ಕಾಂಗ್ರೆಸ್ ಸರ್ಕಾರ ಸುಳ್ಳು ಪ್ರಚಾರ ನಿಲ್ಲಿಸಲಿ: ಸಂಸದ ಬಿ.ವೈ. ರಾಘವೇಂದ್ರ
ಆನವಟ್ಟಿ: ‘ರೈತರ ಹಿತದೃಷ್ಟಿಯಿಂದ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದುವರಿಸಿದ್ದರು’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸೋಮವಾರ ಹುಣಸವಳ್ಳಿಯಿಂದ ಕಮನವಳ್ಳಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದ ಬಳಿಕ, ಕಮನವಳ್ಳಿಯ ಪ್ರಭಾವಿ ಮುಖಂಡ ಕಡ್ಲೇರ್ ರುದ್ರಪ್ಪ ಅವರಿಗೆ ಬಿಜೆಪಿ ಧ್ವಜ ನೀಡಿ ಪಕ್ಷ

ಆನವಟ್ಟಿ: ‘ರೈತರ ಹಿತದೃಷ್ಟಿಯಿಂದ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದುವರಿಸಿದ್ದರು’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸೋಮವಾರ ಹುಣಸವಳ್ಳಿಯಿಂದ ಕಮನವಳ್ಳಿವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದ ಬಳಿಕ, ಕಮನವಳ್ಳಿಯ ಪ್ರಭಾವಿ ಮುಖಂಡ ಕಡ್ಲೇರ್ ರುದ್ರಪ್ಪ ಅವರಿಗೆ ಬಿಜೆಪಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು. ‘ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ರೈತರಿಗೆ 5 ಎಚ್ಪಿ ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಯಲ್ಲಿತ್ತು. ನಂತರ ಅಧಿಕಾರಕ್ಕೆ ಬಂದ ಇಬ್ಬರು ಮುಖ್ಯಮಂತ್ರಿಗಳು ಈ ಯೋಜನೆಯನ್ನು ರದ್ದುಗೊಳಿಸಿದ್ದರು. ಬಳಿಕ ಮುಖ್ಯಮಂತ್ರಿಯಾದ ಯಡಿಯೂರಪ್ಪ ಅವರು ರೈತರ ಅನುಕೂಲಕ್ಕಾಗಿ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಿದ್ದರು’ ಎಂದು ತಿಳಿಸಿದರು. ‘ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ₹35 ಸಾವಿರ ಕೋಟಿ ಮೊತ್ತದ ಹೊಸ ಯೋಜನೆಗಳನ್ನು ಘೋಷಿಸಿದೆ. ಆದರೆ, ಈ ಹಿಂದೆ ಕೈಗೊಂಡ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಹಣ ಪಾವತಿಸಬೇಕಿದೆ. ಚುನಾವಣೆ ದೃಷ್ಟಿಯಿಂದ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು’ ಎಂದು ಟೀಕಿಸಿದರು. ‘ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ವಿವಿಧ ನೀರಾವರಿ ಯೋಜನೆಗಳು, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಸಮಾಜದ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಯಡಿಯೂರಪ್ಪ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತ ನಡೆಸಿದ್ದಾರೆ. ಇಂತಹ ನಾಯಕರ ಕುರಿತು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು’ ಎಂದರು. ‘ಜಿಲ್ಲಾ ಉಸ್ತುವಾರಿ ಸಚಿವರು ಅಹಂಕಾರದ ಮಾತುಗಳನ್ನಾಡುವುದನ್ನು ಬಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು. ‘ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಾಗಲೆಲ್ಲ ಸೊರಬ ಕ್ಷೇತ್ರದಿಂದ ಬಿಜೆಪಿಗೆ ಶಾಸಕರನ್ನು ಆಯ್ಕೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ನಮ್ಮ ತಪ್ಪುಗಳಿಂದ ಕ್ಷೇತ್ರವನ್ನು ಕಳೆದುಕೊಂಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ಆ ತಪ್ಪುಗಳನ್ನು ಪುನರಾವರ್ತಿಸುವುದಿಲ್ಲ. ಮತದಾರರ ಭಾವನೆಗಳಿಗೆ ತಕ್ಕಂತೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕ್ಷೇತ್ರವನ್ನು ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಶಾಸಕ ಡಿ.ಎಸ್. ಅರುಣ್, ಮಾಜಿ ಶಾಸಕ ಆರ್.ಕೆ. ಸಿದ್ರಾಮಣ್ಣ, ಎಂ.ಕೆ. ಜಗದೀಶ್, ಪಕ್ಷದ ಮುಖಂಡರಾದ ಪದ್ಮನಾಭ ಭಟ್, ಹರಿಕೃಷ್ಣ, ಮಾಲತೇಶ್, ಮೇಘರಾಜ್, ಪ್ರಕಾಶ್ ಅಗಸನಹಳ್ಳಿ, ರಾಜು ತಲ್ಲೂರ್, ವೈದ್ಯ ಜ್ಞಾನೇಶ್, ರಾಜು ಗೌಡ ಹಿರೇಜೌಟಿ, ಮಲ್ಲಿಕಾರ್ಜುನ ಗುತ್ತೇರ್, ಹೊನ್ನಪ್ಪ ಎಣ್ಣೆಕೊಪ್ಪ, ಮಂಜಪ್ಪ ಹಿತ್ಲಮನಿ, ಗೀತಾ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಜಾನಕಪ್ಪ ಮತ್ತು ಸುರೇಶ್ ಉದ್ರಿ ಉಪಸ್ಥಿತರಿದ್ದರು.ಆಲೊಟ್ಟಿ ಸಮೀಪದ ಹುಣಸವಳ್ಳಿ ಗ್ರಾಮದಿಂದ ಕಮನಹಳ್ಳಿ ಗ್ರಾಮದವರೆಗೆ ಹಮ್ಮಿಕೊಂಡಿದ್ದ ಬೃಹತ್ ಬೈಕ್ ರ್ಯಾಲಿಯಲ್ಲಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಮಾಜಿ ಸಚಿವ ಬಿಸಿ ಪಾಟೀಲ್ ಇದ್ದರುಜೈಲಿಗೆ ಕಳುಹಿಸಿದ್ದನ್ನು ಮರೆತಿಲ್ಲ: ಹಾಲಪ್ಪ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ ‘ಸ್ಟಿಂಗ್ ಆಪರೇಷನ್ ಮೂಲಕ ರಾಜಕೀಯವಾಗಿ ನನ್ನನ್ನು ಹತ್ತಿಕ್ಕುವ ಉದ್ದೇಶದಿಂದ ಷಡ್ಯಂತ್ರ ನಡೆಸಿ ಜೈಲಿಗೆ ಕಳುಹಿಸಲಾಗಿತ್ತು. ಆ ಘಟನೆಯನ್ನು ನಾನು ಮರೆತಿಲ್ಲ’ ಎಂದು ಹೇಳಿದರು. ‘ಸಂಸದ ಬಿ.ವೈ. ರಾಘವೇಂದ್ರ ಮತ್ತು ನಾನು ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರವನ್ನು ಗೆಲ್ಲುತ್ತೇವೆ’ ಎಂದರು. ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ ‘ಸ್ಟಿಂಗ್ ಆಪರೇಷನ್ ಮೂಲಕ ಅವಮಾನಿಸಿದವರ ವಿರುದ್ಧ ಹರತಾಳು ಹಾಲಪ್ಪ ಅವರೇ ಸೊರಬ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ವಿಧಾನಸಭೆಗೆ ಬರಬೇಕು ಎಂಬುದು ನನ್ನ ಆಶಯ’ ಎಂದು ಹೇಳಿದರು. ‘ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆ’ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕಡ್ಲೇರ್ ರುದ್ರಪ್ಪ ಮಾತನಾಡಿ ‘40 ವರ್ಷಗಳಿಂದ ಬಂಗಾರಪ್ಪ ಕುಟುಂಬದೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದೇನೆ. ಆದರೆ ದೀರ್ಘಕಾಲದ ರಾಜಕೀಯ ಒಡನಾಟದ ನಡುವೆಯೂ ಮಧು ಬಂಗಾರಪ್ಪ ಅವರು ನನ್ನ ಬಗ್ಗೆ ತಿರಸ್ಕಾರದ ಮನೋಭಾವ ತೋರಿಸಿದ್ದಾರೆ’ ಎಂದು ಆರೋಪಿಸಿದರು. ‘ಬಿಜೆಪಿ ನಾಯಕರು ಪಕ್ಷಕ್ಕೆ ಆಹ್ವಾನಿಸಿದ ಬಳಿಕವೂ ವಿಶ್ವಾಸದಿಂದ 10 ತಿಂಗಳು ಕಾದಿದ್ದೆ. ಆದರೆ ಮಧು ಬಂಗಾರಪ್ಪ ಅವರು ಕ್ಷೇತ್ರದ ಕಡೆಗೆ ಗಮನ ಹರಿಸಲಿಲ್ಲ. ಹೀಗಾಗಿ ಮಂಜಪ್ಪ ಉದ್ರಿ ಟಿ. ಹನುಮಂತಪ್ಪ ಆಂಜನೇಯ ಸುರೇಶ್ ಶಿವಲಿಂಗ ಸೇರಿದಂತೆ 165 ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ’ ಎಂದು ತಿಳಿಸಿದರು.