ನಾಸಾದ ಬಾಹ್ಯಾಕಾಶ ಯೋಜನೆಗೆ ಬೆಂಗಳೂರು ಮೂಲದ ಖಗೋಳ ವಿಜ್ಞಾನಿ ರಮ್ಯಾ ಅಂಚೆ ನೇತೃತ್ವ
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಸುಮಾರು 20 ಮಿಲಿಯನ್ ಡಾಲರ್ (ಅಂದಾಜು ₹ 189 ಕೋಟಿ) ಮೊತ್ತದ ಯೋಜನೆಗೆ ಬೆಂಗಳೂರು ಮೂಲದ ಖಗೋಳ ವಿಜ್ಞಾನಿ ರಮ್ಯಾ ಅಂಚೆ ಅವರು ನೇತೃತ್ವ ವಹಿಸಲಿದ್ದಾರೆ.ನಕ್ಷತ್ರಗಳ ನಡುವಣ ಧೂಳಿನ ಕಣಗಳನ್ನು ಪತ್ತೆ ಮಾಡಿ, ಅವುಗಳ ವೈಶಿಷ್ಟ್ಯಗಳನ್ನು ಪತ್ತೆ ಮಾಡುವ ಈ ಬಾಹ್ಯಾಕಾಶ ಯೋಜನೆಗೆ PUFFINS ಎಂದು ಹೆಸರಿಡಲಾಗಿದೆ.ಅರಿಜೋನಾ ವ

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಸುಮಾರು 20 ಮಿಲಿಯನ್ ಡಾಲರ್ (ಅಂದಾಜು ₹ 189 ಕೋಟಿ) ಮೊತ್ತದ ಯೋಜನೆಗೆ ಬೆಂಗಳೂರು ಮೂಲದ ಖಗೋಳ ವಿಜ್ಞಾನಿ ರಮ್ಯಾ ಅಂಚೆ ಅವರು ನೇತೃತ್ವ ವಹಿಸಲಿದ್ದಾರೆ.ನಕ್ಷತ್ರಗಳ ನಡುವಣ ಧೂಳಿನ ಕಣಗಳನ್ನು ಪತ್ತೆ ಮಾಡಿ, ಅವುಗಳ ವೈಶಿಷ್ಟ್ಯಗಳನ್ನು ಪತ್ತೆ ಮಾಡುವ ಈ ಬಾಹ್ಯಾಕಾಶ ಯೋಜನೆಗೆ PUFFINS ಎಂದು ಹೆಸರಿಡಲಾಗಿದೆ.ಅರಿಜೋನಾ ವಿಶ್ವವಿದ್ಯಾಲಯದ ಸ್ಟುವರ್ಡ್ ವೀಕ್ಷಣಾಲಯದ ಸಹಾಯಕ ಪ್ರಾಧ್ಯಾಪಕಿಯಾಗಿರುವ ರಮ್ಯಾ, ಬೆಂಗಳೂರು ಸಮೀಪದ ದೇವನಹಳ್ಳಿಯರು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನಲ್ಲಿ (2012) ವ್ಯಾಸಂಗ ಮಾಡಿರುವ ಅವರನ್ನು ನಾಸಾ ಯೋಜನೆಗೆ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ತಮ್ಮನ್ನು ಆಯ್ಕೆ ಮಾಡುವ ಮುನ್ನ ಹಲವು ಸ್ಪರ್ಧಾತ್ಮಕ ಪ್ರಕ್ರಿಯೆಗಳು ನಡೆದವು ಎಂದು ಅವರು ಹೇಳಿಕೊಂಡಿದ್ದಾರೆ.ನಾಸಾದ ಅತ್ಯಂತ ಸ್ಪರ್ಧಾತ್ಮಕವಾದ ಖಗೋಳ ಭೌತಶಾಸ್ತ್ರ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾಗಿರುವ ಸಣ್ಣ ಬಾಹ್ಯಾಕಾಶ ನೌಕೆ ‘PUFFINS’ ಅನ್ನು 2030ಕ್ಕೆ ಉಡಾವಣೆ ಮಾಡುವ ಗುರಿ ಇದೆ. ಇದರಲ್ಲಿರುವ 10 ಇಂಚಿನ ದೂರದರ್ಶಕವು ದೂರದಲ್ಲಿರುವ ಸುಮಾರು 70 ನಕ್ಷತ್ರಗಳಿಂದ ಬರುವ ನೇರಳಾತೀತ ಕಿರಣಗಳನ್ನು ಪರೀಕ್ಷಿಸಲಿದೆ.ಕಳೆದ ಹಲವು ದಶಕಗಳಿಂದ ಇರುವ ನಿಗೂಢ ಪ್ರಶ್ನೆಗಳಿಗೆ ಅಂದರೆ, ಬಾಹ್ಯಾಕಾಶದ ಧೂಳು ಹೊಸ ನಕ್ಷತ್ರಗಳು ಮತ್ತು ಗ್ರಹಗಳ ಸೃಷ್ಟಿಗೆ ಕಾರಣವಾಗುವುದು ಹೇಗೆ? ಎಂಬುದಕ್ಕೆ ಉತ್ತರ ಹುಡುಕುವುದು ಯೋಜನೆಯ ಉದ್ದೇಶವಾಗಿದೆ.‘ನಕ್ಷತ್ರಗಳ ನಡುವಣ ಅತಿ ಸಣ್ಣ ಧೂಳಿನ ಕಣಗಳನ್ನು PUFFINS ಅಧ್ಯಯನ ಮಾಡಲಿದೆ. ಇವು ಸಾಮಾನ್ಯ ವೈರಸ್ನಷ್ಟು ಸಣ್ಣ ಇರುತ್ತವೆ. ಸಾಧಾರಣ ದೂರದರ್ಶಕಗಳಿಗೂ ಕಾಣದ ಇವುಗಳು, ನಕ್ಷತ್ರಗಳ ಬೆಳಕು ನಮ್ಮ ಅಂತರಿಕ್ಷದಲ್ಲಿ ಹೇಗೆ ಹರಿಯುತ್ತದೆ?, ನಕ್ಷತ್ರಗಳು, ಗ್ರಹಗಳು ರೂಪುಗೊಳ್ಳುವುದು ಹೇಗೆ? ಎಂಬುದನ್ನು ಅರ್ಥ ಮಾಡಿಕೊಳ್ಳಲು ಮುಖ್ಯ’ ಎಂದು ರಮ್ಯಾ ಹೇಳಿರುವುದಾಗಿ ‘ದಿ ಹಿಂದೂ’ ವರದಿ ಮಾಡಿದೆ.‘ನಕ್ಷತ್ರಗಳ ಕಾಂತೀಯ ಕ್ಷೇತ್ರಗಳನ್ನು ಪತ್ತೆ ಮಾಡುವ UV ಸ್ಪೆಕ್ಟ್ರೋಪೋಲರಿಮೆಟ್ರಿ ತಂತ್ರಜ್ಞಾನವನ್ನು PUFFINSನಲ್ಲಿ ಬಳಸಲಾಗುತ್ತದೆ. ಇದು ನೀಡುವ ಮಾಹಿತಿಯು ನಕ್ಷತ್ರಗಳ ನಡುವೆ ಇರುವ ಧೂಳಿನ ಬಗ್ಗೆ ನಮಗಿರುವ ಅನುಮಾನಗಳನ್ನು ನೀಗಿಸಲಿದೆ. ಬ್ರಹ್ಮಾಂಡದ ರಚನೆ ಮತ್ತು ಬೆಳವಣಿಗೆಯ ಬಗ್ಗೆಯೂ ನಮಗೆ ಇನ್ನಷ್ಟು ವಿಚಾರಗಳು ಗೊತ್ತಾಗಲಿವೆ’ ಎಂದಿದ್ದಾರೆ.