ಬೆಂಗಳೂರು | ದಸರಾ, ಆಯುಧಪೂಜೆ ಖರೀದಿಯ ಸಂಭ್ರಮ: ಕೆ.ಆರ್.ಮಾರುಕಟ್ಟೆಯಲ್ಲಿ ದಟ್ಟಣೆ
ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಸಡಗರದಿಂದ ಆಚರಿಸಲು ನಗರದ ಜನರು ಅಗತ್ಯ ಸಿದ್ಧತೆಯನ್ನು ಸೋಮವಾರ ನಡೆಸಿದರು.ಕೆ.ಆರ್.ಮಾರುಕಟ್ಟೆ ಪ್ರಾಂಗಣ ಪೂರ್ತಿಗ್ರಾಹಕರಿಂದ ತುಂಬಿಹೋಗಿತ್ತು. ಮಲ್ಲೇಶ್ವರ,ಬನಶಂಕರಿ, ಗಾಂಧಿ ಬಜಾರ್, ಯಶವಂತಪುರ, ಕೆ.ಆರ್.ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿಯೂ ನಾಗರಿಕರು ಹೂ, ಹಣ್ಣು, ತರಕಾರಿ ಸೇರಿದಂತೆ ಹಬ್ಬದ ಪರಿಕರ ಖ

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಸಡಗರದಿಂದ ಆಚರಿಸಲು ನಗರದ ಜನರು ಅಗತ್ಯ ಸಿದ್ಧತೆಯನ್ನು ಸೋಮವಾರ ನಡೆಸಿದರು.ಕೆ.ಆರ್.ಮಾರುಕಟ್ಟೆ ಪ್ರಾಂಗಣ ಪೂರ್ತಿಗ್ರಾಹಕರಿಂದ ತುಂಬಿಹೋಗಿತ್ತು. ಮಲ್ಲೇಶ್ವರ,ಬನಶಂಕರಿ, ಗಾಂಧಿ ಬಜಾರ್, ಯಶವಂತಪುರ, ಕೆ.ಆರ್.ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿಯೂ ನಾಗರಿಕರು ಹೂ, ಹಣ್ಣು, ತರಕಾರಿ ಸೇರಿದಂತೆ ಹಬ್ಬದ ಪರಿಕರ ಖರೀದಿಸಿದರು.ನವರಾತ್ರಿ ಆಚರಣೆ ವೇಳೆ ಪ್ರತಿ ವರ್ಷದಂತೆ ಹೂಗಳ ದರವು ಈ ಬಾರಿಯೂ ಏರಿಕೆಯಾಗಿದೆ. ಮಳೆ ಕೊರತೆ ಕಾರಣ ಹೂಗಳ ಇಳುವರಿ ತಗ್ಗಿದ್ದರಿಂದ ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಚೆಂಡು ಸೇರಿದಂತೆ ಹೂವುಗಳ ಬೆಲೆ ಹೆಚ್ಚಿದೆ. ಸೇವಂತಿಗೆ ಕೆ.ಜಿಗೆ ₹200 ಇದ್ದರೆ, ಬಿಳಿ ಬಣ್ಣದ ಸೇವಂತಿಗೆಗೆ ₹350 ಇತ್ತು. ವರಮಹಾಲಕ್ಷ್ಮಿ ಹಬ್ಬದ ವೇಳೆ ಅಂಬರಕ್ಕೇರಿದ್ದ ಕನಕಾಂಬರದ ದರವು ₹4 ಸಾವಿರದಿಂದ ₹2000ಕ್ಕೆ ಇಳಿದಿದೆ. ಮಲ್ಲಿಗೆ ಹೂ ಕೆ.ಜಿಗೆ ₹800ಕ್ಕೆ ಸಿಗುತ್ತಿದೆ.ವಾಹನಗಳನ್ನು ಅಲಂಕರಿಸಲು ಕಟ್ಟಿದಹೂಗಳನ್ನೇ ಗ್ರಾಹಕರು ಹೆಚ್ಚು ಖರೀದಿಸಿದರು. ಸೇವಂತಿಗೆಯು ಮಾರಿಗೆ ₹120ಕ್ಕೆ ಸಿಗುತ್ತಿದ್ದರೆ, ಮಲ್ಲಿಗೆ ₹150, ಚೆಂಡು ಹೂ ₹100ಕ್ಕೆ ಸಿಗುತ್ತಿದೆ. ಸೇವಂತಿಗೆ, ಸುಗಂಧರಾಜ, ಪನ್ನೀರು ಎಲೆ, ಗುಲಾಬಿ ಸೇರಿದಂತೆ ತರಾವರಿ ಗಾತ್ರದ ಹಾರಗಳ ಬೆಲೆ ₹250ರಿಂದ ₹2,500 ಇತ್ತು. ಮಾವಿನ ತೋರಣವು ಕಟ್ಟಿಗೆ ₹50ಕ್ಕೆ ಸಿಗುತ್ತಿತ್ತು. ತುಳಸಿ ಮಾರಿಗೆ ₹150 ಹಾಗೂ ತಾವರೆ ಜೋಡಿಗೆ ₹50 ಇದೆ.ಬೂದುಗುಂಬಳ, ನಿಂಬೆ ತುಟ್ಟಿ: ಬೂದುಗುಂಬಳ ಮತ್ತು ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಿದೆ. ಬೂದುಗುಂಬಳ ಕೆ.ಜಿಗೆ ₹30ರಿಂದ ₹40 ಇದ್ದರೆ, ನಿಂಬೆ ಹಣ್ಣೊಂದಕ್ಕೆ ₹10 ಕೊಡಬೇಕಿದೆ. ಪುಟಾಣಿ ಗಾತ್ರದ ಮೂರು ಹಣ್ಣುಗಳಿಗೆ ₹20 ಭರಿಸಬೇಕು. ಹೀಗಾಗಿ, ಚೌಕಾಶಿ ಮಾಡಲು ಮಾರುಕಟ್ಟೆಯ ಮೂಲೆ ಮೂಲೆಯನ್ನು ಗ್ರಾಹಕರು ಸುತ್ತಿದರು.ಮನೆ, ವಾಹನ, ಅಂಗಡಿ, ಕಾರ್ಖಾನೆಗಳಲ್ಲಿ ನಡೆಯುವ ಪೂಜೆಯಲ್ಲಿ ಒಡೆಯಲಾಗುವ ಬೂದುಗುಂಬಳಕ್ಕೆ ಗಾತ್ರಕ್ಕೆ ತಕ್ಕಂತೆ ಬೆಲೆಯನ್ನು ವ್ಯಾಪಾರಿಗಳು ನಿಗದಿ ಮಾಡಿದ್ದರು. 2 ಕೆ.ಜಿ. ತೂಗುವ ಕುಂಬಳಕ್ಕೆ ₹80, 3 ಕೆ.ಜಿ. ಗಾತ್ರಕ್ಕೆ ₹120 ಹಾಗೂ ಐದರಿಂದ 6 ಕೆ.ಜಿ. ತೂಗುವುದಕ್ಕೆ ₹150 ನೀಡಿ ಗ್ರಾಹಕರು ಖರೀದಿಸಿದರು.‘ನಿಂಬೆ ಹಣ್ಣು ಮತ್ತು ಬೂದುಗುಂಬಳಕ್ಕೆ ಆಯುಧಪೂಜೆ ವೇಳೆ ಬೇಡಿಕೆ ಹೆಚ್ಚು. ಕಳೆದ ವರ್ಷಕ್ಕಿಂತ ಇವೆರಡರ ಬೆಲೆ ಹೆಚ್ಚಿದ್ದು, ಈ ಬಾರಿ ಚೆನ್ನಾಗಿ ವ್ಯಾಪಾರವಾಗಿದೆ’ ಎಂದು ತರಕಾರಿ ವರ್ತಕ ಮುಖ್ತಿಯಾರ್ ಮಾಹಿತಿ ನೀಡಿದರು.ಬಾಳೆಕಂದು, ಎಲೆ, ತೆಂಗಿನಕಾಯಿ ಬೆಲೆಯೂ ಹೆಚ್ಚಿತ್ತು. ಎತ್ತರಕ್ಕೆ ತಕ್ಕಂತೆ ಬಾಳೆಕಂದು ಜೋಡಿಗೆ ₹70ರಿಂದ ₹130ರವರೆಗೂ ಇತ್ತು. ಊಟದ ಬಾಳೆ ಎಲೆ ಒಂದಕ್ಕೆ ₹6 ಇದ್ದರೆ, ತೆಂಗಿನ ಕಾಯಿಯೊಂದಕ್ಕೆ ₹50 ನೀಡಬೇಕಿತ್ತು.₹100 ದಾಟಿದ ನುಗ್ಗೆಕಾಯಿ..ಕೆ.ಆರ್.ಮಾರುಕಟ್ಟೆಯಲ್ಲಿ ಮೆಣಸಿನಕಾಯಿ, ನುಗ್ಗೆಕಾಯಿ ದರ ‘ಶತಕ’ ಬಾರಿಸಿದೆ. ಹಸಿ ಮೆಣಸಿನಕಾಯಿ ಹಾಗೂ ಬಜ್ಜಿ ಮೆಣಸಿನಕಾಯಿ ದರವು ಕೆ.ಜಿಗೆ ₹100 ಇದ್ದು, ಗ್ರಾಹಕರ ಕಣ್ಣಿಗೆ ಬೆಲೆ ಏರಿಕೆಯ ‘ಖಾರ’ ತಟ್ಟಿತ್ತು. ನುಗ್ಗೇಕಾಯಿ ದರವು ಕೆ.ಜಿಗೆ ₹120 ಇತ್ತು.ಕಳೆದ ವಾರ ಕೆ.ಜಿಗೆ ₹100 ಇದ್ದ ಬೀನ್ಸ್ ದರ ₹60ಕ್ಕೆ ಇಳಿದಿದ್ದರೆ, ಈರುಳ್ಳಿ ದರ ಈ ವಾರ ₹50ಕ್ಕೆ ಇಳಿಕೆ ಆಗಿದೆ. ಸಾಧಾರಣ ಗುಣಮಟ್ಟದ ಈರುಳ್ಳಿ ₹100ಕ್ಕೆ ಮೂರು ಕೆ.ಜಿ ಮಾರಾಟವಾಗುತ್ತಿದೆ. ಟೊಮೆಟೊ ₹100ಕ್ಕೆ ಐದು ಕೆ.ಜಿ ಸಿಗುತ್ತಿದೆ. ಹೀರೆಕಾಯಿ, ಕ್ಯಾಪ್ಸಿಕಮ್, ಚಪ್ಪರದವರೆ ಕೆ.ಜಿಗೆ ₹ 80 ಇದ್ದರೆ, ಸೌತೆಕಾಯಿ ದರ ₹30 ಆಗಿದೆ. ಸೊಪ್ಪುಗಳ ದರವೂ ಏರಿಕೆಯಾಗಿದ್ದು, ಕೊತ್ತಂಬರಿ ಕಟ್ಟಿಗೆ ₹ 30ರಿಂದ ₹50 ಇದೆ.ಹಣ್ಣುಗಳ ದರದಲ್ಲೂ ಏರಿಕೆಹಣ್ಣುಗಳ ದರದಲ್ಲಿ ಏರಿಕೆ ಆಗಿದ್ದು, ಕೆ.ಜಿ ಸೇಬಿಗೆ ₹120ರಿಂದ ₹220ರವರೆಗೂ ಇದೆ. ದಾಳಿಂಬೆ ₹100ರಿಂದ ₹240ರವರೆಗೆ ಬೆಲೆ ಇದೆ. ಮೂಸಂಬಿ ₹ 60 ಇದ್ದರೆ, ಏಲಕ್ಕಿ ಬಾಳೆಹಣ್ಣಿಗೆ ₹80, ಪಚ್ಚಬಾಳೆಗೆ ₹50 ಇತ್ತು. ದ್ರಾಕ್ಷಿ ದರ ₹150ಕ್ಕೆ ಏರಿಕೆಯಾಗಿದ್ದರೆ, ಸೀಬೆಗೆ ₹150, ಡ್ರ್ಯಾಗನ್ ಹಣ್ಣಿನ ದರ ಕೆ.ಜಿಗೆ ₹200 ಆಗಿದೆ.ಸಿಹಿ ತಿನಿಸು ಖರೀದಿ ಭರ್ಜರಿಆಯುಧ ಪೂಜೆ ಬಳಿಕ ಸಿಹಿ ಹಂಚಿ ಸಂಭ್ರಮಿಸುವುದು ವಾಡಿಕೆ. ಹೀಗಾಗಿ ಕಳೆದ ಕೆಲವು ದಿನಗಳಿಂದಲೇ ಸಿಹಿತಿನಿಸು ಮಾರಾಟ ಮಳಿಗೆಗಳ ಮುಂದೆ ಜನರ ಸಾಲು ನೆರೆದಿದ್ದು, ಭಾನುವಾರ ಗ್ರಾಹಕರು ಸಿಹಿತಿಂಡಿ ಖರೀದಿಗೆ ಮುಗಿಬಿದ್ದರು. ಸಾಕಷ್ಟು ಮಂದಿ ಮೊದಲೇ ತಿನಿಸುಗಳನ್ನು ಕಾಯ್ದಿರಿಸಿದ್ದು, ಭಾನುವಾರ ಒಯ್ದರು.ಸರ್ಕಾರಿ ಹಾಗೂ ಖಾಸಗಿ ಕಚೇರಿ, ಕೈಗಾರಿಕೆಗಳಲ್ಲಿ ಸೋಮವಾರವೇ ಪೂಜೆ ನಡೆಯಿತು. ಸಿಹಿಬೂಂದಿಗೆ ಬೇಡಿಕೆ ಹೆಚ್ಚಾಗಿತ್ತು. ಸಣ್ಣ ಪ್ಯಾಕ್ಗಳಲ್ಲಿ ಕಟ್ಟಿಟ್ಟ ತಿನಿಸುಗಳನ್ನು ಹೆಚ್ಚಾಗಿ ಖರೀದಿಸಲಾಯಿತು. ಕಾಲು ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್ಗಳಲ್ಲಿನ ತಿನಿಸುಗಳನ್ನು ರಾಶಿ ಲೆಕ್ಕದಲ್ಲಿ ಒಯ್ಯಲಾಯಿತು. ಸಿಹಿ ತಿನಿಸು ಪ್ರತಿ ಕೆ.ಜಿ.ಗೆ ₹350ರಿಂದ ₹1,500ರವರೆಗೂ ಬೆಲೆ ಇತ್ತು.261020-4-681413967