ವಾಸ್ತವ ಮನದಟ್ಟು ಮಾಡಿಸಿ: ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ
ಬೆಂಗಳೂರು: ‘ವಕೀಲರು ದನಿಯಿಲ್ಲದ, ದನಿ ಅಡಗಿಸಲಾದ, ಅಂಚಿಗೆ ತಳ್ಳಲಾದ ಸಮುದಾಯಗಳ ನೋವನ್ನು ಕೇಳಿಸಿ ಕೊಳ್ಳುವ ಕಿವಿಯೂ ಆಗಬೇಕು. ಕಾನೂನು ಕಾಲೇಜುಗಳೂ ಕೇವಲ ಕಾನೂನು ಪಠ್ಯಕ್ರಮಕ್ಕೆ ಸೀಮಿತವಾಗದೆ, ದೇಶದ ವಾಸ್ತವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಸಲಹೆ ನೀಡಿದರು.ಶನಿವಾರ ಇಲ್ಲಿ ನಡೆದ

ಬೆಂಗಳೂರು: ‘ವಕೀಲರು ದನಿಯಿಲ್ಲದ, ದನಿ ಅಡಗಿಸಲಾದ, ಅಂಚಿಗೆ ತಳ್ಳಲಾದ ಸಮುದಾಯಗಳ ನೋವನ್ನು ಕೇಳಿಸಿ ಕೊಳ್ಳುವ ಕಿವಿಯೂ ಆಗಬೇಕು. ಕಾನೂನು ಕಾಲೇಜುಗಳೂ ಕೇವಲ ಕಾನೂನು ಪಠ್ಯಕ್ರಮಕ್ಕೆ ಸೀಮಿತವಾಗದೆ, ದೇಶದ ವಾಸ್ತವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಬೇಕು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಸಲಹೆ ನೀಡಿದರು.ಶನಿವಾರ ಇಲ್ಲಿ ನಡೆದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.‘ವಕೀಲ ವೃತ್ತಿಗೆ ಬರುವವರಿಗೆ ಕಾನೂನಿನ ಜ್ಞಾನವಷ್ಟೇ ಸಾಲದು. ನ್ಯಾಯಕ್ಕಾಗಿ ಧೃತಿಗೆಡದೆ ನಿಲ್ಲುವ ಧೈರ್ಯವೂ ಇರಬೇಕು. ಪದವಿ ಪಡೆದಾಕ್ಷಣ ಕಾನೂನಿನ ಅಧ್ಯಯನ ಮುಗಿಯುವುದಿಲ್ಲ. ವಕೀಲ ವೃತ್ತಿ ಮತ್ತು ನ್ಯಾಯಾಧೀಶರಾದವರು ಸದಾ ಕಾನೂನಿನ ವಿದ್ಯಾರ್ಥಿಗಳಾಗಿರಬೇಕು’ ಎಂದರು.‘ಪ್ರಾಮಾಣಿಕತೆಯೇ ವಕೀಲರ ಪ್ರಬಲ ಅಸ್ತ್ರ. ವಕೀಲಿಕೆ ಮತ್ತು ನ್ಯಾಯದಾನದ ವೃತ್ತಿಯಲ್ಲಿ ಪ್ರಾಮಾಣಿಕತೆಯಿಂದ ದೂರಕ್ಕೆಳೆಯುವ ಹತ್ತಾರು ಆಮಿಷಗಳು ಎದುರಾಗುತ್ತವೆ. ಅವುಗಳನ್ನು ಮೀರಿ ಮುನ್ನಡೆಯುವ ದೃಢಸಂಕಲ್ಪ ಇರಬೇಕು’ ಎಂದರು.‘ನ್ಯಾಯಕ್ಕಾಗಿನ ವಾದ ಮತ್ತು ನ್ಯಾಯ ದಾನವು ಕಾನೂನಿನ ಜ್ಞಾನದಿಂದಷ್ಟೇ ಬರುವುದಿಲ್ಲ. ಬದಲಿಗೆ ಕಾನೂನು ವಿದ್ಯಾರ್ಥಿಗಳಿಗೆ ಬೌದ್ಧಿಕ ಸ್ವಾತಂತ್ರ್ಯವಿರ ಬೇಕು. ಇತರರ ಅಭಿಪ್ರಾಯವನ್ನು ಗೌರವ ಯುತವಾಗಿಯೇ ನಿರಾಕರಿಸುವುದನ್ನೂ ರೂಢಿಸಿಕೊಳ್ಳಬೇಕು’ ಎಂದರು.ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ರಂಗಕರ್ಮಿ ಅರುಂಧತಿ ನಾಗ್, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಸುಧೀರ್ ಕೃಷ್ಣಸ್ವಾಮಿ ಘಟಿಕೋತ್ಸವದಲ್ಲಿ ಉಪಸ್ಥಿತರಿದ್ದರು.‘ಪ್ರತಿಭಟನೆಗೆ ಯತ್ನ’: ಸೂರ್ಯ ಕಾಂತ್ ಅವರು ಘಟಿಕೋತ್ಸವಕ್ಕೆ ಬರುವುದನ್ನು ವಿರೋಧಿಸಿ ವಿದ್ಯಾರ್ಥಿಗಳ ಗುಂಪೊಂದು ಜ್ಞಾನಜ್ಯೋತಿ ಸಭಾಂಗಣದ ಹಿಂಭಾಗ ದಲ್ಲಿ ಪ್ರತಿಭಟನೆಗೆ ಮುಂದಾಯಿತು. ಸ್ಥಳದಲ್ಲಿದ್ದ ಪೊಲೀಸರು, ವಿದ್ಯಾರ್ಥಿ ಗಳನ್ನು ತಡೆದರು.ಈ ಹಿಂದೆ ಸೆ.12ಕ್ಕೆ ಘಟಿಕೋತ್ಸವ ನಿಗದಿಯಾಗಿತ್ತು. ಸಿಜೆಐ ಸೂರ್ಯಕಾಂತ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಹೈದರಾಬಾದ್ನ ನಲ್ಸಾರ್ ವಿಶ್ವವಿದ್ಯಾಲಯದ ಪದವೀಧರರಿಗೆ ನೋಂದಣಿ ನೀಡದಂತೆ ಬಿಸಿಐ ಆದೇಶ ನೀಡಿದ್ದ ಕಾರಣಕ್ಕೆ ಮಿಶ್ರಾ ಮತ್ತು ಇಂತಹ ಕ್ರಮದ ವಿರುದ್ಧ ದನಿಯೆತ್ತದೇ ಇರುವುದಕ್ಕೆ ಸಿಜೆಐ ವಿರುದ್ಧ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಘಟಿಕೋತ್ಸವವನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ವಿ.ವಿ ಘಟಿಕೋತ್ಸವವನ್ನು ಅ.17ಕ್ಕೆ ಮುಂದೂಡಿತ್ತು. ಮುಖ್ಯ ಅತಿಥಿ ಪಟ್ಟಿಯಿಂದ ಮಿಶ್ರಾ ಅವರನ್ನು ಕೈಬಿಟ್ಟಿತ್ತು.ಹ್ಞೂಂ ಗುಡುವುದಲ್ಲ, ಪ್ರಶ್ನಿಸುವುದು ಪ್ರಜಾಪ್ರಭುತ್ವ: ಮುಖ್ಯಮಂತ್ರಿ‘ಸರ್ಕಾರ ಹೇಳಿದ್ದಕ್ಕೆಲ್ಲಾ ಹ್ಞೂಂಗುಡುವುದೇ ಪ್ರಜಾಪ್ರಭುತ್ವವಲ್ಲ. ಸರ್ಕಾರವನ್ನು ಹೆಜ್ಜೆಹೆಜ್ಜೆಗೂ ಪ್ರಶ್ನಿಸಲು ಅವಕಾಶವಿದ್ದರಷ್ಟೇ ಅದು ಪ್ರಜಾಪ್ರಭುತ್ವ ಎನಿಸಿಕೊಳ್ಳುತ್ತದೆ’ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.‘ಭಾರತವೂ ಸೇರಿ ವಿಶ್ವದ ಬಹುತೇಕ ಪ್ರಜಾಪ್ರಭುತ್ವಗಳು ಸವಾಲುಗಳನ್ನು ಎದುರಿಸುತ್ತಿವೆ. ಭಾರತದಲ್ಲಿ ಸಂವಿಧಾನ ಮತ್ತು ಆ ಮೂಲಕ ಪ್ರಜಾಪ್ರಭುತ್ವವನ್ನು ರಕ್ಷಿಸುವ ಗುರುತರ ಹೊಣೆಗಾರಿಕೆ ವಕೀಲರ ಮೇಲಿದೆ. ಭಾರತಕ್ಕೆ ಕೇವಲ ಹೆಚ್ಚಿನ ಸಂಖ್ಯೆಯ ವಕೀಲರ ಅಗತ್ಯವಿಲ್ಲ. ಪ್ರಾಮಾಣಿಕತೆ, ಕರುಣೆ ಮತ್ತು ಧೈರ್ಯವಿರುವ ವಕೀಲರ ಅಗತ್ಯವಿದೆ’ ಎಂದರು.‘ತರಬೇತಿ ಸಂಸ್ಥೆ ಸ್ಥಾಪನೆ’: ‘ನ್ಯಾಯಾಂಗ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಕಾನೂನು ಪದವೀಧರರಿಗೆ ತರಬೇತಿ ನೀಡಲು ಪ್ರತ್ಯೇಕ ಸಂಸ್ಥೆಯೊಂದನ್ನು ಸ್ಥಾಪಿಸುವ ಚಿಂತನೆ ರಾಜ್ಯ ಸರ್ಕಾರಕ್ಕೆ ಇದೆ’ ಎಂದು ಶಿವಕುಮಾರ್ ಹೇಳಿದರು.‘ಉಚಿತ ಕಾನೂನು ಸಲಹೆ ನೀಡಲು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವು ‘ಸ್ಟಾರ್ಟ್–ಅಪ್ ಲಾ ಕ್ಲಿನಿಕ್’ ಸ್ಥಾಪನೆಗೆ ಮುಂದಾಗಿದೆ. ರಾಜ್ಯ ಸರ್ಕಾರವೂ ಇದಕ್ಕೆ ಅಗತ್ಯ ಸಹಕಾರ ನೀಡಲಿದೆ’ ಎಂದು ತಿಳಿಸಿದರು.ಮನಹರ್ ಬನ್ಸಲ್ಗೆ 15 ಚಿನ್ನದ ಪದಕಕಾನೂನು ವಿಶ್ವವಿದ್ಯಾಲಯದ ಐದು ವರ್ಷಗಳ ಬಿ.ಎ ಎಲ್ಎಲ್ಬಿ ಪದವೀಧರ ಮನಹರ್ ಬನ್ಸಲ್ ಅವರಿಗೆ ಘಟಿಕೋತ್ಸವದಲ್ಲಿ 15 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಪಂಜಾಬ್ನ ಮುಖತ್ಸಾರ್ನವರಾದ ಮನಹರ್ ಅತ್ಯುತ್ತಮ ವಿದ್ಯಾರ್ಥಿ ಗೌರವ ಮತ್ತು ಮೊದಲ ರ್ಯಾಂಕ್ ಅನ್ನು ಸಹ ಪ್ರದಾನ ಮಾಡಲಾಯಿತು.ಘಟಿಕೋತ್ಸವದಲ್ಲಿ 24 ವಿದ್ಯಾರ್ಥಿಗಳಿಗೆ ಒಟ್ಟು 50 ಚಿನ್ನದ ಪದಕ, 1,720 ವಿದ್ಯಾರ್ಥಿಗಳಿಗೆ ಎಲ್ಎಲ್ಬಿ ಪದವಿ, ಆರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ, 100 ವಿದ್ಯಾರ್ಥಿಗಳಿಗೆ ಎಲ್ಎಲ್ಎಂ ಪದವಿ, 72 ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಎಲ್ಎಲ್ಬಿ ಹಾನರ್ಸ್ ಪದವಿಗಳನ್ನು ಪ್ರದಾನ ಮಾಡಲಾಯಿತು. ಆನ್ಲೈನ್ ಮತ್ತು ಹೈಬ್ರಿಡ್ ಮಾದರಿಯಲ್ಲಿ ಕಾನೂನು ಪದವಿ ಕೋರ್ಸ್ಗಳನ್ನು ಪೂರ್ಣಗೊಳಿಸಿದ 1,390 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಂಗಕರ್ಮಿ ಅರುಂಧತಿ ನಾಗ್ ಚಿನ್ನದ ಪದಕ ಮತ್ತು ಪದವಿಗಳನ್ನು ಪ್ರದಾನ ಮಾಡಿದರು.261018-4-991719097