ಆಲೂರಿನಲ್ಲಿ ರಣಜಿ ಟ್ರೋಫಿ ಪಂದ್ಯ: ಜಯದ ‘ಶ್ರೇಯ’ ಗಳಿಸುವತ್ತ ಆತಿಥೇಯರ ಚಿತ್ತ
ಬೆಂಗಳೂರು: ಮಳೆಯಲ್ಲಿ ಮಿಂದಿರುವ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದ ಹಸಿರು ಹೊದಿಕೆ ಮನಕ್ಕೆ ಮುದ ನೀಡುವಂತಿದೆ. ಆದರೆ ಈ ಸುಂದರ ಅಂಗಣದಲ್ಲಿ ಭಾನುವಾರ ಆರಂಭವಾಗಲಿರುವ ರಣಜಿ ಟ್ರೋಫಿ ಬಿ ಗುಂಪಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿಯೂ ‘ವರುಣ’ನ ಆಟ ನಡೆಯುವ ಸಾಧ್ಯತೆ ದಟ್ಟವಾಗಿದೆ.ಅದೇನೆ ಇರಲಿ; ನವರಾತ್ರಿಯ ಸಡಗರದ ಸಂದರ್ಭದಲ್ಲಿ ಆಯೋಜನೆಯಾಗುತ್ತಿರುವ ಈ ಪಂದ್ಯವು ಕರ್ನಾಟಕ

ಬೆಂಗಳೂರು: ಮಳೆಯಲ್ಲಿ ಮಿಂದಿರುವ ಆಲೂರಿನ ಕೆಎಸ್ಸಿಎ ಕ್ರೀಡಾಂಗಣದ ಹಸಿರು ಹೊದಿಕೆ ಮನಕ್ಕೆ ಮುದ ನೀಡುವಂತಿದೆ. ಆದರೆ ಈ ಸುಂದರ ಅಂಗಣದಲ್ಲಿ ಭಾನುವಾರ ಆರಂಭವಾಗಲಿರುವ ರಣಜಿ ಟ್ರೋಫಿ ಬಿ ಗುಂಪಿನ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿಯೂ ‘ವರುಣ’ನ ಆಟ ನಡೆಯುವ ಸಾಧ್ಯತೆ ದಟ್ಟವಾಗಿದೆ.ಅದೇನೆ ಇರಲಿ; ನವರಾತ್ರಿಯ ಸಡಗರದ ಸಂದರ್ಭದಲ್ಲಿ ಆಯೋಜನೆಯಾಗುತ್ತಿರುವ ಈ ಪಂದ್ಯವು ಕರ್ನಾಟಕಕ್ಕೆ ಮಹತ್ವದ್ದಾಗಿದೆ. ಏಕೆಂದರೆ ಪ್ರಸಕ್ತ ಋತುವಿನಲ್ಲಿ ತಂಡವು ತವರಿನಂಗಳದಲ್ಲಿ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. ಒಟ್ಟಾರೆ ಎರಡನೇ ಪಂದ್ಯವೂ ಹೌದು. ಸೌರಾಷ್ಟ್ರ ಎದುರು ನಡೆಯಲಿರುವ ಈ ಪಂದ್ಯದಲ್ಲಿ ಅನುಭವಿ ಸ್ಪಿನ್–ಆಲ್ರೌಂಡರ್ ಶ್ರೇಯಸ್ ಗೋಪಾಲ್ ಆತಿಥೇಯ ತಂಡವನ್ನು ಮುನ್ನಡೆಸಲಿದ್ದಾರೆ. ಗೆಲುವಿನ ಖಾತೆ ತೆರೆಯುವ ಹುಮ್ಮಸ್ಸಿನಲ್ಲಿ ತಂಡವಿದೆ.ಹೋದ ವಾರ ವಿಜಯವಾಡದ ಮುಲಪಾಡಿನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಆಂಧ್ರ ಎದುರು ಕೇವಲ ಒಂದು ಅಂಕ ಪಡೆದಿರುವ ಕರ್ನಾಟಕ ಹಲವು ಪಾಠಗಳನ್ನು ಕಲಿತು ಬಂದಿದೆ. ಆ ಪಂದ್ಯದಲ್ಲಿ ಆಡಿದ್ದ ಕೆ.ಎಲ್. ರಾಹುಲ್, ದೇವದತ್ತ ಪಡಿಕ್ಕಲ್ ಮತ್ತು ಆರ್. ಸ್ಮರಣ್ ಅವರು ನ್ಯೂಜಿಲೆಂಡ್ ಪ್ರವಾಸ ಮಾಡಲಿರುವ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ದೇವದತ್ತ ಪಡಿಕ್ಕಲ್ ಭಾರತ ಎ ತಂಡದಲ್ಲಿದ್ದ ಕಾರಣ ಮೊದಲ ರಣಜಿ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಬದಲಿಗೆ ಸ್ಮರಣ್ ನಾಯಕತ್ವ ವಹಿಸಿಕೊಂಡಿದ್ದರು.ಮೂಲಪಾಡು ಪಂದ್ಯದಲ್ಲಿ ಶ್ರೇಯಸ್ ಆಡಿರಲಿಲ್ಲ. ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆದಿದ್ದರು. ಆ ಪಂದ್ಯದಲ್ಲಿ ಅಗ್ರಕ್ರಮಾಂಕದ ಬ್ಯಾಟರ್ಗಳು ವಿಫಲ ರಾಗಿದ್ದರು. ಮೊದಲ ಇನಿಂಗ್ಸ್ನಲ್ಲಿ ಆರ್. ಸ್ಮರಣ್ ಶತಕ ಗಳಿಸಿದ್ದರು. ಕೆ.ಎಲ್. ಶ್ರೀಜಿತ್ ಅರ್ಧಶತಕ ದಾಖಲಿಸಿದ್ದರು.ಎರಡನೇ ಇನಿಂಗ್ಸ್ನಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಕರುಣ್ ನಾಯರ್ (ಅಜೇಯ 155) ಮಹತ್ವದ ಇನಿಂಗ್ಸ್ ಆಡಿದ್ದರು. ಅವರ ಏಕಾಂಗಿ ಹೋರಾಟದಿಂದಾಗಿ ಕರ್ನಾಟಕದ ಸೋಲು ತಪ್ಪಿತ್ತು. ಅಗ್ರಕ್ರಮಾಂಕದ ಬ್ಯಾಟರ್ಗಳಾದ ಮಯಂಕ್ ಅಗರವಾಲ್ ಮತ್ತು ಕೆ.ವಿ. ಅನೀಶ್ ಅವರು ಲಯಕ್ಕೆ ಮರಳುವ ಅಗತ್ಯವಿದೆ. ನಿಕಿನ್ ಜೋಸ್ ಅವರಿಗೂ ಇಲ್ಲಿ ಕಣಕ್ಕಿಳಿಯುವ ಅವಕಾಶ ಸಿಗಬಹುದು.ಬೌಲಿಂಗ್ ವಿಭಾಗದಲ್ಲಿ ವೇಗಿ ವೈಶಾಖ ವಿಜಯಕುಮಾರ್, ವಿದ್ವತ್ ಕಾವೇರಪ್ಪ ಅವರು ಮರಳಿದ್ದಾರೆ. ವಿದ್ವತ್ ಅವರು ಈಚೆಗೆ ದುಲೀಪ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಗಾಯಗೊಂಡಿದ್ದರು. ಇದೀಗ ಚೇತರಿಸಿಕೊಂಡಿದ್ದಾರೆ. ಇಬ್ಬರು ವೇಗಿ ಮತ್ತು ಮೂವರು ಸ್ಪಿನ್ನರ್ ಸಂಯೋಜನೆಯೊಂದಿಗೆ ಕಣಕ್ಕಿಳಿದರೆ ಅಭಿಲಾಷ್ ಶೆಟ್ಟಿಗೆ ವಿಶ್ರಾಂತಿ ಕೊಡಬಹುದು. ಆಲ್ರೌಂಡರ್ ಮನ್ವಂತ್ ಕುಮಾರ್ ಅವಕಾಶ ಪಡೆದರೆ ಹೆಚ್ಚುವರಿ ಬೌಲರ್ ಅಗತ್ಯವೂ ಈಡೇರಲಿದೆ.ಕಳೆದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಆರು ವಿಕೆಟ್ ಗಳಿಸಿದ್ದರು. ಆದ್ದರಿಂದ ಅವರು ಈ ಪಂದ್ಯದಲ್ಲಿ ಶ್ರೇಯಸ್ ಜೊತೆಗೆ ಸ್ಪಿನ್ ವಿಭಾಗಕ್ಕೆ ಬಲ ತುಂಬುವ ಸಾಧ್ಯತೆ ಹೆಚ್ಚು. ಮಾಧವ ಬಜಾಜ್ ಅವರಿಗೆ ಅವಕಾಶ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.ಸೌರಾಷ್ಟ್ರ ತಂಡವು ಮೊದಲ ಪಂದ್ಯದಲ್ಲಿ ಛತ್ತೀಸಗಢ ಎದುರು ಡ್ರಾ ಮಾಡಿಕೊಂಡು ಮೂರು ಅಂಕ ಪಡೆದಿತ್ತು. ಆಲ್ರೌಂಡರ್ ರವೀಂದ್ರ ಜಡೇಜ ಹಾಗೂ ಪ್ರೇರಕ್ ಮಂಕಡ್ ಅವರು ಶತಕ ಗಳಿಸಿದ್ದರು. ಚಿರಾಗ್ ಜಾನಿ, ಹರ್ವಿಕ್ ದೇಸಾಯಿ, ಅರ್ಪಿತ್ ವಸವಡಾ, ನಾಯಕ ಜಯದೇವ್ ಉನದ್ಕತ್ ಅವರು ಕರ್ನಾಟಕ ತಂಡಕ್ಕೆ ಸವಾಲೊಡ್ಡಬಲ್ಲ ಸಮರ್ಥರಾಗಿದ್ದಾರೆ.ತಂಡಗಳುಕರ್ನಾಟಕ: ಶ್ರೇಯಸ್ ಗೋಪಾಲ್ (ನಾಯಕ), ಮಯಂಕ್ ಅಗರವಾಲ್, ರೋಹನ್ ಎ ಪಾಟೀಲ, ಅನೀಶ್ವರ್ ಗೌತಮ್, ಕರುಣ್ ನಾಯರ್, ನಿಕಿನ್ ಜೋಸ್, ಕೃತಿಕ್ ಕೃಷ್ಣ (ವಿಕೆಟ್ಕೀಪರ್), ಶಿಖರ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಎಲ್. ಮನ್ವಂತ್ ಕುಮಾರ್, ವೈಶಾಖ ವಿಜಯಕುಮಾರ್, ರಿತೇಶ್ ಭಟ್ಕಳ್, ಕೆ.ಎಲ್. ಶ್ರೀಜಿತ್ (ವಿಕೆಟ್ಕೀಪರ್), ವಿದ್ವತ್ ಕಾವೇರಪ್ಪ. ಆರ್. ವಿನಯಕುಮಾರ್ (ಕೋಚ್)ಸೌರಾಷ್ಟ್ರ: ಜೈದೇವ್ ಉನದ್ಕತ್ (ನಾಯಕ), ಹರ್ವಿಕ್ ದೇಸಾಯಿ, ಚಿರಾಗ್ ಜಾನಿ, ಜೇ ಗೊಹಿಲ್, ಅರ್ಪಿತ್ ವಸವಾಡ, ಪ್ರೇರಕ್ ಮಂಕಡ್, ರವೀಂದ್ರ ಜಡೇಜ, ಸಮರ್ ಗಜ್ಜರ್, ಅರ್ಥ್ ಯಾದವ್, ಚೇತನ್ ಸಕಾರಿಯಾ, ಅಂಕುರ್ ಪನ್ವಾರ್, ವಿಶ್ವಜೀತ್ ಜಡೇಜ, ಪಾರ್ಥ್ ಬೂತ್, ತರಂಗ್ ಗೋಹಿಲ್.261018-51-1563957471