ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆಗಾಗಿ ಭುಗಿಲೆದ್ದ ಆಕ್ರೋಶ: ಶಾಸಕ ಗವಿಯಪ್ಪ ಮನೆ ಮುಂದೆ ಉಪವಾಸ ಸತ್ಯಾಗ್ರಹ
– ನ.10ರೊಳಗೆ ಭೂಮಿ ಪೂಜೆ ಭರವಸೆ ಬಳ್ಳಾರಿ: ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳ ಕಬ್ಬು ಬೆಳೆಗಾರರ ದಶಕಗಳ ಕನಸಾಗಿರುವ ಹೊಸಪೇಟೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ಅನ್ನದಾತರು ರಣಕಹಳೆ ಊದಿದ್ದಾರೆ. ‘ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೀದಿಗಿಳಿದ ನೂರಾರು ರೈತರು, ಶಾಸಕ ಹೆಚ್.ಆರ್. ಗವಿಯಪ್ಪ ಅವರ ನಿವಾಸದ ಎದುರು ಉಪವಾಸ ಸತ

– ನ.10ರೊಳಗೆ ಭೂಮಿ ಪೂಜೆ ಭರವಸೆ ಬಳ್ಳಾರಿ: ವಿಜಯನಗರ ಹಾಗೂ ಬಳ್ಳಾರಿ ಅವಳಿ ಜಿಲ್ಲೆಗಳ ಕಬ್ಬು ಬೆಳೆಗಾರರ ದಶಕಗಳ ಕನಸಾಗಿರುವ ಹೊಸಪೇಟೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಆಗ್ರಹಿಸಿ ಅನ್ನದಾತರು ರಣಕಹಳೆ ಊದಿದ್ದಾರೆ. ‘ಹೊಸಪೇಟೆ ಸಕ್ಕರೆ ಕಾರ್ಖಾನೆ ಹೋರಾಟ ಸಮಿತಿ’ ನೇತೃತ್ವದಲ್ಲಿ ಬೀದಿಗಿಳಿದ ನೂರಾರು ರೈತರು, ಶಾಸಕ ಹೆಚ್.ಆರ್. ಗವಿಯಪ್ಪ ಅವರ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದ ಮದಕರಿ ನಾಯಕ ವೃತ್ತದಿಂದ ಆರಂಭವಾದ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆಯು ನೆಹರೂ ಕಾಲೋನಿಯಲ್ಲಿರುವ ಶಾಸಕರ ನಿವಾಸವನ್ನು ತಲುಪಿತು. ಕಾರ್ಖಾನೆ ಸ್ಥಗಿತಗೊಂಡ ಕಾರಣದಿಂದ ಸಾವಿರಾರು ಕೃಷಿಕ ಹಾಗೂ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿದ್ದು, ರೈತರ ಬದುಕಿಗೆ ಆಸರೆಯಾಗಲು ಕೂಡಲೇ ನೂತನ ಕಾರ್ಖಾನೆ ಆರಂಭಿಸಬೇಕೆಂದು ಪ್ರತಿಭಟನಾಕಾರರು ಗಡುವು ನೀಡಿದರು. ಇದನ್ನೂ ಓದಿ: ಧಾರವಾಡಕ್ಕೆ ತಲುಪಿದ ಪಾದಯಾತ್ರೆ: ಸರ್ಕಾರದ ಮನವಿಗೂ ಜಗ್ಗದ ಕಬ್ಬು ಬೆಳೆಗಾರರು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸುವುದಾಗಿ ಆಶ್ವಾಸನೆ ನೀಡಲಾಗಿತ್ತು. ಆದರೆ ಮೂರು ವರ್ಷಗಳು ಕಳೆದರೂ ಕಾರ್ಖಾನೆ ಕನಸಾಗಿಯೇ ಉಳಿದಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕೊಟ್ಟ ಮಾತಿನಂತೆ ಸರ್ಕಾರ ಹಾಗೂ ಸ್ಥಳೀಯ ಶಾಸಕರು ತಕ್ಷಣವೇ ಕಾರ್ಖಾನೆ ಸ್ಥಾಪನೆಗೆ ಚಾಲನೆ ನೀಡಬೇಕು, ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು. ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಶಾಸಕ ಹೆಚ್.ಆರ್. ಗವಿಯಪ್ಪ, ರೈತರಿಗೆ ಎಳೆನೀರು ಕುಡಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ತಕ್ಷಣದ ಅಧಿಕೃತ ತೀರ್ಮಾನ ಕಷ್ಟಸಾಧ್ಯ ಎಂದ ಶಾಸಕರು, ನವೆಂಬರ್ 10ರಂದು ವಿಶೇಷ ಸಭೆ ಕರೆದು ಅಂದೇ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಎಸ್. ಜಾಹ್ನವಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಇದೀಗ ನವೆಂಬರ್ 10ರ ಗಡುವಿನತ್ತ ಇಡೀ ಜಿಲ್ಲೆಯ ಅನ್ನದಾತರ ಚಿತ್ತ ನೆಟ್ಟಿದೆ.