ವಿಶ್ಲೇಷಣೆ: ಆಟದ ಅಂದ ಮತ್ತು ರೊಬೋ!
ಮನುಷ್ಯನ ಮಾನಸಿಕ ಮತ್ತು ದೈಹಿಕ ಮಿತಿಗೆ ರೊಬೋಟ್ಗಳು ಎಲ್ಲ ಕ್ಷೇತ್ರಗಳಲ್ಲೂ ಸವಾಲು ಒಡ್ಡಿವೆ; ಆಟದ ಅಂಗಳದಲ್ಲೂ ಮನುಷ್ಯನನ್ನು ಮೀರಿ ನಿಂತಿವೆ. ಆದರೆ, ಮನುಷ್ಯನ ಕಾರಣದಿಂದಾಗಿ ಆಟಕ್ಕೆ ದೊರೆಯುವ ಸೌಂದರ್ಯ ಮತ್ತು ಮಾನವೀಯ ಸ್ಪರ್ಶವನ್ನು ಯಂತ್ರಗಳು ನೀಡುವುದು ಸಾಧ್ಯವೆ?ಒಮ್ಮೆ ಒಬ್ಬ ವ್ಯಕ್ತಿ ಅತಿವೇಗವಾಗಿ ಓಡಬಲ್ಲ ಅತ್ಯಾಧುನಿಕ ರೊಬೋಟ್ ಖರೀದಿಸಿದನಂತೆ. ತನ್ನ ಸಹಾಯಕನನ

ಮನುಷ್ಯನ ಮಾನಸಿಕ ಮತ್ತು ದೈಹಿಕ ಮಿತಿಗೆ ರೊಬೋಟ್ಗಳು ಎಲ್ಲ ಕ್ಷೇತ್ರಗಳಲ್ಲೂ ಸವಾಲು ಒಡ್ಡಿವೆ; ಆಟದ ಅಂಗಳದಲ್ಲೂ ಮನುಷ್ಯನನ್ನು ಮೀರಿ ನಿಂತಿವೆ. ಆದರೆ, ಮನುಷ್ಯನ ಕಾರಣದಿಂದಾಗಿ ಆಟಕ್ಕೆ ದೊರೆಯುವ ಸೌಂದರ್ಯ ಮತ್ತು ಮಾನವೀಯ ಸ್ಪರ್ಶವನ್ನು ಯಂತ್ರಗಳು ನೀಡುವುದು ಸಾಧ್ಯವೆ?ಒಮ್ಮೆ ಒಬ್ಬ ವ್ಯಕ್ತಿ ಅತಿವೇಗವಾಗಿ ಓಡಬಲ್ಲ ಅತ್ಯಾಧುನಿಕ ರೊಬೋಟ್ ಖರೀದಿಸಿದನಂತೆ. ತನ್ನ ಸಹಾಯಕನನ್ನು ಕರೆದು, ‘ನೋಡು, ಈ ಯಂತ್ರನಿನಗಿಂತ ನೂರು ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ, 100 ಮೀಟರ್ ಓಟವನ್ನು ಹತ್ತೇ ಸೆಕೆಂಡಿನಲ್ಲಿ ಮುಗಿಸುತ್ತದೆ! ನೀನು ಇದರ ಜೊತೆ ಸ್ಪರ್ಧೆ ಮಾಡಲು ಸಾಧ್ಯವೆ?’ ಎಂದು ಕೇಳಿದನಂತೆ. ಅದಕ್ಕೆ ಆ ಕೆಲಸಗಾರ, ‘ಸ್ವಾಮಿ, ಅದು 100 ಮೀಟರ್ ಅನ್ನು ಹತ್ತು ಸೆಕೆಂಡಿನಲ್ಲಿ ಓಡಬಹುದು. ಆದರೆ, ಓಟ ಮುಗಿಸಿದ ಮೇಲೆ ಬಿಸಿ ಚಹಾ ಕುಡಿದು ‘ಅಬ್ಬಾ! ಎಷ್ಟು ಸುಸ್ತಾಯ್ತು!’ ಎಂದು ನಿಟ್ಟುಸಿರು ಬಿಡುವ ಸುಖ ಅದಕ್ಕೆ ಗೊತ್ತಾ? ಓಡಿದ ಮೇಲೆ ಸಿಗುವ ಸುಖಾನುಭವ ಗೊತ್ತಿಲ್ಲದ ಮೇಲೆ ಎಷ್ಟು ವೇಗವಾಗಿ ಓಡಿದರೇನು ಫಲ?’ ಎಂದನಂತೆ!ಈ ಸರಳ ಪ್ರಸಂಗದ ಹಿಂದೆ ಇಡೀ ಕ್ರೀಡಾಲೋಕದ ದೊಡ್ಡ ಸತ್ಯವೊಂದು ಅಡಗಿದೆ. ಇತ್ತೀಚೆಗೆ ಬೀಜಿಂಗ್ನಲ್ಲಿ ನಡೆದ ‘ವರ್ಲ್ಡ್ ಹ್ಯೂಮನಾಯ್ಡ್ ರೊಬೋಟ್ ಗೇಮ್ಸ್’ನಲ್ಲಿ ‘ಲೈಟ್ನಿಂಗ್’ ಎಂಬ ರೊಬೋಟ್ 100 ಮೀಟರ್ ಓಟವನ್ನು 9.32 ಸೆಕೆಂಡುಗಳಲ್ಲಿ ಹಾಗೂ ‘ತ್ಯಾಂಗಾಂಗ್ ಅಲ್ಟ್ರಾ’ ಎಂಬ ರೊಬೋಟ್ 9.39 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ವರದಿಗಳು ಬಂದಾಗ ಜಗತ್ತು ಬೆರಗಾಯಿತು. ಅಥ್ಲೆಟಿಕ್ಸ್ ಜಗತ್ತಿನ ದಂತಕಥೆ ಉಸೇನ್ ಬೋಲ್ಟ್ 2009ರಲ್ಲಿ ಬರ್ಲಿನ್ನಲ್ಲಿ ನಿರ್ಮಿಸಿದ 9.58 ಸೆಕೆಂಡುಗಳ ಅಸಾಧಾರಣ ವಿಶ್ವದಾಖಲೆಯನ್ನು ಈ ಯಂತ್ರಗಳು ಮೀರಿದ್ದವು. ಇಥಿಯೋಪಿಯಾದ ಯೋಮಿಫ್ ಕೆಜೆಲ್ಚಾ ಹೆಸರಿನಲ್ಲಿರುವ ಪುರುಷರ ಅರ್ಧ ಮ್ಯಾರಥಾನ್ ವಿಶ್ವದಾಖಲೆಯನ್ನು ಲೈಟ್ನಿಂಗ್ ಆರು ನಿಮಿಷ ಮುಂಚೆಯೇ ಓಡಿ ಮುಗಿಸಿತ್ತು. ಅಂದಹಾಗೆ, ಇಂತಹ ತಾಂತ್ರಿಕ ಬೆರಗುಗಳನ್ನು ನಾವು ನಿಜವಾದ ಅರ್ಥದಲ್ಲಿ ‘ಕ್ರೀಡೆ’ ಎನ್ನಬಹುದೆ?ವಿಜ್ಞಾನ ಮತ್ತು ತಂತ್ರಜ್ಞಾನದ ಉತ್ಕರ್ಷದ ಕಾಲಘಟ್ಟದಲ್ಲಿ, ಯಂತ್ರಗಳು ಮಾನವನ ದೈಹಿಕಹಾಗೂ ಮಾನಸಿಕ ಕೌಶಲಗಳನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಸವಾಲಿಗೆ ಒಡ್ಡುತ್ತಿವೆ. ಈ ಬೆಳವಣಿಗೆಯನ್ನು ಅರ್ಥೈಸಿಕೊಳ್ಳಲು ನಾವು ಇತಿಹಾಸದ ಪುಟಗಳನ್ನೂಮ್ಮೆ ತಿರುಗಿಸಿ ನೋಡಬೇಕಾಗುತ್ತದೆ. 1997ರಲ್ಲಿ ಐಬಿಎಂ ಸಂಸ್ಥೆಯ ‘ಡೀಪ್ ಬ್ಲೂ’ ಸೂಪರ್ ಕಂಪ್ಯೂಟರ್, ಅಂದಿನ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ಅವರನ್ನು ಸೋಲಿಸಿದ್ದು ಮಾನವ ಮತ್ತು ಯಂತ್ರದ ನಡುವಿನ ಸಂಬಂಧದ ಇತಿಹಾಸದಲ್ಲೇ ಮಹತ್ವದ ತಿರುವಾಗಿತ್ತು. ಮಾನವನ ಬುದ್ಧಿವಂತಿಕೆಗೆ ಸಾಟಿ ಇಲ್ಲ ಎಂಬ ಅಹಂಕಾರವನ್ನು ಆ ಘಟನೆ ಮೆಲ್ಲನೆ ಮುರಿಯಿತು. ಜ್ಞಾನ ಮತ್ತು ತಾರ್ಕಿಕ ಆಲೋಚನೆಯ ಅತ್ಯುನ್ನತ ಕ್ಷೇತ್ರದಲ್ಲೇ ಯಂತ್ರವು ಮಾನವನನ್ನು ಮೀರಿಸಬಲ್ಲದು ಎಂಬುದನ್ನು ಡೀಪ್ ಬ್ಲೂ ಸಾಬೀತುಪಡಿಸಿತು.ಇಂದು ಕೃತಕ ಬುದ್ಧಿಮತ್ತೆಯ ಚೆಸ್ ಎಂಜಿನ್ಗಳು ಜಗತ್ತಿನ ಯಾವುದೇ ಪ್ರಖ್ಯಾತ ಚೆಸ್ ಆಟಗಾರನಿಗಿಂತ ಹೆಚ್ಚು ಶಕ್ತಿಶಾಲಿಯಾಗಿ ಬೆಳೆದುನಿಂತಿವೆ. ಆದರೂ ನಾವು, ಮ್ಯಾಗ್ನಸ್ ಕಾರ್ಲ್ಸನ್ ಅಥವಾ ಪ್ರಜ್ಞಾನಂದ ಅವರ ಪಂದ್ಯಗಳನ್ನು ಬೆರಗುಗಣ್ಣಿನಿಂದ ವೀಕ್ಷಿಸುತ್ತೇವೆ. ನಮಗೆ ಯಾಂತ್ರಿಕ ಗೆಲುವು ಅಥವಾ ಪರಿಪೂರ್ಣ ನಡೆಗಳಷ್ಟೇ ಮುಖ್ಯವಲ್ಲ; ಆಟಗಾರನ ಹಿನ್ನೆಲೆ, ತರಬೇತಿಯ ಶ್ರಮ, ಆಟದ ಸಮಯದ ಒತ್ತಡ, ತಪ್ಪುಗಳನ್ನು ಮಾಡಿದಾಗ ಅವರ ಮುಖದಲ್ಲಿ ಕಾಣುವ ಆತಂಕ–ಹತಾಶೆ ಮತ್ತು ಸೋಲನ್ನು ಎದುರಿಸುವ ಧೈರ್ಯ ನಮಗೆ ಮುಖ್ಯವಾಗುತ್ತವೆ. ಡೀಪ್ ಬ್ಲೂ ಚೆಸ್ ಪಂದ್ಯವನ್ನು ಗೆದ್ದಿರಬಹುದು; ಆದರೆ, ಅದು ಮಾನವನ ಕಲ್ಪನಾಶಕ್ತಿಯನ್ನಾಗಲಿ, ಮಾನಸಿಕ ಹೋರಾಟದ ಸೌಂದರ್ಯವನ್ನಾಗಲಿ ಹೊಂದುವುದು ಸಾಧ್ಯವಿಲ್ಲ.2002ರ ನೊಬೆಲ್ ಬಹುಮಾನ ವಿಜೇತ ಮನಃಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞ ಡೇನಿಯಲ್ ಕಾಹ್ನೆಮನ್ ಅವರು ಮಾನವ ಪ್ರಗತಿ ಮತ್ತು ತಂತ್ರಜ್ಞಾನದ ಸ್ವರೂಪವನ್ನು ವಿವರಿಸುತ್ತಾ, ತಂತ್ರಜ್ಞಾನದ ಬೆಳವಣಿಗೆಯು ‘ಘಾತೀಯ’ (ಎಕ್ಷ್ಪೋನೆನ್ಷಿಯಲ್) ಆಗಿ ಬೆಳೆಯುತ್ತದೆ; ಮಾನವನ ಶಾರೀರಿಕ ಮತ್ತು ಮಾನಸಿಕ ಪ್ರಗತಿಯು ‘ರೇಖೀಯ’ (ಲೀನಿಯರ್) ಆಗಿ ಅತ್ಯಂತ ನಿಧಾನವಾಗಿ ಸಾಗುತ್ತದೆ ಎಂದುಎಚ್ಚರಿಸಿದ್ದರು. ನಮಗೆ ಈ ಘಾತೀಯ ಬದಲಾವಣೆಯ ತೀವ್ರತೆಯನ್ನು ಕಲ್ಪಿಸಿಕೊಳ್ಳುವುದು ಸುಲಭವಲ್ಲ. ಮಾನವ ಕ್ರೀಡಾಪಟುವು ನೂರು ಮೀಟರ್ ಓಟದ ದಾಖಲೆಯಲ್ಲಿ ಸೆಕೆಂಡಿನ ನೂರನೇ ಒಂದು ಭಾಗವನ್ನು ಕಡಿಮೆ ಮಾಡಲು ದಶಕಗಳ ಕಾಲ ಬೆವರು ಸುರಿಸಬೇಕಾಗುತ್ತದೆ. ನಮಗೆಲ್ಲ ಬೋಲ್ಟ್ ಅವರ ದಾಖಲೆಯು ಜೈವಿಕ ಶರೀರಕ್ಕೆ ತಲಪಲು ಸಾಧ್ಯವಿರುವ ಅಂತಿಮ ಗಡಿಯಂತೆ ಕಾಣುತ್ತಿತ್ತು. ಏಕೆಂದರೆ, ಮಾನವನ ದೇಹವು ಜೈವಿಕ ವಿಕಸನದ ನಿಧಾನಗತಿಯ ನಿಯಮಗಳಿಗೆ ಬದ್ಧವಾಗಿರುವುದು.ಯಂತ್ರಗಳಿಗೆ ಜೈವಿಕ ನಿಯಮಗಳ ಕಟ್ಟಳೆಗಳಿಲ್ಲ. ವಿಕಸನಕ್ಕಾಗಿ ಅವು ಲಕ್ಷಾಂತರ ವರ್ಷಗಳ ಕಾಲಕಾಯಬೇಕಿಲ್ಲ. ಬರೀ ಒಂದು ವರ್ಷದ ಅವಧಿಯಲ್ಲಿ ತನ್ನ ಓಟದ ಸಮಯವನ್ನು 21.50 ಸೆಕೆಂಡುಗಳಿಂದ 9.39 ಸೆಕೆಂಡುಗಳಿಗೆ ಇಳಿಸಿಕೊಂಡ ತ್ಯಾಂಗಾಂಗ್ ಅಲ್ಟ್ರಾ ಅಥವಾ ಅರ್ಧ ಮ್ಯಾರಥಾನ್ ಜಯಿಸಲು ತನ್ನ ಕಾಲುಗಳ ವಿನ್ಯಾಸವನ್ನೇ ತಕ್ಷಣ ಬದಲಾಯಿಸಿಕೊಂಡ ಲೈಟ್ನಿಂಗ್ ರೊಬೋಟ್ ಇದಕ್ಕೆ ಉದಾಹರಣೆಗಳಾಗಿವೆ. ಎಂಜಿನಿಯರ್ಗಳು ಕ್ಷಣಮಾತ್ರದಲ್ಲಿ ಮೋಟಾರ್ಗಳನ್ನು ಸುಧಾರಿಸಬಹುದು, ಸಮತೋಲನ ಮರುಹೊಂದಿಸಬಹುದು, ತಂತ್ರಾಂಶಗಳನ್ನು ಮತ್ತೆ ಬರೆಯಬಹುದು ಅಥವಾ ಉದ್ದವಾದ ಹೆಜ್ಜೆಗಳಿಗಾಗಿ ಕಾಲುಗಳ ಉದ್ದವನ್ನು ತಕ್ಷಣವೇ ಹೆಚ್ಚಿಸಬಹುದು. ಒಬ್ಬ ಮಾನವ ಕ್ರೀಡಾಪಟು ತನ್ನ ದೇಹಕ್ಕೆ ತಕ್ಕಂತೆ ವರ್ಷಪೂರ್ತಿ ಶ್ರಮಿಸಿ ತರಬೇತಿ ಪಡೆದರೆ, ರೊಬೋಟ್ ತರಬೇತಿ ಪಡೆದ ನಂತರ ತನಗೆ ಬೇಕಾದಂತೆ ತನ್ನ ದೇಹವನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬಲ್ಲದು.ಒಂದು ದಿನ ತಾಂತ್ರಿಕವಾಗಿ ಮುನ್ನಡೆದ ರೊಬೋಟ್, ಮೆಸ್ಸಿಗಿಂತ ನಿಖರವಾಗಿ ಫುಟ್ಬಾಲ್ ಒದೆಯಬಹುದು, ವಿರಾಟ್ ಕೊಹ್ಲಿಗಿಂತ ಸುಲಭವಾಗಿ ಸತತವಾಗಿ ಸಿಕ್ಸರ್ ಬಾರಿಸಬಹುದು ಅಥವಾ ನೊವಾಕ್ ಜೊಕೊವಿಚ್ಗಿಂತ ಅತ್ಯಂತ ನಿಖರವಾಗಿ ಟೆನಿಸ್ ಆಡಬಹುದು. ಹಾಗೆ ಮಾಡಿದ ತಕ್ಷಣ ಅದು ನಿಜವಾದ ಕ್ರೀಡೆಯಾಗುವುದಿಲ್ಲ. ಏಕೆಂದರೆ, ಕ್ರೀಡೆಯು ವೇಗವಾಗಿ ಓಡುವ ದೇಹ ಅಥವಾ ಬಲವಾಗಿ ಹೊಡೆಯುವ ಕೈಗಳನ್ನು ರೂಪಿಸುವ ಯಾಂತ್ರಿಕ ಪ್ರಕ್ರಿಯೆಯಲ್ಲ. ಅದು, ಮಾನವರು ತಮ್ಮದೇ ಆದ ಶಾರೀರಿಕ ಮತ್ತು ಮಾನಸಿಕ ಮಿತಿಗಳ ವಿರುದ್ಧ ನಡೆಸುವ ನಿರಂತರ ಹೋರಾಟವಾಗಿದೆ.ಬೋಲ್ಟ್ ದಾಖಲೆಯ ಓಟ ಓಡಿದಾಗ, ನಾವು ಬರೀ ನೂರು ಮೀಟರ್ ಅಂತರವನ್ನು ಕ್ರಮಿಸಿದ ಜೈವಿಕ ಯಂತ್ರವನ್ನು ನೋಡುತ್ತಿರಲಿಲ್ಲ; ಆ ಸೆಕೆಂಡುಗಳ ಹಿಂದೆ ಆತನ ಬಾಲ್ಯದ ಕನಸುಗಳು, ಹತ್ತಾರು ವರ್ಷಗಳ ಕಠಿಣ ತರಬೇತಿ, ತೀವ್ರವಾದ ಬಳಲಿಕೆ, ಗಾಯದ ಭಯ, ಶಿಸ್ತು, ಆತ್ಮಸಂದೇಹ ಮತ್ತು ಯಾವುದೇ ಕ್ಷಣದಲ್ಲಿ ಸಣ್ಣ ತಪ್ಪಿನಿಂದ ಎಲ್ಲವೂ ಕೈತಪ್ಪಿ ಹೋಗಬಹುದಾದ ಅಪಾಯವಿತ್ತು. ಕ್ರೀಡಾಪಟುವಿಗೆ ತನ್ನ ಶರೀರದ ಮಿತಿಗಳ ಅರಿವಿರುತ್ತದೆ, ವೀಕ್ಷಿಸುವ ಪ್ರೇಕ್ಷಕನಿಗೂ ಆ ಮಿತಿಗಳ ಅರಿವಿರುತ್ತದೆ. ಈ ಹಂಚಿಕೊಂಡ ಜ್ಞಾನ ಮತ್ತು ಅನುಭೂತಿಯೇ ಕ್ರೀಡೆಯ ಹಿಂದಿರುವ ನಿಜವಾದ ಭಾವನಾತ್ಮಕ ಒಪ್ಪಂದ.ಯಂತ್ರದ ವೈಫಲ್ಯಕ್ಕೂ ಮಾನವನ ವೈಫಲ್ಯಕ್ಕೂ ಮೂಲಭೂತ ವ್ಯತ್ಯಾಸವಿದೆ. ರೊಬೋಟ್ ಸೋತರೆ ಅಥವಾ ಬಿದ್ದರೆ, ಅದು ತಾಂತ್ರಿಕ ಲೋಪವಷ್ಟೇ. ಆ ಮಿತಿಗಳನ್ನು ಗ್ಯಾರೇಜ್ನಲ್ಲಿ ಸರಿಪಡಿಸಬಹುದು. ಆದರೆ, ಮಾನವನ ಮಿತಿಗಳು ಬರೀ ತಾಂತ್ರಿಕವಲ್ಲ; ಅವು ಶಾರೀರಿಕ, ಮಾನಸಿಕವಾದವು. ಅದಕ್ಕಾಗಿಯೇ ಒಂದು ರೊಬೋ ಎಂದಿಗೂ ನಿಜವಾದ ಮೆಸ್ಸಿ ಆಗಲಾರದು. ಮೆಸ್ಸಿ ಮೈದಾನದಲ್ಲಿ ಆಡುವಾಗ, ಆ ವಯಸ್ಸಾಗುತ್ತಿರುವ ಆಟಗಾರನ ದೇಹದ ಮೇಲೆ ಸಮಯ ತನ್ನ ಗುರುತುಗಳನ್ನು ಒತ್ತಿರುತ್ತದೆ. ಆತನ ಪ್ರತಿಯೊಂದು ವೇಗದ ಓಟಕ್ಕೂ, ಪ್ರತಿಯೊಂದು ಗಾಯಕ್ಕೂ ಬೆಲೆ ತೆರಬೇಕಿರುತ್ತದೆ. ಆ ಪ್ರತಿಯೊಂದು ಅದ್ಭುತ ಕ್ಷಣವೂ ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಕಟುಸತ್ಯವೇ ಅದನ್ನು ಅತ್ಯಂತ ಬೆಲೆಬಾಳುವಂತೆ ಮಾಡುತ್ತದೆ. ಒತ್ತಡದ ಸಮಯದಲ್ಲಿ ಕ್ರೀಡಾಪಟು ತೋರಿಸುವ ಏಕಾಗ್ರತೆ, ಗಾಯಗಳಿಂದ ಮತ್ತೆ ಎದ್ದು ಬರುವ ಛಲ, ಮತ್ತು ಆತನ ಸ್ವಭಾವದಲ್ಲಿ ನಾವು ನಮ್ಮದೇ ಜೀವನದ ದಿನನಿತ್ಯದ ಹೋರಾಟವನ್ನು ಕಾಣುತ್ತೇವೆ.ತಂತ್ರಜ್ಞಾನ ಎಷ್ಟೇ ಬೆಳೆದರೂ ಅದು ಮಾನವೀಯತೆಯ ಆಳವಾದ ಅರ್ಥವನ್ನು ಅಥವಾ ಕ್ರೀಡೆಯ ಆತ್ಮವನ್ನು ತನ್ನದಾಗಿಸಿಕೊಳ್ಳುವುದು ಸಾಧ್ಯವಿಲ್ಲ. ಭವಿಷ್ಯದಲ್ಲಿ ಕ್ರೀಡಾರಂಗದಲ್ಲಿ ಎರಡು ಸಮಾನಾಂತರ ಪ್ರಪಂಚಗಳು ಸೃಷ್ಟಿಯಾಗಬಹುದು: ಒಂದು, ಯಂತ್ರಗಳು ತಾಂತ್ರಿಕವಾಗಿ ಎಷ್ಟು ದೂರಹೋಗಬಲ್ಲವು ಎಂಬುದನ್ನು ಪರೀಕ್ಷಿಸುವ ‘ರೊಬೋಟ್ ಅಥ್ಲೆಟಿಕ್ಸ್ ಮತ್ತು ಫುಟ್ಬಾಲ್’ ಜಗತ್ತು. ಇನ್ನೊಂದು, ಮಾನವ ಶರೀರ ಮತ್ತು ಮನಸ್ಸು ಎಷ್ಟರ ಮಟ್ಟಿಗೆ ಶ್ರಮಿಸಿ ತನ್ನ ಮಿತಿಗಳನ್ನು ದಾಟಬಲ್ಲದು ಎಂಬುದನ್ನು ವೀಕ್ಷಿಸುವ ಸಾಂಪ್ರದಾಯಿಕ ಮಾನವ ಕ್ರೀಡಾಲೋಕ.ಯಂತ್ರಗಳು ನಮಗಿಂತ ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಅಪೂರ್ಣನಾದ ಮಾನವನು ಹೆಚ್ಚು ಆಕರ್ಷಕ ಮತ್ತು ಮೌಲ್ಯಯುತ ಜೀವಿಯಾಗುತ್ತಾನೆ. ನಾವು ಕ್ರೀಡೆಯನ್ನು ನೋಡುತ್ತಿರುವುದು ‘ಏನನ್ನು ಮಾಡಲು ಸಾಧ್ಯ’ ಎಂಬ ತಾಂತ್ರಿಕ ಸಾಧನೆಯನ್ನು ತಿಳಿಯಲು ಮಾತ್ರವಲ್ಲ, ನಮ್ಮಂತೆಯೇ ರಕ್ತಮಾಂಸಗಳಿಂದ ಕೂಡಿದ, ಮಿತಿಗಳಿರುವ ವ್ಯಕ್ತಿಯೊಬ್ಬ ಏನು ಸಾಧಿಸಬಲ್ಲ ಎನ್ನುವುದನ್ನು ನೋಡಲು. ಯಂತ್ರಗಳು ಪ್ರದರ್ಶನ ಮತ್ತು ದಾಖಲೆಗಳ ಭವಿಷ್ಯವನ್ನು ತಮ್ಮದಾಗಿ ಸಿಕೊಳ್ಳಬಹುದು. ಆದರೆ, ಪ್ರಯತ್ನಿಸುವ, ಹೋರಾಡುವ, ಸೋಲುವ ಮತ್ತು ಸೋಲನ್ನು ಗೆದ್ದು ನಿಲ್ಲುವ ನಾಟಕೀಯ ಸೌಂದರ್ಯ ಎಂದಿಗೂ ಮಾನವನಿಗೆ ಮಾತ್ರ ಮೀಸಲಾಗಿರುತ್ತದೆ.ಕ್ರೀಡಾಲೋಕ ಮಾತ್ರವಲ್ಲ; ಸಮಾಜದ ಎಲ್ಲ ಕ್ಷೇತ್ರಗಳನ್ನೂ ಕೃತಕ ತಂತ್ರಜ್ಞಾನ ಪ್ರವೇಶಿಸಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಮನುಷ್ಯನ ಭಾವಕೋಶವೇ ಜೀವಕೋಶ ಆಗಬೇಕು. ಮನುಷ್ಯ ಸಂಘಜೀವಿ ಎನ್ನುವ ಮಾತು ರೊಬೋಟ್ಗಳ ಸಾಂಗತ್ಯಕ್ಕೆ ಹೊಂದುವುದಿಲ್ಲ.ಗುರುರಾಜ್ ಎಸ್.ದಾವಣಗೆರೆ