ಹೊಸಪೇಟೆ: ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ನ.10ರಂದು ಸಭೆ: ಉಪವಾಸ ಸತ್ಯಾಗ್ರಹ ಅಂತ್ಯ
ಹೊಸಪೇಟೆ (ವಿಜಯನಗರ): ಹೊಸಪೇಟೆ ಸಮೀಪ ಸಕ್ಕರೆ ಕಾರ್ಖಾನೆ ಆಗಿಯೇ ಆಗುತ್ತದೆ, ಅದರ ಬಗ್ಗೆ ಚರ್ಚಿಸಲು ನವೆಂಬರ್ 10ರಂದು ಸಭೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕುರಿತಂತೆ ಸಿಹಿ ಸುದ್ದಿ ನೀಡಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ನೀಡಿದ ಭರವಸೆ ಮೇರೆಗೆ ರೈತರು ಇಲ್ಲಿ ಗುರುವಾರ ಆರಂಭಿಸಿದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು.

ಹೊಸಪೇಟೆ (ವಿಜಯನಗರ): ಹೊಸಪೇಟೆ ಸಮೀಪ ಸಕ್ಕರೆ ಕಾರ್ಖಾನೆ ಆಗಿಯೇ ಆಗುತ್ತದೆ, ಅದರ ಬಗ್ಗೆ ಚರ್ಚಿಸಲು ನವೆಂಬರ್ 10ರಂದು ಸಭೆ ನಡೆಸಲಾಗುವುದು. ಎಲ್ಲರ ಅಭಿಪ್ರಾಯ ಪಡೆದು ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕುರಿತಂತೆ ಸಿಹಿ ಸುದ್ದಿ ನೀಡಲಾಗುವುದು ಎಂದು ಶಾಸಕ ಎಚ್.ಆರ್.ಗವಿಯಪ್ಪ ನೀಡಿದ ಭರವಸೆ ಮೇರೆಗೆ ರೈತರು ಇಲ್ಲಿ ಗುರುವಾರ ಆರಂಭಿಸಿದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿತು.ಶಾಸಕರ ಮನೆಯ ಮುಂಭಾಗದಲ್ಲೇ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆರಂಭದಲ್ಲೇ ಸ್ಥಳದಲ್ಲಿದ್ದ ಶಾಸಕ ಗವಿಯಪ್ಪ ಅವರು ಹತ್ತಾರು ರೈತ ಮುಖಂಡರು, ಕಾರ್ಮಿಕ ಮುಖಂಡರ ಅಹವಾಲು ಆಲಿಸಿದ ಬಳಿಕ ಈ ಭರವಸೆ ನೀಡಿದರು.‘ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ನಾನು ಯಾವ ಭರವಸೆಯನ್ನೂ ಈಗ ನೀಡಲಾಗದು. ಜತಗೆ ದಸರಾ, ದೀಪಾವಳಿ ಹಬ್ಬಗಳಿವೆ. ದೀಪಾವಳಿ ಮುಗಿದ ಬಳಿಕ ಈ ಸಭೆ ನಡೆಸಲಾಗುತ್ತದೆ. ಏನಿದ್ದರೂ ಸಕ್ಕರೆ ಕಾರ್ಖಾನೆ ಈ ಭಾಗಕ್ಕೆ ಬೇಕೇ ಬೇಕು ಎಂದು ನಾನು ಸಹ ಹೇಳುತ್ತಿದ್ದೇನೆ. ಮುಂದಿನ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಂದು ಉತ್ತಮ ನಿರ್ಧಾರಕ್ಕೆ ಬರಲಾಗುವುದು’ ಎಂದು ಶಾಸಕರು ಹೇಳಿದರು.‘ಸಕ್ಕರೆ ಫ್ಯಾಕ್ಟರಿ ಆಗಿಯೇ ಆಗುತ್ತದೆ, ರೈತರ ಚಿಂತೆ ಬಿಡಿ’ ಎಂದು ಹೇಳಿದ ಗವಿಯಪ್ಪ, ‘ಕಾರ್ಖಾನೆ ಸ್ಥಾಪನೆ, ಸ್ಥಳ ನಿಗದಿ ಸಹಿತ ಹಲವು ವಿಚಾರಗಳನ್ನು ಉದ್ದೇಶಿತ ಸಭೆಯಲ್ಲಿ ನಿರ್ಧರಿಸಲಾಗುವುದು. ರೈತರು ಸ್ವಲ್ಪ ತಾಳ್ಮೆಯಿಂದ ಇರಬೇಕು’ ಎಂದರು.ಶಾಸಕರ ಮತ್ತೊಂದು ಭರವಸೆಯ ಮಾತಿಗೆ ಒಪ್ಪಿದ ಪ್ರತಿಭಟನಕಾರರರು, ಸ್ವತಃ ಶಾಸಕರ ಕೈಯಿಂದಲೇ ಎಳನೀರು ಪಡೆದು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದರು.ಎಚ್ಚರಿಕೆ: ‘ಶಾಸಕರು ಈ ಮೊದಲು ಸಹ ಹಲವಾರು ಬಾರಿ ಭರವಸೆ ಕೊಟ್ಟಿದ್ದರೂ ಅದು ಈಡೇರಲೇ ಇಲ್ಲ. ಇದು ಮತ್ತೊಂದು ಪೊಳ್ಳು ಭರವಸೆಯಾಗಬಾರದು. ನವೆಂಬರ್ 10ರ ಸಭೆಯಲ್ಲಿ ಯಾವುದೇ ಸ್ಪಷ್ಟ ಭರವಸೆ ಸಿಗದಿದ್ದರೆ ಮತ್ತೆ ಬೀದಿಗಿಳಿದು ಉಗ್ರ ಹೋರಾಟ ನಿಶ್ಚಿತ ಎಂದು ಎಂ.ಜಂಬಯ್ಯ ನಾಯಕ ಸಹಿತ ಇತರ ಹಲವು ಪ್ರತಿಭಟನಕಾರರು ಎಚ್ಚರಿಸಿದರು. ಇಂದಿನ ಪ್ರತಿಭಟನೆಯಲ್ಲಿ ಹಲವು ರೈತ ಸಂಘಗಳು, ಕಾರ್ಮಿಕ ಸಂಘಟನೆಗಳು ಸಹಿತ 51 ಸಂಘಟನೆಗಳು ಪಾಲ್ಗೊಂಡಿದ್ದವು.