ದಸರಾದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯ ಅತ್ಯಾಚಾರ, ಕೊಲೆ; ಅಪರಾಧಿಗೆ ಮರಣದಂಡನೆ
ಮೈಸೂರು: ದಸರಾದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಅಪರಾಧಿ ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31)ಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಶನಿವಾರ ಮರಣದಂಡನೆ ವಿಧಿಸಿ ಆದೇಶಿಸಿದೆ.ಕಳೆದ ದಸರಾದಲ್ಲಿ ಉತ್ತರ ಕರ್ನಾಟಕದಿಂದ ಬಲೂನ್ ಮಾರಾಟ ಮಾಡಲು ಬಂದಿದ್ದ ಕುಟುಂಬವೊಂದು ಇಟ್ಟಿಗೆಗೂಡಿನ ನಾಗಸ್ವಾಮಿ ದ

ಮೈಸೂರು: ದಸರಾದಲ್ಲಿ ಬಲೂನ್ ಮಾರಾಟ ಮಾಡಲು ಬಂದಿದ್ದ ಹತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಪ್ರಕರಣದ ಅಪರಾಧಿ ಸಿದ್ದಲಿಂಗಪುರದ ನಿವಾಸಿ ಕಾರ್ತಿಕ್ (31)ಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಶನಿವಾರ ಮರಣದಂಡನೆ ವಿಧಿಸಿ ಆದೇಶಿಸಿದೆ.ಕಳೆದ ದಸರಾದಲ್ಲಿ ಉತ್ತರ ಕರ್ನಾಟಕದಿಂದ ಬಲೂನ್ ಮಾರಾಟ ಮಾಡಲು ಬಂದಿದ್ದ ಕುಟುಂಬವೊಂದು ಇಟ್ಟಿಗೆಗೂಡಿನ ನಾಗಸ್ವಾಮಿ ದೇವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ವಾಸವಿದ್ದರು. 2025ರ ಅ.9ರ ಮುಂಜಾನೆ ಜೋಪಡಿ ಪಕ್ಕದಲ್ಲೇ ಇದ್ದ ಚರಂಡಿಯಲ್ಲಿ 10 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಮೃತ ಬಾಲಕಿಯ ತಾಯಿ ನೀಡಿದ ದೂರು ಆಧರಿಸಿ ನಜರ್ಬಾದ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಚಲನವಲನ ಗಮನಿಸಿ ಕಾರ್ತಿಕ್ನನ್ನು ಬಂಧಿಸಿದ್ದರು. ಮಹಜರು ವೇಳೆ ಆತನನ್ನು ಸಿದ್ದಲಿಂಗಪುರಕ್ಕೆ ಕರೆದೊಯ್ದು ವಾಪಸ್ ಬರುವಾಗ ಮೇಟಗಳ್ಳಿ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಬಲಗಾಲಿಗೆ ಗುಂಡು ಹಾರಿಸಿ ಹಿಡಿದಿದ್ದರು. ತನಿಖೆಯ ಬಳಿಕ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.ಮೈಸೂರು ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದಲ್ಲಿ ನಡೆದ ಮರಣೋತ್ತರ ಪರೀಕ್ಷೆಯ ವರದಿ, ಬೆಂಗಳೂರು ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಿದ ಡಿಎನ್ಎ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿ ಆಧರಿಸಿ ನ್ಯಾಯಾಲಯವು ಕಾರ್ತಿಕ್ನ್ನು ದೋಷಿ ಎಂದು ನಿರ್ಧರಿಸಿತ್ತು.ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆನಂದ್ ಪಿ. ಹೊಗಾಡೆ ಅವರು, ಆರೋಪಿಯು ಎಸಗಿದ ಅಪರಾಧ ಸಾಬೀತಾಗಿರುವುದರಿಂದ ಕಾರ್ತಿಕ್ಗೆ ಮರಣದಂಡನೆ ಶಿಕ್ಷೆ ಹಾಗೂ ₹ 1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. ಮೃತ ಬಾಲಕಿಯ ಕುಟುಂಬಕ್ಕೆ ₹ 13.50 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಕೆ.ಬಿ. ಜಯಂತಿ ಹಾಗೂ ಆರೋಪಿಯ ಪರವಾಗಿ ಪ್ರಧಾನ ಕಾನೂನು ಸೇವಾ ಅಭಿರಕ್ಷಕ ಮಾಚಂಗಡ ನವೀನ್ ವಕಾಲತ್ ವಹಿಸಿದ್ದರು.