ಮಣಿಪುರಕ್ಕೆ ಇಷ್ಟು ಭದ್ರತೆ ಒದಗಿಸಿದ್ದರೆ ಜನಾಂಗೀಯ ಸಂಘರ್ಷ ತಪ್ಪುತ್ತಿತ್ತು: ಘೋಷ್
ಕೋಲ್ಕತ್ತ: ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಭಾರಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ವರ್ಷಗಳಿಂದ ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ಇಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿಲ್ಲವೇಕೆ ಎಂದು ಮಮತಾ ಬ್ಯಾನರ್ಜಿ ಬಣದ ಟಿಎಂಸಿ ಶಾಸಕ ಕುನಾಲ್ ಘೋಷ್ ಶನಿವಾರ ಕೇಳಿದ್ದಾರೆ

ಕೋಲ್ಕತ್ತ: ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಭಾರಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಆದರೆ, ವರ್ಷಗಳಿಂದ ಜನಾಂಗೀಯ ಸಂಘರ್ಷದಿಂದ ನಲುಗಿರುವ ಮಣಿಪುರದಲ್ಲಿ ಇಷ್ಟು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಿಲ್ಲವೇಕೆ ಎಂದು ಮಮತಾ ಬ್ಯಾನರ್ಜಿ ಬಣದ ಟಿಎಂಸಿ ಶಾಸಕ ಕುನಾಲ್ ಘೋಷ್ ಶನಿವಾರ ಕೇಳಿದ್ದಾರೆ.‘ಬಾಂಗ್ಲಾದೇಶದಲ್ಲಿ ಸರ್ಕಾರ ಬದಲಾದಂತೆ ದೇಶದಲ್ಲಿಯೂ ಆಗಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಬಯಸುತ್ತಿವೆ. ಅದಕ್ಕಾಗಿ, ಅರಾಜಕತೆ ಸೃಷ್ಟಿಸಲು ಯುವಜನ ಶಕ್ತಯನ್ನು ಬಳಸಿಕೊಳ್ಳುತ್ತಿವೆ’ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದರು.ಅದಕ್ಕೆ ಪ್ರತಿಕ್ರಿಯಿಸಿರುವ ಘೋಷ್, ‘ಪ್ರತಿಭಟನಾನಿರತ ಯುವ ಜನರ ವಿರುದ್ಧ ಭದ್ರತಾ ಪಡೆಯನ್ನು ನಿಯೋಜಿಸಿರುವುದು, ಪ್ರಶ್ನೆಗಳಿಗೆ ಉತ್ತರಿಸಲಾಗದ ಸರ್ಕಾರದ ಅಸಮರ್ಥತೆಯನ್ನು ತೋರುತ್ತದೆ’ ಎಂದು ತಿರುಗೇಟು ನೀಡಿದ್ದಾರೆ.‘ನಾವು ಅರಾಜಕತೆಯನ್ನು ಬೆಂಬಲಿಸುತ್ತಿಲ್ಲ. ಆದರೆ, ಹೊಸ ತಲೆಮಾರಿನ ಯುವಕರು ಪ್ರಶ್ನೆಗಳನ್ನು ಎತ್ತಿದಾಗ ಅವರಿಗೆ ಉತ್ತರಿಸುವುದು ಅಥವಾ ಮನವರಿಕೆ ಮಾಡುವುದು ನಿಮ್ಮ (ಸರ್ಕಾರ) ಹೊಣೆ’ ಎಂದು ಹೇಳಿದ್ದಾರೆ.‘ನಿಮ್ಮ ಬಳಿ ಸಾಕಷ್ಟು ಪೊಲೀಸ್, ಅರೆಸೇನಾ ಪಡೆಗಳಿವೆ. ಅವನ್ನು ಯುವಕರ ವಿರುದ್ಧ ನಿಯೋಜಿಸಿದ್ದು ಏಕೆ? ಇಷ್ಟೊಂದು ಪೊಲೀಸರನ್ನು, ಅರೆಸೇನಾ ಪಡೆಯ ಯೋಧರನ್ನು ಮಣಿಪುರಕ್ಕೆ ಕಳುಹಿಸಬೇಕಾಗಿತ್ತು. ಸರಿಯಾದ ಸಮಯದಲ್ಲಿ ಮಣಿಪುರಕ್ಕೆ ಭದ್ರತಾ ಸಿಬ್ಬಂದಿಯನ್ನು ಕಳುಹಿಸಿದ್ದರೆ, ಅಲ್ಲಿ ಆರಂಭದಲ್ಲೇ ಸಮಸ್ಯೆ ಬಗೆಹರಿಯುತ್ತಿತ್ತು’ ಎಂದು ಪ್ರತಿಪಾದಿಸಿದ್ದಾರೆ.ಮಣಿಪುರದ ಮೈತೇಯಿ ಮತ್ತು ಕುಕಿ ಸಮುದಾಯದ ನಡುವೆ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಸಂಘರ್ಷದಲ್ಲಿ ಕನಿಷ್ಠ 306 ಮಂದಿ ಮೃತಪಟ್ಟಿದ್ದಾರೆ. ಇದೇ ವರ್ಷ ಫೆಬ್ರುವರಿಯಿಂದ ಈಚೆಗೆ ಕುಕಿ ಮತ್ತು ನಾಗಾ ಸಮುದಾಯದವರ ನಡುವೆ ನಡೆದಿರುವ ಸಂಘರ್ಷಗಳ ವೇಳೆ ಸುಮಾರು 50 ಜನರು ಪ್ರಾಣ ಕಳೆದುಕೊಂಡಿದ್ದಾರೆ.ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಅದನ್ನೇ ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಲೆದಂಡಕ್ಕೆ ಒತ್ತಾಯಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸೇರಿದಂತೆ ವಿವಿಧ ಸಂಘಟನೆಗಳು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಭಾರಿ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಪ್ರತಿಭಟನೆ ಸಲುವಾಗಿ ಶುಕ್ರವಾರ ‘ತಿರಂಗಾ ಯಾತ್ರೆ’ಗೆ ಸಿಜೆಪಿ ಕರೆ ನೀಡಿತ್ತು. ಆದರೆ, ಪ್ರತಿಭಟನೆಗೂ ಮೊದಲೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ವಿದ್ಯಾರ್ಥಿ ನಾಯಕ ನೇಹಾ ಬೋರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.