ಹೊಸಪೇಟೆಯ ದಸರಾದಲ್ಲಿ ಗಮನ ಸೆಳೆದ ಪಲ್ಲಕ್ಕಿ ಸವಾರಿ
ಹೊಸಪೇಟೆ (ವಿಜಯನಗರ): ಮೈಸೂರಿನ ದಸರಾಕ್ಕೆ ಮೂಲ ಪ್ರೇರಣೆಯಾದ ಹೊಸಪೇಟೆ ದಸರಾದ ಪ್ರಮುಖ ಘಟ್ಟವಾದ ಶಕ್ತಿದೇವತೆಗಳ ಬನ್ನಿ ಮುಡಿಯುವ ಸಂಭ್ರಮ ಮಂಗಳವಾರ ಸಂಜೆ ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ವಿಜೃಂಭಣೆಯಿಂದ ನೆರವೇರಿತು.ಮೈಸೂರಿನಲ್ಲಿ ಜಂಬೂ ಸವಾರಿ ನೋಡಲು ಲಕ್ಷಗಟ್ಟಲೆ ಜನ ಸೇರುತ್ತಾರೆ, ಇಲ್ಲಿ ಪಲ್ಕಕ್ಕಿಗಳಲ್ಲಿ ವಿರಾಜಮಾನರಾದ ಶಕ್ತಿದೇವತೆಗಳನ್ನು ನೋಡಲು ಸ

ಹೊಸಪೇಟೆ (ವಿಜಯನಗರ): ಮೈಸೂರಿನ ದಸರಾಕ್ಕೆ ಮೂಲ ಪ್ರೇರಣೆಯಾದ ಹೊಸಪೇಟೆ ದಸರಾದ ಪ್ರಮುಖ ಘಟ್ಟವಾದ ಶಕ್ತಿದೇವತೆಗಳ ಬನ್ನಿ ಮುಡಿಯುವ ಸಂಭ್ರಮ ಮಂಗಳವಾರ ಸಂಜೆ ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ವಿಜೃಂಭಣೆಯಿಂದ ನೆರವೇರಿತು.ಮೈಸೂರಿನಲ್ಲಿ ಜಂಬೂ ಸವಾರಿ ನೋಡಲು ಲಕ್ಷಗಟ್ಟಲೆ ಜನ ಸೇರುತ್ತಾರೆ, ಇಲ್ಲಿ ಪಲ್ಕಕ್ಕಿಗಳಲ್ಲಿ ವಿರಾಜಮಾನರಾದ ಶಕ್ತಿದೇವತೆಗಳನ್ನು ನೋಡಲು ಸಾವಿರಾರು ಕಣ್ಣುಗಳು ಕಾತರಿಸುತ್ತವೆ. ಕೇರಿಗಳಿಂದ ಪಲ್ಕಕ್ಕಿಗಳನ್ನು ಹೊರುವ ಯುವಕರು ದಢದಢನೆ ಓಡುತ್ತ ಸುಮಾರು ಆರು ಕಿಲೋಮೀಟರ್ ದೂರದ ಧರ್ಮದಗುಡ್ಡಕ್ಕೆ ಬರುವುದನ್ನು ನೋಡುವುದೇ ಚೆಂದೆ. ಹೀಗಾಗಿಯೇ ಹೊಸಪೇಟೆ ದಸರಾ ಎಂದರೆ ಅದು ಪಲ್ಲಕ್ಕಿ ಸವಾರಿ.ಹೊಸಪೇಟೆ ಏಳುಕೇರಿಗಳ ಶಕ್ತಿದೇವತೆಗಳು, ಕಮಲಾಪುರದ ಏಳುಕೇರಿ, ನಾಗೇನಹಳ್ಳಿ, ಬಸವನದುರ್ಗದ ಶಕ್ತಿದೇವತೆಗಳು ಆಯುಧ ಪೂಜೆಯ ದಿನದಂದು ಧರ್ಮದಗುಡ್ಡಕ್ಕೆ ತೆರಳಿ, ಚನ್ನಬಸವೇಶ್ವರನ ನೇತೃತ್ವದಲ್ಲಿ ‘ಬನ್ನಿ’ ಮುಡಿಯುವುದು ನೂರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯವಾಗಿದ್ದು, ಅದು ಮತ್ತೆ ಈ ಬಾರಿಯೂ ಮುಂದುವರಿಯಿತು.ತೀವ್ರ ಬರಗಾಲದಿಂದ ತತ್ತರಿಸಿರುವ ನಾಡಿನಲ್ಲಿ ಈ ಬಾರಿ ದಸರಾ ಉತ್ಸವ ಕಳೆಗುಂದಬಹುದು ಎಂಬ ನಿರೀಕ್ಷೆಯನ್ನು ಹುಸಿಮಾಡಿದ ಭಕ್ತರು, ಸಂಪ್ರದಾಯಕ್ಕೆ ಯಾವ ಚ್ಯುತಿಯೂ ಆಗದಂತೆ ಉತ್ಸವ ಆಚರಿಸಿದರು. ಕೇರಿಗಳ ನಾಯಕರು, ಊರಿನ ಹಿರಿಯರು ಮುಂಚೂಣಿಯಲ್ಲಿ ನಿಂತು ಉತ್ಸವವನ್ನು ಯಶಸ್ವಿಗೊಳಿಸಿದರು. ಚನ್ನಬಸವೇಶ್ವರ ಧರ್ಮದಗುಡ್ಡದ ಕ್ಷೇತ್ರಾಧಿಪತಿ. ಆತನ ತಂಗಿ ನಿಜಲಿಂಗಮ್ಮ. ಇವರಿಬ್ಬರ ಸನ್ನಿಧಿಗೆ ಆಯುಧ ಪೂಜೆಯ ದಿನವೇ ಪಲ್ಲಕ್ಕಿಗಳ ಬರುವ ಶಕ್ತಿ ದೇವತೆಗಳು, ಬಳಿಕ ಜತೆಯಾಗಿಯೇ ಕಾಳಮ್ಮನ ಸನ್ನಿಧಿಯಿರುವ ಬನ್ನಿಮರದತ್ತ ತೆರಳಿ ಬನ್ನಿ ಮುಡಿಯುವ ಸಂಪ್ರದಾಯ ಬಲು ಅಪರೂಪ. ವಿಜಯನಗರ ಅರಸರ ಕಾಲದಲ್ಲಿ ಆರಂಭವಾಗಿದ್ದ ಈ ಸಂಪ್ರದಾಯಕ್ಕೆ ಮತ್ತೆ ನಾಡು ಸಾಕ್ಷಿಯಾಯಿತು.ಮಂಗಳವಾರ ಸಂಜೆ ಮೊದಲಿಗೆ ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಪಲ್ಲಕ್ಕಿ ಬನ್ನಿ ಮರವನ್ನು ಪ್ರದಕ್ಷಿಣೆ ಹಾಕಿದವು. ಬಳಿಕ ತಂಡೋಪತಂಡವಾಗಿ ಶಕ್ತಿದೇವತೆಗಳ ಪಲ್ಲಕ್ಕಿಗಳು ಸೇರಿಕೊಂಡವು. ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ ಹಾಗೂ ಉಕ್ಕಡಕೇರಿಯ ಜಲದುರ್ಗಮ್ಮ ದೇವಿಯಯರ ಪಲ್ಲಕ್ಕಿ ಮೆರವಣಿಗೆ ನೋಡುವುದೇ ಚೆಂದವಾಗಿತ್ತು. ಜಂಬಾನಹಳ್ಳಿಕೇರಿ ಮತ್ತು ಬಂಡೆಕೇರಿಗಳು ಹೊಸಪೇಟೆಯಲ್ಲಿರುವ ಇತರ ಎರಡು ಶಕ್ತಿದೇವತೆಗಳಿರುವ ಕೇರಿಗಳು. ಬನ್ನಿಯನ್ನು (ಶಮೀವೃಕ್ಷ) ಪಲ್ಲಕ್ಕಿಯಲ್ಲಿನ ಶಕ್ತಿ ದೇವತೆಗಳ ಉಡಿಗೆ ತುಂಬಿಸಿದ ಬಳಿಕ ಪಲ್ಲಕ್ಕಿಗಳು ಮತ್ತೆ ತಮ್ಮ ಸ್ವಸ್ಥಾನಗಳತ್ತ ತೆರಳಿದವು.ಧರ್ಮದಗುಡ್ಡದ ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವವೂ ಆಯುಧಪೂಜೆ, ವಿಜಯದಶಮಿಗಳಂದು ನಡೆಯುತ್ತದೆ. ಹೀಗಾಗಿ ಎರಡೂ ಆಚರಣೆಗಳು ಒಂದೆಡೆ ಕಲೆತು ನಾಗೇನಹಳ್ಳಿ, ಗುಡಿಓಬಳಾಪುರಗಳಲ್ಲಿ ಸಂಭ್ರಮ ಮನೆಮಾಡಿತ್ತು. ಮಾಜಿ ಸಚಿವ ಆನಂದ ಸಿಂಗ್, ಸಮಾಜ ಸೇವಕಿ ರಶ್ಮಿ ರಾಜಶೇಖರ ಹಿಟ್ನಾಳ್, ಶಾಸಕ ಎಚ್. ಆರ್.ಗವಿಯಪ್ಪ ಅವರ ಪುತ್ರ ಗುರುದತ್, ನಗರಸಭೆ ಅಧ್ಯಕ್ಷ ಎನ್. ರೂಪೇಶ್ ಕುಮಾರ್, ಹಲವು ಸದಸ್ಯರು, ವಾಲ್ಮೀಕಿ ನಾಯಕ ಸಮುದಾಯದ ಹಲವು ಮುಖಂಡರು ಇದ್ದರು.ಮಳೆಯ ಲಕ್ಷಣ ಇಲ್ಲದ ಕಾರಣ ಭಾರಿ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.ಬನ್ನಿ ಮುಡಿಯುವ ಸಂಪ್ರದಾಯಶಕ್ತಿದೇವತೆಗಳೆಂದರೆ ಉಗ್ರ ಸ್ವರೂಪಿಗಳು. ಪಿತೃಪಕ್ಷದಲ್ಲಿ ಮಾತ್ರ ಅವುಗಳಿಗೆ ತಮ್ಮ ಕ್ಷೇತ್ರದಲ್ಲಿ ಸುತ್ತಾಡಲು ಅವಕಾಶ ಇದೆ. ನವರಾತ್ರಿಯ ಒಂಭತ್ತು ದಿನಗಳು ಅವುಗಳಿಗೆ ತೊಟ್ಟಿಲ ಸೇವೆ ನಡೆಯುತ್ತದೆ. ಆಯುಧ ಪೂಜೆಯ ದಿನ ಮಾತ್ರ ತಮ್ಮಕ್ಷೇತ್ರ ಬಿಟ್ಟು ಹೊರಹೋಗಲು ಅವಕಾಶ ಇದ್ದು, ಇಡೀ ನಾಡಿನ ಕ್ಷೇತ್ರಾಧಿಪತಿ ಹಾಗೂ ತಮ್ಮ ಅಣ್ಣನೆಂದು ಭಾವಿಸುವ ಚನ್ನಬಸವೇಶ್ವರ, ನಿಜಲಿಂಗಮ್ಮ ಜತೆಗೂಡಿ ಬನ್ನಿ ಪಡೆದ ಬಳಿಕ ಅವುಗಳು ಅಲ್ಲಿ ನಿಲ್ಲದೆ ನೇರವಾಗಿ ತಮ್ಮ ಸ್ವಸ್ಥಾನ ಸೇರಬೇಕು. ಮತ್ತೆ ಮುಂದಿನ ನವರಾತ್ರಿವರೆಗೆ ಅವುಗಳಿಗೆ ಅಲ್ಲೇ ವಾಸ ಎಂಬ ನಂಬಿಕೆಯ ಭಾಗವಾಗಿ ಈ ಎಲ್ಲ ಆಚರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ.ಬಲಿಷ್ಠ ಬೇಡರ ಪಡೆಯ ಶಕ್ತಿ ದೇವತೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೃಷ್ಣದೇವರಾಯ ಏಳು ಸಾವಿರ ಬೇಡರ ಪಡೆಗಳನ್ನು ಹೊಸಪೇಟೆ ಕೋಟೆಯ ಹಿಂಭಾಗದಲ್ಲಿ ಇರಿಸಿದ್ದ. ಆಗ ವಿಜಯನಗರ ಸಾಮ್ರಾಜ್ಯದ ವಿಸ್ತೀರ್ಣ 60 ಚದರ ಕಿ.ಮೀ.ನಷ್ಟಿತ್ತು. ಶತ್ರು ಸೈನ್ಯ ಹೊಸಪೇಟೆಯ ಬೇಡರ ಪಡೆಯನ್ನು ದಾಟಿಯೇ ಸಾಮ್ರಾಜ್ಯದೊಳಗೆ ಬರಬೇಕಿತ್ತು. 1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಯಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ಹೇಳಲಾಗುತ್ತದೆ.