ಪೊಲೀಸ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನೇಹಾ ಬೋರಾ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿಚಾರಣಾ ಅವಧಿಯಲ್ಲಿ ಶಾಂತಿ ಕಾಪಾಡುವಂತೆ 10,000 ರೂ. ವೈಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ನೀಡುವಂತೆ ದೆಹಲಿ ಪೊಲೀಸರು ಜಾರಿ ಮಾಡಿರುವ ನೋಟಿಸ್ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ಅಧ್ಯಕ್ಷೆ ನೇಹಾ ಬೋರಾ(Neh

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ವಿಚಾರಣಾ ಅವಧಿಯಲ್ಲಿ ಶಾಂತಿ ಕಾಪಾಡುವಂತೆ 10,000 ರೂ. ವೈಯಕ್ತಿಕ ಬಾಂಡ್ ಹಾಗೂ ಶ್ಯೂರಿಟಿ ನೀಡುವಂತೆ ದೆಹಲಿ ಪೊಲೀಸರು ಜಾರಿ ಮಾಡಿರುವ ನೋಟಿಸ್ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ (AISA) ಅಧ್ಯಕ್ಷೆ ನೇಹಾ ಬೋರಾ(Neha Bora) ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಕ್ಟೋಬರ್ 16 ರಂದು ದೆಹಲಿಯ ಮಂಡಿ ಹೌಸ್ ಬಳಿ ನಡೆದ ಧ್ವಜ ಮೆರವಣಿಗೆಯ ವೇಳೆ ನೇಹಾ ಬೋರಾ ಅವರನ್ನು ಪೊಲೀಸರು (Delhi Police) ವಶಕ್ಕೆ ಪಡೆದಿದ್ದರು. ಮರುದಿನ, ಅಕ್ಟೋಬರ್ 17 ರಂದು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (SEM) ಆಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಈ ನೋಟಿಸ್ ನೀಡಿದ್ದು, ಖುದ್ದಾಗಿ ಹಾಜರಾಗಿ ಬಾಂಡ್ ಸಲ್ಲಿಸುವಂತೆ ನಿರ್ದೇಶಿಸಿದ್ದರು. ವಕೀಲ ಅಭೀಕ್ ಚಿಮ್ನಿ ಮೂಲಕ ಅರ್ಜಿ ಸಲ್ಲಿಸಿರುವ ನೇಹಾ ಬೋರಾ, ಪೊಲೀಸರ ನೋಟಿಸ್ ವಾಸ್ತವಕ್ಕೆ ದೂರವಾಗಿದೆ ಎಂದು ವಾದಿಸಿದ್ದಾರೆ. ಇದು ಸಂವಿಧಾನದ ಪರಿಚ್ಛೇದ 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಹಾಗೂ ಪರಿಚ್ಛೇದ 21 (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ. ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲು ಪೊಲೀಸರ ಬಳಿ ಯಾವುದೇ ಸೂಕ್ತ ಆಧಾರಗಳಿಲ್ಲ ಮತ್ತು ಯಾವ ನಿರ್ದಿಷ್ಟ ಸಂದರ್ಭದಲ್ಲಿ ಶಾಂತಿ ಕದಡಬಹುದು ಎಂಬುದನ್ನೂ ನೋಟಿಸ್ನಲ್ಲಿ ಸ್ಪಷ್ಟಪಡಿಸಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಡುಗಡೆ ಇಲ್ಲ – ಇನ್ನೂ 2 ದಿನ ರಾಂಕಾ, ದಾಸ್ಗೆ ತಿಹಾರ್ ಜೈಲೇ ಗತಿ ನೋಟಿಸ್ನಲ್ಲಿ ಏನಿದೆ? ಪೊಲೀಸರು ಮೂರು ಪ್ರಮುಖ ಕಾರಣಗಳನ್ನು ಉಲ್ಲೇಖಿಸಿ ನೋಟಿಸ್ ನೀಡಿದ್ದಾರೆ. ಅಕ್ಟೋಬರ್ 16 ರಂದು ಮಂಡಿ ಹೌಸ್ನಲ್ಲಿ(Mandi House) ಘೋಷಣೆಗಳನ್ನು ಕೂಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಇದ್ದರೂ ಜಂತರ್ ಮಂತರ್ ಬಳಿ ಪದೇ ಪದೇ ಪ್ರತಿಭಟನೆ ನಡೆಸಿರುವುದು, ಅಂದೇ ಕನ್ನಾಟ್ ಪ್ಲೇಸ್ನಲ್ಲಿ ಪ್ರತಿಭಟನೆ ನಡೆಸಲು ಸಾರ್ವಜನಿಕರನ್ನು ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದೇನೆ ಎಂಬ ಆರೋಪ ಸಂಪೂರ್ಣ ಸುಳ್ಳು ಎಂದು ಬೋರಾ ತಳ್ಳಿಹಾಕಿದ್ದಾರೆ. ಮಂಡಿ ಹೌಸ್ ಬಳಿ ಶಾಂತಿಯುತ ಸಭೆಗೆ ಕರೆ ನೀಡಲಾಗಿತ್ತು, ಅಲ್ಲಿಂದಲೇ ತಮ್ಮನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ದೆಹಲಿ ಹೈಕೋರ್ಟ್ಗೆ ಅಕ್ಟೋಬರ್ 25 ರವರೆಗೆ ರಜೆ ಇದ್ದರೂ, ತುರ್ತು ವಿಚಾರಣೆ ನಡೆಸುವಂತೆ ಅವರ ಪರ ವಕೀಲರ ತಂಡ ಕೋರಲು ನಿರ್ಧರಿಸಿದೆ.