ಸಕಾಲಿಕ: ಹಿರಿಯೂರು ಮರುಚುನಾವಣೆ, ಜಾತಿ ಲೆಕ್ಕಾಚಾರ
ಹಿರಿಯೂರು ಅಸೆಂಬ್ಲಿ ಕ್ಷೇತ್ರ ಈಗ ನಿತ್ಯವೂ ಸುದ್ದಿಯಲ್ಲಿದೆ. ಯಾವ ಕ್ಷಣದಲ್ಲಾದರೂ ಮರು ಚುನಾವಣೆ ನಡೆಯುವ ದಿನಾಂಕ ಘೋಷಣೆ ಆಗಲಿದೆ ಎಂಬ ನಿರೀಕ್ಷೆ ರಾಜಕೀಯಾಸಕ್ತರಲ್ಲಿದೆ. ಕ್ಷೇತ್ರದ ಕೇಂದ್ರಸ್ಥಾನ ಹಿರಿಯೂರಿನಲ್ಲಿ ಚುನಾವಣೆ ಬಿಸಿ ಏರುತ್ತಿದೆ. ಮತದಾರರ ಗಮನ ಸೆಳೆಯುವ ಕಸರತ್ತುಗಳು ಆರಂಭವಾಗಿವೆ. ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟ ಆಕಾಂಕ್ಷಿಗಳ ಪೋಸ್ಟರುಗಳು, ಕಟೌಟ್ಗಳು

ಹಿರಿಯೂರು ಅಸೆಂಬ್ಲಿ ಕ್ಷೇತ್ರ ಈಗ ನಿತ್ಯವೂ ಸುದ್ದಿಯಲ್ಲಿದೆ. ಯಾವ ಕ್ಷಣದಲ್ಲಾದರೂ ಮರು ಚುನಾವಣೆ ನಡೆಯುವ ದಿನಾಂಕ ಘೋಷಣೆ ಆಗಲಿದೆ ಎಂಬ ನಿರೀಕ್ಷೆ ರಾಜಕೀಯಾಸಕ್ತರಲ್ಲಿದೆ. ಕ್ಷೇತ್ರದ ಕೇಂದ್ರಸ್ಥಾನ ಹಿರಿಯೂರಿನಲ್ಲಿ ಚುನಾವಣೆ ಬಿಸಿ ಏರುತ್ತಿದೆ. ಮತದಾರರ ಗಮನ ಸೆಳೆಯುವ ಕಸರತ್ತುಗಳು ಆರಂಭವಾಗಿವೆ. ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟ ಆಕಾಂಕ್ಷಿಗಳ ಪೋಸ್ಟರುಗಳು, ಕಟೌಟ್ಗಳು ಮುಖ್ಯ ರಸ್ತೆ, ಸರ್ಕಲ್ಗಳಲ್ಲಿ ವಿಜೃಂಭಿಸುತ್ತಿವೆ. ಕ್ಷೇತ್ರದ ಅಭಿವೃದ್ಧಿ ಪರ ಮಾತುಗಳು, ವಾಣಿ ವಿಲಾಸ ಸಾಗರದ ನೀರಿನ ರಕ್ಷಣೆ ಇತ್ಯಾದಿಗಳ ಚರ್ಚೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ನಡೆಯುತ್ತಿವೆ. ಸಾಮಾನ್ಯ ಮತದಾರರು ಎಂದಿನಂತೆ ನಿರ್ಲಿಪ್ತರಾಗಿದ್ದಾರೆ.ಈ ಕ್ಷೇತ್ರದಿಂದ ಒಮ್ಮೆ ಪಕ್ಷೇತರರಾಗಿ, ಎರಡು ಸಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳಲ್ಲಿ ಮಂತ್ರಿಯಾಗಿದ್ದ ಸುಧಾಕರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಮರು ಚುನಾವಣೆ ನಡೆಯಬೇಕಿದೆ.ಸುಧಾಕರ್ ಅವರು ನಿಧನರಾದ ದಿನದಿಂದಲೇ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆಗಳು ಆರಂಭವಾಗಿವೆ. ಚರ್ಚೆ ಮತ್ತು ಊಹೆಗಳು ಈಗ ತಾರಕಕ್ಕೆ ಏರಿವೆ. ಸುಧಾಕರ್ ಅವರ ಮಗನಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಖಚಿತ ಎಂಬ ಭಾವನೆ ಕಾಂಗ್ರೆಸ್ನ ಒಂದು ವರ್ಗದಲ್ಲಿದೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ಪರ್ಧಿಸುವ ಎನ್ಡಿಎ ಅಭ್ಯರ್ಥಿ ಯಾರು? ಮತದಾರರು ಯಾರ ಕೈಹಿಡಿಯಲಿದ್ದಾರೆ ಇತ್ಯಾದಿ ಪ್ರಶ್ನೆಗಳೂ ಕೇಳಿ ಬರುತ್ತಿವೆ.ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುವ ಈ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಕ್ಕರೂ ಮುಖ್ಯಮಂತ್ರಿಯೇ ಅಭ್ಯರ್ಥಿ ಎಂಬಂತೆ ಬಿಂಬಿಸಿ ಗೆಲ್ಲುವ ತಂತ್ರಗಾರಿಕೆ ಮತ್ತು ಕಸರತ್ತುಗಳು ನಡೆಯುತ್ತಿವೆ. ಪಕ್ಷದ ಟಿಕೆಟ್ ಕೇಳಲು ಹೋದವರಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡಿ, ಮುಂದೆ ನಿಮಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಎಂಬ ಭರವಸೆಯನ್ನು ಸ್ವತಃ ಮುಖ್ಯಮಂತ್ರಿಯವರೇ ಅನೇಕರಿಗೆ ಹೇಳಿ ಕಳಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ನಿಜಕ್ಕೂ ಸವಾಲಾಗಿದೆ. ಸಚಿವ ಸಂಪುಟದ ಎಲ್ಲಾ ಸದಸ್ಯರು ಹಿರಿಯೂರಿಗೆ ಬಂದು ಪ್ರಚಾರ ಕಾರ್ಯದಲ್ಲಿ ತೊಡಗುತ್ತಾರೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಉಳಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.ಹಿರಿಯೂರು ಕ್ಷೇತ್ರದ ಚುನಾವಣೆಗಳಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತ ಬಂದಿದೆ. ಮೊದಲ ಒಂದೆರಡು ಚುನಾವಣೆಗಳು ಮತ್ತು ಕಾಂಗ್ರೆಸ್ ಇಬ್ಬಾಗದ ನಂತರ ನಡೆದ ಒಂದೆರಡು ಚುನಾವಣೆಗಳನ್ನು ಹೊರತುಪಡಿಸಿ ಉಳಿದೆಲ್ಲ ಚುನಾವಣೆಗಳಲ್ಲಿ ಜಾತಿ ನಿರ್ಣಾಯಕ ಪಾತ್ರವಹಿಸಿದೆ.1957ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದ ಕೆ. ಕೆಂಚಪ್ಪ, 1994 ಮತ್ತು 2004ರಲ್ಲಿ ಜನತಾ ದಳದ ಡಿ. ಮಂಜುನಾಥ್, 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ್, 2018ರಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಕೃಷ್ಣಪ್ಪ ಆಯ್ಕೆಯಾಗಿದ್ದನ್ನು ಬಿಟ್ಟರೆ ಉಳಿದೆಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಇಲ್ಲಿಂದ ಆಯ್ಕೆಯಾಗುತ್ತ ಬಂದಿದ್ದಾರೆ.1978ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕೆ. ಎಚ್ ರಂಗನಾಥ್ ಅತಿ ಹೆಚ್ಚು ಸುಮಾರು ಮೂವತ್ತೆರಡು ಸಾವಿರಕ್ಕೂ ಹೆಚ್ಚು ಮತಗಳಿಸಿ ಆಯ್ಕೆಯಾದದ್ದು ದಾಖಲೆಯಾಗಿ ಉಳಿದಿದೆ. ರಂಗನಾಥ್ ಮತ್ತು ಜನತಾದಳದ ಡಿ. ಮಂಜುನಾಥ್ ಸಾಂಪ್ರದಾಯಿಕ ಎದುರಾಳಿಗಳು ಎಂಬಂತೆ ಇದ್ದರು. ಇಬ್ಬರೂ ಬಲ ಮತ್ತು ಎಡಗೈ ಪಂಗಡದ ದಲಿತ ಮುಖಂಡರು. ಪೂರ್ಣಿಮಾ ಕೃಷ್ಣಪ್ಪ ಈ ಕ್ಷೇತ್ರದಿಂದ ಗೆದ್ದ ಏಕೈಕ ಮತ್ತು ಯಾದವ ಸಮಾಜದ ಮಹಿಳೆ. ಈಗ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಒಟ್ಟಾರೆ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಲವು ಚುನಾವಣೆಗಳಲ್ಲಿ ಬೆಂಬಲಿಸಿದ್ದಾರೆ.ಕೇತ್ರದಲ್ಲಿ ಕುಂಚಿಟಿಗ ಒಕ್ಕಲಿಗರು, ಎಡಗೈ ದಲಿತರು ಮತ್ತು ಗೊಲ್ಲ(ಯಾದವ) ಸಮುದಾಯಗಳ ಮತದಾರರು ಫಲಿತಾಂಶವನ್ನು ನಿರ್ಣಯಿಸುವಷ್ಟು ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಇತರೆ ಹಿಂದುಳಿದ, ಅಲ್ಪ ಸಂಖ್ಯಾತ ಮತದಾರರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಚುನಾವಣೆಗಳಲ್ಲಿ ಕುಂಚಿಟಿಗ, ಯಾದವ ಮತ್ತು ದಲಿತ ಮತದಾರರ ಪೈಕಿ ಎರಡು ಬಣಗಳು ಒಟ್ಟಾಗಿ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುತ್ತ ಬಂದಿವೆ. ಇತ್ತೀಚಿನ ಚುನಾವಣೆಗಳಲ್ಲಿ ಹಣದ ಪಾತ್ರವೂ ಸಾಕಷ್ಟಿದೆ. ಒಬಿಸಿ ಮತ್ತು ಅಲ್ಪ ಸಂಖ್ಯಾತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತ ಬಂದಿದ್ದಾರೆ.ಜೈನ ಸಮುದಾಯದ ಸುಧಾಕರ್ 2013 ಮತ್ತು 2023ರ ಚುನಾವಣೆಗಳಲ್ಲಿ ಅತ್ಯಂತ ಜಾಣತನದ ರಾಜಕಾರಣ ಮಾಡಿ ಗೆಲುವು ಸಾಧಿಸಿದರು. ಈ ಕ್ಷೇತ್ರದಲ್ಲಿ ಜೈನ ಸಮುದಾಯದ ಮತದಾರರು. ಹೆಚ್ಚಿಲ್ಲ. ಆದರೆ ಎಲ್ಲ ವರ್ಗಗಳ ಮತದಾರರನ್ನು ಓಲೈಸುವ ಯತ್ನದಲ್ಲಿ ಸುಧಾಕರ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಬಿಜೆಪಿಯ ಗೋವಿಂದ ಕಾರಜೋಳ (ಚಿತ್ರದುರ್ಗ ಮೀಸಲು ಕ್ಷೇತ್ರ) ಅವರಿಗೆ ಹೆಚ್ಚು ಮತಗಳು ಸಿಕ್ಕಿವೆ.ಪ್ರಸ್ತುತ ಮರು ಚುನಾವಣೆಯಲ್ಲಿ ಕುಂಚಿಟಿಗ, ದಲಿತ ಮತ್ತು ಯಾದವ ಮತದಾರರು ಯಾವ ಪಕ್ಷದ ಕೈ ಹಿಡಿಯುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರ ಆಗಲಿದೆ.ಸುಧಾಕರ್ ಪಕ್ಕದ ಚಳ್ಳಕೆರೆ ತಾಲ್ಲೂಕಿನವರು.ಬಿಜೆಪಿ ಅಭ್ಯರ್ಥಿಯಾಗಿ ನಿಂತು ಗೆದ್ದಿದ್ದ ಪೂರ್ಣಿಮಾ ಬೆಂಗಳೂರಿನವರು. ಹಿರಿಯೂರು ಸಾಮಾನ್ಯ ಕ್ಷೇತ್ರವಾದ ಮೇಲೆ ಸ್ಥಳೀಯ ಅಂದರೆ ತಾಲ್ಲೂಕಿನ ರಾಜಕಾರಣಿಗಳು ಶಾಸಕರಾಗಲು ಸಾಧ್ಯವಾಗಿಲ್ಲ. ಆದರೆ ಚುನಾವಣೆ ಸಮಯದಲ್ಲಿ ಸ್ಥಳೀಯರು, ಹೊರಗಿನವರು ಎಂಬ ಮಾತುಗಳು ಕೇಳಿ ಬರುತ್ತವೆ. ಕ್ಷೇತ್ರದ ಸಾಂಪ್ರದಾಯಿಕ ಎದುರಾಳಿಗಳಾದ ಕುಂಚಿಟಿಗರು ಮತ್ತು ಯಾದವ ಮತದಾರರು ಒಟ್ಟಾದರೆ ಸ್ಥಳೀಯ ಅಭ್ಯರ್ಥಿ ಆಯ್ಕೆ ಆಗಬಹುದು. ಅಂತಹ ಸಾಧ್ಯತೆ ಈಗ ಕಂಡು ಬರುತ್ತಿಲ್ಲ. ಹಿರಿಯೂರು ತಾಲ್ಲೂಕಿನವರೇ ಶಾಸಕರಾಗಿ ಆಯ್ಕೆಯಾಗುವವರೆಗೆ ಕ್ಷೇತ್ರದ ಅಭಿವೃದ್ಧಿ ಆಗುವುದಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.ನತದೃಷ್ಟ ಕ್ಷೇತ್ರಹಿರಿಯೂರು ತಾಲ್ಲೂಕಿನ ಜನರ ಮುಖ್ಯ ಕಸುಬು ಬೇಸಾಯ. ಮಳೆ ಆಶ್ರಯಿಸಿದ ಭೂಮಿ ಹೆಚ್ಚಾಗಿದೆ. ಅಂತರ್ಜಲ ಬಳಸಿಕೊಂಡು ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪ್ರಯತ್ನಗಳು ಆರಂಭವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಆಗಿದೆ. ಅದರಿಂದ ಅಂತರ್ಜಲದ ಮಟ್ಟದಲ್ಲಿ ಏರಿಕೆಯಾಗಿದೆ. ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಹಣ್ಣಿನ ಬೆಳೆಗಳನ್ನು ಬೆಳೆಯುವ ಆಸಕ್ತಿ ತೋರುತ್ತಿದ್ದಾರೆ. ತಾಲ್ಲೂಕಿನಲ್ಲಿ ಬಡತನ ಹೆಚ್ಚಾಗಿದೆ. ಕೃಷಿ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿದೆ. ಮಳೆ ಕೈ ಕೊಟ್ಟ ವರ್ಷಗಳಲ್ಲಿ ಜನರ ಬವಣೆ ಹೇಳತೀರದು. ತಾಲ್ಲೂಕಿನಲ್ಲಿ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ ಅವಕಾಶವಿದೆ. ಭೂಮಿ ಮತ್ತು ಹೇರಳವಾಗಿರುವ ಮಾನವ ಸಂಪನ್ಮೂಲ ಬಳಸಿಕೊಂಡು ಜನರ ಆದಾಯ ಹೆಚ್ಚಿಸುವ ಯೋಜನೆಗಳನ್ನು ರೂಪಿಸುವ ವಿಷಯದಲ್ಲಿಇದುವರೆಗಿನ ಯಾವ ಸರ್ಕಾರವೂ ಗಮನ ಹರಿಸಿಲ್ಲ.ಎಪ್ಪತ್ತರ ದಶಕದಲ್ಲಿ ಕಾರ್ಯಾರಂಭ ಮಾಡಿದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡಿದೆ. ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಕೈಗಾರಿಕೆಗಳಿಲ್ಲ. ಕೆಲವು ಸಣ್ಣ ಕೈಗಾರಿಕಾ ಘಟಕಗಳಿದ್ದರೂ ಅವಕ್ಕೆ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಇಲ್ಲ.ಮರು ಚುನಾವಣೆಯಲ್ಲಿ ಆಯ್ಕೆಯಾಗುವವರು ಯಾವ ಪಕ್ಷದವರೇ ಆದರೂ ಒಂದೂವರೆ ವರ್ಷದ ಅಧಿಕಾರಾವಧಿಯಲ್ಲಿ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದೂವರೆ ವರ್ಷ ಶಾಸಕರಾಗಲು ಹೆಚ್ಚು ಹಣ ಖರ್ಚು ಮಾಡುವುದು ವ್ಯರ್ಥ ಎಂಬ ಭಾವನೆ ಸ್ಥಳೀಯ ರಾಜಕಾರಣಿಗಳಲ್ಲಿದೆ.ಒಬ್ಬಿಬ್ಬರು ಇಂಜಿನಿಯರುಗಳು ಮತ್ತು ಅಧಿಕಾರಿ (ನಿವೃತ್ತ) ಗಳು ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.