ಅಂಗವಿಕಲರ ಪಾದಯಾತ್ರೆಗೆ ಎಚ್ಡಿಕೆ-ಅಶೋಕ ಬಲ: ಪೊಲೀಸ್ ನಡೆಗೆ ಆಕ್ರೋಶ
ಬಿಡದಿ (ರಾಮನಗರ): ಸೇವೆ ಕಾಯಂ, ಗೌರವಧ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನವ ಕರ್ನಾಟಕ ಎಂ.ಆರ್.ಡಬ್ಲೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ರಾಮನಗರದಿಂದ ಬೆಂಗಳೂರಿಗೆ ಅಂಗವಿಕಲರು ನಡೆಸುತ್ತಿರುವ ಪಾದಯಾತ್ರೆ ಭಾನುವಾರ ಮೂರು ದಿನ ಪೂರೈಸಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ರಾಜಧಾನಿಯ

ಬಿಡದಿ (ರಾಮನಗರ): ಸೇವೆ ಕಾಯಂ, ಗೌರವಧ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ನವ ಕರ್ನಾಟಕ ಎಂ.ಆರ್.ಡಬ್ಲೂ, ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ನೇತೃತ್ವದಲ್ಲಿ ರಾಮನಗರದಿಂದ ಬೆಂಗಳೂರಿಗೆ ಅಂಗವಿಕಲರು ನಡೆಸುತ್ತಿರುವ ಪಾದಯಾತ್ರೆ ಭಾನುವಾರ ಮೂರು ದಿನ ಪೂರೈಸಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.ರಾಜಧಾನಿಯತ್ತ ಹುರುಪಿನಿಂದ ಹೆಜ್ಜೆ ಹಾಕುತ್ತಿದ್ದ ಅಂಗವಿಕಲರನ್ನು ಪೊಲೀಸರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಹೆಜ್ಜಾಲ ಮತ್ತು ಕಣಮಿಣಿಕೆ ಬಳಿ ತಡೆದ ವಿಷಯ ತಿಳಿದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಣಮಿಣಿಕೆಗೆ ಭೇಟಿ ನೀಡಿ ಹೋರಾಟಕ್ಕೆ ಶಕ್ತಿ ತುಂಬಿದರು. ಪೊಲೀಸರ ನಡೆ ಖಂಡಿಸಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಇಬ್ಬರೂ ನಾಯಕರು, ಪಾದಯಾತ್ರೆ ಮುಂದಕ್ಕೆ ಸಾಗಲು ಅನುವು ಮಾಡಿಕೊಟ್ಟರು. ಹೋರಾಟಗಾರರ ಜೊತೆ ಸ್ವಲ್ಪ ದೂರ ಹೆಜ್ಜೆ ಹಾಕಿ ಉತ್ಸಾಹ ತುಂಬಿದರು. ಅನಿರ್ದಿಷ್ಟಾವಧಿ ಧರಣಿ ಮತ್ತು ಪಾದಯಾತ್ರೆ ಸೇರಿ ಅಂಗವಿಕಲರ ಸತತ 30 ದಿನಗಳ ಹೋರಾಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಕಳೆದ 30 ತಿಂಗಳಿಂದ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿ ಇವರು ಪ್ರತಿಭಟನೆ ನಡೆಸುತ್ತಿದ್ದರೂ, ಈ ಸರ್ಕಾರಕ್ಕೆ ಕರುಣೆ ಬಂದಿಲ್ಲ ಎಂದರೆ ನಿಜಕ್ಕೂ ಬೇಸರ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದಾಗ ವಿಕಲಚೇತನರು ಮುಖ್ಯಮಂತ್ರಿ ಕಚೇರಿ, ನಿವಾಸ ಹಾಗೂ ವಿಧಾನಸೌಧಕ್ಕೆ.ರಾಜಾರೋಷವಾಗಿ ಬರುವ ವ್ಯವಸ್ಥೆ ಇತ್ತು. ಆದರೆ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಅವರನ್ನು ಫ್ರೀಡಂ ಪಾರ್ಕ್ ವರೆಗೆ ಬಿಡಲು ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಬೇರೆ ಉದೇಶಗಳಿಗೆ ನೂರಾರು ಕೋಟಿ ಹಣವನ್ನು ಪೋಲು ಮಾಡುತ್ತಿದೆ. ಭಾರತ್ ಜೋಡೋ ಸಂಘಗಳಿಗೆ ಸಾವಿರ ಕೋಟಿ ಕೊಡುವುದಕ್ಕೆ ಇವರ ಬಳಿ ಹಣವಿದೆ. ಪ್ರತಿ ಗ್ರಾಮ ಪಂಚಾಯತಿಗೆ ₹10 ಲಕ್ಷ ಕೊಡುವುದಕ್ಕೆ ಇವರಿಗೆ ಕಷ್ಟ ಇಲ್ಲ. ಗ್ಯಾರಂಟಿ ಸಮಿತಿಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೇಬು ತುಂಬಿಸಲು ನೂರಾರು ಕೋಟಿ ಕೊಡೋದಕ್ಕೆ. ಇವರತ್ತಿರ ದುಡ್ಡಿದೆ. ಆದರೆ ವಿಕಲಚೇತನರ ಬೇಡಿಕೆ ಈಡೇರಿಸಲು ಇವರ ಬಳಿ ಹಣ ಇಲ್ಲ. ಇಷ್ಟೆಲ್ಲಾ ಮಾಡುವ ಸರ್ಕಾರಕ್ಕೆ ವಿಕಲಚೇತನರಿಗೆ ಮಾಶಾಸನ ಕೊಡುವುದಕ್ಕೆ ಗತಿ ಇಲ್ಲ ಎಂದರೆ ಏನು ಹೇಳುವುದು? ಇದೊಂದು ದರಿದ್ರ ಸರ್ಕಾರ ಎಂದು ಕಿಡಿಕಾರಿದರು.ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡುತ್ರಿರುವ ಅಂಗವಿಕಲರು ಯಾರಿಗೂ ಹೆದರಬೇಕಾಗಿಲ್ಲ. ನಿಮ್ಮ ಜೊತೆ ನಾನು ಮತ್ತು ಅಶೋಕ್ ದೃಢವಾಗಿ ನಿಲ್ಲುತ್ತೇವೆ. ನಿಮ್ಮ ಪಾದಯಾತ್ರೆಯನ್ನು ಧೈರ್ಯವಾಗಿ ಮುಂದುವರಿಸಿ. ನಿಮ್ಮನ್ನು ಯಾರೂ ತಡೆಯುವುದಿಲ್ಲ ಎಂದು ಧೈರ್ಯ ತುಂಬಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ, ರಾಜ್ಯಾಧ್ಯಕ್ಷ ಫಕೀರಗೌಡ ಪಾಟೀಲ, ಸಂಘದ ಸಂಚಾಲಕ ಅನಿಲ್ ಕೆ. ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಶಬರೀಶ, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಅಂಬರೀಶ, ಖಜಾಂಚಿ ಜಯಮ್ಮ, ಮುಖಂಡರಾದ ಚಿಕ್ಕಮಳೂರಯ್ಯ, ಹರೀಶ, ಅಫ್ತಾಬ್ ಬಾಷ, ನಟರಾಜ್ಣ ಇಮ್ತಿಯಾಜ್ ಪಾಷ, ಕಲಾವತಿ, ಹೊಯ್ಸಳ, ರಾಮನಗರ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಶಿವಬಸಯ್ಯ, ಪದಾಧಿಕಾರಿಗಳಾದ ಶಿವರಂಜಿನಿ ಅರಸ್, ಜಗದೀಶ್, ಜಯಂತ್ ಹಾಗೂ ಇತರರು ಇದ್ದರು.ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವಅಂಗವಿಕಲರ ಜೊತೆ ನಾವೆಲ್ಲರೂ ಗಟ್ಟಿಯಾಗಿ ನಿಲ್ಲುತ್ತೇವೆ. ರಾಜ್ಯ ಸರ್ಕಾರ ಮಾನವೀಯ ದೃಷ್ಟಿಯಿಂದ ಇವರ ಬೇಡಿಕೆಗಳನ್ನು ಈಡೇರಿಸಬೇಕುಒತ್ತಡಕ್ಕೆ ಮಣಿದ ಪೊಲೀಸರು: ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆಗೆ ಅವಕಾಶಪಾದಯಾತ್ರೆ ಬೆಂಬಲಿಸಿ ಕುಮಾರಸ್ವಾಮಿ ಮತ್ತು ಅಶೋಕ ಅವರು ಅಂಗವಿಕಲರ ಜೊತೆ ಪ್ರತಿಭಟನೆ ನಡೆಸಿ ಹಾಕಿದ ಒತ್ತಡಕ್ಕೆ ಮಣಿದ ಪೊಲೀಸರು, ಸ್ವಾತಂತ್ರ್ಯ ಉದ್ಯಾನದವರೆಗೆ ಪಾದಯಾತ್ರೆಗೆ ಅವಕಾಶ ನೀಡುವ ನೀಡಿದರು. ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಇಲ್ಲಿರುವವರೆಲ್ಲರೂ ಅಂಗವಿಕಲರಾದರೂ ಎದೆಗುಂದದೆ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳನ್ನು ಇಟ್ಟುಕೊಂಡು ರಸ್ತೆಯಲ್ಲಿ ಕೂತಿದ್ದಾರೆ. ಇಂತಹವರ ಬಗ್ಗೆ ನೀವು ಮಾನವೀಯ ದೃಷ್ಟಿಯಿಂದ ನೋಡಬೇಕು ಎಂದು ಪೊಲೀಸರಿಗೆ ಕಿವಿಮಾತು ಹೇಳಿದರು. ಪ್ರೀಡಂ ಪಾರ್ಕ್ ವರೆಗೂ ಪಾದಯಾತ್ರೆಗೆ ಅನುಮತಿಸದೆ ಹೋದರೆ ನಾನು ಇಲ್ಲಿಂದ ಮೇಲೆ ಏಳುವುದಿಲ್ಲ. ನಾವೆಲ್ಲರೂ ಇಡೀ ರಾತ್ರಿ ಇಲ್ಲಿಯೇ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕೊನೆಗೂ ಸಚಿವರ ಆಗ್ರಹಕ್ಕೆ ಮಣಿದ ಪೊಲೀಸರು, ಇಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ತೆರಳಬಹುದು ಎಂದು ಕೇಂದ್ರ ಸಚಿವರಿಗೆ ತಿಳಿಸಿದರು.'ಮಾಸಾಶನ ನೀಡಲಾಗದೆ ದಿವಾಳಿಯಾದ ಸರ್ಕಾರ'ಅಂಗವಿಕಲರುಮೂವತ್ತು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ, ಕಾಂಗ್ರೆಸ್ ಸರ್ಕಾರ ಆಡಂಬರದಲ್ಲಿ ಮುಳುಗಿದೆ. ಕಳೆದ ಐದು ತಿಂಗಳಿಂದ ಅವರಿಗೆ ಪಿಂಚಣಿ ಕೂಡ ನೀಡಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಕೇವಲ ₹10 ಸಾವಿರಕ್ಕೆ ಅವರನ್ನು ದುಡಿಸಿಕೊಳ್ಳಲಾಗುತ್ತಿದೆ. ಇದನ್ನು ವಿರೋಧಿಸಿ ವಿಕಲಚೇತನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಪಿಂಚಣಿ ಕೊಡಲು ಯೋಗ್ಯತೆ ಇಲ್ಲವೆಂದ ಮೇಲೆ ಖಜಾನೆ ಖಾಲಿಯಾಗಿದೆ ಎಂದು ಫಲಕ ಹಾಕಿಕೊಳ್ಳಲಿ. ಇವರ ಪ್ರತಿಭಟನೆ ತಡೆಯಲು ಸಾವಿರ ಪೊಲೀಸರನ್ನು ನಿಯೋಜಿಸಿ 40 ಬಸ್ಗಳನ್ನು ಇರಿಸಲಾಗಿದೆ. ಪಿಂಚಣಿ ಕೊಡಲು ಈ ಮಟ್ಟಿಗೆ ಸರ್ಕಾರ ಸತಾಯಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ದಿವಾಳಿಯಾಗಿರುವ ಸರ್ಕಾರದ ಬಣ್ಣ ಬಯಲು ಮಾಡಲು ನಾವು ಬಂದಿದ್ದೇವೆ. ನಾನು ಆರಂಭಿಕ ಹೋರಾಟಕ್ಕೆ ಬಂದಾಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಲಾಠಿ ಚಾರ್ಜ್ ಮಾಡಿದರೂ, ಗೋಲಿಬಾರ್ ಮಾಡಿದರೂ ಸಾವಿರದೈನೂರಕ್ಕೂ ಅಧಿಕ ವಿಕಲಚೇತನರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಸರ್ಕಾರ ಪಾಪರ್ ಆಗಿದೆ ಎಂದಾದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಲಿ. ಮುಖ್ಯಮಂತ್ರಿಗಳು ಒಂದು ಕಡೆ ಬಿಡದಿಯಲ್ಲಿ, ಮತ್ತೊಂದೆಡೆ ಆನೇಕಲ್ನಲ್ಲಿ ರೈತರ ಜಮೀನು ಲೂಟಿ ಮಾಡುತ್ತಿದ್ದಾರೆ. ಸಚಿವರಾಗಿದ್ದ ನಾಗೇಂದ್ರ ವಾಲ್ಮೀಕಿ ನಿಗಮದ ಹಣವನ್ನು ಲೂಟಿ ಮಾಡಿದ್ದರು. ಬರ ಪರಿಹಾರದ ₹2,500 ಅನ್ನು ರೈತರು ಸರ್ಕಾರಕ್ಕೆ ಮರಳಿಸುತ್ತಿದ್ದಾರೆ. ನ್ಯಾಯಕ್ಕಾಗಿ ವಿಕಲಚೇತನರು ಹೋರಾಡುತ್ತಿದ್ದು, ನಾವು ಸಂಪೂರ್ಣ ಬೆಂಬಲ ನೀಡಿದ್ದೇವೆ ಎಂದರು. ಭಯೋತ್ಪಾದಕರು, ಬಾಂಗ್ಲಾ ದೇಶದವರನ್ನು ತಡೆಯಲು ಪೊಲೀಸರು ಹೋಗಬೇಕಿತ್ತು. ಆದರೆ ವಿಕಲಚೇತನರನ್ನು ಬಂಧಿಸಲು ಇಷ್ಟೊಂದು ಪೊಲೀಸರು ಬಂದಿದ್ದಾರೆ. ಇಂತಹ ಇತಿಹಾಸವೇ ರಾಜ್ಯದಲ್ಲಿ ಇಲ್ಲ. ವಿಕಲಚೇತನರನ್ನು ಪೊಲೀಸರು ಹೊತ್ತೊಯ್ಯುವ ಚಿತ್ರಗಳು ಮಾಧ್ಯಮಗಳಲ್ಲಿ ಬಂದರೆ ಸರ್ಕಾರದ ಮಾನ ಹರಾಜಾಗಲಿದೆ ಎಂದರು.