ಸೌಂದರ್ಯಲಹರಿ ಸೌಂದರ್ಯದ ಅಲೆ; ಮನಃಶಾಂತಿಯ ಸೆಲೆ
ನವರಾತ್ರಿಯ ಒಂಬತ್ತು ದಿನಗಳು ಜಗನ್ಮಾತೆಯ ಆರಾಧನೆಯ ಕಾಲ. ಈ ದಿನಗಳಲ್ಲಿ ಮನೆಮನೆಗಳಲ್ಲಿ, ದೇವಾಲಯಗಳಲ್ಲಿ ಮೊಳಗುವ ಸ್ತೋತ್ರಗಳಲ್ಲಿ ಸೌಂದರ್ಯಲಹರಿಗೆ ವಿಶೇಷ ಸ್ಥಾನವಿದೆ. ‘ಸೌಂದರ್ಯದ ಅಲೆ’ ಎಂಬ ಅರ್ಥದ ಈ ಕಾವ್ಯ, ಪಾರ್ವತಿಯನ್ನು ಲಲಿತಾ ತ್ರಿಪುರಸುಂದರಿಯಾಗಿ ಸ್ತುತಿಸುವ ನೂರು ಸಂಸ್ಕೃತ ಶ್ಲೋಕಗಳ ಸಂಗ್ರಹ. ಪರಂಪರೆ ಇದನ್ನು ಸುಮಾರು ಎಂಟನೇ ಶತಮಾನದಲ್ಲಿ ಕೇರಳದ ಕಾಲಡಿಯಲ

ನವರಾತ್ರಿಯ ಒಂಬತ್ತು ದಿನಗಳು ಜಗನ್ಮಾತೆಯ ಆರಾಧನೆಯ ಕಾಲ. ಈ ದಿನಗಳಲ್ಲಿ ಮನೆಮನೆಗಳಲ್ಲಿ, ದೇವಾಲಯಗಳಲ್ಲಿ ಮೊಳಗುವ ಸ್ತೋತ್ರಗಳಲ್ಲಿ ಸೌಂದರ್ಯಲಹರಿಗೆ ವಿಶೇಷ ಸ್ಥಾನವಿದೆ. ‘ಸೌಂದರ್ಯದ ಅಲೆ’ ಎಂಬ ಅರ್ಥದ ಈ ಕಾವ್ಯ, ಪಾರ್ವತಿಯನ್ನು ಲಲಿತಾ ತ್ರಿಪುರಸುಂದರಿಯಾಗಿ ಸ್ತುತಿಸುವ ನೂರು ಸಂಸ್ಕೃತ ಶ್ಲೋಕಗಳ ಸಂಗ್ರಹ. ಪರಂಪರೆ ಇದನ್ನು ಸುಮಾರು ಎಂಟನೇ ಶತಮಾನದಲ್ಲಿ ಕೇರಳದ ಕಾಲಡಿಯಲ್ಲಿ ಜನಿಸಿದ ಆದಿ ಶಂಕರಾಚಾರ್ಯರ ಕೃತಿ ಎನ್ನುತ್ತದೆ. ಜೀವ ಮತ್ತು ಬ್ರಹ್ಮ ಬೇರೆಯಲ್ಲ ಎಂಬ ಅದ್ವೈತ ತತ್ತ್ವವನ್ನು ಸಾರಿದ ಮಹಾನ್ ದಾರ್ಶನಿಕರು ಅವರು.ಈ ಕೃತಿಯನ್ನು ಅರಿಯಲು ಕೆಲವು ಮೂಲ ಕಲ್ಪನೆಗಳ ಪರಿಚಯ ಅಗತ್ಯ. ಭಾರತೀಯ ಚಿಂತನೆಯಲ್ಲಿ ಶಿವನು ಶುದ್ಧ ಚೈತನ್ಯ; ಶಕ್ತಿ ಅಥವಾ ದೇವಿ ಆ ಚೈತನ್ಯದ ಕ್ರಿಯಾಶಕ್ತಿ. ಈ ಶಕ್ತಿಯನ್ನು ಶ್ರೀಚಕ್ರ ಎಂಬ ಪವಿತ್ರ ಯಂತ್ರದ ಮೂಲಕ ಉಪಾಸಿಸುವ ಪರಂಪರೆಯೇ ಶ್ರೀವಿದ್ಯೆ. ನಮ್ಮ ಬೆನ್ನುಹುರಿಯ ಬುಡದಲ್ಲಿ ಕುಂಡಲಿನಿ ಎಂಬ ಶಕ್ತಿ ಸುಪ್ತವಾಗಿದ್ದು, ಸಾಧನೆಯಿಂದ ಅದು ಆರು ಚಕ್ರಗಳನ್ನು ದಾಟಿ ನೆತ್ತಿಯ ಸಹಸ್ರಾರವನ್ನು ತಲುಪುತ್ತದೆ ಎಂಬುದು ಯೋಗಿಗಳ ನಂಬಿಕೆ. ಸೌಂದರ್ಯಲಹರಿಯ ಹಲವು ಶ್ಲೋಕಗಳು ಈ ಕಲ್ಪನೆಗಳ ಮೇಲೆಯೇ ನಿಂತಿವೆ.ತರ್ಕದಲ್ಲಿ ಅಪ್ರತಿಮರಾದ ಶಂಕರರು ಇಂತಹ ಭಾವಪೂರ್ಣ ಸ್ತೋತ್ರವನ್ನು ಏಕೆ ರಚಿಸಿದರು ಎಂಬ ಪ್ರಶ್ನೆ ಸಹಜ. ಇದಕ್ಕೆ ಒಂದು ಸುಂದರ ಐತಿಹ್ಯವಿದೆ. ಶಂಕರರು ಕೈಲಾಸಕ್ಕೆ ತೆರಳಿದಾಗ ಶಿವನು ನೂರು ಶ್ಲೋಕಗಳ ಹಸ್ತಪ್ರತಿಯನ್ನು ಅವರಿಗೆ ಅನುಗ್ರಹಿಸಿದನಂತೆ. ಹಿಂದಿರುಗುವಾಗ ನಂದಿ ಅದನ್ನು ಕಸಿದುಕೊಂಡಾಗ ಮೊದಲ ನಲವತ್ತೊಂದು ಶ್ಲೋಕಗಳು ಮಾತ್ರ ಉಳಿದವು; ಉಳಿದುದನ್ನು ದೇವಿಯ ಆಜ್ಞೆಯಂತೆ ಶಂಕರರೇ ರಚಿಸಿದರು. ಕಥೆಯ ಆಚೆಗೆ ನೋಡಿದರೆ, ನಿರ್ಗುಣ ಬ್ರಹ್ಮವನ್ನು ಸಾರಿದ ಅದ್ವೈತಿಯೂ ಸಗುಣ ಉಪಾಸನೆಯನ್ನು ಚಿತ್ತಶುದ್ಧಿಯ ದಾರಿಯೆಂದು ಕಂಡಿದ್ದರು. ಜ್ಞಾನಕ್ಕೆ ಭಕ್ತಿಯೇ ಸೋಪಾನ ಎಂಬ ನಂಬಿಕೆಯೇ ಈ ಕೃತಿಯ ಪ್ರೇರಣೆ. ಇದರ ಕರ್ತೃತ್ವದ ಬಗ್ಗೆ ಆಧುನಿಕ ವಿದ್ವಾಂಸರಲ್ಲಿ ಚರ್ಚೆಯೂ ಇದೆ.ಸೌಂದರ್ಯಲಹರಿಯ ಮೊದಲ ನಲವತ್ತೊಂದು ಶ್ಲೋಕಗಳೇ ಆನಂದಲಹರಿ. ಶಿವ–ಶಕ್ತಿಯರ ಐಕ್ಯ, ಶ್ರೀಚಕ್ರದ ರಚನೆ, ಕುಂಡಲಿನಿಯ ಸಂಚಾರ ಮತ್ತು ಮಂತ್ರರಹಸ್ಯ ಇದರ ವಿಷಯ. ಗಮನಿಸಬೇಕಾದ ಸಂಗತಿಯೆಂದರೆ, ಇಲ್ಲಿ ದೇವಿಯ ಕಣ್ಣಿಗೆ ಕಾಣುವ ರೂಪವರ್ಣನೆ ಉದ್ದೇಶಪೂರ್ವಕವಾಗಿ ಹೊರಗುಳಿದಿದೆ. ದೇವಿ ಇಲ್ಲಿ ನೋಡುವ ವಸ್ತುವಲ್ಲ, ಸಾಧಕ ತನ್ನೊಳಗೆ ಅನುಭವಿಸುವ ಆನಂದ. ನಲವತ್ತೆರಡನೇ ಶ್ಲೋಕದಿಂದ ಆರಂಭವಾಗುವ ಸೌಂದರ್ಯಲಹರಿ ಭಾಗದಲ್ಲಿ ಮಾತ್ರ ಕಿರೀಟದಿಂದ ಪಾದದವರೆಗೆ ಅವಳ ರೂಪ ಕಾವ್ಯವಾಗಿ ಹರಿಯುತ್ತದೆ. ಮೊದಲು ಒಳಗಿನ ಆನಂದ, ಆಮೇಲೆ ಹೊರಗಿನ ಸೌಂದರ್ಯ.ಶ್ಲೋಕಾನುಸಂಧಾನ: ಭೌತಿಕ ಮತ್ತು ತಾತ್ವಿಕ ಅರ್ಥಪ್ರತಿ ಶ್ಲೋಕದಲ್ಲೂ ಕಣ್ಣಿಗೆ ಕಾಣುವ ಒಂದು ಚಿತ್ರ ಮತ್ತು ಅದರೊಳಗೆ ಅಡಗಿದ ತತ್ತ್ವ ಎರಡೂ ಇರುತ್ತವೆ. ಮೊದಲ ಶ್ಲೋಕ ‘ಶಿವಃ ಶಕ್ತ್ಯಾ ಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಮ್’ ಹೇಳುವಂತೆ, ಶಕ್ತಿಯೊಡನಿದ್ದಾಗ ಮಾತ್ರ ಶಿವ ಸೃಷ್ಟಿಸಲು ಸಮರ್ಥ, ಇಲ್ಲದಿದ್ದರೆ ಅಲುಗಾಡಲೂ ಸಾಧ್ಯವಿಲ್ಲ. ಇದರ ಒಳಾರ್ಥ– ಅರಿವು ಮತ್ತು ಚಲನೆ ಒಂದೇ ಸತ್ಯದ ಎರಡು ಮುಖಗಳು.ಒಂಬತ್ತನೇ ಶ್ಲೋಕದಲ್ಲಿ ದೇವಿ ಪಂಚಭೂತಗಳ ಚಕ್ರಗಳನ್ನು ದಾಟಿ ಸಹಸ್ರಾರದಲ್ಲಿ ಪತಿಯೊಡನೆ ವಿಹರಿಸುತ್ತಾಳೆ; ಮುಕ್ತಿಯ ದಾರಿ ನಮ್ಮ ದೇಹದೊಳಗೇ ಇದೆ ಎಂಬುದು ಅದರ ತಾತ್ಪರ್ಯ. ಇಪ್ಪತ್ತೇಳನೇ ಶ್ಲೋಕ ‘ಜಪೋ ಜಲ್ಪಃ’ದಲ್ಲಿ ಭಕ್ತ ತನ್ನ ಮಾತೇ ಜಪ, ಕೈಚಲನೆಯೇ ಮುದ್ರೆ, ನಡಿಗೆಯೇ ಪ್ರದಕ್ಷಿಣೆ ಎನ್ನುತ್ತಾನೆ; ಆತ್ಮಾರ್ಪಣೆಯಿಂದ ಬದುಕೇ ಪೂಜೆಯಾಗುತ್ತದೆ. ನಲವತ್ನಾಲ್ಕನೇ ಶ್ಲೋಕದ ಬೈತಲೆಯ ಸಿಂಧೂರ ಉದಯಸೂರ್ಯನ ಕಿರಣದಂತೆ ಹೊಳೆಯುತ್ತದೆ; ಅದು ಅಜ್ಞಾನದ ಕತ್ತಲನ್ನು ಸೀಳುವ ಜ್ಞಾನದ ಬೆಳಕು. ಕೊನೆಯ ಶ್ಲೋಕದಲ್ಲಿ ಕವಿ, ನಿನ್ನ ವಾಕ್ಕಿನಿಂದಲೇ ನಿನ್ನನ್ನು ಸ್ತುತಿಸುವುದು ದೀಪದಿಂದ ಸೂರ್ಯನಿಗೆ ಆರತಿ ಎತ್ತಿದಂತೆ ಎನ್ನುತ್ತಾನೆ– ಅಹಂಕಾರದ ಸಂಪೂರ್ಣ ಇಲ್ಲವಾಗಿಸುವ ವಾಕ್ಯ ಅದು.ಸೌಂದರ್ಯಲಹರಿ ಪುರಾಣ ಕಥೆಗಳನ್ನು ನಿರೂಪಿಸುವುದಿಲ್ಲ; ಅವನ್ನು ಸುಳಿವುಗಳಾಗಿ ಮಾತ್ರ ಬಳಸುತ್ತದೆ. ಬ್ರಹ್ಮಾಂಡ ಪುರಾಣದ ಲಲಿತೋಪಾಖ್ಯಾನದ ತ್ರಿಪುರಸುಂದರಿ, ದೇವೀ ಭಾಗವತದ ಮಣಿದ್ವೀಪ, ಶಿವನ ಕಣ್ಣಿಗೆ ಸುಟ್ಟ ಮನ್ಮಥ ದೇವಿಯ ಕಟಾಕ್ಷದಿಂದ ಮತ್ತೆ ಜಗವನ್ನು ಗೆದ್ದ ಕಥೆ– ಇವೆಲ್ಲ ಹಿನ್ನೆಲೆಯಾಗಿ ಮಾತ್ರ ಬರುತ್ತವೆ. ದೇವೀ ಮಹಾತ್ಮೆಯ ಮಹಿಷಾಸುರ ವಧೆಯಂತಹ ಯುದ್ಧಕಥೆಗಳು ಇಲ್ಲಿ ಬಹುತೇಕ ಇಲ್ಲ. ಕೃತಿಯ ಬೆನ್ನೆಲುಬು ಶ್ರೀವಿದ್ಯೆ ಮತ್ತು ಅದ್ವೈತ; ರಣಚಂಡಿಗಿಂತ ಸೌಮ್ಯ ಲಲಿತೆಯೇ ಇಲ್ಲಿನ ನಾಯಕಿ. ನವರಾತ್ರಿಯಲ್ಲಿ ಮಹಿಷಮರ್ದಿನಿಯನ್ನು ಹೊರಗೆ ಪೂಜಿಸುತ್ತೇವೆ. ಸೌಂದರ್ಯಲಹರಿ ಅದೇ ತಾಯಿಯನ್ನು ಒಳಗೆ ಕಾಣುತ್ತೇವೆ. ಸೌಂದರ್ಯದ ಅಲೆಯಲ್ಲಿ ತೇಲುತ್ತಾ ಆನಂದದ ತೀರ ತಲುಪುತ್ತೇವೆ. v261017-4-2130763205