ರುಚಿಯ ಸುಳಿ ಚಪಾತಿ ಉಸುಳಿ
‘ಅಕ್ಕಾ, ಮುಂಜೇನೆ ನ್ಯಾರಿಗೆ ಚಪಾತಿ ಉಸುಳಿ ತಿನ್ನೂನ್ರಿ’ ಅಂತ ನಮ್ಮ ಪಂಡಿತ್ ಶರಣ್ ಚೌಧರಿ ಅವರು ಹೇಳಿದಾಗ, ಬನಹಟ್ಟಿಯಿಂದ ನಾವು ನೂರಾರು ಕಿ.ಮೀ. ದೂರ ಇದ್ವಿ. ಭಾದ್ರಪದ ಮಾಸದ ಅರೆಬೆಳದಿಂಗಳ ರಾತ್ರಿ ನಮ್ಮ ಪ್ರಯಾಣ ಬೆಂಗಳೂರಿನಿಂದ ಬನಹಟ್ಟಿ ಕಡೆ ಹೊಂಟಿತ್ತು.ಊಟ ಆಸ್ವಾದಿಸೋರು ಮಾತ್ರ ಜೀವನ ಆನಂದಸ್ತಾರ ಅನ್ನೂದು ನನ್ನ ನಂಬಿಕಿ. ಸಂಗೀತ ಆಸ್ವಾದಿಸೋರು ಊಟ ಆಸ್ವಾದಿಸ್

‘ಅಕ್ಕಾ, ಮುಂಜೇನೆ ನ್ಯಾರಿಗೆ ಚಪಾತಿ ಉಸುಳಿ ತಿನ್ನೂನ್ರಿ’ ಅಂತ ನಮ್ಮ ಪಂಡಿತ್ ಶರಣ್ ಚೌಧರಿ ಅವರು ಹೇಳಿದಾಗ, ಬನಹಟ್ಟಿಯಿಂದ ನಾವು ನೂರಾರು ಕಿ.ಮೀ. ದೂರ ಇದ್ವಿ. ಭಾದ್ರಪದ ಮಾಸದ ಅರೆಬೆಳದಿಂಗಳ ರಾತ್ರಿ ನಮ್ಮ ಪ್ರಯಾಣ ಬೆಂಗಳೂರಿನಿಂದ ಬನಹಟ್ಟಿ ಕಡೆ ಹೊಂಟಿತ್ತು.ಊಟ ಆಸ್ವಾದಿಸೋರು ಮಾತ್ರ ಜೀವನ ಆನಂದಸ್ತಾರ ಅನ್ನೂದು ನನ್ನ ನಂಬಿಕಿ. ಸಂಗೀತ ಆಸ್ವಾದಿಸೋರು ಊಟ ಆಸ್ವಾದಿಸ್ತಾರ ಅನ್ನೂದು ಶರಣ್ ಅವರ ನಂಬಿಕಿ. ನಾವು ಇಬ್ರೂ ಎರಡನ್ನೂ ಮಾಡೋರು. ಹಂಗಾಗಿ ನಡು ರಾತ್ರಿ, ಮುಂಜೇನಿಯ ನ್ಯಾರಿ ಚಿಂತಿ ಮಾಡಾತಿದ್ವಿ. ಆತ್ಮೀಯರ ಮನೆಗಿರುವ ಆಹ್ವಾನ ಸ್ವೀಕರಿಸಿದ್ರ ಜವೆಗೋಧಿ ಉಪ್ಪಿಟ್ಟು... ಹೇಳುಮುಂದ ರವಾ ಹುರಿಯೂ ವಾಸನಿ ಮೂಗಿಗೆ ಅಡರಿತ್ತು.ಚಪಾತಿ ಉಸುಳಿ ತಿಂದೀರಿ ಅಂದಾಗ... ಮನ್ಯಾಗ ಕಡಲಿಕಾಳು, ಮೆಟಗಿ ಕಾಳಿನ ಉಸುಳಿ ಅವ್ವಾರು ಮಾಡಿಕೊಡ್ತಿದ್ರು. ಅದರ ಕೂಡ ಚಪಾತಿ ಇರ್ತದ ಅಂತ ಅಂದ್ಕೊಂಡಿದ್ದೆ. ಆದ್ರ ಬನಹಟ್ಟಿಯ ಸ್ವಾಮಿ ಹೋಟೆಲಿಗೆ ಕಾಲಿಟ್ಟ ಕೂಡಲೇ ಚಪಾತಿಯ ಘಮ ಮೂಗಿಗೆ ಅಡರಿತ್ತು. ಜವೆಗೋಧಿಯ ಚಪಾತಿ ಹಂಚಿನ ಮ್ಯಾಲೆ ಸುಡೂಮುಂದ ತನ್ನ ಬೆನ್ನು ಸುಟ್ರಿವರು ಅಂತ ಮಾತಾಡದೇ ಘಮ ಹರಡ್ತದ. ಎಲ್ಲಾರಿಗೆ ಟಾಂಟಾಂ ಮಾಡ್ತದ. ಅಂಥ ವಾಸನಿ ನಮ್ಮ ಜಿಹ್ವೆಯ ರುಚಿಮೊಗ್ಗು ಅರಳಿಸಿ ಕರದ್ವು.ಸಣ್ಣದೊಂದು ಪಡಸಾಲಿಯಂಥ ಹೋಟೆಲ್ ಅದು. ಅಡಗಿ ಮನ್ಯಾಗ ಹೆಣ್ಮಕ್ಕಳು ಚಪಾತಿ ಒತ್ತಾತಿದ್ರು. ತೆಲಿ ಮ್ಯಾಲೆ ಪೂರ ಸೆರಗ ಹೊದ್ದು, ತುದಿಗುಣ್ಲೆ ಕುಂತು ಚಪಾತಿ ಲಟ್ಸೋರು ಇಬ್ರು, ಸುಡೋರು ಒಬ್ರು, ಅಗ್ದಿ ಅದೊಂದೇ ಕೆಲಸ ಅನ್ನೂಹಂಗ ತನ್ಮಯ ಆಗಿದ್ರು.ಒಂದು ತಾಟಿನಾಗ ಬಿಸಿಬಿಸಿ ಹೊಗಿಯಾಡುವ ಚಪಾತಿ, ಮೂರು ಮುಡುಪಿನಾಗ ಬಂದ್ವು. ಜೊತಿಗೆ ಒಂದು ಬಟ್ಟಲದಾಗ ಉಸುಳಿ ಬಂತು.. ಅಹಹಾ... ಉಸುಗುಡಿಸುವ ಉಸುಳಿ. ಕೆಂಬಣ್ಣದ ಖಾರ ತೇಲುವ ಒಗ್ಗರಣಿಯೊಳಗ ಸೇಂಗಾ ಕಾಳು ತಿಳಿಗುಲಾಬಿ ಬಣ್ಣ ಮಾಡ್ಕೊಂಡು ತೇಲಾಡ್ತಿದ್ವು.ಚಪಾತಿ ಅಗ್ದಿ ಎರಡೇ ಬೆರಳಿನಾಗ ಹರದು ತುತ್ತು ಮಾಡುವಷ್ಟು ಸುಮಕೋಮಲ. ನಮ್ಮ ಅಂತರಂಗ ಬಹಿರಂಗದೊಳಗ ಅವಾಗವಾಗ ಕಣ್ಮರಿಯಾಗಿರುವ ಸಿಟ್ಟು ಸೆಡವಿನ್ಹಂಗ ಒಳಗೊಳಗೇ ಹೊಗಿಯಾಡ್ತಾವ. ತುಸು ನಮ್ಮ ಬೆರಳು ಡಾನ್ಸ್ ಮಾಡೂಹಂಗ ಮಾಡ್ಕೊಂಡು ಅವನ್ನು ಹರದು, ಈ, ಉಸುಳಿಯೊಳಗ ಅದ್ದಬೇಕು.ಉಸುಳಿಯಂದ್ರ ಭಾಳ ಗದ್ದಲೇನಿಲ್ಲ. ಉಳ್ಳಾಗಡ್ಡಿ, ಮಸಾಲಿಖಾರ ತಾಳಿಸಿ, ತುಸು ಹುಣಸಿಹಣ್ಣಿನ ನೀರು ಹಾಕಿ, ನೆನೆಸಿದ ಸೇಂಗಾ ಹಾಕಿ, ಕುದಸೂದು. ಅಷ್ಟೆ. ಆದ್ರ ರುಚಿ ಮಾತ್ರ ಯಾವ ಪದಗಳಿಗೂ ಋಣಿಯಾಗದೇ ಇರುವಂಥದ್ದು. ಹೇಳಾಕೇ ಆಗೂದಿಲ್ಲ. ಮಸಾಲಿ ಚಪಾತಿ ಅಂತಲೂ ಮಾಡ್ತಾರ. ಹಿಟ್ಟು ನಾದೂಮುಂದ ಮಸಾಲಿ ಖಾರಹಾಕಿ ಮಾಡೂದ್ರಿಂದ ಕೆಂಬಣ್ಣದ ಚಪಾತಿ ಇರ್ತದ. ರುಚಿಯ ಹದ ತಿಂದೋರಿಗೆ ಮತ್ತ ಏನೂ ಬ್ಯಾಡನಸ್ತದ. ಮಸಾಲಿ ಚಪಾತಿ ಕಟ್ಟಿಸ್ಕೊಂಡು ಹೊಂಟ್ರ ಮಧ್ಯಾಹ್ನ ಬರೇ ಮೊಸರಿದ್ರೂ ಊಟ ಸಂಪನ್ನ ಆಗ್ತದ.ಉತ್ತರ ಕರ್ನಾಟಕದವರಿಗೆ ಈಗಾಗಲೇ ಮಸಾಲಿ ಖಾರದ ವಾಸನಿ ಮೂಗಿಗೆ ತಾಕಿರ್ತದ. ಆದ್ರ ಉಳದೋರಿಗೆ ತಿಳೀಬೇಕಲ್ಲ.ಘಮಘಮಿಸುವ ಮಸಾಲಿ ಖಾರಬ್ಯಾಡಗಿ ಮೆಣಸಿನಕಾಯಿ ಪುಡಿಗೆ, ಅರ್ಧದಷ್ಟು ಹವೇಜ (ಧನಿಯಾ ಬೀಜ), ಜಾಪತ್ರಿ, ಯಾಲಕ್ಕಿ, ಲವಂಗ, ಮೊಗ್ಗು, ಮರಾಠಾ ಮೊಗ್ಗು, ನಾಗ, ಗೇರುಬೀಜ, ದಾಲ್ಚಿನ್ನಿ, ಮೆಣಸು, ಹಿಂಗ ಇನ್ನಾ ಹೆಸರು ಗೊತ್ತಿರಲಾರದ ಛಪ್ಪನ್ನಾರು ಮಸಾಲಿ (ತೊಲಿ ಲೆಕ್ಕದಾಗ) ತೂಗಿ ಹಾಕಿರ್ತಾರ. ಅದರ ಹದನೇ ಬ್ಯಾರ. ಈ ಪುಡಿಗೆ ಕುಟ್ಟೂ ಮುಂದನ, ಉಳ್ಳಾಗಡ್ಡಿ, ಕೊತ್ತಂಬರಿನೂ ಎಣ್ಣಿಯೊಳಗ ಮೈ ಕೆಂಪಾಗುವತನ, ನೀರು ಹಿಂಗಿ ಹೋಗುವ ತನಾನೂ ಬಾಡಿಸಿ, ಉಂಡಿ ಕಟ್ಟಿ ಅದನ್ನ ಆ ಖಾರಕ್ಕ ಮಿಕ್ಸ್ ಮಾಡ್ತಾರ. ಇಡೀ ಮಸಾಲಿ ಖಾರದ ಘಮ ಬರೂದೆ ಇದರಿಂದ. ಈ ಉಳ್ಳಾಗಡ್ಡಿ ಜೊತಿಗೆ ಜವಾರಿ ಬಳ್ಳೊಳ್ಳಿನೂ ಹಾಕಿರ್ತಾರ. (ಜವಾರಿ ಬಳ್ಳೊಳ್ಳಿ ಅಂದ್ರ ಸಣ್ಣಸಣ್ಣು ಗಡ್ಡಿ ಇರ್ತಾವ. ಬಳ್ಳೊಳ್ಳಿ ಹೊದಿಕಿ ತಿಳಿಗುಲಾಬಿ ಇರ್ತದ. ತುಸು ಹೌದೋ ಅಲ್ಲೋ ಅನ್ನೂಹಂಗ ಮಿಂಚ್ತಾವ). ಈ ಮಸಾಲಿ ಖಾರ ಎಲ್ಲ ಉತ್ತರ ಕರ್ನಾಟಕ ಜೋಳದ ರೊಟ್ಟಿ ಅಂಗಡಿಯೊಳಗ ಸಿಗ್ತಾವ.ಅಗ್ದಿ ಕಡುಕೆಂಪು ಬಣ್ಣ ಇದಕ್ಕ. ಎಣ್ಣಿಯೊಳಗ ಉಳ್ಳಾಗಡ್ಡಿ ಬಾಡಸುಮುಂದನೇ ಇದನ್ನೂ ಹಾಕಿದ್ರ ಓಣಿ ತುಂಬ ಘಮ ಹರಡ್ತದ. ಯಾರ ಮನ್ಯಾಗ ಎಷ್ಟೊತ್ತಿಗೆ ಅಡಗಿ ಆಯ್ತು ಅನ್ನೂದು ಬಯಲು ಮಾಡ್ತದ. ಗುಟ್ಟು ಮಾಡಲಾಗದ ಮಸಾಲಿ ಮಾತು ಅಂದ್ರ ಖರೇವಂದ್ರೂ ಇದೇನೆ. ಅದಕ್ಕೇ ಎಲ್ಲ ಗಾಳಿಮಾತಿಗೂ ಮಸಾಲಿ ಸೇರಿಸಿ ಅನ್ನುವ ನುಡಿಗಟ್ಟು ಬಂದಿರಬಹುದು.ಇದೊಂದು ಕಡೆ ಕಿವಿ, ಮೂಗು, ನವರಂಧ್ರಗಳಲ್ಲಿಯೂ ಗಾಳಿಯಾಡುವ ಹಂಗ ಮಾಡ್ತದ. ಆದ್ರ ಆ ಖಾರಕ್ಕ ಕಡಿವಾಣ ಹಾಕಬೇಕಂತನೇ ರಾತ್ರಿ ಇಡೀ ನೀರಾಗ ನೆನದು ಮೈ ದುಂಡುಕ ಹಾಲ್ದುಂಬಿಕೊಂಡ ಸೇಂಗಾದ ಕಾಳು ಇರ್ತಾವ. ಮತ್ತ ಚಪಾತಿಯ ಮಂದ ರುಚಿ, ಖಾರ ಕಡೀತದ. ನೆನೆಸಿಟ್ಟ ಸೇಂಗಾದ ಭರಪೂರ ಪ್ರೊಟೀನು, ಚಪಾತಿಯ ನಾರಿನಂಶ, ಮುಂಜೇನಿಯ ನ್ಯಾರಿನ ಸಂಪೂರ್ಣ ಪೌಷ್ಠಿಕಾಂಶದ್ದಾಗಿ ಮಾಡ್ತದ.ಖಾರ ತಿನ್ನದವರಿಗಂತಲೇ, ಈ ಊರಿನ ಟೇಬಲ್ ಮ್ಯಾಲೆ ಸಕ್ರಿ ತುಂಬಿಸಿಟ್ಟಿರ್ತಾರ. ಆ ಖಾರದ ಉಸುಳಿಗೆ ಸಕ್ರಿ ಸೇರಿಸಿಕೊಂಡು ತಿಂದ್ರ ಆಹಹಾ.. ರುಚಿಮೊಗ್ಗು, ಅರಳಿದ್ದು ಕೆರಳ್ತಾವ. ಒಂದು, ಎರಡು ಮೂರು ಚಪಾತಿ ಸರಳಗೆ ಹೊಟ್ಟಿ ಸೇರ್ತಾವ. ಲಿಮಿಟೆಡ್, ಅನ್ಲಿಮಿಟೆಡ್ ಹಿಂಗೆಲ್ಲ ಯಾವ ಫ್ಯಾನ್ಸಿ ಹೆಸರುಗಳೂ ಈ ಮೆನುನಾಗ ಇಲ್ಲ.ಸ್ವಾಮಿ ಹೋಟೆಲ್ನ ಹೆಗ್ಗಳಕಿ ಅಂದ್ರ ನಿಮಗ ಹೊಟ್ಟಿ ತುಂಬೂತನಾನೂ ಬಿಸಿಬಿಸಿ ಚಪಾತಿ, ಉಸುಳಿ ಮರುಪೂರಣ ಮಾಡ್ಕೊಂತ ಹೋಗ್ತಾರ. ಜೇಬಿಗೇನೂ... ಏನೇನೂ ಭಾರ ಅನಸೂದಿಲ್ಲ.52 ವರ್ಷಗಳಿಂದ ಚಪಾತಿ ಉಸುಳಿಯನ್ನು ಉಣಬಡಿಸುತ್ತಿರುವ ಈ ಹೋಟೆಲಿನ ಮಾಲೀಕರು ಶೇಖರಯ್ಯ ಮಠದ. ಈಗ ಮೂರನೆಯ ತಲೆಮಾರು ಸುಜೀತ ಮಠದ ಅವರು ನಡಸ್ಕೊಂಡು ಹೊಂಟಾರ. ಪ್ರತಿದಿನ 25 ಕೆ.ಜಿ. ಗೋಧಿ ಹಿಟ್ಟಿನ ಚಪಾತಿ, ಹತ್ತು ಕೆ.ಜಿ. ಸೇಂಗಾ ಮತ್ತು 25 ಕೆ.ಜಿ. ಈರುಳ್ಳಿಯ ಉಸುಳಿ ಮಾಡಿ ಉಣಬಡಸ್ತಾರ. ಬಿಸಿಬಿಸಿ ಚಪಾತಿ ಉಸುಳಿ ಉಂಡು ಹೊರ ಊರಿಗೆ ಹೋಗೋರು, ಪ್ರಯಾಣ ಮುಗಿಸಿ, ಮತ್ತೇನು ಅಡಗಿ ಮಾಡೂದು ಅಂತ ಬುತ್ತಿ ಕಟ್ಟಿಸಿಕೊಂಡು ಹೋಗೋರು ಫರಮಾಯಿಶಿ ಸಾಲೀಗೆ ಬುತ್ತಿ ಕಟ್ಟಿಸಿಕೊಂಡು ಹೋಗೋರು ಇಲ್ಲಿಯ ಕಾಯಂ ಗ್ರಾಹಕರು. ಬನಹಟ್ಟಿ ಮ್ಯಾಲಿಂದ ಓಡಾಡೋರೂನು ಇಲ್ಲೊಂದು ಸ್ಟಾಪು ಕೊಟ್ಟು ಹೋಗೂದು ಸಹಜದ.ಗೌರವ್ವ ಮಠಪತಿ; ಮಹಾನಂದ ಕೋಳಿ; ಮಹಾದೇವಿ ಜಿಡ್ಡಿಮನಿ; ಪಾರವ್ವ ಕಾನಟ್ಟಿ; ಗೀತಾ ಗಡದಿ ಹಾಗೂ ಕಸ್ತೂರಿ ಮಹೀಷವಾಡಗಿ ಪಾಳೆ ಮೇಲೆ ಚಪಾತಿ ಮಾಡುವುದು, ಈರುಳ್ಳಿ ಹೆಚ್ಚುವುದು ಮಾಡ್ತಾರ. ಇಡೀ ಅಡಗಿ ಮನ್ಯಾಗ ಹೆಣ್ಮಕ್ಕಳದ್ದೇ ಕೈರುಚಿ ಮತ್ತ ಕಾರಬಾರು.ಬಡಿಸುವವರದ್ದೂ ಇಂಥದ್ದೇ ಹೆಂಗರುಳು. ಚಪಾತಿ ತರಲಿ? ಉಸುಳಿ ತೊಗೊರಿ ಎಂದು ಉಪಚರಿಸ್ಕೊಂತ ಬಡಸ್ತಿದ್ರ, ಬ್ಯಾಡನ್ನಾಕ ಭಿಡೆ ಆಗ್ತದ. ಹೊಟ್ಟಿ ತುಂಬ ಉಂಡು, ಹಿಂಗ ಹೊಟ್ಟಿ ನೆತ್ತಿ ನೋಡಿ ಉಪಚಾರ ಮಾಡೂದು ಅಪರೂಪ ಹೌದಿಲ್ಲೊ ಅಂತ ನಾನು ಶರಣ್ ಮಾತಾಡ್ಕೊಂತ, ರೊಕ್ಕ ಕೊಟ್ಟು ಹೋಗೂ ಮುಂದ ಮತ್ತ ಬರ್ರಿ ಅಂತ ಕರಿಯೂದು ಮರೀಲಿಲ್ಲ.ರಬಕವಿ ಬನಹಟ್ಟಿ ಕಡೆ ಹೋಗೋರು ಒಮ್ಮೆ ಮುದ್ದಾಂ ಆದ್ರೂ ಆ ಕಡೆ ಹೋಗಿ ಚಪಾತಿ ಉಸುಳಿ ಸವದು ಬರ್ರಿ.(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ–ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)