ದಾಂಡಿಯಾದಲ್ಲಿ ಕೇಡಿಯಾ ಬಣ್ಣದ ಬೆಡಗು
ಭಾರತದಲ್ಲಿ ಎಲ್ಲೇ ನೆಲೆಸಿರಲಿ, ನವರಾತ್ರಿ ಎನ್ನುತ್ತಿದ್ದಂತೆ ಕಣ್ಣೆದುರು ತೆರೆದುಕೊಳ್ಳುವುದು ಗುಜರಾತ್ ಮೂಲದ ಗರಬಾ, ದಾಂಡಿಯಾ ನೃತ್ಯಗಳು. ನವರಾತ್ರಿ ಆಚರಣೆ ಒಂದೊಂದು ಕಡೆ ಒಂದೊಂದು ರೀತಿ ಇದ್ದರೂ, ಈ ನೃತ್ಯದ ಪರಿಚಯವಂತೂ ಎಲ್ಲೆಡೆ ಇದ್ದೇ ಇರುತ್ತದೆ. ಈಗೀಗ ಈ ನೃತ್ಯಗಳನ್ನು ಎಲ್ಲೆಡೆಯೂ ಮಾಡಲಾಗುತ್ತಿದೆ ಕೂಡ.ವೃತ್ತಾಕಾರದಲ್ಲಿ ಸುತ್ತುತ್ತಾ, ಕೈಗಳನ್ನು ತಟ್ಟುತ್ತಾ

ಭಾರತದಲ್ಲಿ ಎಲ್ಲೇ ನೆಲೆಸಿರಲಿ, ನವರಾತ್ರಿ ಎನ್ನುತ್ತಿದ್ದಂತೆ ಕಣ್ಣೆದುರು ತೆರೆದುಕೊಳ್ಳುವುದು ಗುಜರಾತ್ ಮೂಲದ ಗರಬಾ, ದಾಂಡಿಯಾ ನೃತ್ಯಗಳು. ನವರಾತ್ರಿ ಆಚರಣೆ ಒಂದೊಂದು ಕಡೆ ಒಂದೊಂದು ರೀತಿ ಇದ್ದರೂ, ಈ ನೃತ್ಯದ ಪರಿಚಯವಂತೂ ಎಲ್ಲೆಡೆ ಇದ್ದೇ ಇರುತ್ತದೆ. ಈಗೀಗ ಈ ನೃತ್ಯಗಳನ್ನು ಎಲ್ಲೆಡೆಯೂ ಮಾಡಲಾಗುತ್ತಿದೆ ಕೂಡ.ವೃತ್ತಾಕಾರದಲ್ಲಿ ಸುತ್ತುತ್ತಾ, ಕೈಗಳನ್ನು ತಟ್ಟುತ್ತಾ ಹೆಜ್ಜೆ ಹಾಕುವ ರೀತಿ ಗರಬಾದಲ್ಲಾದರೆ, ದಾಂಡಿಯಾದಲ್ಲಿ ಕೋಲಿನೊಂದಿಗೆ ಗಿರ್ರನೆ ತಿರುಗುತ್ತಾ, ಒಬ್ಬರನ್ನೊಬ್ಬರು ತಿರುಗಿಸುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ನೃತ್ಯಗಳ ಆಕರ್ಷಣೆಗೆ ಮತ್ತೂ ಒಂದು ಕಾರಣ, ನೃತ್ಯ ಮಾಡುವವರು ತೊಡುವ ಉಡುಪು.ಗುಂಪಿನಲ್ಲಿ ಎದ್ದುಕಾಣುವಂತೆ, ಕಣ್ಣುಕೋರೈಸುವಂತಿರುವ ಬಣ್ಣ ಬಣ್ಣದ, ಅಗಲವಾದ, ನೆರಿಗೆಗಳೊಂದಿಗೆ ಪುಟಾಣಿ ಕನ್ನಡಿಗಳಿರುವ ಚಣಿಯಾ ಚೋಲಿ ಮಹಿಳೆಯರಿಗಾದರೆ, ಪುರುಷರದ್ದು ಕೇಡಿಯಾ ಧೋತಿ. ರಂಗಿನಲ್ಲಿ, ವಿನ್ಯಾಸದಲ್ಲಿ, ಆಕರ್ಷಣೆಯಲ್ಲಿ ಒಂದಕ್ಕೊಂದು ಸಾಟಿ ಎನ್ನುವಂತೆ ಚಣಿಯಾ ಚೋಲಿ ಜೊತೆಗೆ ಕೇಡಿಯಾ ಧೋತಿ ಕೂಡ ಪೈಪೋಟಿಗಿಳಿದಿರುತ್ತದೆ.ಗುಜರಾತ್ ಮೂಲದ ಸಾಂಪ್ರದಾಯಿಕ ದಿರಿಸುಗಳ ವಿಷಯಕ್ಕೆ ಬಂದರೆ, ಪುರುಷರಲ್ಲಿ ಕೇಡಿಯಾ ಧೋತಿ ಮೊದಲ ಸಾಲಿನಲ್ಲಿರುತ್ತದೆ. ಈ ವಸ್ತ್ರವಿನ್ಯಾಸ, ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇಶದ ಬಹುಪಾಲು ಎಲ್ಲಾ ನಗರಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಗುಜರಾತ್ನ ಗಡಿ ಮೀರಿ ಭಾರತದಾದ್ಯಂತ ತನ್ನ ಹೆಸರನ್ನು ಈ ವಿನ್ಯಾಸ ಛಾಪಿಸಿದೆ.ಕೇಡಿಯಾ; ಇದು ಸಾಂಪ್ರದಾಯದ ನಂಟುಗುಜರಾತಿನ ಕಚ್ ಹಾಗೂ ಸೌರಾಷ್ಟ್ರದಲ್ಲಿ, ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಪುರುಷರಿಗೆ ಕೇಡಿಯಾ ಧೋತಿ ಸಾಂಪ್ರದಾಯಿಕ ದಿರಿಸು. ಕಚ್ನ ಮರಳುಗಾಡು ಪ್ರದೇಶದಲ್ಲಿನ ರಾಬ್ರಿ ಸಮುದಾಯಕ್ಕೆ ಸೇರಿದ ಪುರುಷರು ಈ ವಿನ್ಯಾಸಿತ ಬಟ್ಟೆಗಳನ್ನು ತೊಡುತ್ತಾರೆ.‘ಕೇಡಿಯಾ’ ಅಥವಾ ‘ಕೇಡಿಯು’ ಎಂದರೆ, ಉದ್ದ ತೋಳಿನ, ಗಿಡ್ಡವಾದ, ಫ್ರಾಕ್ ರೀತಿಯಲ್ಲಿರುವ ಅಂಗಿ. ಅಂಗಿಯ ಎದೆಯ ಭಾಗ ಬಿಗಿಯಾಗಿರುವಂತೆ ಹಾಗೂ ಸೊಂಟದವರೆಗೆ ಕೆಳಮುಖವಾಗಿ ಅಗಲವಾಗಿದ್ದು, ಮಡಿಕೆಗಳನ್ನು ಹೊಂದಿರುವ ಅಂಗಿ ಇದಾಗಿದ್ದು, ಅಂಗಿಯ ಎರಡೂ ಕಡೆ ಕಟ್ಟಲು ದಾರಗಳಿರುತ್ತವೆ. ಈ ಅಂಗಿಗೆ ಕೈ ಕಸೂತಿ ಹಾಗೂ ಕನ್ನಡಿಗಳ ಕಸೂತಿ ಕಲೆಯನ್ನು ನೀಡಲಾಗುತ್ತದೆ. ಈ ಬಟ್ಟೆಯ ವಿನ್ಯಾಸವು ದೇಹದ ಸುಲಭ ಚಲನೆ ಸಾಧ್ಯವಾಗುವಂತೆ ರೂಪಿಸಲಾಗಿರುತ್ತದೆ. ನೃತ್ಯ ಮಾಡುವಾಗಲಂತೂ ಸಲೀಸಾಗಿ ಸುತ್ತಲು ಅನುವು ಮಾಡಿಕೊಡುವಂತಿರುತ್ತದೆ. ‘ಕಫ್ನಿ’ ಎಂದು ಕರೆಯಲಾಗುವ ಪೈಜಾಮಾವನ್ನು ಇದರೊಂದಿಗೆ ತೊಡಲಾಗುತ್ತದೆ. ಇದೂ ಅಗಲವಾಗಿದ್ದು, ಕಣಕಾಲಿನ ಭಾಗದಲ್ಲಿ ದಾರ ಕಟ್ಟಲಾಗುತ್ತದೆ. ಇದರೊಂದಿಗೆ ‘ಫೆಂಟೊ’ ಎಂಬ ರುಮಾಲನ್ನೂ ಧರಿಸುವುದು ರೂಢಿ.ರಾಬ್ರಿ ಹಾಗೂ ಆಹಿರ್ ಸಮುದಾಯದಲ್ಲಿ ಈ ಉಡುಪನ್ನು ಪುರುಷರು ತೊಡುವುದು ಸಂಪ್ರದಾಯ. ಕುಟುಂಬದ ಹೆಣ್ಣುಮಕ್ಕಳೇ ಈ ಕೇಡಿಯಾಗಳನ್ನು ಹೊಲಿಯುತ್ತಿದ್ದರು. ಕಚ್ ಅಥವಾ ಸೌರಾಷ್ಟ್ರ ಮರಳುಗಾಡಿನ ಪ್ರದೇಶವಾದ್ದರಿಂದ ಬಟ್ಟೆಯನ್ನು ಹೊಲಿಸಲು ದೂರ ದೂರ ಹೋಗಲು ಸಾಧ್ಯವಾಗದ ಕಾರಣ ಮನೆಯ ಹೆಣ್ಣುಮಕ್ಕಳೇ ಇವನ್ನು ಹೊಲಿದುಕೊಡುತ್ತಿದ್ದರು. ಮದುವೆಗೂ ಮುನ್ನ ಅಕ್ಕ ತಂಗಿಯರು ಇದನ್ನು ಹೊಲಿದರೆ, ಮದುವೆ ನಂತರ ಹೆಂಡತಿ ಹೊಲಿಯುವ ಕೆಲಸವನ್ನು ಮುಂದುವರೆಸುತ್ತಿದ್ದಳು. ತಮ್ಮ ಹಿರಿಯರಿಂದ ಕೇಡಿಯಾ ಹೊಲಿಯುವ ಕಲೆಯನ್ನು ಹೆಣ್ಣುಮಕ್ಕಳು ಕರಗತ ಮಾಡಿಕೊಂಡಿರುತ್ತಿದ್ದರು.ಕೆಲವು ಕಡೆಗಳಲ್ಲಿ ‘ಬಂಡಿ’ ಎಂಬ ಮೇಲಂಗಿಗೆ ಜಾಕೆಟ್ನಂತೆ ಬಿಳಿಯ ಬಣ್ಣದ ಕೇಡಿಯಾಗಳನ್ನು ತೊಡುವ ರೂಢಿ ಇತ್ತು. ಒಂಟೆಗಳು ಹಾಗೂ ಜಾನುವಾರುಗಳನ್ನು ಕಾಯಲು ಹೋಗುತ್ತಿದ್ದ ಪುರುಷರ ದೇಹವನ್ನು ತಂಪಾಗಿಡಲು ಅನುಗುಣವಾಗಿ ಈ ವಿನ್ಯಾಸವನ್ನು ರೂಪಿಸಲಾಗಿತ್ತು. ರಾಜಸ್ಥಾನದಲ್ಲಿಯೂ ಈ ದಿರಿಸನ್ನು ಕಾಣಬಹುದು.ಕೇಡಿಯಾಗಳ ವಿನ್ಯಾಸದಲ್ಲಿ ಕಸೂತಿಯದ್ದೇ ಕಾರುಬಾರು. ‘ಕೈಯಲ್ಲೇ ಕಸೂತಿ ಹಾಕಿದರೆ ನಮ್ಮ ಆಲೋಚನೆಯೂ ಆ ಹೊಲಿಗೆಗಳೊಂದಿಗೆ ಬೆಸೆಯುತ್ತದೆ. ಆ ಮೂಲಕ ನಮ್ಮ ಸಂಬಂಧಗಳೂ ಗಟ್ಟಿಯಾಗಿರುತ್ತವೆ’ ಎಂಬ ನಂಬಿಕೆಯೊಂದಿಗೆ ಕಸೂತಿಯನ್ನು ಹಾಕುತ್ತಿದ್ದರು. ಕೃಷ್ಣ, ನವಿಲು, ಸುಂದರ ಹೂವು, ಜ್ಯಾಮಿತೀಯ ಅಂಚುಗಳು ಎಂಬ್ರಾಯ್ಡರಿಗಳಲ್ಲಿ ಮಿಂಚುತ್ತಿದ್ದವು. ಕಸೂತಿಯೊಂದಿಗೆ ಸುಂದರ ಕಲ್ಪನೆಗಳೂ ಸೇರಿಕೊಳ್ಳುತ್ತಿದ್ದವು. ಹೀಗಾಗಿ ಆ ದಿರಿಸಿನೊಂದಿಗೆ, ಅದನ್ನು ತೊಡುವವರೊಂದಿಗೆ ಭಾವನಾತ್ಮಕ ಸಂಬಂಧವೂ ಬೆಸೆದುಕೊಂಡಿರುತ್ತಿತ್ತು.ಮೊದಮೊದಲು ಖಾದಿಯನ್ನು ಮಾತ್ರ ಕೇಡಿಯಾ ಹೊಲಿಯಲು ಬಳಸಲಾಗುತ್ತಿತ್ತು. ನಂತರ ಹತ್ತಿ ಬಟ್ಟೆಗಳನ್ನು ಬಳಸುವುದು ರೂಢಿಯಾಯಿತು. ಎಂಬ್ರಾಯ್ಡರಿಯಲ್ಲಿ ಈಗ ಮೆಷಿನ್ ವರ್ಕ್ ಇದ್ದರೂ ಸಾಂಪ್ರದಾಯಿಕವಾಗಿ ಕೈಕಸೂತಿ ಕಲೆ, ಕನ್ನಡಿ ಕಲೆ ಹಾಗೂ ಬಾಂದಿನಿ ಪ್ರಿಂಟ್ಗಳಲ್ಲಿರುವ ಕೇಡಿಯಾಗಳನ್ನು ಮೆಚ್ಚುವವರೇ ಹೆಚ್ಚು.ಬೀಡ್ ವರ್ಕ್, ಮುಕ್ಕೋ ಎಂಬ್ರಾಯ್ಡರಿ, ಕಚ್ ಎಂಬ್ರಾಯ್ಡರಿ, ಗೋಟಾ ವರ್ಕ್, ಖಾರೆಕ್ ಎಂಬ್ರಾಯ್ಡರಿಗಳನ್ನು ಹೆಚ್ಚಾಗಿ ಕಾಣಬಹುದು. ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಕಪ್ಪು ಹಾಗೂ ಬಿಳಿ... ಬಣ್ಣ ಗಾಢವಾಗಿರಲಿ, ತಿಳಿಯಾಗಿರಲಿ ಕೇಡಿಯಾಗೆ ಎಲ್ಲವೂ ಹೊಂದಿಕೊಳ್ಳುತ್ತವೆ.ಬದಲಾದ ಚಿತ್ರಣದಲ್ಲಿ...2001ರಲ್ಲಿ ಕಚ್ನಲ್ಲಿ ಸಂಭವಿಸಿದ ಭೂಕಂಪ ಕೇವಲ ನೆಲೆಯನ್ನು ಮಾತ್ರ ಕಸಿದುಕೊಳ್ಳಲಿಲ್ಲ, ಸಮುದಾಯದ ಜೀವನಶೈಲಿ ಹಾಗೂ ಪರಿಸರದೊಂದಿಗಿನ ಸಂಬಂಧದಲ್ಲಿಯೂ ಬಹುದೊಡ್ಡ ಬದಲಾವಣೆಯನ್ನು ತಂದೊಡ್ಡಿತು. ಕಾರ್ಖಾನೆಗಳು ಕಾಲಿಡುತ್ತಿದ್ದಂತೆ ಬಟ್ಟೆ ಹೊಲಿಯುವವರು ಕಡಿಮೆಯಾದರು. ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಕೇಡಿಯಾ ದಿರಿಸು ತೊಡಲು ಸೂಕ್ತವಲ್ಲದ ಕಾರಣ, ಇದನ್ನು ತೊಡವವರ ಸಂಖ್ಯೆಯಲ್ಲಿಯೂ ಕಡಿಮೆಯಾಯಿತು.ಬರಬರುತ್ತಾ ಚಿತ್ರಣ ಇನ್ನಷ್ಟು ಬದಲಾಗಿ, ಹಳೆಯ ತಲೆಮಾರಿನ ಪುರುಷರು ಮಾತ್ರ ದಿನನಿತ್ಯ ಕೇಡಿಯಾ ಧರಿಸುತ್ತಿದ್ದಾರೆ. ಯುವಕರು ಧಾರ್ಮಿಕ ಸಂದರ್ಭಗಳಲ್ಲಿ ಮಾತ್ರ ಕೇಡಿಯಾವನ್ನು ತೊಟ್ಟುಕೊಳ್ಳುವಂತಾಗಿದೆ. ಅದಾಗ್ಯೂ ನವರಾತ್ರಿ ಸಂದರ್ಭದಲ್ಲಿ ಈ ಉಡುಪು ರಾಜ್ಯದ ಎಲ್ಲೆಯನ್ನು ಮೀರಿ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತದೆ. ಪುರುಷರು, ಮಕ್ಕಳಾದಿಯಾಗಿ ಈ ದಿರಿಸನ್ನು ತೊಟ್ಟು ನೃತ್ಯ ಮಾಡುತ್ತಾ ಸಂಭ್ರಮಿಸುತ್ತಾರೆ.ಕೇಡಿಯಾ ಜೊತೆ ಮತ್ತಷ್ಟು...ನವರಾತ್ರಿಗೆ ಕೇಡಿಯಾ ಧೋತಿ ಜೊತೆಗೆ ಮತ್ತೊಂದಷ್ಟು ಪುರುಷರ ಉಡುಪುಗಳು ಸದ್ದು ಮಾಡುತ್ತವೆ. ಕುರ್ತಾ ಪೈಜಾಮಾ ಬಹು ಹೆಚ್ಚು ಜನರು ತೊಡುವ ವಸ್ತ್ರವಿಧವಾಗಿದೆ. ಚಿಕ್ಕದಾದ, ಉದ್ದವಾದ, ಮಧ್ಯಮ ಅಳತೆಯ ಕುರ್ತಾ ಎಲ್ಲಾ ಸಂದರ್ಭಕ್ಕೂ ಒಗ್ಗುವುದರಿಂದ ಹೆಚ್ಚು ಪ್ರಚಲಿತದಲ್ಲಿದೆ. ಹತ್ತಿ ಅಥವಾ ರೇಷ್ಮೆ ಬಟ್ಟೆಯಲ್ಲಿ ವಿನ್ಯಾಸಗೊಂಡ ಹಲವು ನಮೂನೆಯ ಕುರ್ತಾಗಳು ಇಂದು ಲಭ್ಯವಿವೆ.ಗಮನ ಸೆಳೆಯುತ್ತಿರುವ ಮತ್ತೂ ಒಂದು ಶೈಲಿ ಎಂದರೆ, ‘ಲೇಯರ್ ಜಾಕೆಟ್’. ಎಂಬ್ರಾಯ್ಡರಿ ಅಥವಾ ಕನ್ನಡಿಯ ಕಸೂತಿಯಿರುವ ‘ನೆಹರು ಜಾಕೆಟ್’ ಸಿಂಪಲ್ ಲುಕ್ ನೀಡಿದರೂ ಸಾಂಪ್ರದಾಯಿಕ ಹೊಳಪು ತುಂಬುತ್ತದೆ. ಹಬ್ಬಗಳಲ್ಲಿ ಇದಕ್ಕೆ ಸ್ಥಾನವಂತೂ ಇದ್ದೇ ಇರುತ್ತದೆ.ಈ ದಿರಿಸುಗಳೊಂದಿಗೆ ಮೊಜಾರಿಸ್, ಜುಟ್ಟೀಸ್ ಎಂಬ ರುಮಾಲುಗಳನ್ನು, ಕೊಲ್ಲಾಪುರಿ ಚಪ್ಪಲಿಗಳನ್ನು ತೊಡುವುದು ರೂಢಿ. ಇದರಿಂದ ಸಾಂಪ್ರದಾಯಿಕ ಲುಕ್ ಪರ್ಫೆಕ್ಟ್ ಆಗಿರುತ್ತದೆ. ಇದರೊಂದಿಗೆ ಬಾಂದನಿ ಅಥವಾ ಲೆಹರಿಯಾ ಸ್ಟೋಲ್ ಹಾಕಿಕೊಂಡರೆ ಫ್ಯಾಷನಬಲ್ ಆಗಿ ಕಾಣಬಹುದು. ಇವುಗಳಿಗೆ ತಕ್ಕಂತೆ ಆಕ್ಸಿಡೈಸ್ಟ್ ಸಿಲ್ವರ್ ಕಡಗ ಅಥವಾ ಬ್ರೇಸ್ಲೆಟ್, ರುದ್ರಾಕ್ಷಿಮಾಲೆ ಧರಿಸುವುದು ಈಗ ಚಾಲ್ತಿಯಲ್ಲಿದೆ.ಕಾಲಕ್ಕೆ ತಕ್ಕಂತೆ ಹಬ್ಬಗಳ ಆಚರಣೆಯಲ್ಲಿಯೂ ಮಾರ್ಪಾಡಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ದಿರಿಸುಗಳೂ ಅಪ್ಡೇಟ್ ಆಗುವುದು ಸಹಜವೇ. ಅದರಲ್ಲೂ ದಿರಿಸುಗಳು ಕಣ್ಣಿಗೆ ಹಿತ, ಮನಸ್ಸಿಗೆ ಖುಷಿ ತುಂಬಲು ಒಂದು ನೆಪವಾಗುತ್ತದೆ ಎನ್ನುವುದಾದರೆ ಯಾರಿಗಿಷ್ಟವಾಗದು ಹೇಳಿ?(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)