ಪ್ಯಾರಾ ಏಷ್ಯಾಡ್ ಅಂಗಳದಲ್ಲಿ ಕರ್ನಾಟಕದ 11 ‘ಚಾಂಪಿಯನ್ಸ್’
ಬೆಂಗಳೂರು: ಐಚಿ–ನಾಗೋಯಾದಲ್ಲಿ ಇದೇ 18ರಿಂದ 24ರವರೆಗೆ ನಡೆಯಲಿರುವ ಐದನೇ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದ 11 ಪ್ಯಾರಾ ಅಥ್ಲೀಟ್ಗಳು ಪದಕದ ಕನಸಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.ಭಾರತದಿಂದ ಒಟ್ಟು 168 ಪ್ಯಾರಾ ಅಥ್ಲೀಟ್ಗಳು 11 ಸ್ಪರ್ಧಾ ವಿಭಾಗಗಳಲ್ಲಿ ಪದಕಕ್ಕಾಗಿ ಸೆಣಸಾಟ ನಡೆಸುವರು. ಅದರಲ್ಲಿ 112 ಪುರುಷ ಮತ್ತು 56 ಮಹಿಳಾ ಕ್ರೀಡಾಪಟುಗ

ಬೆಂಗಳೂರು: ಐಚಿ–ನಾಗೋಯಾದಲ್ಲಿ ಇದೇ 18ರಿಂದ 24ರವರೆಗೆ ನಡೆಯಲಿರುವ ಐದನೇ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಕರ್ನಾಟಕದ 11 ಪ್ಯಾರಾ ಅಥ್ಲೀಟ್ಗಳು ಪದಕದ ಕನಸಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.ಭಾರತದಿಂದ ಒಟ್ಟು 168 ಪ್ಯಾರಾ ಅಥ್ಲೀಟ್ಗಳು 11 ಸ್ಪರ್ಧಾ ವಿಭಾಗಗಳಲ್ಲಿ ಪದಕಕ್ಕಾಗಿ ಸೆಣಸಾಟ ನಡೆಸುವರು. ಅದರಲ್ಲಿ 112 ಪುರುಷ ಮತ್ತು 56 ಮಹಿಳಾ ಕ್ರೀಡಾಪಟುಗಳು ಸೇರಿದ್ದಾರೆ. ಚೀನಾದ ಹಾಂಗ್ಝೌನಲ್ಲಿ ನಡೆದ 2022ರ ಆವೃತ್ತಿಯಲ್ಲಿ ಭಾರತವು ದಾಖಲೆಯ 111 ಪದಕಗಳನ್ನು (29 ಚಿನ್ನ, 31 ಬೆಳ್ಳಿ, 51 ಕಂಚು) ಗೆದ್ದು ಇತಿಹಾಸ ನಿರ್ಮಿಸಿತ್ತು. ಅದೇ ಪದಕ ‘ಶತಕ’ದ ನಿರೀಕ್ಷೆಯೊಂದಿಗೆ ತಂಡವು ಜಪಾನ್ ವಿಮಾನವೇರಿದೆ.ತಮ್ಮ ದೈಹಿಕ ನ್ಯೂನತೆ ಮತ್ತು ಹತ್ತಾರು ಸವಾಲುಗಳನ್ನು ಮೆಟ್ಟಿ ನಿಂತು ಏಷ್ಯಾಡ್ ಅಂಗಳದಲ್ಲಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಸಜ್ಜಾಗಿರುವ ರಾಜ್ಯದ ಪ್ಯಾರಾ ಅಥ್ಲೀಟ್ಗಳ ಮಾಹಿತಿ ಇಲ್ಲಿದೆ.ರಕ್ಷಿತಾ ರಾಜು: ಚಿಕ್ಕಮಗಳೂರು ಜಿಲ್ಲೆಯ ರಕ್ಷಿತಾರಾಜು ಅವರು ಹುಟ್ಟಿನಿಂದಲೇ ಶೇ100 ರಷ್ಟು ದೃಷ್ಟಿದೋಷ ಹೊಂದಿದ್ದಾರೆ. ಅವರು ಮಹಿಳೆಯರ 1500 ಮೀಟರ್ (ಟಿ11) ಓಟದಲ್ಲಿ ಹ್ಯಾಟ್ರಿಕ್ ಚಿನ್ನದ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. 2018 ಮತ್ತು 2022ರ ಆವೃತ್ತಿಗಳಲ್ಲಿ ಸ್ವರ್ಣ ಗೆದ್ದ ಹಿರಿಮೆ ಅವರದು. 2024ರ ಪ್ಯಾರಿಸ್ ಪ್ಯಾರಾಲಂಪಿಕ್ಸ್ ಕ್ರೀಡಾಕೂಟದಲ್ಲೂ ಭಾರತವನ್ನು ಪ್ರತಿನಿಧಿಸಿದ್ದರು.ಸವಿತಾ ವಿಠ್ಠಲ ಅಜ್ಜನಕಟ್ಟಿ: ಬೆಳಗಾವಿ ಜಿಲ್ಲೆಯ ಸವಿತಾ ಅವರು ಪ್ರತಿಭಾವಂತ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಹುಟ್ಟಿನಿಂದಲೇ ಅಂಗವೈಕಲ್ಯವನ್ನು ಹೊಂದಿದ್ದ ಅವರು ಸವಾಲುಗಳ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅವರು ಮಹಿಳೆಯರ ಸಿಂಗಲ್ಸ್ (ಕ್ಲಾಸ್ 8) ಹಾಗೂ ಮಿಶ್ರ ವಿಭಾಗಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸವಿತಾ ಅಜ್ಜನಕಟ್ಟಿರಾಧಾ ವೆಂಕಟೇಶ್: ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದ ಚಿತ್ರದುರ್ಗದ ರಾಧಾ ಅವರು ಮಹಿಳೆಯರ 1500 ಮೀ. ಓಟದಲ್ಲಿ (ಟಿ12 ವಿಭಾಗ) ಪ್ರಾಬಲ್ಯ ಸಾಧಿಸುವ ವಿಶ್ವಾಸದಲ್ಲಿದ್ದಾರೆ. 2022ರ ಆವೃತ್ತಿಯ ಇದೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದ ಅವರು, ಅದನ್ನು ಉಳಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಅವರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಸೌಮ್ಯಾ: ಚಾಮರಾಜನಗರದ ಪ್ಯಾರಾ ಅಥ್ಲೀಟ್ ಸೌಮ್ಯಾ ಅವರು 1500 ಮೀಟರ್ಸ್ (ಟಿ12/ಟಿ13) ಓಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದು, ಪದಕದ ಭರವಸೆಯಲ್ಲಿದ್ದಾರೆ. ದೃಷ್ಟಿ ದೋಷವನ್ನು ಹೊಂದಿರುವ ಈ ಅಥ್ಲೀಟ್ ನವದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರಾನ್ ಪ್ರೀ ಕೂಟದಲ್ಲಿ ಇದೇ ಓಟದ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು.ಶರತ್ ಎಂ.ಎಸ್.: ಕಳೆದ ಆವೃತ್ತಿಯಲ್ಲಿ ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದ ಹಾಸನ ಜಿಲ್ಲೆಯ ಶರತ್ ಅವರು ಈ ಬಾರಿ ಪದಕದ ಬಣ್ಣವನ್ನು ಬದಲಾಯಿಸುವ ಗುರಿಯಲ್ಲಿದ್ದಾರೆ. ಇವರು ದೃಷ್ಟಿ ದೋಷವುಳ್ಳವರ ಟಿ12 ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಹಾಗೂ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಅವರು ಸ್ವರ್ಣ ಸಾಧನೆ ಮಾಡಿದ್ದರು.ಗೋಪೀಚಂದ್ ಲಿಂಗುಟ್ಲಾ: ಬಳ್ಳಾರಿ ಜಿಲ್ಲೆಯ ಪ್ಯಾರಾ ಈಜುಪಟು ಗೋಪಿಚಂದ್ ಅವರು 100 ಮೀಟರ್ಸ್ ಬ್ಯಾಕ್ಸ್ಟ್ರೋಕ್ (ಎಸ್7 ವಿಭಾಗ) ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ. ಬಾಲ್ಯದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಂಡ ಅವರು ಈಜುಕೊಳವನ್ನು ತಮ್ಮ ಸಾಧನೆಯ ಕ್ಷೇತ್ರವನ್ನಾಗಿಸಿಕೊಂಡರು. ಹಿಂದಿನ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಅವರು, ಈ ಬಾರಿ ಪದಕ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.ನಿರಂಜನ್ ಮುಕುಂದನ್: ಬೆನ್ನುಹುರಿಯ ದೋಷ ಮತ್ತು ಕಾಲುಗಳ ಸಮಸ್ಯೆಗಳೊಂದಿಗೆ ಜನಿಸಿದ್ದ ಬೆಂಗಳೂರಿನ ನಿರಂಜನ್ ಅವರು ಈಗಾಗಲೇ 19ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾರೆ. ಚಿಕಿತ್ಸೆಯ ಭಾಗವಾಗಿ 2003ರಲ್ಲಿ ಈಜಲು ಆರಂಭಿಸಿದ ಅವರು ಈಜುಪಟುವಾಗಿ ಹೊರಹೊಮ್ಮಿದರು. 2014ರಿಂದ ಇದುವರೆಗೆ ನಡೆದ ಎಲ್ಲಾ ಆವೃತ್ತಿಗಳಲ್ಲಿ ಭಾಗವಹಿಸಿದ್ದಾರೆ. 50 ಮೀಟರ್ ಬಟರ್ಫ್ಲೈ (ಎಸ್7 ವಿಭಾಗ) ಸ್ಪರ್ಧೆಯಲ್ಲಿ ಭಾಗವಹಿಸುವರು.ಪ್ಯಾರಾ ಈಜುಪಟು ನಿರಂಜನ್ ಮುಕುಂದನ್ ಸ್ವಾತಿಕ್ ಪಾಟೀಲ: ಬಾಲ್ಯದಲ್ಲಿ ಪೋಲಿಯೊ ಬಾಧಿಸಿದರೂ ಅದನ್ನು ಮೆಟ್ಟಿನಿಂತು ಅಂತರರಾಷ್ಟ್ರೀಯ ಈಜು ಸ್ಪರ್ಧೆಗಳಲ್ಲಿ ಗುರುತಿಸಿಕೊಂಡವರು ಬೆಳಗಾವಿಯ ಸ್ವಾತಿಕ್. ಗ್ಲಾಸ್ಗೊದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುರುಷರ 100 ಮೀಟರ್ ಬ್ರೆಸ್ಟ್ಸ್ಟ್ರೋಕ್ (ಎಸ್ಬಿ9) ಫೈನಲ್ ತಲುಪಿ 5ನೇ ಸ್ಥಾನ ಗಳಿಸಿದ್ದ ಅವರು ಇಲ್ಲಿ ಪದಕಕ್ಕೆ ಮುತ್ತಿಕ್ಕುವ ವಿಶ್ವಾಸದಲ್ಲಿದ್ದಾರೆ. ಸತತ ಮೂರನೇ ಬಾರಿ ಪ್ಯಾರಾ ಏಷ್ಯಾಡ್ನಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ.ತೇಜಸ್ ನಂದಕುಮಾರ್: ಬೆಂಗಳೂರಿನ ಖ್ಯಾತ ಪ್ಯಾರಾ ಈಜುಪಟುವಾಗಿರುವ ತೇಜಸ್ ಅವರು ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ (ಎಸ್7) ಸ್ಪರ್ಧೆಯಲ್ಲಿ ಅದೃಷ್ಟ ಪರೀಕ್ಷೆ ತಯಾರಾಗಿದ್ದಾರೆ. ಇವರು ಕೂಡ ಬೆನ್ನುಹುರಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಂಗ್ಝೌ ಆವೃತ್ತಿಯಲ್ಲಿ ನಿರಾಸೆ ಅನುಭವಿಸಿದ್ದ ಅವರು ಈ ಬಾರಿ ಪದಕದ ಗುರಿಯಲ್ಲಿದ್ದಾರೆ.ಪಲ್ಲವಿ ಕೆ. ಮಂಜುನಾಥ್: ವೀಲ್ಚೇರ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಮೈಸೂರಿನ ಪಲ್ಲವಿ ಅವರು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್ನಲ್ಲಿ (ಎಸ್ಎಚ್ 6 ವಿಭಾಗ) ಪದಕದ ನಿರೀಕ್ಷೆಯಲ್ಲಿದ್ದಾರೆ. ಅವರು ಬೆನ್ನುಹುರಿಯ ಗಾಯದಿಂದ ಉಂಟಾದ ದೈಹಿಕ ನ್ಯೂನತೆ ಹೊಂದಿದ್ದಾರೆ.ರಾಕೇಶ್ ನಿಡಗುಂದಿ: ಬಾಲ್ಯದಲ್ಲಿ ಪೋಲಿಯೊ ಬಾಧಿಸಿದ ಕಾರಣದಿಂದ ದೈಹಿಕ ಚಲನವಲನಗಳಲ್ಲಿ ಸವಾಲುಗಳನ್ನು ಎದುರಿಸಿದ್ದ ರಾಕೇಶ್ ಅವರು ಕಠಿಣ ಪರಿಶ್ರಮದಿಂದ ಪ್ಯಾರಾ ಶೂಟಿಂಗ್ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಧಾರವಾಡ ಜಿಲ್ಲೆಯ ಅವರು ಏಷ್ಯಾಡ್ನಲ್ಲಿ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ (ಎಸ್ಎಚ್1 ವಿಭಾಗ)ನಲ್ಲಿ ಚಿನ್ನಗೆ ಗುರಿ ಇಡುವ ಛಲದಲ್ಲಿದ್ದಾರೆ.ಪ್ಯಾರಾ ಶೂಟರ್ ರಾಕೇಶ್ ನಿಡಗುಂದಿ