45 ನಿಮಿಷ ಕಾದು ಕುಳಿತಿದ್ದ ಶೂಟರ್ಸ್ – ಪಿಸ್ತೂಲ್ ಜಾಮ್ ಆಗಿದ್ದರಿಂದ ಬದುಕುಳಿದ್ರಾ ನಟ ಟೈಗರ್ ಶ್ರಾಫ್?
– ಟೈಗರ್ ದಿನಚರಿ ಮೊದಲೇ ಗೊತ್ತಿತ್ತಾ? – ಗುರಿ ತಪ್ಪಿದ 2 ಗುಂಡು ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ಗುಂಡಿನ ದಾಳಿ (Firing) ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿವೆ. ಹೌದು. ಶೂಟೌಟ್ ನಡೆಸುವ ಮೊದಲು ಮೂವರು ದುಷ್ಕರ್ಮಿಗಳು ಮುಂಬೈನ ಜುಹು ಪ್ರದೇಶದ ಪಾರ್ಕ್ (Mumbai Juhu Park

– ಟೈಗರ್ ದಿನಚರಿ ಮೊದಲೇ ಗೊತ್ತಿತ್ತಾ? – ಗುರಿ ತಪ್ಪಿದ 2 ಗುಂಡು ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಅವರ ಕಾರಿನ ಮೇಲೆ ಗುಂಡಿನ ದಾಳಿ (Firing) ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿವೆ. ಹೌದು. ಶೂಟೌಟ್ ನಡೆಸುವ ಮೊದಲು ಮೂವರು ದುಷ್ಕರ್ಮಿಗಳು ಮುಂಬೈನ ಜುಹು ಪ್ರದೇಶದ ಪಾರ್ಕ್ (Mumbai Juhu Park) ಬಳಿ ಸುಮಾರು 45 ನಿಮಿಷಗಳ ಕಾಲ ಕಾದು ಕುಳಿತಿದ್ದರು. ಇದಲ್ಲದೇ, ಹತ್ತಿರಕ್ಕೆ ಬಂದು ಗುಂಡು ಹಾರಿಸಲು ಯತ್ನಿಸಿದಾಗ ಪಿಸ್ತೂಲ್ ಜಾಮ್ ಆಗಿದ್ದು, ಟೈಗರ್ ಶ್ರಾಫ್ ಅವರು ಬದುಕುಳಿಯಲು ಕಾರಣವಾಗಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗುರಿತಪ್ಪಿದ 2 ಗುಂಡುಗಳು ದಾಳಿಯ ವೇಳೆ ಒಟ್ಟು 7 ಸುತ್ತು ಗುಂಡು ಹಾರಿಸಲಾಗಿದೆ. ಅವುಗಳಲ್ಲಿ 5 ಗುಂಡುಗಳು ಕಾರಿಗೆ ತಗುಲಿವೆ. ಉಳಿದ ಎರಡು ಗುಂಡುಗಳು ಗುರಿ ತಪ್ಪಿವೆ. ಮೊದಲಿಗೆ ಗುಂಡು ಹಾರಿಸಿದ ಬಳಿಕ ದುಷ್ಕರ್ಮಿಗಳಲ್ಲಿ ಒಬ್ಬ ಕಾರಿನ ಪ್ರಯಾಣಿಕರ ಬದಿಯ ಕಿಟಕಿಯ ಬಳಿ ಬಂದು ಟೈಗರ್ ಶ್ರಾಫ್ ಅವರನ್ನು ಹತ್ತಿರದಿಂದ ಗುರಿಯಾಗಿಸಲು ಯತ್ನಿಸಿದ್ದಾನೆ. ಆದರೆ, ಆತನ ಬಳಿ ಇದ್ದ ದೇಶೀ ನಿರ್ಮಿತ ಪಿಸ್ತೂಲ್ ಜಾಮ್ ಆಗಿದೆ, ಆದ್ದರಿಂದ ಟೈಗರ್ ಶ್ರಾಫ್ ಅವರ ಮೇಲೆ ಗುಂಡು ಹಾರಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಆರೋಪಿ ಎರಡು ಬಾರಿ ಗುಂಡು ಹಾರಿಸಲು ಪ್ರಯತ್ನಿಸಿದರೂ ಪಿಸ್ತೂಲ್ನಲ್ಲಿ ಉಂಟಾದ ದೋಷದಿಂದ ಸಾಧ್ಯವಾಗಲಿಲ್ಲ. ಘಟನೆಯ ವಿಡಿಯೋದಲ್ಲೂ ಕಾರಿನ ಕಿಟಕಿಯ ಸಮೀಪದಲ್ಲಿದ್ದ ವ್ಯಕ್ತಿ ಪಿಸ್ತೂಲ್ನಿಂದ ಗುಂಡು ಹಾರಿಸಲು ಪರದಾಡುತ್ತಿರುವುದು ಕಂಡುಬಂದಿದೆ. ಇದರಿಂದ ಟೈಗರ್ ಶ್ರಾಫ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ, ಅವರ ಕಾರು ಚಾಲಕ ಫಿರ್ದೌಸ್ ಅವರ ಎಡಗೈಗೆ ಗುಂಡು ತಗುಲಿದ್ದು, ಸಮೀಪದಲ್ಲಿದ್ದ ಮತ್ತೊಬ್ಬ ವ್ಯಕ್ತಿಗೂ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 45 ನಿಮಿಷಗಳ ಕಾಲ ಕಾದು ಕುಳಿತಿದ್ದ ದುಷ್ಕರ್ಮಿಗಳು ಟೈಗರ್ ಶ್ರಾಫ್ ಅವರ ಭಾನುವಾರದ ದಿನಚರಿಯನ್ನ ತಿಳಿದುಕೊಂಡೇ ದುಷ್ಕರ್ಮಿಗಳು ದಾಳಿ ನಡೆಸಿರುವ ಸಾಧ್ಯತೆಯನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ನಟ ಪ್ರತಿ ಭಾನುವಾರ ಜುಹುವಿನ ಪುಷ್ಪಾ ನರ್ಸಿ ಪಾರ್ಕ್ಗೆ ತೆರಳಿ ಸುಮಾರು 2 ಗಂಟೆಗಳ ಕಾಲ ಫುಟ್ಬಾಲ್ ಆಡುತ್ತಿದ್ದರು.. ಈ ಹಿನ್ನೆಲೆ ದುಷ್ಕರ್ಮಿಗಳು ಅವರ ಚಲನವಲನಗಳನ್ನ ಮೊದಲೇ ಗಮನಿಸಿ, ಪಾರ್ಕ್ ಹೊರಗೆ ಕಾಯುತ್ತಿದ್ದಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಭಾನುವಾರ ಸಂಜೆ ಸುಮಾರು 7 ಗಂಟೆಗೆ, ಟೈಗರ್ ಶ್ರಾಫ್ ಫುಟ್ಬಾಲ್ ಆಟ ಮುಗಿಸಿ ಸ್ಥಳದಿಂದ ಹೊರಡುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ದಾಳಿ ನಡೆಸುವ ಮೊದಲು ಆರೋಪಿಗಳು ಸುಮಾರು 45 ನಿಮಿಷಗಳ ಕಾಲ ಕಾದಿದ್ದರು ಎಂದು ಪ್ರಾಥಮಿಕ ತನಿಖೆಯ ಮಾಹಿತಿ ತಿಳಿಸಿದೆ. ದಾಳಿಗೂ ಮುನ್ನ ಆರೋಪಿಗಳು ಎಲ್ಲೆಲ್ಲಿ ಸಂಚರಿಸಿದ್ದರು, ನಟನ ದಿನಚರಿಯನ್ನು ಅವರು ಹಿಂಬಾಲಿಸಿದ್ದರೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ದಾಳಿಯ ಬಳಿಕ ಆರೋಪಿಗಳು ಬೈಕ್ನಲ್ಲಿ ಎಸ್ವಿ ರಸ್ತೆಯ ಕಡೆಗೆ ತೆರಳಿದ್ದಾರೆ. ಬಳಿಕ ಅಂಧೇರಿ ಪಶ್ಚಿಮ ರೈಲು ನಿಲ್ದಾಣದ ಸಮೀಪ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಆರೋಪಿಗಳ ಚಲನವಲನ ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಹತ್ತಿರದ ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದಾರೆ. ಆರೋಪಿಗಳನ್ನು ಗುರುತಿಸಿ ಬಂಧಿಸಲು 15 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಈ ದಾಳಿಯ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಂಭಾವ್ಯ ನಂಟಿನ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್ ಮತ್ತು ಆಡಿಯೊ ಸಂದೇಶವೊಂದರಲ್ಲಿ, ಗ್ಯಾಂಗ್ಗೆ ಸಂಬಂಧಿಸಿದವರು ಎಂದು ಹೇಳಿಕೊಂಡ ವ್ಯಕ್ತಿಗಳು ದಾಳಿಯ ಹೊಣೆ ಹೊತ್ತಿದ್ದಾರೆ.