ಸಂಸ್ಕೃತಿಯಲ್ಲಿ ಮಠಗಳ ಪಾತ್ರ ಅಪಾರ: ಅಭಿನವ ಚಾರುಕೀರ್ತಿ ಭಟ್ಟಾರಕಸ್ವಾಮೀಜಿ
ಶ್ರವಣಬೆಳಗೊಳ: ಭಾರತೀಯ ಸಂಸ್ಕೃತಿಯಲ್ಲಿ ಮಠಗಳ ಪಾತ್ರ ಬಹಳ ದೊಡ್ಡದು. ಎಲ್ಲಿ ವಿದ್ಯಾರ್ಥಿಗಳು ಗುರುಗಳ ಸಾನ್ನಿಧ್ಯದಲ್ಲಿ ಎಲ್ಲಾ ರೀತಿಯ ವಿದ್ಯಾಭ್ಯಾಸವ ಮಾಡುತ್ತಾರೋ ಅದನ್ನೇ ಮಠ ಎಂದು ಕರೆಯಲಾಗುತ್ತದೆ. ಮಠ ಧಾರ್ಮಿಕ ಕ್ಷೇತ್ರವಲ್ಲ, ಅದೊಂದು ಧಾರ್ಮಿಕ ಶಿಕ್ಷಣ ಕ್ಷೇತ್ರ ಎಂದು ಇಲ್ಲಿನ ಜೈನ ಮಠದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಪಟ್ಟಣದ

ಶ್ರವಣಬೆಳಗೊಳ: ಭಾರತೀಯ ಸಂಸ್ಕೃತಿಯಲ್ಲಿ ಮಠಗಳ ಪಾತ್ರ ಬಹಳ ದೊಡ್ಡದು. ಎಲ್ಲಿ ವಿದ್ಯಾರ್ಥಿಗಳು ಗುರುಗಳ ಸಾನ್ನಿಧ್ಯದಲ್ಲಿ ಎಲ್ಲಾ ರೀತಿಯ ವಿದ್ಯಾಭ್ಯಾಸವ ಮಾಡುತ್ತಾರೋ ಅದನ್ನೇ ಮಠ ಎಂದು ಕರೆಯಲಾಗುತ್ತದೆ. ಮಠ ಧಾರ್ಮಿಕ ಕ್ಷೇತ್ರವಲ್ಲ, ಅದೊಂದು ಧಾರ್ಮಿಕ ಶಿಕ್ಷಣ ಕ್ಷೇತ್ರ ಎಂದು ಇಲ್ಲಿನ ಜೈನ ಮಠದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.ಪಟ್ಟಣದ ಹೊರವಲಯದಲ್ಲಿರುವ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಬಿಕಾ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಶ್ರವಣಬೆಳಗೊಳ ಜ್ಞಾನಕ್ಕಾಗಿ ಬಹಳ ಹಿಂದಿನಿಂದಲೂ ಪ್ರಾಶಸ್ತ್ಯ ನೀಡುತ್ತಾ ಬಂದಿದೆ. ವಿಂಧ್ಯಗಿರಿಯ ಬಾಗಿಲ ಬಳಿ ಇರುವ ಶಿಲಾಶಾಸನದಲ್ಲಿ ಇಲ್ಲಿಯ 600 ವರ್ಷಗಳ ಹಿಂದಿನ ಸ್ವಾಮೀಜಿ ಅವರನ್ನು ಅವರ ಜ್ಞಾನದ ಕಾರಣದಿಂದ ‘ಗಂಡು ಶಾರದೆ’ ಎಂದು ಉಲ್ಲೇಖಿಸಿದ್ದನ್ನು ಕಾಣಬಹುದು ಎಂದರು.ನಮ್ಮ ಪೂರ್ವ ಗುರುಗಳೆಲ್ಲರೂ ಶಿಕ್ಷಣಕ್ಕಾಗಿ ವಿಶೇಷ ಆದ್ಯತೆ ನೀಡುತ್ತಾ ಬಂದಿರುತ್ತಾರೆ. ವಿದ್ಯಾರ್ಥಿಯ ಮನಸ್ಸಿನಲ್ಲಿ ಬಿತ್ತಿದ ಶಿಕ್ಷಣ ಯಾವತ್ತೂ ವ್ಯರ್ಥವಾಗುವುದಿಲ್ಲ. ಅನ್ನದಾನ ಶ್ರೇಷ್ಠ ದಾನ. ಅದಕ್ಕಿಂತಲೂ ಶ್ರೇಷ್ಠವಾದ ದಾನ ವಿದ್ಯಾ ದಾನ. ಜ್ಞಾನ ನಮ್ಮ ಜೀವನ ಇರುವವರೆಗೂ ಜೊತೆಗೆ ಇರುತ್ತದೆ ಎಂದು ಹೇಳಿದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಗುರುಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು 1982ರಲ್ಲಿ ಅಂಬಿಕಾ ವಿದ್ಯಾಲಯ ಎಂಬ ಶಿಕ್ಷಣ ಸಂಸ್ಥೆ ಆರಂಭಿಸಿದ್ದು, ಪ್ರಾರಂಭಗೊಂಡು 44 ವರ್ಷ ಪೂರ್ಣಗೊಂಡಿದೆ. ಅಂಬಿಕಾ ಎಂಬ ಹೆಸರಿನ ಅರ್ಥ ಈ ಕ್ಷೇತ್ರದ ಅದಿದೇವತೆ, ರಕ್ಷಾದೇವತೆ ಕೂಷ್ಮಾಂಡೀನಿ ಅಮ್ಮ. ತಾಯಿಯ ಸ್ಥಾನದಲ್ಲಿದ್ದು ಎಲ್ಲ ಮಕ್ಕಳಿಗೂ ಪ್ರೀತಿ ವಾತ್ಸಲ್ಯ ರಕ್ಷಣೆ ಕರುಣೆ ಸಂರಕ್ಷಣೆ ನೀಡಲಿ ಎಂದು ಅಂಬಿಕಾ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರು ಎಂದು ಸ್ಮರಿಸಿದರು.ಎಂಟು ವರ್ಷಗಳ ಹಿಂದೆಯೇ ನಮ್ಮ ಪೂಜ್ಯ ಗುರುಗಳು ಈ ಶಾಲೆಯ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಐನಾಕ್ಸ್ ಕಂಪೆನಿ ಸಂಸ್ಥಾಪಕ ದೇವೇಂದ್ರ ಕುಮಾರ್ ಕಟ್ಟಡಕ್ಕೆ ಆರ್ಥಿಕ ನೆರವು ನೀಡಿದ್ದಾರೆ ಎಂದರು.ಶ್ರವಣಬೆಳಗೊಳದ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರೈಲು ಸೇವೆ ಕಲ್ಪಿಸಿದವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. 2018 ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಇಳಿ ವಯಸ್ಸಿನಲ್ಲಿ 700 ಮೆಟ್ಟಿಲು ಹತ್ತಿ ಭಗವಂತನಿಗೆ ಅಭಿಷೇಕ ಮಾಡಿದವರು ಎಂದು ಹೇಳಿದರು.ಕ್ಷೇತ್ರದ ಅಭಿವೃದ್ಧಿಗೆ ದೇವೇಗೌಡ ಸೇರಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕರಾದ ಸಿ.ಎನ್.ಬಾಲಕೃಷ್ಣ, ಎಚ್.ಡಿ.ರೇವಣ್ಣ, ಕೈಜೋಡಿಸಿದ್ದಾರೆ ಎಂದರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶ್ರವಣಬೆಳಗೊಳ 44 ವರ್ಷಗಳಿಂದ ಗ್ರಾಮೀಣ ಪ್ರದೇಶದ ಅದರಲ್ಲೂ ಬಡ ಹಿಂದುಳಿದ ವರ್ಗದ ರೈತರ ಮಕ್ಕಳ ಸರ್ವಾಂಗೀಣ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಹೇಳಿದರು.ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಶ್ರವಣಬೆಳಗೊಳ ಪ್ರಪಂಚದಲ್ಲಿಯೇ ಅತ್ಯಂತ ಪವಿತ್ರ ಪುಣ್ಯಭೂಮಿಯಾಗಿದ್ದು, ಪ್ರಜಾಪ್ರಭುತ್ವದಲ್ಲಿ ಹೇಗೆ ಗೌರವ ಕೊಡಬೇಕು ಎಂಬುದನ್ನು ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕ್ರಮ ರೂಪಿಸಿರುವುದು ಶ್ರೀಗಳ ಕಾರ್ಯ ಪ್ರಶಂಸನೀಯ ಎಂದರು.ಶಾಸಕ ಎಚ್.ಡಿ ರೇವಣ್ಣ, ಮುಂಬರುವ ಮಹಾಮಸ್ತಕಾಭಿಷೇಕಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಶ್ರೀಗಳು ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್.ಬಾಲಕೃಷ್ಣ, ಶ್ರವಣಬೆಳಗೊಳ ಸ್ವಾರ್ಥ ರಹಿತ ಕ್ಷೇತ್ರವಾಗಿದೆ. ಎಲ್ಲಾ ರಸ್ತೆಗಳಿಗೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದರು. ಮಹಾಮಸ್ತಕಾಭಿಷೇಕಕ್ಕೆ ಈಗಾಗಲೇ ಅನೇಕ ಕೇಂದ್ರ ಸಚಿವರನ್ನು ಸಂಪರ್ಕಿಸಿ ಮನವಿ ಸಲ್ಲಿಸಲಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.ಹಳೆಯ ವಿದ್ಯಾರ್ಥಿಗಳ ಸಂಘದಿಂದ ₹ 5 ಲಕ್ಷ ನೀಡಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಕುಂಭೇನಹಳ್ಳಿ ಸುನೀಲ್ ಕುಮಾರ್ ತಿಳಿಸಿದರು.ಐನಾಕ್ಸ್ ಸಮೂಹ ಸಂಸ್ಥೆಯ ಹಣಕಾಸು ಸಲಹೆಗಾರರಾದ ಮಂಜುಳಾ ಜೈನ್, ಖೇಶ್ ಪಾಟ್ನಿ, ವಿನೋದ್ ಬಾಕ್ಲಿವಾಲ್, ಕಾರ್ಯದರ್ಶಿ ಬಬನ್ ಪಿ.ಡಿ. ದೇವರಾಜೇಗೌಡ, ಕೆ.ಆರ್. ರಮೇಶ್, ಶಿವರಾಜ್, ಸುತ್ತಲಿನ ಗ್ರಾಮಸ್ಥರು, ಮುಖಂಡರು, ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಶ್ರವಣಬೆಳಗೊಳ, ಶ್ರೀರಂಗಪಟ್ಟಣ ಅಭಿವೃದ್ಧಿಗೆ ಒತ್ತು: ಕುಮಾರಸ್ವಾಮಿ‘ನೂತನ ಸ್ವದೇಶಿ ದರ್ಶನ ಯೋಜನೆಯಲ್ಲಿ ಶ್ರವಣಬೆಳಗೊಳ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಗಳಿಗೆ ಮೂಲಸೌಲಭ್ಯ ಒದಗಿಸುವುದಕ್ಕೆ ಪ್ರತ್ಯೇಕವಾಗಿ ₹ 100 ಕೋಟಿ ಅನುದಾನ ಒದಗಿಸಲು ಕೇಂದ್ರ ಸಚಿವರಲ್ಲಿ ಈಗಾಗಲೇ ಮನವಿ ಮಾಡಲಾಗಿದೆ. ಚಂದ್ರಗಿರಿ ವಿಂಧ್ಯಗಿರಿ ಬೆಟ್ಟಗಳ ದರ್ಶನಕ್ಕೆ ರೋಪ್ವೇ ಸೌಲಭ್ಯ ಒದಗಿಸಲು ಸಂಬಂಧಪಟ್ಟ ಸಚಿವರಲ್ಲಿ ಮನವಿ ಮಾಡುತ್ತೇನೆ’ ಎಂದು ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.261019-36-1570455803