ಭಾರಿ ಮಳೆಗೆ ಒಡೆದ ನಾಲೆ
ಮೈಸೂರು/ಮಂಗಳೂರು: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೀಲಕೊಪ್ಪಲು ಗ್ರಾಮದ ಬಳಿ ಪಿಕಪ್ ನಾಲೆಯ ಏರಿ ಸುಮಾರು 15 ಅಡಿಗಳಷ್ಟು ಒಡೆದು,

ಮೈಸೂರು/ಮಂಗಳೂರು: ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಹಲವೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ. ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಮೈಸೂರು, ಕೋಲಾರ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ನೀಲಕೊಪ್ಪಲು ಗ್ರಾಮದ ಬಳಿ ಪಿಕಪ್ ನಾಲೆಯ ಏರಿ ಸುಮಾರು 15 ಅಡಿಗಳಷ್ಟು ಒಡೆದು, ಕೃಷಿ ಜಮೀನು ಜಲಾವೃತವಾಗಿದೆ. ಕೆಲವೆಡೆ ಗದ್ದೆಯ ಬದುಗಳು ಕೊಚ್ಚಿಹೋಗಿವೆ.ಭಾರಿ ಮಳೆಗೆ ಲೋಕಪಾವನಿ ನದಿ ತುಂಬಿ ಹರಿದಿದೆ. ತಾಲ್ಲೂಕಿನ ಚಂದಗಿರಿಕೊಪ್ಪಲು, ಸಬ್ಬನಕುಪ್ಪೆ, ಬಲ್ಲೇನಹಳ್ಳಿ ಗ್ರಾಮಗಳ ರೈತರ ಕೃಷಿ ಭೂಮಿಗೆ ನೀರು ನುಗ್ಗಿದೆ. ಟಿ.ಎಂ. ಹೊಸೂರು, ಗೌಡಹಳ್ಳಿ, ಗಣಂಗೂರು, ನೆಲಮನೆ, ಅರಕೆರೆ ಭಾಗದಲ್ಲಿ ಮಳೆಯಿಂದ ತಗ್ಗು ಪ್ರದೇಶ ಜಲಾವೃತವಾಗಿದೆ.ಗುಡುಗು ಸಹಿತ ಮಳೆ: ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ಮಧ್ಯರಾತ್ರಿಯಿಂದ ಬೆಳಗ್ಗಿನವರೆಗೆ ಗುಡುಗು ಸಹಿತ ಮಳೆಯಾಗಿದ್ದು, ಶುಕ್ರವಾರ ಇಡೀ ದಿನ ಮೋಡ ಮುಸುಕಿದ ವಾತಾವರಣವಿತ್ತು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ನರಸಿಂಹರಾಜಪುರ ಭಾಗದಲ್ಲಿ ಗುರುವಾರ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ಕೆಲವೆಡೆ ಎರಡು– ಮೂರು ತಾಸು ಧಾರಾಕಾರ ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ ಜೋರು ಮಳೆ ಸುರಿದಿದೆ. ಕೋಲಾರ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ನಗರ ಭಾಗದಲ್ಲಿ 68 ಮಿ.ಮೀ ಮಳೆ ಸುರಿದಿದೆ. ಕೋಲಾರ ತಾಲ್ಲೂಕಿನ ನಂದಂಬಳ್ಳಿ ಅಂಗನವಾಡಿ ಕೇಂದ್ರಕ್ಕೆ ಮಳೆ ನೀರು ನುಗ್ಗಿದ್ದು, ಮಕ್ಕಳು ಪರದಾಡಿದರು. ಅಂಗನವಾಡಿಯಲ್ಲಿ ತಯಾರಿಸಿದ್ದ ಆಹಾರವನ್ನು ಮಕ್ಕಳು ಮಳೆ ನೀರಿನಲ್ಲಿ ನಿಂತುಕೊಂಡೇ ತಿಂದರು. ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಕೆಜಿಎಫ್, ಬಂಗಾರಪೇಟೆಯ ವಿವಿಧೆಡೆಯೂ ಅಬ್ಬರದ ಮಳೆಯಾಗಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಮಳೆ ಅಬ್ಬರಿಸಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯಲ್ಲಿ ಅತಿ ಹೆಚ್ಚು 4.5 ಸೆಂ.ಮೀ., ಕೊಣನೂರು ಹೋಬಳಿಯಲ್ಲಿ 4.1 ಸೆಂ.ಮೀ., ಸಕಲೇಶಪುರ ತಾಲ್ಲೂಕಿನ ಹಾನಬಾಳು ಹೋಬಳಿಯಲ್ಲಿ 4 ಸೆಂ.ಮೀ. ಮಳೆಯಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ನರಸಿಂಹರಾಜಪುರ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಎಲ್ಲ ಭಾಗಗಳಲ್ಲೂ ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನವರೆಗೆ ಭಾರಿ ಮಳೆ ಸುರಿದಿದೆ. ಶನಿವಾರಸಂತೆ ಭಾಗದಲ್ಲಿ ಬಿರುಸಿನ ಮಳೆಯಾಗಿದೆ. ಸೋಮವಾರಪೇಟೆ ಪಟ್ಟಣದಲ್ಲಿ 6.5 ಸೆಂ.ಮೀ ಶಾಂತಳ್ಳಿ ಶ್ರೀಮಂಗಲ 6 ಪೊನ್ನಂಪೇಟೆ 5.5 ಮಡಿಕೇರಿ ಬಾಳೆಲೆ 5 ಅಮ್ಮತ್ತಿ 4.5 ಸೆಂ.ಮೀ ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ 1207 ಕ್ಯುಸೆಕ್ನಷ್ಟು ನೀರಿನ ಒಳಹರಿವು ಇದೆ.