ದುಷ್ಟತನದ ವಿರುದ್ಧ ದೈವತ್ವದ ವಿಜಯ ಸಾರುವ ಹಬ್ಬ – ವಿಜಯದಶಮಿಯ ಪೌರಾಣಿಕ ಮಹತ್ವವೇನು?
ದುಷ್ಟತನದ ಅಟ್ಟಹಾಸಕ್ಕೆ ಅಂತ್ಯ ಹಾಡಿ, ಧರ್ಮದ ಹಾದಿಯಲ್ಲಿ ಸಾಗುವವರಿಗೆ ಜಯ ಲಭಿಸುತ್ತದೆ ಎಂಬ ಮಹತ್ತರ ಸಂದೇಶ ಸಾರುವ ಹಬ್ಬವೇ ವಿಜಯದಶಮಿ. ನಾಡಿನಾದ್ಯಂತ ಸಡಗರ, ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸುವ ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಾಗಿ, ಸತ್ಯ, ಧರ್ಮ, ನ್ಯಾಯ ಮತ್ತು ಒಳಿತಿನ ಶಕ್ತಿಯನ್ನು ಸಾರುವ ಪವಿತ್ರ ಸಂಕೇತವೂ ಹೌದು. ಅಶ್ವಯುಜ ಮಾಸದ ಶುಕ್ಲ ಪಕ್ಷದ

ದುಷ್ಟತನದ ಅಟ್ಟಹಾಸಕ್ಕೆ ಅಂತ್ಯ ಹಾಡಿ, ಧರ್ಮದ ಹಾದಿಯಲ್ಲಿ ಸಾಗುವವರಿಗೆ ಜಯ ಲಭಿಸುತ್ತದೆ ಎಂಬ ಮಹತ್ತರ ಸಂದೇಶ ಸಾರುವ ಹಬ್ಬವೇ ವಿಜಯದಶಮಿ. ನಾಡಿನಾದ್ಯಂತ ಸಡಗರ, ಸಂಭ್ರಮ ಮತ್ತು ಭಕ್ತಿಭಾವದಿಂದ ಆಚರಿಸುವ ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಲ್ಲ, ಬದಲಾಗಿ, ಸತ್ಯ, ಧರ್ಮ, ನ್ಯಾಯ ಮತ್ತು ಒಳಿತಿನ ಶಕ್ತಿಯನ್ನು ಸಾರುವ ಪವಿತ್ರ ಸಂಕೇತವೂ ಹೌದು. ಅಶ್ವಯುಜ ಮಾಸದ ಶುಕ್ಲ ಪಕ್ಷದ 10ನೇ ದಿನದಂದು ಆಚರಿಸಲಾಗುವ ವಿಜಯದಶಮಿಯು ಶರದ್ ನವರಾತ್ರಿಯ ಸಮಾಪನದ ಶುಭದಿನವಾಗಿದೆ. ಪುರಾಣಗಳ ಪ್ರಕಾರ, ಆದಿಶಕ್ತಿಯು ಶುಂಭ ಮತ್ತು ನಿಶುಂಭರಂತಹ ದುಷ್ಟ ಶಕ್ತಿಗಳನ್ನ ಸಂಹರಿಸಿ ದೈವಿಕ ಶಕ್ತಿಯ ಮಹಿಮೆಯನ್ನ ಜಗತ್ತಿಗೆ ಸಾರಿದ ದಿನವಿದು. ಅಧರ್ಮದ ವಿರುದ್ಧ ಧರ್ಮವು ಸಾಧಿಸಿದ ವಿಜಯವನ್ನ ಸ್ಮರಿಸುವ ಈ ಶುಭ ಸಂದರ್ಭದಲ್ಲಿ, ಕೆಟ್ಟತನ ಎಷ್ಟೇ ಬಲಿಷ್ಠವಾಗಿದ್ದರೂ ಅಂತಿಮವಾಗಿ ಗೆಲುವು ಸತ್ಯ ಮತ್ತು ಧರ್ಮಕ್ಕೇ ಎಂಬ ನಂಬಿಕೆ ಮತ್ತಷ್ಟು ಗಟ್ಟಿಯಾಗುತ್ತದೆ. ಆದರೆ ವಿಜಯದಶಮಿಯ ಮಹತ್ವ ಇಷ್ಟಕ್ಕೇ ಸೀಮಿತವಲ್ಲ! ಭಾರತೀಯ ಪುರಾಣ, ಇತಿಹಾಸ ಮತ್ತು ಸಂಸ್ಕೃತಿಯ ಪುಟಗಳಲ್ಲಿ ಈ ದಿನಕ್ಕೆ ಸಂಬಂಧಿಸಿದ ಹಲವು ರೋಚಕ ಕಥೆಗಳು ಅಡಗಿವೆ. ಶ್ರೀರಾಮನ ವಿಜಯದಿಂದ ಹಿಡಿದು ಪಾಂಡವರ ಅಜ್ಞಾತವಾಸದ ಅಂತ್ಯದವರೆಗೆ, ಪ್ರತಿಯೊಂದು ಕಥೆಯೂ ಬದುಕಿಗೆ ಒಂದೊಂದು ಅಮೂಲ್ಯ ಸಂದೇಶವನ್ನು ನೀಡುತ್ತದೆ. ಅವುಗಳನ್ನು ನೋಡುವುದಾದ್ರೆ… ದಶಕಂಠನ ಮೇಲೆ ಶ್ರೀರಾಮನ ವಿಜಯ ವಿಜಯದಶಮಿಯು ರಾವಣನ ಮೇಲೆ ಶ್ರೀರಾಮಚಂದ್ರನು ಸಾಧಿಸಿದ ವಿಜಯದ ನೆನಪಿಗಾಗಿ ಸಹ ಆಚರಿಸಲಾಗುತ್ತದೆ. ಸೀತಾ ಮಾತೆಯನ್ನ ಲಂಕೆಯಿಂದ ಬಿಡಿಸಿಕೊಂಡು ಹೋಗಲು ಬಂದ ಶ್ರೀರಾಮನು ರಾವಣನನ್ನು ಸಂಹರಿಸುತ್ತಾನೆ. ಇದರ ನೆನಪಿನಾರ್ಥವಾಗಿ ರಾವಣನ ಪ್ರತಿಕೃತಿಗಳನ್ನು ದಹನ ಮಾಡುತ್ತಾರೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆಯದು ಗೆಲುವು ಸಾಧಿಸಿದ ಧ್ಯೋತಕ ಎಂದು ನಂಬಲಾಗುತ್ತದೆ. ರಾವಣನಿಗೆ ಹತ್ತು ತಲೆಗಳು ಇದ್ದವು. ಇವೆಲ್ಲವೂ ರಾವಣನಿಗೆ ಅಸಾಧ್ಯವಾದ ಅಹಂ ಅನ್ನು ನೀಡಿದ್ದವು. ಈ ಹತ್ತು ತಲೆಗಳನ್ನು ಸಂಹರಿಸಿದ ದಿನವೇ ‘ದಶ ಹರ’ ಎಂದು ಕರೆಯಲ್ಪಟ್ಟಿತು. ಮುಂದೆ ಇದೇ ಜನರ ಬಾಯಲ್ಲಿ ದಸರಾ ಎಂದು ಬದಲಾಯಿತು. ಅಹಂ ಅನ್ನು ಓಡಿಸುವ ದಿನ ಇದು ಎಂದು ಸಹ ಕರೆಯಲ್ಪಡುತ್ತದೆ. ಪಾಂಡವರ ವನವಾಸ ಅಂತ್ಯಗೊಂಡ ದಿನ ಮಹಾಭಾರತದಲ್ಲಿ ಪಾಂಡವರ ಅಜ್ಞಾತವಾಸವು ಅಂತ್ಯಗೊಂಡ ದಿನವೇ ‘ವಿಜಯದಶಮಿ’. ಕೌರವರ ಜೊತೆಗೆ ನಡೆದ ಪಗಡೆಯಾಟದಲ್ಲಿ ಸೋತು, ನಿಯಮದ ಪ್ರಕಾರ ಹನ್ನೆರಡು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತ ವಾಸವನ್ನು ಮಾಡಿದ ಪಾಂಡವರು, ತಮ್ಮ ಅಜ್ಞಾತವಾಸವನ್ನು ಮುಗಿಸಿ, ತಮ್ಮ ರಾಜ್ಯವನ್ನು ತಮಗೆ ನೀಡಿರಿ ಎಂದು ಕೇಳಲು ಬಂದರು. ಆ ಕ್ರಿಯೆಗೆ ಮುನ್ನುಡಿ ಹಾಡಿದ ವಿರಾಟನ ಗೋಗ್ರಹಣಕ್ಕೆ ಪ್ರತಿಯಾಗಿ ಯುದ್ಧವೊಂದು ನಡೆಯಿತು. ಆ ಯುದ್ಧ ನಡೆದಿದ್ದು ವಿಜಯದಶಮಿಯಂದು. ದಕ್ಷಿಣ ಭಾರತದಲ್ಲಿ ವಿಜಯದಶಮಿಯನ್ನು ಚಾಮುಂಡೇಶ್ವರಿ ಅಥವಾ ದುರ್ಗಾ ದೇವಿಯ ಆರಾಧನೆ ಮಾಡಲು ಆಚರಿಸುತ್ತಾರೆ. ದೇವಾನುದೇವತೆಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸಿ ಮನೆಗಳಲ್ಲಿ ಇಡುತ್ತಾರೆ. ಇದನ್ನು ತಮಿಳು ನಾಡಿನಲ್ಲಿ ‘ಗೋಲು’ ಎಂದು, ಕರ್ನಾಟಕದಲ್ಲಿ ‘ಗೊಂಬೆ ಹಬ್ಬ’ ಎಂದು ಕರೆಯುತ್ತಾರೆ. ಕೇರಳದಲ್ಲಿ, ವಿಜಯದಶಮಿಯ ದಿನ ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಎಳೆಯ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡುತ್ತಾರೆ. ಈ ದಿನ ವಿದ್ಯಾಭ್ಯಾಸವನ್ನು ಆರಂಭಿಸಲು ಒಳ್ಳೆಯ ದಿನ ಎಂಬ ನಂಬಿಕೆ ಇದೆ. ಕೆಟ್ಟದ್ದರ ವಿರುದ್ಧ ಒಳ್ಳೆಯದು ಸಾಧಿಸಿದ ಗೆಲುವನ್ನು ಆಚರಿಸಲು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಯಾವುದೇ ಧರ್ಮ, ಮತಗಳ ಭೇದವಿಲ್ಲದೆ ಹಲವರು ಈ ಹಬ್ಬವನ್ನು ಆಚರಿಸುತ್ತಾರೆ. ಎಲ್ಲರಿಗೂ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಂತಿ ಮತ್ತು ಸೌಹಾರ್ದತೆಯ ಜೊತೆಗೆ ಸಂಪತ್ತನ್ನು ಕರುಣಿಸು ಎಂದು ದೇವಿಯನ್ನು ಪ್ರಾರ್ಥಿಸುತ್ತಾರೆ. ಜೊತೆಗೆ ಸುಗ್ಗಿಯ ಕಾಲವನ್ನು ಬರಮಾಡಿಕೊಳ್ಳಲು ಈ ಹಬ್ಬದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ. ಇದರ ಜೊತೆಗೆ, ಕೃಷಿ ಸಂಸ್ಕೃತಿಯಲ್ಲಿಯೂ ವಿಜಯದಶಮಿಗೆ ಮಹತ್ವವಿದೆ. ಮಳೆಗಾಲದ ನಂತರ ಸುಗ್ಗಿಯ ನಿರೀಕ್ಷೆಯಲ್ಲಿರುವ ರೈತಾಪಿ ವರ್ಗಕ್ಕೆ ಈ ಹಬ್ಬವು ಹೊಸ ಭರವಸೆ, ಸಮೃದ್ಧಿ ಮತ್ತು ಸಂತಸದ ಸಂಕೇತವಾಗಿದೆ. ಪ್ರಕೃತಿಯ ಕೃಪೆಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ದಿನಗಳು ಸುಖ-ಸಮೃದ್ಧಿಯಿಂದ ಕೂಡಿರಲಿ ಎಂದು ಪ್ರಾರ್ಥಿಸುವ ಸಂಪ್ರದಾಯವೂ ಹಲವೆಡೆ ಕಂಡುಬರುತ್ತದೆ. ಒಟ್ಟಿನಲ್ಲಿ, ವಿಜಯದಶಮಿಯು ಕೇವಲ ಹಬ್ಬವಲ್ಲ, ಅದು ಬದುಕನ್ನು ಉತ್ತಮಗೊಳಿಸಿಕೊಳ್ಳಲು ಪ್ರೇರಣೆ ನೀಡುವ ಮಹತ್ವದ ಸಂದೇಶ. ನಮ್ಮೊಳಗಿನ ಕೆಟ್ಟ ಆಲೋಚನೆಗಳನ್ನ ರ ಮಾಡಿ, ಸತ್ಯ ಮತ್ತು ಧರ್ಮದ ಹಾದಿಯಲ್ಲಿ ಸಾಗುವ ಸಂಕಲ್ಪವನ್ನು ಕೈಗೊಳ್ಳಲು ಇದು ಸಕಾಲ.