ರಾಮನಗರ| ತಮಟೆ ಬಾರಿಸುವಾಗ ಹೃದಯಾಘಾತ: ಕಲಾವಿದ ಸುರೇಶ್ ಸಾವು
ರಾಮನಗರ: ಜನಪದ ಕಲಾವಿದರೊಬ್ಬರು ತಮಟೆ ಬಾರಿಸುವಾಗ ಹೃದಯಾಘಾತ ಸಂಭವಿಸಿದ್ದರಿಂದ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ತಾಲ್ಲೂಕಿನ ಅಂಕನಹಳ್ಳಿಯ ತಮಟೆ ಕಲಾವಿದ ಸುರೇಶ್ (37) ಮೃತರು. ಜನಪದ ಕಲಾವಿದ ಹಾಗೂ ಕಾಂಗ್ರೆಸ್ ಮುಖಂಡ ಅಂಕನಹಳ್ಳಿ ಲೋಕೇಶ್ ಅವರ ಸಹೋದರರಾದ ಸುರೇಶ್ ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದಾರೆ. ವಡ್ಡರಹಳ್ಳಿಯಲ್ಲಿ ಕಾರ್ಯಕ್

ರಾಮನಗರ: ಜನಪದ ಕಲಾವಿದರೊಬ್ಬರು ತಮಟೆ ಬಾರಿಸುವಾಗ ಹೃದಯಾಘಾತ ಸಂಭವಿಸಿದ್ದರಿಂದ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ತಾಲ್ಲೂಕಿನ ಅಂಕನಹಳ್ಳಿಯ ತಮಟೆ ಕಲಾವಿದ ಸುರೇಶ್ (37) ಮೃತರು. ಜನಪದ ಕಲಾವಿದ ಹಾಗೂ ಕಾಂಗ್ರೆಸ್ ಮುಖಂಡ ಅಂಕನಹಳ್ಳಿ ಲೋಕೇಶ್ ಅವರ ಸಹೋದರರಾದ ಸುರೇಶ್ ಅವರಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದಾರೆ. ವಡ್ಡರಹಳ್ಳಿಯಲ್ಲಿ ಕಾರ್ಯಕ್ರಮದ ನಿಮಿತ್ತ ತಮಟೆ ಬಾರಿಸಲು ಸುರೇಶ್ ತಮ್ಮ ತಂಡದೊಂದಿಗೆ ಭಾನುವಾರ ಹೋಗಿದ್ದರು. ಮಧ್ಯಾಹ್ನ ತಮಟೆ ಬಾರಿಸುವಾಗ ಅವರಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದರು. ಕೂಡಲೇ ಸ್ಥಳೀಯರು ಅವರನ್ನು ರಾಮನಗರದ ಜಿಲ್ಲಾಸ್ಪತ್ರೆಗೆ ಕರೆತಂದು ಮನೆಯವರಿಗೆ ಮಾಹಿತಿ ನೀಡಿದರು ಎಂದು ಕುಟುಂಬದವರು ತಿಳಿಸಿದರು.ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಸುರೇಶ್ ಎದೆನೋವಿನಿಂದ ಬಳಲುತ್ತಲೇ ಇದ್ದರು. ವೈದ್ಯರು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದರು. ಮನೆಯವರು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳುವಾಗ ಸುರೇಶ್ ಅವರು, ತಮ್ಮ ಪುತ್ರನನ್ನು ನೋಡುವ ಇಂಗಿತ ವ್ಯಕ್ತಪಡಿಸಿದರು. ಮಗುವನ್ನು ಕರೆದೊಯ್ದು ತೋರಿಸಿದ ಕೆಲವೇ ಕ್ಷಣದಲ್ಲಿ ಸುರೇಶ್ ಕೊನೆಯುಸಿರೆಳೆದರು ಎಂದು ಕುಟುಂಬದವರು ಹೇಳಿದರು.ಸುರೇಶ್ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.