ಟಿಎಂಸಿ ತೊರೆದ ಬೆನ್ನಲ್ಲೇ ಗುಜರಾತ್ ಸರ್ಕಾರದಿಂದ ಯೂಸೂಫ್ಗೆ ಜಮೀನು ʻಗಿಫ್ಟ್ʼ
– ವಿವಾದಿತ ಜಮೀನು ಹಸ್ತಾಂತರಿಸಲು ಪ್ರಸ್ತಾಪ – ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕೆ ಗಿಫ್ಟ್ ವಡೋದರಾ: ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಮಾಜಿ ಟಿಎಂಸಿ (TMC) ಸಂಸದ ಯೂಸುಫ್ ಪಠಾಣ್(Yusuf Pathan) ಅವರ ವಡೋದರಾ ಜಮೀನು(Vadodara Plot) ವಿವಾದವು ಕೊನೆಗೂ ಬಗೆಹರಿಯುವ ಹಂತಕ್ಕೆ ತಲುಪಿದೆ. ಅವರು ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾ

– ವಿವಾದಿತ ಜಮೀನು ಹಸ್ತಾಂತರಿಸಲು ಪ್ರಸ್ತಾಪ – ವಿಶ್ವಕಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಕ್ಕೆ ಗಿಫ್ಟ್ ವಡೋದರಾ: ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಮಾಜಿ ಟಿಎಂಸಿ (TMC) ಸಂಸದ ಯೂಸುಫ್ ಪಠಾಣ್(Yusuf Pathan) ಅವರ ವಡೋದರಾ ಜಮೀನು(Vadodara Plot) ವಿವಾದವು ಕೊನೆಗೂ ಬಗೆಹರಿಯುವ ಹಂತಕ್ಕೆ ತಲುಪಿದೆ. ಅವರು ಇತ್ತೀಚೆಗೆ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷವನ್ನು ತೊರೆದು ಎನ್ಡಿಎ (NDA) ಒಕ್ಕೂಟವನ್ನು ಬೆಂಬಲಿಸಿದ ಬೆನ್ನಲ್ಲೇ, ಗುಜರಾತ್ ಸರ್ಕಾರವು ವಿವಾದಿತ ಜಮೀನನ್ನು ಅವರಿಗೆ ಹಸ್ತಾಂತರಿಸಲು ಪ್ರಸ್ತಾಪಿಸಿದೆ. ಏನಿದು ವಿವಾದ? ಯೂಸುಫ್ ಪಠಾಣ್ ಅವರು ಗುಜರಾತ್ನ(Gujarat) ವಡೋದರಾದ ತಾಂಡಲ್ಜಾ ಪ್ರದೇಶದಲ್ಲಿರುವ ತಮ್ಮ ಬಂಗಲೆಗೆ ಹೊಂದಿಕೊಂಡಿರುವ 978 ಚದರ ಮೀಟರ್ ವಿಸ್ತೀರ್ಣದ ಮುನ್ಸಿಪಲ್ ನಿವೇಶನವನ್ನು ತಮಗೆ ಮಂಜೂರು ಮಾಡುವಂತೆ 2012 ರಲ್ಲಿ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ಗೆ (VMC) ಮನವಿ ಮಾಡಿದ್ದರು. ವಿಎಂಸಿ ಈ ಪ್ರಸ್ತಾಪವನ್ನು ಒಪ್ಪಿ ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತಾದರೂ 2014 ರಲ್ಲಿ ಗುಜರಾತ್ ಸರ್ಕಾರವು ಬಹಿರಂಗ ಹರಾಜು ಇಲ್ಲದೆ ಈ ಜಮೀನನ್ನು ನೇರವಾಗಿ ನೀಡಲು ಸಾಧ್ಯವಿಲ್ಲ ಎಂದು ಪ್ರಸ್ತಾಪವನ್ನು ತಿರಸ್ಕರಿಸಿತ್ತು. 2024 ರ ಲೋಕಸಭಾ ಚುನಾವಣೆಯಲ್ಲಿ ಪಠಾಣ್ ಅವರು ಪಶ್ಚಿಮ ಬಂಗಾಳದ ಬಹರಂಪುರದಿಂದ ಟಿಎಂಸಿ ಟಿಕೆಟ್ನಲ್ಲಿ ಸ್ಪರ್ಧಿಸಿ ಗೆದ್ದ ಬೆನ್ನಲ್ಲೇ, ಮುನ್ಸಿಪಲ್ ಕಾರ್ಪೊರೇಷನ್ ಅವರು ಜಮೀನಿನಲ್ಲಿ ಅನಧಿಕೃತ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ಪಠಾಣ್ ಅವರು ಈ ಒತ್ತುವರಿ ನೋಟಿಸ್ ಅನ್ನು ಗುಜರಾತ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ 2025 ರ ಆಗಸ್ಟ್ನಲ್ಲಿ ಹೈಕೋರ್ಟ್ ಅವರ ಅರ್ಜಿಯನ್ನು ತಿರಸ್ಕರಿಸಿತು ಮತ್ತು ಸಾರ್ವಜನಿಕ ಭೂಮಿಯನ್ನು ಯಾವುದೇ ಅಧಿಕೃತ ಮಂಜೂರಾತಿ ಪತ್ರ ಅಥವಾ ಹಣ ಪಾವತಿಸದೆ ದಶಕಗಳಿಂದ ಅತಿಕ್ರಮಣ ಮಾಡಿಕೊಂಡಿರುವುದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಅಂತಿಮವಾಗಿ ಆಗಸ್ಟ್ 31, 2026 ರಂದು ಯೂಸುಫ್ ಪಠಾಣ್ ತಮ್ಮ ಮೇಲ್ಮನವಿಯನ್ನು ಹೈಕೋರ್ಟ್ನಿಂದ ಬೇಷರತ್ತಾಗಿ ಹಿಂಪಡೆದರು. ಯೂಸುಫ್ ಪಠಾಣ್ ಅವರು ಟಿಎಂಸಿ ತೊರೆದು ಸಂಸತ್ತಿನಲ್ಲಿ ಎನ್ಡಿಎ (NDA) ಒಕ್ಕೂಟದ ಪರವಾಗಿ ನಿಂತ ಕೆಲವೇ ತಿಂಗಳುಗಳಲ್ಲಿ ಈ ವಿವಾದಾತ್ಮಕ ಪ್ರಕರಣದಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಭೂಮಿ ಮಂಜೂರು ಮಾಡುವ ರಾಜ್ಯ ನೀತಿಯ ಅಡಿಯಲ್ಲಿ ಗುಜರಾತ್ ಸರ್ಕಾರವು ಈ ವಿವಾದಿತ 978 ಚದರ ಮೀಟರ್ ಜಮೀನನ್ನು ಪಠಾಣ್ ಅವರಿಗೆ ಹಂಚಿಕೆ ಮಾಡಲು ಒಪ್ಪಿಗೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಹೊಸ ಯೋಜನೆಯ ಪ್ರಕಾರ, ಒಟ್ಟು ಜಮೀನಿನಲ್ಲಿ 500 ಚದರ ಮೀಟರ್ ಭೂಮಿಯನ್ನು ಅವರಿಗೆ ಉಚಿತವಾಗಿ (ಗಿಫ್ಟ್ ಆಗಿ) ನೀಡಲಾಗುವುದು ಮತ್ತು ಉಳಿದ 478 ಚದರ ಮೀಟರ್ ಭೂಮಿಯನ್ನು ಶೇ. 45 ರಷ್ಟು ರಿಯಾಯಿತಿ ದರದಲ್ಲಿ (ಅಂದರೆ ಮೌಲ್ಯದ ಶೇ. 55 ರಷ್ಟು ಹಣ ಪಡೆದು) ನೀಡಲು ಪ್ರಸ್ತಾಪಿಸಲಾಗಿದೆ. ಈ ಜಮೀನಿನ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 20.53 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, ಸರ್ಕಾರದ ಈ ನಿರ್ಧಾರದಿಂದ ಪಠಾಣ್ ಅವರಿಗೆ ಸುಮಾರು 15 ಕೋಟಿ ರೂ.ಯಷ್ಟು ದೊಡ್ಡ ರಿಯಾಯಿತಿ ಸಿಕ್ಕಂತಾಗುತ್ತದೆ. ಈ ಪ್ರಸ್ತಾವನೆಯನ್ನು ಅಂತಿಮ ಅನುಮೋದನೆಗಾಗಿ ಅಕ್ಟೋಬರ್ 23 ರಂದು ಬಿಜೆಪಿ ಆಡಳಿತವಿರುವ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ನ ಸ್ಥಾಯಿ ಸಮಿತಿಯ ಮುಂದೆ ಮಂಡಿಸಲಾಗುತ್ತಿದೆ. ಪಠಾಣ್ ಅವರ ರಾಜಕೀಯ ನಿಲುವು ಬದಲಾದ ತಕ್ಷಣವೇ ಈ ಜಮೀನು ಮಂಜೂರಾತಿ ಪ್ರಕ್ರಿಯೆ ನಡೆದಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗುಜರಾತ್ ಜಾಗ ಯಾಕೆ ನೀಡುತ್ತಿದೆ? ಗುಜರಾತ್ ಸರ್ಕಾರವು ದೇಶದ ಪರವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮತ್ತು ವಿಶ್ವಕಪ್ನಂತಹ ಜಾಗತಿಕ ಟೂರ್ನಿಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಕೀರ್ತಿ ತಂದ ವಿಶಿಷ್ಟ ಅಂತರರಾಷ್ಟ್ರೀಯ ಕ್ರೀಡಾಪಟುಗಳಿಗೆ (Distinguished International Sportspersons) ವಸತಿ ಉದ್ದೇಶಕ್ಕಾಗಿ ರಿಯಾಯಿತಿ ದರದಲ್ಲಿ ಭೂಮಿ ಮಂಜೂರು ಮಾಡುವ ವಿಶೇಷ ಕಲ್ಯಾಣ ನೀತಿಯನ್ನು ಹೊಂದಿದೆ. ಯೂಸುಫ್ ಪಠಾಣ್ ಅವರು 2007 ರ ಟಿ20 ವಿಶ್ವಕಪ್ ಮತ್ತು 2011 ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದರು. ಈ ಐತಿಹಾಸಿಕ ವಿಶ್ವಕಪ್ ಸಾಧನೆಗಳ ಆಧಾರದ ಮೇಲೆಯೇ ಅವರು “ಅಂತರರಾಷ್ಟ್ರೀಯ ಕ್ರೀಡಾಪಟುಗಳ ಕೋಟಾ” ಅಡಿಯಲ್ಲಿ ಈ ಜಾಗಕ್ಕಾಗಿ ಹಕ್ಕು ಮಂಡಿಸಲು ಅರ್ಹರಾಗಿದ್ದಾರೆ. 2012 ರಲ್ಲಿ ಮೊದಲ ಬಾರಿಗೆ ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ಗೆ (VMC) ಅರ್ಜಿ ಸಲ್ಲಿಸಿದಾಗ, ತಾವು ಒಬ್ಬ ಅಂತರರಾಷ್ಟ್ರೀಯ ಕ್ರಿಕೆಟಿಗರಾಗಿದ್ದು, ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆ ಹಾಗೂ ಗೌಪ್ಯತೆಯ (Security concerns) ದೃಷ್ಟಿಯಿಂದ ತಮ್ಮ ಬಂಗಲೆಗೆ ಹೊಂದಿಕೊಂಡಿರುವ ಈ ಜಾಗ ತಮಗೆ ಬೇಕು ಎಂದು ವಿಶ್ವಕಪ್ ಕ್ರಿಕೆಟಿಗನ ಸ್ಥಾನಮಾನವನ್ನೇ ಉಲ್ಲೇಖಿಸಿ ಮನವಿ ಮಾಡಿದ್ದರು. ಇತ್ತೀಚೆಗೆ ಗುಜರಾತ್ ಹೈಕೋರ್ಟ್ನಲ್ಲಿ ಒತ್ತುವರಿ ವಿವಾದದ ವಿಚಾರಣೆ ನಡೆದಾಗಲೂ, ಯೂಸುಫ್ ಪಠಾಣ್ ಅವರ ಪರ ವಕೀಲರು “ರಾಜ್ಯದ ಅಂತರರಾಷ್ಟ್ರೀಯ ಕ್ರೀಡಾಪಟುಗಳ ಭೂ ಹಂಚಿಕೆ ನೀತಿ” ಅಡಿಯಲ್ಲೇ ತಮಗೆ ಈ ಜಾಗ ಸಿಗಬೇಕು ಎಂದು ವಾದಿಸಿದ್ದರು.