ಪ್ರವಾಸ: ಭೂಮಿಯ ನಡುವೆ ಹಸಿರಿನ ತಂಪು
ರಾಜಸ್ಥಾನ ಎಂದರೆ ಮರಳುಗಾಡು, ಬಿಸಿಲು, ಮರಳಿನ ದಿಬ್ಬಗಳು. ಆದರೆ ಇದೇ ರಾಜ್ಯದಲ್ಲಿ ಬೆಟ್ಟ, ಕಾಡು, ಸರೋವರಗಳ ನಡುವೆ ತಂಪಾದ ವಾತಾವರಣವಿರುವ ಗಿರಿಧಾಮವೊಂದಿದೆ. ಅದೇ ಮೌಂಟ್ ಅಬು. ಅರಾವಳಿ ಪರ್ವತಶ್ರೇಣಿಯಲ್ಲಿರುವ ರಾಜಸ್ಥಾನದ ಏಕೈಕ ಗಿರಿಧಾಮವಿದು. ನದಿಗಳು, ಸರೋವರಗಳು, ಜಲಪಾತಗಳು ಮತ್ತು ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿರುವ ಈ ತಾಣವನ್ನು ‘ಮರುಭೂಮಿಯ ಓಯಸಿಸ್’ ಎಂದು

ರಾಜಸ್ಥಾನ ಎಂದರೆ ಮರಳುಗಾಡು, ಬಿಸಿಲು, ಮರಳಿನ ದಿಬ್ಬಗಳು. ಆದರೆ ಇದೇ ರಾಜ್ಯದಲ್ಲಿ ಬೆಟ್ಟ, ಕಾಡು, ಸರೋವರಗಳ ನಡುವೆ ತಂಪಾದ ವಾತಾವರಣವಿರುವ ಗಿರಿಧಾಮವೊಂದಿದೆ. ಅದೇ ಮೌಂಟ್ ಅಬು. ಅರಾವಳಿ ಪರ್ವತಶ್ರೇಣಿಯಲ್ಲಿರುವ ರಾಜಸ್ಥಾನದ ಏಕೈಕ ಗಿರಿಧಾಮವಿದು. ನದಿಗಳು, ಸರೋವರಗಳು, ಜಲಪಾತಗಳು ಮತ್ತು ನಿತ್ಯಹರಿದ್ವರ್ಣ ಕಾಡಿನಿಂದ ಕೂಡಿರುವ ಈ ತಾಣವನ್ನು ‘ಮರುಭೂಮಿಯ ಓಯಸಿಸ್’ ಎಂದು ಕರೆಯಲಾಗುತ್ತದೆ.ಮೌಂಟ್ ಅಬುವಿನ ಪ್ರಮುಖ ಆಕರ್ಷಣೆ ನಕ್ಕಿ ಸರೋವರ. ಅರಾವಳಿ ಪರ್ವತಶ್ರೇಣಿಯ ಅತ್ಯಂತ ಎತ್ತರದ ಶಿಖರವಾದ ಗುರು ಶಿಖರವೂ ಇಲ್ಲಿನ ಪ್ರವಾಸದಲ್ಲಿ ತಪ್ಪಿಸಿಕೊಳ್ಳಬಾರದ ತಾಣ. ಈ ಎರಡೂ ಸ್ಥಳಗಳು ಪ್ರಕೃತಿಯ ಸೊಬಗನ್ನು ಸವಿಯಲು ಅವಕಾಶ ನೀಡುತ್ತವೆ. ಆದರೆ ಪ್ರವಾಸವೆಂದರೆ ಸುಂದರ ತಾಣಗಳನ್ನು ನೋಡುವುದಷ್ಟೇ ಅಲ್ಲ; ದಾರಿಯಲ್ಲಿ ಎದುರಾಗುವ ಅನಿರೀಕ್ಷಿತ ಪ್ರಸಂಗಗಳೂ ನೆನಪಿನಲ್ಲಿ ಉಳಿಯುತ್ತವೆ.ನಕ್ಕಿ ಸರೋವರದ ಸುತ್ತಒಂದು ಮಧ್ಯಾಹ್ನ ಹನ್ನೊಂದು ಗಂಟೆಯ ಸುಮಾರಿಗೆ ನಕ್ಕಿ ಸರೋವರದ ಬಳಿಗೆ ಬಂದೆವು. ರಾಜಸ್ಥಾನದ ಮರಳುಗಾಡಿನ ನಡುವೆ ಇಂಥದ್ದೊಂದು ಸರೋವರವಿರುವುದೇ ಅಚ್ಚರಿ. ಸಮುದ್ರ ಮಟ್ಟದಿಂದ ಸುಮಾರು 1,200 ಮೀಟರ್ಗಿಂತಲೂ ಹೆಚ್ಚು ಎತ್ತರದಲ್ಲಿರುವ ಈ ಸರೋವರದ ಸುತ್ತ ಬೆಟ್ಟಗಳು ಮತ್ತು ಹಸಿರು ಆವರಿಸಿಕೊಂಡಿವೆ.ಸರೋವರದ ನಿರ್ಮಾಣದ ಬಗ್ಗೆ ಹಲವು ದಂತಕಥೆಗಳಿವೆ. ಋಷಿಯೊಬ್ಬರು ತಮ್ಮ ಉಗುರುಗಳಿಂದ ಇದನ್ನು ನಿರ್ಮಿಸಿದರೆಂಬ ಕಥೆಯೂ ಇದೆ. ‘ನಖ’ ಎಂದರೆ ಉಗುರು; ಅದರಿಂದಲೇ ನಕ್ಕಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.ಸರೋವರದ ಬಳಿಗೆ ಬಂದಾಗ ನಮ್ಮ ಮಾರ್ಗದರ್ಶಿ ಒಂದು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.‘ಬೋಟಿಂಗ್ ಬಹಳ ಸಮಯ ತೆಗೆದುಕೊಳ್ಳುತ್ತೆ. ಹೊರಗಿನಿಂದಲೇ ಸರೋವರ ನೋಡಿಕೊಂಡು ಬೇಗ ಬನ್ನಿ. ಫೋಟೊ ತೆಗೆಸಿಕೊಳ್ಳಲು ಹೋಗಬೇಡಿ. ಪ್ರಿಂಟ್ ಕೊಡೋಕೆ ತಡ ಮಾಡ್ತಾರೆ. ಮುಂದೆ ನೋಡಬೇಕಾದದ್ದು ಬೇಕಾದಷ್ಟಿದೆ’.ಹಾಗಾಗಿ ದೋಣಿ ವಿಹಾರದ ಆಸೆಯನ್ನು ಬದಿಗಿಟ್ಟು ಸರೋವರದ ದಂಡೆಯಲ್ಲೇ ಉಳಿದೆವು. ನೀರಿನ ನಡುವೆ ಎತ್ತರಕ್ಕೆ ಚಿಮ್ಮುತ್ತಿದ್ದ ಕಾರಂಜಿಗಳನ್ನು ನೋಡಿದೆವು. ದಂಡೆಯ ಬೆಂಚುಗಳಲ್ಲಿ ಕುಳಿತು ಫೋಟೊ ತೆಗೆಸಿಕೊಂಡೆವು.ಆದರೆ ರಾಜಸ್ಥಾನದ ಸಾಂಪ್ರದಾಯಿಕ ಉಡುಪು ಧರಿಸಿ ಫೋಟೊ ತೆಗೆಸಿಕೊಳ್ಳಬೇಕೆಂಬ ಆಸೆ ಕೆಲವರಿಗಿತ್ತು. ಮಾರ್ಗದರ್ಶಿಯ ಕಣ್ಣು ತಪ್ಪಿಸಿ ದಂಪತಿ ಛಾಯಾಗ್ರಾಹಕನ ಹಿಂದೆ ಹೊರಟೇಬಿಟ್ಟರು.‘ಹತ್ತು ನಿಮಿಷದಲ್ಲಿ ಫೋಟೊ ತೆಗೆದು ಪ್ರಿಂಟ್ ಕೊಟ್ಟುಬಿಡ್ತೀನಿ’ ಎಂದು ಆತ ಭರವಸೆ ನೀಡಿದ್ದ. ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಹತ್ತಿಪ್ಪತ್ತು ಚಿತ್ರಗಳನ್ನು ತೆಗೆದ. ಆಮೇಲೆ ಪ್ರಿಂಟ್ ಹಾಕಿಸಿಕೊಂಡು ಬರುತ್ತೇನೆಂದು ಕಣ್ಮರೆಯಾದ.ಅತ್ತ ಪ್ರವಾಸದ ಮುಂದಿನ ಕಾರ್ಯಕ್ರಮಕ್ಕೆ ಹೊರಡಲಾಗದೆ ಎಲ್ಲರೂ ಕಾಯುವಂತಾಯಿತು. ಛಾಯಾಗ್ರಾಹಕನ ಹಿಂದೆ ಹೋದ ಸಹಪ್ರವಾಸಿಗನೂ ಪತ್ತೆಯಿಲ್ಲ. ಕಾಯುತ್ತಿದ್ದವರ ಗೊಣಗಾಟ ಶುರುವಾಯಿತು.‘ಹಿಂಗಂದಿದ್ರೆ ನಾವೂ ತೆಗೆಸಿಕೊಳ್ಳಬಹುದಿತ್ತಲ್ಲಾ!’ಅಂತೂ ಅರ್ಧ ಗಂಟೆಯ ನಂತರ ಛಾಯಾಗ್ರಾಹಕ ಬಂದ. ಎರಡು ಫೋಟೊಗಳ ಪ್ರಿಂಟ್ ಸಾಕೆಂದು ಹೇಳಿದ್ದರೂ ಹತ್ತು ಪ್ರಿಂಟ್ ಹಾಕಿದ್ದ. ‘ನಿಮಗೋಸ್ಕರ ಮಾಡಿಸಿದ್ದು, ತೆಗೆದುಕೊಳ್ಳಲೇಬೇಕು’ ಎಂದು ಒತ್ತಾಯಿಸಿ ಒಂದೂವರೆ ಸಾವಿರ ರೂಪಾಯಿ ವಸೂಲಿ ಮಾಡಿದ.ಕೆಲವರು ಕುದುರೆ ಸವಾರಿಗೆ ಹೊರಟರು. ಒಂದು ಸುತ್ತಿಗೆ ಇಂತಿಷ್ಟು ಎಂದು ಮಾತನಾಡಿಕೊಂಡು ಕುದುರೆಯ ಮೇಲೆ ಕುಳಿತರೆ, ಸುಮಾರು ಇನ್ನೂರು ಮೀಟರ್ ಕರೆದೊಯ್ದು ಮರಳಿ ಕರೆತಂದು ಇಳಿಯಲು ಹೇಳಿದರು. ಅದೇ ಒಂದು ಸುತ್ತು! ಕುದುರೆಯ ಮೇಲೆ ಕುಳಿತು ಫೋಟೊ ತೆಗೆಸಿಕೊಳ್ಳುವುದಕ್ಕೂ ಪ್ರತ್ಯೇಕ ಹಣ ಕೊಡಬೇಕಾಯಿತು.ಹೀಗೆ ನಕ್ಕಿ ಸರೋವರದ ಬಳಿ ಸಿಕ್ಕಿದ್ದು ಸುಂದರ ದೃಶ್ಯಗಳಷ್ಟೇ ಅಲ್ಲ. ಪ್ರವಾಸದ ಸಿಹಿ ನೆನಪುಗಳ ಜೊತೆಗೆ ಸ್ವಲ್ಪ ಕಹಿ ಅನುಭವಗಳೂ ನಮ್ಮ ನೆನಪಿನ ಬುತ್ತಿಗೆ ಸೇರಿದವು.ಸರೋವರದ ಸಮೀಪವೇ ಟಾಡ್ ರಾಕ್ ಎಂಬ ಬೃಹತ್ ಬಂಡೆಯಿದೆ. ದೂರದಿಂದ ನೋಡಿದಾಗ ಕಪ್ಪೆಯೊಂದು ಸರೋವರಕ್ಕೆ ಜಿಗಿಯಲು ಸಿದ್ಧವಾದಂತೆ ಕಾಣುತ್ತದೆ. ಬ್ರಿಟಿಷ್ ಅಧಿಕಾರಿ ಕರ್ನಲ್ ಟಾಡ್ ಅವರ ಹೆಸರನ್ನು ಈ ಬಂಡೆಗೆ ಇಡಲಾಗಿದೆ ಎನ್ನಲಾಗುತ್ತದೆ. ಸರೋವರದ ದಕ್ಷಿಣ ಭಾಗದಿಂದ ಸುಮಾರು ಇನ್ನೂರು ಮೆಟ್ಟಿಲುಗಳನ್ನು ಹತ್ತಿ ಬಂಡೆಯ ಬುಡವನ್ನು ತಲುಪಬಹುದು. ಸಮಯದ ಅಭಾವದಿಂದ ದೂರದಿಂದಲೇ ಬಂಡೆಯನ್ನು ವೀಕ್ಷಿಸಿ ಮುಂದಕ್ಕೆ ಸಾಗಿದೆವು.ಗುರು ಶಿಖರದ ಮೆಟ್ಟಿಲುಗಳುನಕ್ಕಿ ಸರೋವರದ ಅನುಭವಗಳನ್ನು ಮೆಲುಕು ಹಾಕುತ್ತಾ ಗುರು ಶಿಖರದತ್ತ ಹೊರಟೆವು. ದಿಲ್ವಾರಾ–ಅಚಲಗಢ ರಸ್ತೆಯಲ್ಲಿ ಸುಮಾರು ಹದಿನೈದು ಕಿಲೋಮೀಟರ್ ಸಾಗಿದರೆ ಗುರು ಶಿಖರ ತಲುಪಬಹುದು. ದಾರಿಯುದ್ದಕ್ಕೂ ಅರಾವಳಿ ಪರ್ವತಗಳ ಹಸಿರು ನೋಟ ಕಣ್ಣಿಗೆ ಹಬ್ಬ.ಗುರು ಶಿಖರದ ಬುಡಕ್ಕೆ ತಲುಪಿ ಮೇಲಕ್ಕೆ ನೋಡಿದಾಗ ತಲೆ ಎತ್ತುವುದೇ ಕಷ್ಟವೆನಿಸಿತು. ಮೇಲಕ್ಕೆ ಹೋಗಲು ಸುಮಾರು ಮುನ್ನೂರು ಮೆಟ್ಟಿಲುಗಳನ್ನು ಹತ್ತಬೇಕಿತ್ತು. ಮೆಟ್ಟಿಲುಗಳು ಕಡಿದಾಗಿದ್ದವು. ಸ್ವಲ್ಪ ದೂರ ಹತ್ತಿದರೆ ನಿಂತು ವಿಶ್ರಮಿಸಬೇಕೆನಿಸುತ್ತಿತ್ತು. ಮತ್ತೆ ಮೆಟ್ಟಿಲು ಹತ್ತುವುದು, ಉಸಿರು ಸರಿಪಡಿಸಿಕೊಳ್ಳುವುದು, ಸುತ್ತಲಿನ ಬೆಟ್ಟಗಳತ್ತ ಕಣ್ಣು ಹಾಯಿಸುವುದು–ಹೀಗೆ ಸಾಗಿತು ನಮ್ಮ ಪಯಣ.ಕೊನೆಗೆ ಶಿಖರದ ಮೇಲ್ಭಾಗ ತಲುಪಿದಾಗ ಕೆಳಗಿನಿಂದ ಕಂಡಿದ್ದ ಎತ್ತರದ ಭಯಕ್ಕಿಂತ ಸುತ್ತಲಿನ ದೃಶ್ಯವೇ ಹೆಚ್ಚು ಗಮನ ಸೆಳೆಯಿತು.ಸಮುದ್ರ ಮಟ್ಟದಿಂದ ಸುಮಾರು 1,722 ಮೀಟರ್ ಎತ್ತರದಲ್ಲಿರುವ ಗುರು ಶಿಖರ ಅರಾವಳಿ ಪರ್ವತಶ್ರೇಣಿಯ ಅತ್ಯಂತ ಎತ್ತರದ ಪ್ರದೇಶ. ಮೇಲಿನಿಂದ ಮೌಂಟ್ ಅಬು ಮತ್ತು ಸುತ್ತಲಿನ ಹಸಿರು ಬೆಟ್ಟಗಳ ಸಾಲು ದೂರದವರೆಗೆ ಹರಡಿಕೊಂಡಿರುವುದನ್ನು ಕಾಣಬಹುದು.ಶಿಖರದ ಮೇಲಿರುವ ಗುರು ದತ್ತಾತ್ರೇಯರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ. ಸಮೀಪದಲ್ಲೇ ಮೌಂಟ್ ಅಬು ವೀಕ್ಷಣಾಲಯವೂ ಇದೆ. ಇಲ್ಲಿ ಅತಿಗೆಂಪು ದೂರದರ್ಶಕದ ಮೂಲಕ ಖಗೋಳ ಅಧ್ಯಯನ ನಡೆಸಲಾಗುತ್ತದೆ.ಅಂದು ಸೂರ್ಯಾಸ್ತದ ಸಮಯದಲ್ಲಿ ಕಂಡ ನೋಟವನ್ನು ಕಣ್ತುಂಬಿಕೊಂಡು ವಸತಿಗೆ ಮರಳಿದೆವು. ಬೆಳಿಗ್ಗೆ ನಕ್ಕಿ ಸರೋವರದ ದಂಡೆಯಲ್ಲಿ ಕಳೆದ ಸಮಯ, ಛಾಯಾಗ್ರಾಹಕನಿಗಾಗಿ ಕಾದ ಪ್ರಸಂಗ, ಕುದುರೆ ಸವಾರಿಯ ಅನುಭವ, ಮಧ್ಯಾಹ್ನದ ಮೆಟ್ಟಿಲು ಹತ್ತುವ ಶ್ರಮ ಇವೆಲ್ಲವೂ ಸೇರಿ ದಿನವೊಂದು ನೆನಪಿನಲ್ಲಿ ಉಳಿಯುವಂತಾಯಿತು.ಸುತ್ತಮುತ್ತಲಿನ ತಾಣಗಳುಮೌಂಟ್ ಅಬುವಿನಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದಲ್ಲಿರುವ ದಿಲ್ವಾರಾ ಜೈನ ದೇವಾಲಯಗಳು ಬಿಳಿ ಅಮೃತಶಿಲೆಯ ಸೂಕ್ಷ್ಮ ಕೆತ್ತನೆಗಳಿಗೆ ಹೆಸರುವಾಸಿ. 11ರಿಂದ 12ನೇ ಶತಮಾನದ ಅವಧಿಯಲ್ಲಿ ನಿರ್ಮಿಸಲಾದ ದೇವಾಲಯಗಳ ಗೋಡೆ, ಕಂಬ ಮತ್ತು ಮೇಲ್ಛಾವಣಿಗಳಲ್ಲಿ ಮೂಡಿಸಿರುವ ಕುಸುರಿ ಕೆಲಸ ವಾಸ್ತುಶಿಲ್ಪದ ನೈಪುಣ್ಯಕ್ಕೆ ಸಾಕ್ಷಿಯಾಗಿದೆ.ಅಚಲಗಢ ಕೋಟೆ ಇತಿಹಾಸ ಆಸಕ್ತರನ್ನು ಸೆಳೆಯುತ್ತದೆ. ಬೆಟ್ಟದ ಮೇಲಿರುವ ಅರ್ಬುದಾದೇವಿ ಮಂದಿರ ಮತ್ತು ಸೋಮನಾಥ ದೇವಾಲಯಗಳಿಗೂ ಭೇಟಿ ನೀಡಬಹುದು. ಕೆಲವು ಸ್ಥಳಗಳಲ್ಲಿ ಕಡಿದಾದ ಮೆಟ್ಟಿಲುಗಳನ್ನು ಹತ್ತಿಳಿಯಬೇಕಾಗುತ್ತದೆ. ಮೌಂಟ್ ಅಬುವಿನಲ್ಲಿ ಬ್ರಹ್ಮಕುಮಾರಿ ಈಶ್ವರೀಯ ಮಹಾವಿದ್ಯಾಲಯದ ಕೇಂದ್ರ ಕಚೇರಿಯೂ ಇದೆ. ಸಮಯವಿದ್ದರೆ ಇಲ್ಲಿನ ರಕ್ಷಿತಾರಣ್ಯಕ್ಕೆ ಭೇಟಿ ನೀಡಬಹುದು.ಜಿಲ್ಲಾ ಕೇಂದ್ರವಾದ ಸಿರೋಹಿಯಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿದೆ ಮೌಂಟ್ ಅಬು. ಸಮೀಪದ ರೈಲು ನಿಲ್ದಾಣ ಅಬು ರೋಡ್; ಅಲ್ಲಿಂದ ಸುಮಾರು 28 ಕಿಲೋಮೀಟರ್ ಪ್ರಯಾಣಿಸಬೇಕು.ರಾಜಸ್ಥಾನವೆಂದರೆ ಬಿಸಿಲು ಮತ್ತು ಮರಳುಗಾಡು ಮಾತ್ರವಲ್ಲ ಎಂಬುದನ್ನು ಮೌಂಟ್ ಅಬು ತೋರಿಸಿಕೊಡುತ್ತದೆ. ಬೆಟ್ಟಗಳ ಹಸಿರು, ಸರೋವರದ ನೀರು, ಶಿಖರದ ಮೇಲಿನ ವಿಶಾಲ ನೋಟದ ಜೊತೆಗೆ, ಪ್ರವಾಸದ ವೇಳೆಯಲ್ಲಿ ಫೋಟೊಗಳಿಗಾಗಿ ಕಾದ ಕ್ಷಣಗಳೂ, ಕುದುರೆ ಸವಾರಿಯ ಲೆಕ್ಕಾಚಾರವೂ ನೆನಪಿನಲ್ಲಿ ಉಳಿಯುತ್ತವೆ. v261018-51-1909780480