ಆಳ–ಅಗಲ| ದಸರಾ ಸಾಮರಸ್ಯದ ಸಾರ
ದೇಶದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ‘ದಸರಾ’ ಎಂಬ ಹೆಸರಿನಲ್ಲಿ ಒಂಬತ್ತು ದಿನಗಳ ಈ ಹಬ್ಬವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಚರಿಸಲಾಗುತ್ತದೆ. ಮೈಸೂರು ದಸರಾದ ಜಂಬೂ ಸವಾರಿ ಜಗದ್ವಿಖ್ಯಾತ. ಕೆಲವು ಜಿಲ್ಲೆಗಳಲ್ಲಿ ನವರಾತ್ರಿಯ ಆಚರಣೆ ಭಿನ್ನವಾಗಿದೆ, ವೈಶಿಷ್ಟ್ಯಪೂರ್ಣವಾಗಿಯೂ ಇದೆ. ಆಚರಣೆಯಲ್ಲಿ ಕೋಮು ಸಾಮರಸ್ಯವೂ ಬೆರೆತಿದೆ. ಬ

ದೇಶದಾದ್ಯಂತ ಹಿಂದೂಗಳು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ‘ದಸರಾ’ ಎಂಬ ಹೆಸರಿನಲ್ಲಿ ಒಂಬತ್ತು ದಿನಗಳ ಈ ಹಬ್ಬವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಚರಿಸಲಾಗುತ್ತದೆ. ಮೈಸೂರು ದಸರಾದ ಜಂಬೂ ಸವಾರಿ ಜಗದ್ವಿಖ್ಯಾತ. ಕೆಲವು ಜಿಲ್ಲೆಗಳಲ್ಲಿ ನವರಾತ್ರಿಯ ಆಚರಣೆ ಭಿನ್ನವಾಗಿದೆ, ವೈಶಿಷ್ಟ್ಯಪೂರ್ಣವಾಗಿಯೂ ಇದೆ. ಆಚರಣೆಯಲ್ಲಿ ಕೋಮು ಸಾಮರಸ್ಯವೂ ಬೆರೆತಿದೆ. ಬಹುತೇಕ ಕಡೆಗಳಲ್ಲಿ ಮಹಿಷಾಸುರನನ್ನು ಸಂಹಾರ ಮಾಡಿದ ದುರ್ಗೆಯನ್ನು ಆರಾಧಿಸಿದರೆ, ಇನ್ನೂ ಕೆಲವೆಡೆ ರಾವಣನನ್ನು ಸದೆಬಡಿದ ರಾಮನನ್ನು ಆರಾಧಿಸುವ ಕ್ರಮವಿದೆ. ರಾಜ್ಯದ ವಿವಿಧೆಡೆ ವೈವಿಧ್ಯಮಯವಾಗಿ ಆಚರಿಸಲಾಗುವ ದಸರಾ ಹಬ್ಬದ ಪರಿಚಯ ಇಲ್ಲಿದೆ..ಮಂಗಳೂರು ದಸರಾ ಹಾಗೂ ನವರಾತ್ರಿ ಉತ್ಸವ ಕುದ್ರೋಳಿ ಕ್ಷೇತ್ರದ ವತಿಯಿಂದ ಭಾನುವಾರ ನಡೆದ ಕಿನ್ನಿ ಪಿಲಿ ಸ್ಪರ್ಧೆ ‘ಮಾರ್ನೆಮಿ’ಯ ಹುಲಿವೇಷಕ್ಕೆ ಸೌಹಾರ್ದದ ಬೆಸುಗೆದೇವತೆಗಳ ನಾಡಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಮಾರ್ನೆಮಿ’ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ. ತುಳುನಾಡಿನಲ್ಲಿ ಯಕ್ಷಗಾನ, ಕಂಬಳ, ದೈವಾರಾಧನೆಯಷ್ಟೇ ದೈವಿಕ ಭಾವನೆ ಹುಲಿವೇಷ ಕುಣಿತಕ್ಕೂ ಇದೆ. ನವರಾತ್ರಿಯಿಂದ ಆರಂಭವಾಗುವ ಹುಲಿವೇಷ (ಪಿಲಿ) ಕುಣಿತ ವಿಜಯದಶಮಿಯೊಂದಿಗೆ ಕೊನೆಗೊಳ್ಳುತ್ತದೆ.ಪಿಲಿವೇಷವೆಂದರೆ ಕುಣಿತವಷ್ಟೇ ಅಲ್ಲ, ಅದು ಸರ್ವಧರ್ಮಗಳ ನಡುವೆ ಸೌಹಾರ್ದ ಬೆಸೆಯುವ ಸೇತುವಿನಂತೆ. ವೇಷ ಕಟ್ಟುವ ಹಿಂದೂಗಳಿಗೆ ಹೆಗಲಾಗುತ್ತಾರೆ ಕ್ರೈಸ್ತರು ಹಾಗೂ ಮುಸ್ಲಿಮರು.ಮಂಗಳೂರು ಮೂಲದ ಹಾಲಿ ಸೌದಿ ಅರೇಬಿಯಾ ನಿವಾಸಿ ಮೊಹಮ್ಮದ್ ಆಸಿಫ್ ಅವರು, ಹುಲಿವೇಷದ ಮೇಲಿನ ಪ್ರೀತಿಯಿಂದಾಗಿ, ಹುಲಿವೇಷಧಾರಿಗಳು ಧರಿಸುವ ಟೊಪ್ಪಿಗೆ ಚರ್ಮದ ಶೀಟ್ಗಳನ್ನು ಪ್ರತಿವರ್ಷ ಕಳುಹಿಸಿಕೊಡುತ್ತಾರೆ. ಹುಲಿ ವೇಷ ಹಾಕುವ ವ್ಯಕ್ತಿಯ ತಂದೆ–ತಾಯಿ, ಹತ್ತಿರದ ಸಂಬಂಧಿಗಳು, ಬಂಧುಗಳು ಹಾಗೂ ಮಿತ್ರರು ಹುಲಿ ವೇಷಧಾರಿಗೆ ನೋಟಿನ ಹಾರ ಹಾಕಿ ಸಂಭ್ರಮಿಸುತ್ತಾರೆ. ಸೌದಿಯಿಂದ ಊರಿಗೆ ಬರುವ ಕೆಲವು ಮುಸ್ಲಿಂ ಸಮುದಾಯದವರು ತಾವು ತಂದಿರುವ ದೀರ್ಹಾಂನಿಂದ ಹಾರ ತಯಾರಿಸಿಕೊಂಡು ಅದನ್ನು ಹುಲಿವೇಷಧಾರಿಗೆ ಹಾಕುತ್ತಾರೆ.ಎಮ್ಮೆಕೆರೆ ಫ್ರೆಂಡ್ಸ್ ಸರ್ಕಲ್ನ ದಸರಾ ಹುಲಿ ತಂಡದಲ್ಲಿ ಮುಸ್ಲಿಂ, ಕ್ರೈಸ್ತರೂ ಇರುತ್ತಾರೆ. ಜಿಲ್ಲೆಯಲ್ಲಿ 150ಕ್ಕೂ ಅಧಿಕ ಹುಲಿವೇಷ ತಂಡಗಳಿವೆ. ಹಿಂದೆ ಮುಸ್ಲಿಮರು, ಕ್ರೈಸ್ತರು ಹುಲಿವೇಷ ಕಟ್ಟಿದ ಉದಾಹರಣೆಗಳೂ ಇವೆ.ಹುಲಿವೇಷ ಕಟ್ಟುವ ಬಗ್ಗೆ ಹಲವಾರು ಐತಿಹ್ಯಗಳಿವೆ. ಅವುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಕಥೆಯೆಂದರೆ, ಅನಾರೋಗ್ಯಕ್ಕೀಡಾದ ತಾಯಿಯೊಬ್ಬಳು ಮಂಗಳೂರಿನ ಮಂಗಳಾದೇವಿಗೆ ಹರಕೆ ಹೊತ್ತು, ‘ನನ್ನ ಮಗುವಿಗೆ ಚರ್ಮದ ಕಾಯಿಲೆ ಇದೆ, ಸರಿಯಾಗಿ ನಡೆಯಲಾಗುತ್ತಿಲ್ಲ, ಮಾತು ಬರುತ್ತಿಲ್ಲ. ನೀನು ನನ್ನ ಮಗುವಿನ ಕಾಲು ಸರಿ ಮಾಡಿಕೊಟ್ಟರೆ, ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುತ್ತೇನೆ’ ಎಂದು ಹೇಳಿಕೊಂಡಿದ್ದಳಂತೆ. ಪವಾಡ ಸದೃಶ್ಯವಾಗಿ ಆ ಮಗು ಗುಣಮುಖವಾಯಿತಂತೆ.ದೇವಿಗೆ ಹರಕೆ ಹೊತ್ತವರು ನವರಾತ್ರಿ ವೇಳೆ ಮಕ್ಕಳಿಗೆ ಹುಲಿವೇಷ ಕಟ್ಟಿ ಹರಕೆ ತೀರಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನವರಾತ್ರಿ ವೇಳೆ ಹುಲಿವೇಷ ಸ್ಪರ್ಧೆಗಳು ಹೆಚ್ಚುತ್ತಿವೆ. ಮಕ್ಕಳು, ಮಹಿಳೆಯರು, ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಮಂಗಳೂರು ದಸರಾದಲ್ಲಿ ‘ಕಿನ್ನಿಪಿಲಿ’ (ಮರಿಹುಲಿ) ಸ್ಪರ್ಧೆ ನಡೆದರೆ, ಪಕ್ಕದ ಉಡುಪಿ ಜಿಲ್ಲೆಯ ಉಚ್ಚಿಲ ದಸರಾದಲ್ಲಿ ಪೊಣ್ಣು ಪಿಲಿ (ಮಹಿಳಾ ಹುಲಿ) ಸ್ಪರ್ಧೆ ನಡೆದಿದೆ.ಪ್ರತಿವರ್ಷ ಆಯುಧಪೂಜೆ ದಿನ ಚಾಮರಾಜ ಮೊಹಲ್ಲಾದ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ದಸರಾ ಗಜಪಡೆಯನ್ನು ಕರೆತಂದು ‘ಸಲಾಂ’ ಮಾಡಿಸಲಾಗುತ್ತದೆಜಂಬೂಸವಾರಿಗೆ ಮುನ್ನದರ್ಗಾದಲ್ಲಿ ಗಜಪಡೆ ‘ಸಲಾಂ’ಮೈಸೂರಿನಲ್ಲಿ ನಡೆಯುವ ನಾಡಹಬ್ಬ ದಸರೆಯು ಎಲ್ಲರನ್ನೂ ಒಳಗೊಳ್ಳುವ ಹಬ್ಬ. ಆಯುಧಪೂಜೆ ದಿನ ಚಾಮರಾಜ ಮೊಹಲ್ಲಾದ ಹಜರತ್ ಇಮಾಮ್ ಶಾ ವಲೀ ದರ್ಗಾಕ್ಕೆ ದಸರಾ ಗಜಪಡೆಯನ್ನು ಕರೆತಂದು ‘ಸಲಾಂ’ ಮಾಡಿಸುವ ವಿಶಿಷ್ಟ ಸಂಪ್ರದಾಯ ದಶಕಗಳಿಂದ ಆಚರಣೆಯಲ್ಲಿದೆ.ಭಕ್ತರು, ಸೂಫಿ ಸಂತ ಇಮಾಮ್ ಶಾ ವಲೀ ಅವರಿಗೆ, ಚಾಮುಂಡೇಶ್ವರಿ ದೇವಿಗೆ ಜೈಕಾರ ಹಾಕುತ್ತಾರೆ. ಬಹುತ್ವದ ಹಿರಿಮೆ, ಸೌಹಾರ್ದದ ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಸೇರುತ್ತಾರೆ.ಎಂಟು ದಶಕಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಚೇತರಿಸಿಕೊಂಡಿತು. ಅಂದಿನಿಂದ ರಾಜರ ಆಣತಿಯಂತೆ ಪ್ರತಿ ದಸರೆಯಲ್ಲೂ ದರ್ಗಾಕ್ಕೆ ಬರುತ್ತಿವೆ.ಅಂಬಾರಿ ಹೊರುವ ಆನೆಯ ನೇತೃತ್ವದಲ್ಲಿ ಆನೆಗಳು ಅರಮನೆ ಪಶ್ಚಿಮ ದ್ವಾರವಾದ ‘ಬ್ರಹ್ಮಪುರಿ’ಯಿಂದ ದರ್ಗಾಕ್ಕೆ ಬರುತ್ತವೆ. ದರ್ಗಾದಲ್ಲಿ ಧೂಪಾರತಿ ಮಾಡಿ ಬೂಂದಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ವಿಭೂತಿಯನ್ನು ಆನೆಗಳ ಹಣೆಗೆ ಹಚ್ಚಿ ಚಾದರದ ಮೇಲಿಟ್ಟಿದ್ದ ನವಿಲುಗರಿಯಿಂದ ದರ್ಗಾದ ಮುಖ್ಯಸ್ಥರು ಆಶೀರ್ವದಿಸುವುದು ಸಂಪ್ರದಾಯ. ಆಗ, ಆನೆಗಳು ಸೊಂಡಿಲೆತ್ತಿ ನಮಸ್ಕರಿಸುತ್ತವೆ.ಇಲ್ಲಿಗೆ ಬರುವ ದಸರಾ ಆನೆಗಳು ಆಶೀರ್ವಾದ ಪಡೆದ ಮೇಲೆ ದರ್ಗಾಕ್ಕೆ ಬೆನ್ನು ತೋರಿಸಿ ತಿರುಗುವುದಿಲ್ಲ. ಹಿಮ್ಮುಖವಾಗಿ ಚಲಿಸಿ ನಂತರ ಅರಮನೆಗೆ ವಾಪಸಾಗುವುದು ವಿಶೇಷ.ಕಿರೀಟ, ಆಭರಣಗಳನ್ನು ಧರಿಸಿ ರಾಜ ಪೋಷಾಕಿನಲ್ಲಿ ಶೃಂಗೇರಿ ಶ್ರೀಗಳಾದ ವಿಧುಶೇಖರ ಭಾರತೀ ಸ್ವಾಮೀಜಿಶೃಂಗೇರಿ ಶ್ರೀಗಳ ದರ್ಬಾರ್ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನವರಾತ್ರಿ ಸಮಯದಲ್ಲಿ 12 ದಿನ ಶಾರದಾ ಪೀಠದ ಶ್ರೀಗಳ ದರ್ಬಾರ್ ನಡೆಯುತ್ತದೆ. ಶತಮಾನಗಳಿಂದ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ಪ್ರತಿ ದಿನ ರಾತ್ರಿ ಶಾರದಾ ದೇವಿಯ ಉತ್ಸವ ನಡೆಸಿದ ನಂತರ ಶ್ರೀಗಳು (ವಿಧುಶೇಖರಭಾರತೀ ಸ್ವಾಮೀಜಿ) ರತ್ನ ಖಚಿತ ಕಿರೀಟ, ಆಭರಣಗಳನ್ನು ಧರಿಸಿ ರಾಜಪೋಷಾಕಿನಲ್ಲಿ ದೇವಾಲಯಕ್ಕೆ ಬರುತ್ತಾರೆ. ಶಾರದೆಯ ಮೂಲ ವಿಗ್ರಹಕ್ಕೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಶ್ರೀಗಳು ಆಸೀನರಾಗುತ್ತಾರೆ. ನಂತರ ಋತ್ವಿಜರಿಂದ ಸಪ್ತಶತಿ ಪಾರಾಯಣ, ನಾಲ್ಕು ವೇದಗಳ ಪಾರಾಯಣ, ಮಹಾಮಂಗಳರಾತಿ, ಪಂಚಾಂಗ ಶ್ರವಣ, ಸಂಗೀತ, ಸರ್ವ ವಾದ್ಯ ಸೇವೆಗಳು ನಡೆಯುತ್ತವೆ. ಪ್ರಸಾದ ವಿನಿಯೋಗದ ಬಳಿಕ ದರ್ಬಾರು ಮುಕ್ತಾಯಗೊಳ್ಳುತ್ತದೆ. ಈ ಆಚರಣೆ 11 ದಿನ ರಾತ್ರಿ ನಡೆಯುತ್ತದೆ. 12ನೇ ದಿನ ಅಡ್ಡಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ಮುಗಿದ ನಂತರ ಹಗಲು ದರ್ಬಾರ್ ನಡೆಸುತ್ತಾರೆ.ದೇವಿ ಪ್ರತಿಷ್ಠಾಪನೆ, ರಾವಣ ದಹನಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹಲವೆಡೆ ನವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.ಕಲಬುರಗಿ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ಮಾದರಿಯಲ್ಲಿ ‘ದೇವಿ’ ಮೂರ್ತಿಗಳನ್ನು ಪ್ರತಿಷ್ಠಾಪಿಸಿ 9 ದಿನ ಆರಾಧಿಸುವುದು ವಿಶೇಷ.ಬೀದರ್ನಲ್ಲಿ ವಿಜಯದಶಮಿ ಹಬ್ಬದ ಅಂಗವಾಗಿ ರಾಮಲೀಲಾ ಉತ್ಸವ ಸಮಿತಿಯಿಂದ ಪ್ರತಿ ವರ್ಷ ಎರಡು ದಿನ ರಾಮಲೀಲಾ ಉತ್ಸವ ಹಮ್ಮಿಕೊಳ್ಳಲಾಗುತ್ತದೆ. ರಾಮಲೀಲಾ ನೃತ್ಯರೂಪಕ ಕಾರ್ಯಕ್ರಮ, ಸಂಗೀತ ಸಮಾರಂಭ ನಡೆಯುತ್ತದೆ. ಇದಾದ ಬಳಿಕ 46 ಅಡಿ ಎತ್ತರದ ರಾವಣನ ಪ್ರತಿಕೃತಿ ದಹಿಸಿ, ಬಾನಂಗಳದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.ಯಾದಗಿರಿ ಜಿಲ್ಲೆಯ ಸುರಪುರದ ಗೋಸಲ ವಂಶಸ್ಥ ಅರಸು ಮನೆತನವು ಮೈಸೂರು ಮತ್ತು ತಿರುಪತಿ ಮಾದರಿಯಲ್ಲಿ ‘ದಸರಾ’ ಆಚರಿಸುತ್ತದೆ. ಈಗಿನ ಸಂಸ್ಥಾನಿಕ ರಾಜಾ ಕೃಷ್ಣಪ್ಪನಾಯಕ ಅವರ ನೇತೃತ್ವದಲ್ಲಿ ಒಂಬತ್ತು ದಿನ ನವರಾತ್ರಿ ಆಚರಣೆಗಳು ಜರುಗುತ್ತವೆ. ನವರಾತ್ರಿ ವೇಳೆ ಗೋಸಲ ವಂಶಸ್ಥ ಅರಸರು, ಕುಟುಂಬಸ್ಥರು, ಪ್ರತಿನಿಧಿಗಳು ವೇಣುಗೋಪಾಲಸ್ವಾಮಿ ದೇವಸ್ಥಾನದ ಪೂಜೆ, ದೇವರ ಉತ್ಸವ, ಬನ್ನಿ ಮುಡಿಯುವ ಮೆರವಣಿಗೆಗೆ ಹೊರಡುವ ಮುನ್ನವೇ ಮುಸ್ಲಿಂ ಸಮುದಾಯದ ಅಜೀಂ ಬೆಳ್ಳಿಬೆತ್ತ ಅವರು ಬೆಳ್ಳಿ ಕೋಲು ಹಿಡಿದು, ‘ಮಹಾರಾಜ ಆ ರಹಾ ಹೈ’ (ಮಹಾರಾಜರು ಬರುತ್ತಿದ್ದಾರೆ) ಎಂದು ಏರುಧ್ವನಿಯಲ್ಲಿ ಕೂಗಿ ಮಾರ್ಗದಲ್ಲಿನ ಜನರಿಗೆ ತಿಳಿಸುತ್ತಾರೆ. ಬೆಳ್ಳಿಬೆತ್ತ ಮನೆತನದವರಿಗೆ ಬೆಳ್ಳಿ ಕೋಲು ಹಿಡಿದು ಅರಸರ ಮುಂದೆ ನಡೆದುಕೊಂಡು ಹೋಗುವ ಅವಕಾಶವನ್ನು ತಲೆಮಾರುಗಳಿಂದ ವಹಿಸಿಕೊಡಲಾಗಿದೆ.ಹಸಿರು ರಾಜಪೋಷಾಕಿನಲ್ಲಿ ಸ್ವಾಮೀಜಿಸಾಮಾನ್ಯವಾಗಿ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಮಠಾಧೀಶರು ‘ಖಾವಿ’ ದಿರಿಸಿನಲ್ಲಿ ಪಾಲ್ಗೊಳ್ಳುತ್ತಾರೆ.ಆದರೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಸಾವಳಗಿ ಪೀಠದಲ್ಲಿ ನವರಾತ್ರಿ ಕೊನೇ ದಿನ ನಡೆಯುವ ‘ಸೀಮೋಲ್ಲಂಘನೆ’ ಕಾರ್ಯಕ್ರಮದಲ್ಲಿ ಜಗದ್ಗುರು ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಹಸಿರು ರಾಜಪೋಷಾಕಿನಲ್ಲಿ ಭಾಗವಹಿಸುತ್ತಾರೆ.ರಾಜಮರ್ಯಾದೆ, ಬಿರುದಾವಳಿಗಳ ಘೋಷಣೆಗಳ ಮಧ್ಯೆ ಅಶ್ವಾರೂಢರಾಗಿ ಬನ್ನಿ ಮಂಟಪಕ್ಕೆ ಆಗಮಿಸುತ್ತಾರೆ. ಬನ್ನಿವೃಕ್ಷಕ್ಕೆ ಪೂಜೆ ಸಲ್ಲಿಸಿದ ನಂತರ, ಆಯಧಗಳಿಂದ ಬನ್ನಿ ಕತ್ತರಿಸಿ ಸೀಮೋಲ್ಲಂಘನೆ ನೆರವೇರಿಸುತ್ತಾರೆ.ಸಾವಳಗಿಯ ಜಗದ್ಗುರು ಶಿವಲಿಂಗೇಶ್ವರ ಪೀಠ ಹಿಂದೂ-ಮುಸ್ಲಿಂ ಭಾವ್ಯೆಕ್ಯತೆಯ ಪ್ರತೀಕವಾಗಿದೆ. ಇಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಹಿಂದೂಗಳ ಜತೆಗೆ, ಮುಸ್ಲಿಮರು ಭಾಗವಹಿಸುತ್ತಾರೆ. ನಗಾರಿ ಬಾರಿಸುವುದು, ಉದ್ಘೋಷ ಹೇಳುವುದು, ದಿವಟಗಿ ಹಿಡಿಯುವುದು ಮತ್ತಿತರ ಕೆಲಸಗಳನ್ನೂ ಮುಸ್ಲಿಮರು ಮಾಡುತ್ತಾರೆ. ನವರಾತ್ರಿ ಕಾರ್ಯಕ್ರಮದಲ್ಲೂ ಅಪಾರ ಸಂಖ್ಯೆಯಲ್ಲಿ ಸೇರಿ ಸಾಮರಸ್ಯದ ಸಂದೇಶ ಸಾರುತ್ತಾರೆ.ಇದಾದ ನಂತರ ಮೆರವಣಿಗೆ ನಡೆಯುತ್ತದೆ. ಆಯಾ ವರ್ಷ ರೈತರು ತಾವು ಬೆಳೆದ ಕಬ್ಬನ್ನು ಕೈಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಸಾಗುವ ದೃಶ್ಯ ಮನಸೆಳೆಯುತ್ತದೆ.ದಸರೀಘಟ್ಟ ಚೌಡೇಶ್ವರಿದೇವಿ ಮುಳ್ಳುಗದ್ದಿಗೆ ಉತ್ಸವತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾಮಠದ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವ ಆಳೆತ್ತರದ ಗಟ್ಟಿಕಾರೆಮುಳ್ಳಿನ ರಾಶಿಯ ಮೇಲೆ ವಿಜಯ ದಶಮಿಯಂದು ವೈಭವದಿಂದ ನಡೆಯುತ್ತದೆ.ಸುಮಾರು 7X8 ಅಡಿಯಷ್ಟು ಉದ್ದ-ಅಗಲದ ಜಾಗದಲ್ಲಿ ಅಳೆತ್ತರದಷ್ಟು ಗಟ್ಟಿ ಕಾರೆಮುಳ್ಳಿನ ಗಿಡಗಳನ್ನು ರಾಶಿ ಹಾಕಲಾಗುತ್ತದೆ. ಈ ಮುಳ್ಳಿನ ರಾಶಿಯ ಮೇಲೆ ಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಆರೇಳು ಭಕ್ತರು ಹೊತ್ತುಕೊಂಡು ಸರಾಗವಾಗಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಮೂರು ಬಾರಿ ನಡೆಯುತ್ತಾರೆ. ಇದರ ಜತೆಗೆ ಹರಕೆ ಮಾಡಿಕೊಂಡ ಭಕ್ತರು ಕೂಡ ದೇವಿಯ ಹಿಂದೆ ನಡೆದುಕೊಂಡು ಹೋಗುವ ಮೂಲಕ ಹರಕೆ ತೀರಿಸಿ, ಧನ್ಯತಾಭಾವ ಮೆರೆಯುತ್ತಾರೆ. ವಿಜಯ ದಶಮಿ ದಿನದಂದು ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಈ ಉತ್ಸವ ನಡೆಯುತ್ತದೆ.ಮೈಸೂರು ಸಂಭ್ರಮದ ಮೂಲ ವಿಜಯನಗರ ದಸರಾಮೈಸೂರಿನ ದಸರಾಕ್ಕೆ ಮೂಲ ಪ್ರೇರಣೆಯಾದ ವಿಜಯನಗರ ದಸರಾವು ಸಾಂಪ್ರದಾಯಿಕವಾಗಿ ಈಗಲೂ ನಡೆಯುತ್ತಾ ಬಂದಿದೆ. ಹೊಸಪೇಟೆಯ ಏಳುಕೇರಿಗಳ ಶಕ್ತಿದೇವತೆಗಳು, ಕಮಲಾಪುರದ ಏಳುಕೇರಿ, ನಾಗೇನಹಳ್ಳಿ, ಬಸವನದುರ್ಗದ ಶಕ್ತಿದೇವತೆಗಳು ಆಯುಧ ಪೂಜೆಯ ದಿನದಂದು ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡಕ್ಕೆ ತೆರಳಿ, ಚನ್ನಬಸವೇಶ್ವರನ ನೇತೃತ್ವದಲ್ಲಿ 'ಬನ್ನಿ' ಮುಡಿಯುವ ಆಚರಣೆ ವಿಜಯನಗರ ಕಾಲದಿಂದಲೇ ನಡೆಯುತ್ತ ಬಂದಿದೆ. ಹಂಪಿಯ ಮಹಾನವಮಿ ದಿಬ್ಬದ ಮೇಲೆ ಕುಳಿತು ಅರಸರು ಜಂಬೂಸವಾರಿಯ ವೈಭವ ಕಣ್ಣುಂಬಿಕೊಳ್ಳುತ್ತಿದ್ದರೆ, ಕೇರಿಗಳಲ್ಲಿ ನವರಾತ್ರಿ ಭವ್ಯವಾಗಿ ಪೂಜಿಸಲ್ಪಡುತ್ತಿದ್ದ ಶಕ್ತಿದೇವತೆಗಳ ಪಲ್ಲಕ್ಕಿ ಮೆರವಣಿಗೆ ಧರ್ಮದಗುಡ್ಡಕ್ಕೆ ಸಾಗುತ್ತಿತ್ತು. ಇಂದು ಮಹಾನವಮಿ ದಿಬ್ಬದಲ್ಲಿ ಯಾವುದೇ ಆಚರಣೆ ಇಲ್ಲ. ಆದರೆ ಕೇರಿಗಳಲ್ಲಿ ಇಂದಿಗೂ ಶಕ್ತಿದೇವತೆಗಳ ನವರಾತ್ರಿ ಆರಾಧನೆ, ಮೆರವಣಿಗೆ ಅನೂಚಾನವಾಗಿ ನಡೆಯುತ್ತ ಬಂದಿದೆ.'ಬನ್ನಿ' ಲೂಟಿಗೆ ನೂಕುನುಗ್ಗಲುಬೆಳಗಾವಿಯಲ್ಲಿ ಸರ್ವಭಾಷಿಕರು, ಸರ್ವಧರ್ಮೀಯರು ಸೇರಿ, ಸೌಹಾರ್ದದಿಂದ ದಸರಾ ಆಚರಿಸುತ್ತಾರೆ. ವಿಜಯದಶಮಿ ದಿನ ವತನದಾರ್ ಪಾಟೀಲ (ಪೊಲೀಸ್ ಪಾಟೀಲ) ಮನೆತನದ ನೇತೃತ್ವದಲ್ಲಿ ಕ್ಯಾಂಪ್ ಪ್ರದೇಶದ ವಿದ್ಯಾನಿಕೇತನ ಶಾಲೆ ಮೈದಾನದಲ್ಲಿ 'ಸೀಮೋಲ್ಲಂಘನೆ' ಕಾರ್ಯಕ್ರಮ ನಡೆಯುತ್ತದೆ.ಈ ಮೈದಾನದಲ್ಲಿ ಬನ್ನಿ ಮರದ ಎಲೆಗಳನ್ನು ಒಂದೇ ಕಡೆ ಗುಂಪಾಗಿ ಹಾಕಲಾಗಿರುತ್ತದೆ. ಬೆಳಗಾವಿ ನಗರದ ದೇವಾಲಯಗಳ 11 ಪಲ್ಲಕ್ಕಿಗಳು ಮೆರವಣಿಗೆ ಮೂಲಕ ಅಲ್ಲಿಗೆ ಬರುತ್ತವೆ. ಆಗ ಪಲ್ಲಕ್ಕಿಗಳಿಗೆ ಬನ್ನಿ ಮುಡಿಯಲಾಗುತ್ತದೆ. ನಂತರ ಜನರು 'ಬಂಗಾರ'ದ ಹೆಸರಿನಲ್ಲಿ 'ಬನ್ನಿ' ಲೂಟಿಗೆ ಮುಗಿಬೀಳುತ್ತಾರೆ. ಇದನ್ನು ಪಡೆಯಲು ನೂಕುನುಗ್ಗಲು ಉಂಟಾಗುತ್ತದೆ. ನಂತರ, ಜನರು ಬನ್ನಿ ತೆಗೆದುಕೊಂಡು ಮನೆಗೆ ಹೋಗುತ್ತಾರೆ. ಪರಸ್ಪರರು ಅದನ್ನು ಮುಡಿದು, ಹಬ್ಬದ ಶುಭಾಶಯ ಕೋರುತ್ತಾರೆ.