ವಿಜಯೇಂದ್ರ-ಯತ್ನಾಳ್ ಮುಖಾಮುಖಿ: ಮತ್ತೆ ಬಿಜೆಪಿಗೆ ವಾಪಸ್?
ಬೆಂಗಳೂರು: ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಅವರ ನಡುವಿನ ಹಠಾತ್ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(Yediyurappa) ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ನಿರಂತರವಾಗಿ ಬಹಿರಂಗ

ಬೆಂಗಳೂರು: ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(B. Y. Vijayendra) ಅವರ ನಡುವಿನ ಹಠಾತ್ ಭೇಟಿ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(Yediyurappa) ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ನಿರಂತರವಾಗಿ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್, ಪಕ್ಷದ ಶಿಸ್ತು ಉಲ್ಲಂಘನೆ ಆರೋಪದಡಿ ಬಿಜೆಪಿಯಿಂದ ಉಚ್ಛಾಟನೆಗೊಂಡಿದ್ದರು. ಆದರೆ ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಈ ಇಬ್ಬರು ನಾಯಕರು ಮುಖಾಮುಖಿಯಾಗಿದ್ದಾರೆ. ಈ ವೇಳೆ ಹಳೆಯ ವೈಮನಸ್ಸನ್ನೆಲ್ಲ ಮರೆತು, ಒಂದೇ ಟೇಬಲ್ನಲ್ಲಿ ಎದುರು-ಬದುರಾಗಿ ಕುಳಿತು ಉಭಯ ಕುಶಲೋಪರಿ ನಡೆಸಿದ್ದಾರೆ. ಈ ಅನಿರೀಕ್ಷಿತ ಭೇಟಿಯ ಫೋಟೋ ಮತ್ತು ದೃಶ್ಯಗಳು ಮುನ್ನೆಲೆಗೆ ಬರುತ್ತಿದ್ದಂತೆ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆಯೇ ಎಂಬ ಕುತೂಹಲ ಕೆರಳಿದೆ. ಈ ಅನಿರೀಕ್ಷಿತ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ “ಅದೊಂದು ಖಾಸಗಿ ಕಾರ್ಯಕ್ರಮವಾಗಿತ್ತು, ಅಲ್ಲಿ ಪರಸ್ಪರ ಭೇಟಿಯಾಗಿದ್ದೆವು. ಮುಂದೆ ಏನಾಗುತ್ತದೆಯೋ ಕಾದು ನೋಡೋಣ” ಎಂದು ಮಾರ್ಮಿಕವಾಗಿ ಉತ್ತರಿಸುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಇದನ್ನೂ ಓದಿ: ಭಾರತದ ಶತ್ರುಗಳನ್ನು ಗುರುತಿಸಿ, ಸದೆಬಡಿಯಿರಿ: ದಸರಾ ವೇಳೆ ಮೋದಿ ಕರೆ ಇದೇ ವಿಚಾರವಾಗಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಯತ್ನಾಳ್ ಅವರ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಲವು ತಿಂಗಳುಗಳಿಂದ ಕಟು ಟೀಕೆ-ಪ್ರತೀಕಾರಗಳ ಮೂಲಕವೇ ಸುದ್ದಿಯಲ್ಲಿದ್ದ ಈ ಇಬ್ಬರು ನಾಯಕರು ಒಟ್ಟಿಗೆ ಕುಳಿತು ಮಾತುಕತೆ ನಡೆಸಿರುವುದು, ಯತ್ನಾಳ್ ಅವರ ಮರುಪ್ರವೇಶಕ್ಕೆ ವೇದಿಕೆ ಸಿದ್ಧವಾಗುತ್ತಿದೆಯೇ ಅಥವಾ ಕೇವಲ ಔಪಚಾರಿಕ ಭೇಟಿಯಷ್ಟೇನಾ ಎಂಬ ಚರ್ಚೆಗೆ ರಾಜ್ಯ ರಾಜಕೀಯ ಅಂಗಳದಲ್ಲಿ ನಾಂದಿ ಹಾಡಿದೆ.