ಳುವರ್ ಕೊಟ್ಟಮ್ನಲ್ಲಿ ಪ್ರತಿಭಟನೆಗಳನ್ನು ನಡೆಸಲು ಅನುಮತಿ ನೀಡಲಾಗುತ್ತಿಲ್ಲ. ಅದಕ್ಕೆ ಪರ್ಯಾಯವಾಗಿ ಸ್ವಾಮಿ ಶಿವಾನಂದ ಸಾಲೈ ಅನ್ನು ಪ್ರತಿಭಟನಾ ಸ್ಥಳವೆಂದು ಗುರುತಿಸಿ, ಆದೇಶ ಹೊರಡಿಸಲಾಗಿದೆ.ಬ್ರಿಗೇಡ್ ಪರೇಡ್ ಮೈದಾನ ಕೋಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನ900 ಎಕರೆಗೂ ಹೆಚ್ಚು ವಿಸ್ತೀರ್ಣದ ಇದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಪರೇಡ್ ಗ್ರೌಂಡ್ ಆಗಿತ್ತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಧರಣಿ, ಸಮಾವೇಶಗಳಿಗೆ ಹೆಸರಾಯಿತು. ರೌಲತ್ ಕಾಯ್ದೆ ವಿರುದ್ದ ದೇಶಬಂಧು ಚಿತ್ತರಂಜನ್ ದಾಸ್ ನೇತೃತ್ವದಲ್ಲಿ ಇಲ್ಲಿ ಬೃಹತ್ ರ್ಯಾಲಿ ನಡೆದಿತ್ತು. ಜವಾಹರಲಾಲ್ ನೆಹರೂ ಇಲ್ಲಿ ರಷ್ಯಾದ ನಾಯಕರೊಂದಿಗೆ ಸಾರ್ವಜನಿಕ ಸಭೆ ಆಯೋಜಿಸಿದ್ದರು. ಬಾಂಗ್ಲಾದೇಶ ಉದಯವಾದ ನಂತರ ಇಂದಿರಾ ಗಾಂಧಿ ಅವರು ಶೇಖ್ ಮುಜೀಬುರ್ ರೆಹಮಾನ್ ಅವರೊಂದಿಗೆ ಇಲ್ಲಿ ಸಮಾವೇಶ ನಡೆಸಿ, ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನ ವಿಜಯೋತ್ಸವ ಆಚರಿಸಿದ್ದರು. ಟಿಎಂಸಿ, ಬಿಜೆಪಿ ಇಲ್ಲಿ ಬೃಹತ್ ಸಮಾರಂಭಗಳನ್ನು ನಡೆಸಿವೆ. ಇವಲ್ಲದೇ, ಕೋಲ್ಕತ್ತದಲ್ಲಿ ರಾಣಿ ರಷ್ಮೋನಿ ಅವೆನ್ಯೂ, ಶಾಹೀದ್ ಮಿನಾರ್ ಮೈದಾನ ಮತ್ತು ಕಾಲೇಜು ವೃತ್ತದಲ್ಲಿ ಪ್ರತಿಭಟನೆಗಳು ನಡೆಯುತ್ತವೆ.ಪ್ರತಿಭಟನೆಯ ವ್ಯಾಪ್ತಿ, ಪರಿಣಾಮ ಕುಸಿತವಿವಿಧೆಡೆ ಪ್ರತಿಭಟನೆಗಳು ನಡೆದರೆ ವಾಹನ ದಟ್ಟಣೆ ಹೆಚ್ಚಾಗುತ್ತದೆ, ಸಂಚಾರ ಕಷ್ಟವಾಗುತ್ತದೆ ಮತ್ತು ಕಾನೂನು ಸುವ್ಯವಸ್ಥೆಗೆ ಸಮಸ್ಯೆ ಎದುರಾಗಬಹುದು ಎನ್ನುವುದು ನಗರಗಳಲ್ಲಿ ಪ್ರತಿಭಟನೆಗಳಿಗೆ ನಿರ್ದಿಷ್ಟ ಸ್ಥಳಗಳನ್ನು ಗುರುತುಪಡಿಸುವುದರ ಹಿಂದಿನ ಪ್ರಮುಖ ಕಾರಣ. ಇದು ಸತ್ಯವೂ ಹೌದು. ಜತೆಗೆ, ಆಹಾರ, ನೀರು ಪೂರೈಕೆ, ಕಸ ವಿಲೇವಾರಿ ಸೇರಿದಂತೆ ಕೆಲಸಗಳು ಸುಲಭ ಆಗಬಹುದು. ಆದರೆ, ಇದನ್ನೇ ನೆಪವಾಗಿಸಿಕೊಂಡು ಸರ್ಕಾರಗಳು ಭಿನ್ನಮತವನ್ನು, ವಿರೋಧವನ್ನು ಹತ್ತಿಕ್ಕುತ್ತಿವೆ. ಈ ಮೂಲಕ ಪ್ರಜಾಪ್ರಭುತ್ವದ ಅಂತಃಸತ್ವವನ್ನೇ ಕೊಲ್ಲುತ್ತಿವೆ ಎನ್ನುವ ಟೀಕೆ ಇದೆ.ಪ್ರತಿಭಟನೆಯನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಮಾತ್ರವೇ ನಡೆಸಬೇಕು ಎನ್ನುವ ನಿಯಮದಿಂದ ಅವು ಜನರ ಕಣ್ಣಿಗೆ ಬೀಳದೇ ಹೋಗುತ್ತಿವೆ ಎನ್ನುವ ಅಸಮಾಧಾನ ಹೋರಾಟಗಾರರಲ್ಲಿದೆ. ಇದರಿಂದ ಅವುಗಳ ಪ್ರಭಾವ, ವ್ಯಾಪ್ತಿ ಮತ್ತು ಪರಿಣಾಮ ಕ್ಷೀಣಿಸುತ್ತಿದೆ. ಹೋರಾಟದ ಸ್ಥಳವನ್ನು ಜನರಿಂದ ಪ್ರತ್ಯೇಕಗೊಳಿಸಿದರೆ ಹೋರಾಟವನ್ನೇ ಪ್ರತ್ಯೇಕಗೊಳಿಸಿದಂತೆ ಎನ್ನುವುದು ಅವರ ಅನಿಸಿಕೆ.‘ಪ್ರತಿಭಟನಕಾರರು ಅನೇಕ ಬಾರಿ ತಮ್ಮ ಧ್ವನಿ ಕೇಳಲಿ ಎಂದು ಜನರ ದಿನಚರಿಗೆ ಅಡ್ಡಿಪಡಿಸುತ್ತಾರೆ. ನಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಕದಡುವುದೂ ಅವರ ಗುರಿಯಾಗಿರುತ್ತದೆ. ಆದರೆ, ಅದನ್ನು ಅಪರಾಧ ಎಂದು ಪರಿಗಣಿಸಬಾರದು. ಪ್ರತಿಭಟನೆಗಳನ್ನು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸುವುದು ಸರ್ಕಾರಗಳ ಪ್ರಜಾಪ್ರಭುತ್ವ ವಿರೋಧಿ ಮನೋಭಾವ ತೋರುತ್ತದೆ’ ಎಂದು ನಗರಗಳಲ್ಲಿನ ಪ್ರತಿಭಟನೆಗಳ ಬಗ್ಗೆ ಅಧ್ಯಯನ ನಡೆಸಿ, ‘ಸಿಟೀಸ್ ಆ್ಯಂಡ್ ಪ್ರೊಟೆಸ್ಟ್ಸ್: ಪರ್ಸ್ಪೆಕ್ಟೀವ್ಸ್ ಇನ್ ಸ್ಪೇಷಿಯಲ್ ಕ್ರಿಟಿಸಿಸಂ’ ಎನ್ನುವ ಕೃತಿ ರಚಿಸಿರುವ ಮಮತಾ ಮಂತ್ರಿ ಮತ್ತು ಅನೂಪ್ ಕುಮಾರ್ ಉಲ್ಲೇಖಿಸಿದ್ದಾರೆ.ಭಾರತ ಸಂವಿಧಾನದ 19 (1) ಎ (ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 19 (1) ಬಿ (ಶಾಂತಿಯುತವಾಗಿ ಗುಂಪು ಸೇರುವ ಸ್ವಾತಂತ್ರ್ಯ) ವಿಧಿಗಳಲ್ಲಿ ಪ್ರತಿಭಟನೆಯ ಹಕ್ಕೂ ಅಡಕವಾಗಿದೆ. ಮುಂಜಾಗ್ರತೆಯಿಂದ ಅದಕ್ಕೆ ಪೊಲೀಸರ ಅನುಮತಿ ಪಡೆಯುವುದು, ಪೊಲೀಸ್ ಬಂದೋಬಸ್ತ್ ಏರ್ಪಡಿಸುವುದು ಅಗತ್ಯ. ಆದರೆ, ಒಂದು ನಿರ್ದಿಷ್ಟ ಸ್ಥಳವನ್ನು ಬ್ಯಾರಿಕೇಡ್ಗಳಿಂದ ಸಂಪೂರ್ಣವಾಗಿ ನಿರ್ಬಂಧಿಸಿ, ಬೃಹತ್ ಸಂಖ್ಯೆಯಲ್ಲಿ ಪೊಲೀಸರನ್ನು, ಸೇನೆಯನ್ನು ನಿಯೋಜಿಸಿ, ಆ ಸ್ಥಳದಲ್ಲಿ ಮಾತ್ರವೇ ಪ್ರತಿಭಟನೆ ಮಾಡಬೇಕು ಎನ್ನುವುದು ಸಂವಿಧಾನದ ಆಶಯಕ್ಕೆ ವಿರುದ್ಧ ಎನ್ನುವ ವಿಶ್ಲೇಷಣೆ ಇದೆ.ಆಧಾರ: ಪಿಟಿಐ, ಕ್ವೆಶ್ಚೆನ್ ಆಫ್ ಸಿಟೀಸ್.ಒಆರ್ಜಿ, ಮಾಧ್ಯಮ ವರದಿಗಳು