ಓಡುವ ನದಿ ಸಾಗರವ ಸೇರಲೆಬೇಕು...
ನದಿಯ ನೀರು ಸಮುದ್ರ ಸೇರುವುದನ್ನು ವ್ಯರ್ಥ ಎಂದು ಭಾವಿಸುವವರಿದ್ದಾರೆ. ಆದರೆ, ಈ ನಿಸರ್ಗ ಸಹಜ ಹರಿವಿನಲ್ಲಿ ಜೀವವೈವಿಧ್ಯದ ಸಂರಕ್ಷಣೆ ಅಡಗಿದೆ.ಬೇಡ್ತಿ–ಅಘನಾಶಿನಿ ಮತ್ತು ಗಂಗಾವಳಿ ‘ನದಿ ತಿರುವು ಯೋಜನೆ’ ವಿರೋಧಿಸಿ ಹಾಗೂ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಿದೆ. ಆ ಪ್ರತಿಭಟನೆಯನ್ನು ನಿರ್ದಿಷ್ಟ ಸಂದರ್ಭವನ್ನು

ನದಿಯ ನೀರು ಸಮುದ್ರ ಸೇರುವುದನ್ನು ವ್ಯರ್ಥ ಎಂದು ಭಾವಿಸುವವರಿದ್ದಾರೆ. ಆದರೆ, ಈ ನಿಸರ್ಗ ಸಹಜ ಹರಿವಿನಲ್ಲಿ ಜೀವವೈವಿಧ್ಯದ ಸಂರಕ್ಷಣೆ ಅಡಗಿದೆ.ಬೇಡ್ತಿ–ಅಘನಾಶಿನಿ ಮತ್ತು ಗಂಗಾವಳಿ ‘ನದಿ ತಿರುವು ಯೋಜನೆ’ ವಿರೋಧಿಸಿ ಹಾಗೂ ಪಶ್ಚಿಮಘಟ್ಟದ ಪರಿಸರ ಸಂರಕ್ಷಣೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಿದೆ. ಆ ಪ್ರತಿಭಟನೆಯನ್ನು ನಿರ್ದಿಷ್ಟ ಸಂದರ್ಭವನ್ನು ಮೀರಿ, ನದಿಯ ಕುರಿತ ನಮ್ಮ ತಿಳಿವಳಿಕೆಯನ್ನು ತಿದ್ದುವ ಪ್ರಯತ್ನವಾಗಿಯೂ ನೋಡಬಹುದಾಗಿದೆ.ಸಮುದ್ರಕ್ಕೆ ಸೇರುವ ಮೂಲಕ ನದಿಯ ನೀರು ವ್ಯರ್ಥವಾಗುತ್ತದೆ; ಹಾಗಾಗಿ, ಹೆಚ್ಚಿನ ನೀರನ್ನು ಅಗತ್ಯವಿರುವ ಪ್ರದೇಶ ಗಳಿಗೆ ತಲಪಿಸಬಹುದು ಎನ್ನುವುದು ‘ನದಿ ತಿರುವು’ ಯೋಜನೆಗಳನ್ನು ಬೆಂಬಲಿಸುವವರ ವಾದ. ಆದರೆ, ನದಿಯ ನೀರುಸಮುದ್ರ ಸೇರುವ ಮೂಲಕ ವ್ಯರ್ಥವಾಗುತ್ತದೆ ಎನ್ನುವುದು ತಪ್ಪು ತಿಳಿವಳಿಕೆ.ನದಿಗಳು ಸಮುದ್ರ ಸೇರುವ ಪ್ರಕ್ರಿಯೆ ಬಹುದೊಡ್ಡ ಜೀವವೈವಿಧ್ಯದ ಪಾಲನೆ ಪೋಷಣೆಯೂ ಆಗಿದೆ. ನದಿಗಳ ಸಿಹಿನೀರು, ಪೋಷಕಾಂಶ, ಸಾವಯವ ಪದಾರ್ಥ ಮತ್ತು ಸೂಕ್ಷ್ಮ ಮಣ್ಣಿನ ಕಣಗಳು ಮುಖಜ ಭೂಮಿಯನ್ನು ಫಲವತ್ತಾಗಿಸುತ್ತವೆ. ಮೀನು, ಚಿಪ್ಪುಮೀನು, ಸೀಗಡಿ ಸೇರಿದಂತೆ ಅನೇಕ ಜಲಚರಗಳ ಸಂತಾನೋತ್ಪತ್ತಿಗೆ ಈ ಪ್ರದೇಶವೇ ಮುಖ್ಯ.ಸಮುದ್ರ ಸೇರುವ ನದಿಯ ನೀರು ಮೀನುಗಾರಿಕೆಗೆ, ಕಾಂಡ್ಲಾ ವನಗಳಿಗೆ, ಕರಾವಳಿಯ ಮಣ್ಣಿನ ಸಮತೋಲನಕ್ಕೆ ಹಾಗೂ ಸಮುದ್ರದ ಆಹಾರ ಸರಪಳಿಯನ್ನು ಉಳಿಸಲು ಸಹಾಯಕವಾಗಿದೆ. ನದಿಯನ್ನು ಮಧ್ಯದಲ್ಲೇ ತಡೆದು, ಹರಿವನ್ನು ತಿರುಗಿಸಿದರೆ, ಪರಿಸರ ವ್ಯವಸ್ಥೆಯ ಶಕ್ತಿ ಸಮೀಕರಣವನ್ನೇ ಬದಲಿಸಿದಂತಾಗುತ್ತದೆ.ಪರಿಸರ ವಿಜ್ಞಾನ ಅಧ್ಯಯನಗಳು ಅಘನಾಶಿನಿ ಕಣಿವೆಯಲ್ಲಿನ ಕಾಡಿನ ಸ್ವರೂಪ ಮತ್ತು ನದಿಯ ಪರಿಸರ ಮಹತ್ವವನ್ನು ದಾಖಲಿಸಿವೆ. ಅಘನಾಶಿನಿ ನದಿಗೆ ದೊಡ್ಡ ಅಣೆಕಟ್ಟು, ಪ್ರಮುಖ ತಿರುವು ಇಲ್ಲದಿರುವುದರಿಂದ ಅದರ ಮುಖಜ ಭೂಮಿ ಅತ್ಯಂತ ಉತ್ಪಾದಕವಾಗಿದೆ. ಈ ಮುಖಜ ಭೂಮಿಯಲ್ಲಿ ಚಿಪ್ಪುಮೀನು ಆಧಾರಿತ ಆರ್ಥಿಕ ಚಟುವಟಿಕೆ ವರ್ಷಕ್ಕೆ ಅಂದಾಜು ₹5.78 ಕೋಟಿಯಿದೆ. ಈ ನದಿಯನ್ನು ಅವಲಂಬಿಸಿ 15ಕ್ಕೂ ಹೆಚ್ಚು ಗ್ರಾಮಗಳಿದ್ದು, 2,500ಕ್ಕೂ ಹೆಚ್ಚು ಮಂದಿಗೆ ನದಿ ಉದ್ಯೋಗ ಒದಗಿಸುತ್ತಿದೆ. ಹೀಗಿರುವಾಗ ‘ಸಮುದ್ರಕ್ಕೆ ಹೋಗುತ್ತಿರುವುದು ಹೆಚ್ಚುವರಿ ನೀರು’ ಎಂದು ಹೇಳುವುದು ಯಾವ ಲೆಕ್ಕಾಚಾರ?ಪಶ್ಚಿಮಕ್ಕೆ ಹರಿಯುವ ನದಿ ನೀರು ಹೆಚ್ಚುವರಿ ಎನ್ನುವುದು ವೈಜ್ಞಾನಿಕ ನಿರ್ಣಯವೇನಲ್ಲ. ನದಿಯ ಒಟ್ಟು ಹರಿವಿನಲ್ಲಿ ಎಷ್ಟು ನೀರನ್ನು ಪರಿಸರಕ್ಕೆ ಉಳಿಸಬೇಕು? ಕುಡಿಯಲು ಎಷ್ಟು ನೀರು ಬೇಕು? ಕೃಷಿಗೆ, ಮೀನುಗಾರಿಕೆಗೆ ಎಷ್ಟು? ಅಂತರ್ಜಲ ಮರುಪೂರಣಕ್ಕೆ ಎಷ್ಟು? ನದಿ ಮುಖಜ ಭೂಮಿಗೆ ಎಷ್ಟು ಅಗತ್ಯವಿದೆ? ಬರಗಾಲದಲ್ಲಿ ನದಿಯ ಕನಿಷ್ಠ ಹರಿವು ಎಷ್ಟು? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಮುಖ್ಯ.ಬಯಲುಸೀಮೆಯ ಕುಡಿಯುವ ನೀರಿನ ಸಮಸ್ಯೆಯನ್ನು ಯಾರೂ ನಿರಾಕರಿಸುವಂತಿಲ್ಲ. ಆದರೆ, ನೀರಿನಕೊರತೆಗೆ ಪರಿಹಾರ ಹುಡುಕುವಾಗಮತ್ತೊಂದು ಪ್ರದೇಶದ ಪರಿಸರವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಸರಿಯಲ್ಲ. ಮಳೆನೀರು ಸಂಗ್ರಹ, ಕೆರೆಗಳ ಪುನರುಜ್ಜೀವನ, ಅಂತರ್ಜಲ ಮರುಪೂರಣ ವ್ಯವಸ್ಥೆ, ವ್ಯವಸಾಯ ಪದ್ಧತಿ ಬದಲಾವಣೆ, ಶುದ್ಧೀಕರಿಸಿದ ಚರಂಡಿ ನೀರು ಬಳಕೆ, ಕೈಗಾರಿಕಾ ನೀರಿನ ಮರುಬಳಕೆ, ಸ್ಥಳೀಯ ಜಲಾನಯನ ಅಭಿವೃದ್ಧಿ ಚಟುವಟಿಕೆಗಳ ಮೂಲಕ ನೀರಿನ ಬಿಕ್ಕಟ್ಟಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ.ಎತ್ತಿನಹೊಳೆ ಯೋಜನೆಯನ್ನು ಗಮನಿಸಿ. 2012ರಲ್ಲಿ ₹8,323.50 ಕೋಟಿ ಇದ್ದ ಯೋಜನೆಯ ಅಂದಾಜು ಮೊತ್ತ ಇದೀಗ ₹30,000 ಕೋಟಿ ಸಮೀಪ ತಲಪಿದೆ. ಇಷ್ಟೆಲ್ಲ ಹಣ ಸುರಿದರೂ ಯೋಜನೆ ಇನ್ನೂ ಪೂರ್ಣವಾಗಿಲ್ಲ. ಭವಿಷ್ಯದ ಯೋಜನೆ ರೂಪಿಸುವವರಿಗೆ ಇದು ಎಚ್ಚರಿಕೆಯ ಪಾಠ. ನದಿ ತಿರುವು ಯೋಜನೆ ಕಾಗದದ ಮೇಲೆ ಗೆರೆ ಎಳೆಯುವಷ್ಟು ಸುಲಭವಲ್ಲ. ಅದಕ್ಕೆ ಅಣೆಕಟ್ಟು, ಪಂಪಿಂಗ್ ಸ್ಟೇಷನ್, ವಿದ್ಯುತ್, ಸುರಂಗ, ಕಾಲುವೆ, ಪೈಪ್ಲೈನ್, ಭೂಸ್ವಾಧೀನ, ಅರಣ್ಯ-ಪರಿಸರ-ವನ್ಯಜೀವಿ ಮಂಡಳಿಯ ಅನುಮತಿ, ಪುನರ್ವಸತಿ, ನೀರಿನ ಹಕ್ಕು, ನಿರಂತರ ಕಾರ್ಯಾಚರಣೆಯ ವೆಚ್ಚ ಎಲ್ಲವೂ ಅಗತ್ಯ.ಬಯಲುಸೀಮೆಯ ಮಂದಿಗೆ, ರೈತರಿಗೆ, ನಗರಗಳಿಗೆ ನೀರು ಬೇಕು. ಕರಾವಳಿ ಮಂದಿಗೆ, ಮೀನುಗಾರರಿಗೆ ನದಿ ಬೇಕು. ಕಾಡಿಗೆ ಮಳೆ, ಸಮುದ್ರಕ್ಕೆ ನದಿ ಹರಿವು ಬೇಕು. ಒಬ್ಬರನ್ನು ಗೆಲ್ಲಿಸಿ ಮತ್ತೊಬ್ಬರನ್ನು ಸೋಲಿಸುವ ನೀರಿನ ರಾಜಕೀಯವೋ ಅಥವಾ ಎಲ್ಲರ ಬದುಕನ್ನೂ ಉಳಿಸುವ ನೀರಿನ ವಿಜ್ಞಾನ ಹುಡುಕಬೇಕೋ ಎನ್ನುವುದು ಸದ್ಯದ ಪ್ರಶ್ನೆ.ನದಿಯ ಹುಟ್ಟು–ಹರಿವು ನಾವು ನಿರ್ಧರಿಸುವುದಲ್ಲ. ಅದು ಯಾವ ಕಲ್ಲನ್ನು ಸುತ್ತಿಕೊಂಡು ಹೋಗಬೇಕು, ಯಾವ ಕಣಿವೆಯಲ್ಲಿ ಎಷ್ಟು ವೇಗದಲ್ಲಿ ಹರಿಯಬೇಕು, ಯಾವ ಮರದ ಬೇರಿನ ಬಳಿ ನಿಲ್ಲಬೇಕು ಎಂದು ನಾವು ಕಲಿಸಿಲ್ಲ. ಅದು ತನ್ನ ದಾರಿ ಕಂಡುಕೊಂಡಿದೆ. ಸಾವಿರಾರು ವರ್ಷಗಳ ಭೂವೈಜ್ಞಾನಿಕ ಪ್ರಕ್ರಿಯೆ, ಮಳೆ, ಕಾಡು, ಮಣ್ಣು, ಕಲ್ಲು, ಗಾಳಿ ಮತ್ತು ಸಮುದ್ರ ಸೇರಿ ನಿರ್ಮಿಸಿದ ದಾರಿಯದು. ಆ ದಾರಿಯಲ್ಲಿ ಹಸ್ತಕ್ಷೇಪ ಮಾಡಿದರೆ, ದೊಡ್ಡ ದುರಂತಕ್ಕೆ ಮುನ್ನುಡಿ ಬರೆದಂತೆ.ನದಿ ಸಮುದ್ರ ಸೇರುವುದನ್ನು ತಡೆಯುವುದು ನೀರಿನ ಉಳಿತಾಯವಲ್ಲ. ನದಿಯನ್ನು ಸಮುದ್ರದವರೆಗೆ ತಲಪಿಸುವುದರಲ್ಲಿ ಪ್ರಕೃತಿಯ ಲೆಕ್ಕಾಚಾರವಿದೆ. ಅದನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ ನಮಗೆ ಅಗತ್ಯ.