ಅದ್ದೂರಿ ಜಂಬೂಸವಾರಿಗೆ ಕಾತರ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿ ದಿನವಾದ ಬುಧವಾರ (ಅ.21) ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿ ಮಾಡಿಕೊಳ್ಳಲಾಗುತ್ತಿದೆ.ಅಂದು ಮಧ್ಯಾಹ್ನ 1.36ರಿಂದ 1.56ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಂಪ್ರದಾಯಿಕ ನಂದಿಧ್ವಜ ಪೂಜೆ ನ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯು ವಿಜಯದಶಮಿ ದಿನವಾದ ಬುಧವಾರ (ಅ.21) ಅದ್ದೂರಿಯಾಗಿ ನಡೆಯಲಿದ್ದು, ಜಿಲ್ಲಾಡಳಿತದಿಂದ ಅಂತಿಮ ಹಂತದ ತಯಾರಿ ಮಾಡಿಕೊಳ್ಳಲಾಗುತ್ತಿದೆ.ಅಂದು ಮಧ್ಯಾಹ್ನ 1.36ರಿಂದ 1.56ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಂಪ್ರದಾಯಿಕ ನಂದಿಧ್ವಜ ಪೂಜೆ ನೆರವೇರಿಸಿ ಜಂಬೂಸವಾರಿಗೆ ಮುನ್ನುಡಿ ಬರೆಯುವರು.ಸಂಜೆ 4.10ರಿಂದ 4.35ರವರೆಗೆ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಗಜಪಡೆಯ ಹೊಸ ಕ್ಯಾಪ್ಟನ್ ‘ಪ್ರಶಾಂತ’ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವರು. ಇದರೊಂದಿಗೆ, ಮೆರವಣಿಗೆಗೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಉಪಮುಖ್ಯಮಂತ್ರಿ ಜಿ.ಪರಮೇಶ್ವರ, ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಶಾಸಕ ಟಿ.ಎಸ್. ಶ್ರೀವತ್ಸ ಪಾಲ್ಗೊಳ್ಳುವರು. ಪರಂಪರೆಯ ರಥ: ಸಾಂಸ್ಕೃತಿಕ ನಗರಿಯ ರಾಜಮಾರ್ಗದಲ್ಲಿ ಸಾಗುವ ಸಾಂಸ್ಕೃತಿಕ ಶ್ರೀಮಂತಿಕೆ ಬಿಂಬಿಸುವ ಕಲಾತಂಡಗಳು, ಸಾಧನೆ ಕಟ್ಟಿಕೊಡುವ ಸ್ತಬ್ಧಚಿತ್ರಗಳನ್ನು ಒಳಗೊಂಡ ‘ಪರಂಪರೆಯ ರಥ’ ವೀಕ್ಷಿಸಲು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಅ.11ರಿಂದ ಸಂಭ್ರಮದ ಹೊನಲು ಹರಿಸಿದ ಉತ್ಸವದ ಕೊನೆಯ ಚರಣ ಕಣ್ತುಂಬಿಕೊಳ್ಳಲು ದೇಶ, ವಿದೇಶಗಳ ಪ್ರವಾಸಿಗರು ಕಾತರರಾಗಿದ್ದಾರೆ.ಸೋಮವಾರ ಅರಮನೆ ಆವರಣದಲ್ಲಿ ‘ಅಂತಿಮ ಹಂತದ ಜಂಬೂಸವಾರಿ ತಾಲೀಮು’ ನಡೆಸಲಾಯಿತು. ವಿವಿಧ ರೀತಿಯಲ್ಲಿ ‘ತಾಲೀಮು’ ನಡೆಸಿರುವ ಗಜಪಡೆಯು ಮೆರವಣಿಗೆಯ ಮೆರುಗು ಹೆಚ್ಚಿಸಲಿದೆ.ಈ ಬಾರಿ 15 ಜಿಲ್ಲೆಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾಯುಪಡೆ, ನೌಕಾಪಡೆಯ ಸ್ತಬ್ಧಚಿತ್ರ ಹಾಗೂ ಸಂಗೀತ ಬ್ಯಾಂಡ್ ಪಾಲ್ಗೊಳ್ಳುತ್ತಿರುವುದು ವಿಶೇಷ. 12 ಮಂದಿ ವಿದೇಶಿ ರಾಯಭಾರಿಗಳು, ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್ ಹಾಗೂ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸುವ ನಿರೀಕ್ಷೆ ಇದೆ.ಮೆರವಣಿಗೆಯು ಐದು ಕಿ.ಮೀ.ವರೆಗೆ ಸಾಗಿ ಬನ್ನಿಮಂಟಪ ತಲುಪಲಿದೆ. ಸಂಜೆ 7ಕ್ಕೆ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲರಾದ ಸುಧಾ ಯಾದವ್ ಅವರು ಕವಾಯತು ವೀಕ್ಷಿಸಿ, ಗೌರವವಂದನೆ ಸ್ವೀಕರಿಸುವರು. ಮೈನವಿರೇಳಿಸುವ ಪಂಜಿನ ಕವಾಯತು ಹಾಗೂ ಡ್ರೋನ್ ಪ್ರದರ್ಶನದೊಂದಿಗೆ 11 ದಿನಗಳ ನಾಡಹಬ್ಬಕ್ಕೆ ವಿಧ್ಯುಕ್ತ ತೆರೆ ಬೀಳಲಿದೆ.ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮ ವೀಕ್ಷಿಸಲು ಅತಿ ಗಣ್ಯರು, ಗಣ್ಯರು, ‘ಗೋಲ್ಡ್ ಕಾರ್ಡ್’, ಟಿಕೆಟ್ ಹಾಗೂ ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಇರಲಿದೆ. 48 ಸಾವಿರ ಅಸನಗಳ ವ್ಯವಸ್ಥೆ ಮಾಡಲಾಗಿದೆ.ಅರಮನೆಯಲ್ಲಿ, ‘ಖಾಸಗಿ ದರ್ಬಾರ್’ ನಡೆಸುತ್ತಿರುವ ರಾಜವಂಶಸ್ಥ ಯದುವೀರ್ ಮಂಗಳವಾರ ಆಯುಧಪೂಜೆ ಹಾಗೂ ಬುಧವಾರ ವಿಜಯದಶಮಿ ಮೆರವಣಿಗೆ ನಡೆಸುವರು. ಜತೆಗೆ ವಜ್ರಮುಷ್ಠಿ ಕಾಳಗ ನಡೆಯಲಿದೆ. ನಂತರ, ‘ಸರ್ಕಾರಿ ದಸರಾ’ ಮೆರವಣಿಗೆ ಶುರುವಾಗುತ್ತದೆ.https://mysoredasara.gov.in/ ವೆಬ್ಸೈಟ್ನಲ್ಲಿ ನೇರಪ್ರಸಾರದ ವ್ಯವಸ್ಥೆಯೂ ಇದೆ.ಅಂಬಾವಿಲಾಸ ಅರಮನೆ ಆವರಣದಲ್ಲಿ ಸೋಮವಾರ ಆನೆಗಳಿಗೆ ಅಂತಿಮ ಹಂತದ ತಾಲೀಮು ನಡೆಸಲಾಯಿತು ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿಮೈಸೂರು ದಸರೆಯ ಎಲ್ಲ ಕಾರ್ಯಕ್ರಮಗಳೂ ಯಶಸ್ವಿಯಾಗಿ ನಡೆದಿದ್ದು ವಿಜಯದಶಮಿ ಮೆರವಣಿಗೆಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆಸೀಮಾ ಲಾಟ್ಕರ್ ಮೈಸೂರು ನಗರ ಪೊಲೀಸ್ ಕಮಿಷನರ್ಜಂಬೂಸವಾರಿ ಭದ್ರತೆಗೆ 23 ಎಸ್ಪಿಗಳ ಜೊತೆಗೆ 6 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿದೆಚಿತ್ರರಂಗದವರ ‘ಮೆರವಣಿಗೆ’ ಕನ್ನಡ ಚಲನಚಿತ್ರ ರಂಗದ ಕಲಾವಿದರು ನಿರ್ಮಾಪಕರು ನಿರ್ದೇಶಕರು ಅಲಂಕೃತ ಅಂಬಾರಿ ವಾಹನದಲ್ಲಿ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ಈ ಬಾರಿಯ ವಿಶೇಷ. ‘150 ಮಂದಿ ಭಾಗವಹಿಸುವರು. ಅವರಿಗೆ ಪ್ರತ್ಯೇಕವಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು. ಪಾಲ್ಗೊಳ್ಳುವ ಆನೆಗಳು ಅಭಿಮನ್ಯು (ನಿಶಾನೆ ಆನೆ) ಗೋಪಿ (ನೌಪತ್ ಆನೆ) ಮಹೇಂದ್ರ ಶ್ರೀರಾಮ ಶ್ರೀಕಂಠ ಕಾವೇರಿ ಚೈತ್ರಾ ಲಕ್ಷ್ಮಿ ಸುಗ್ರೀವ ಏಕಲವ್ಯ ರೂಪಾ (ಸಾಲಾನೆಗಳು) ಕೊನೆಯಲ್ಲಿ ಅಂಬಾರಿ ಆನೆ ಪ್ರಶಾಂತ ಹೆಜ್ಜೆ ಹಾಕಲಿದೆ. ‘ಬೆಳಕಿನ ದಸರೆ’ಗೆ ಅಣಿಯಾದ ಮಂಜಿನ ನಗರಿ ಮಡಿಕೇರಿ: ಮಂಜಿನ ನಗರಿ ಮಡಿಕೇರಿ ಬೆಳಕಿನ ದಸರೆಗೆ ಅಣಿಯಾಗಿದೆ. ವೈಭವದ ದಶಮಂಟಪಗಳ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಅ. 21ರಂದು ವಿಜಯದಶಮಿಯಂದು ಮೈಸೂರಿನಲ್ಲಿ ಜಂಬೂಸವಾರಿ ಮುಗಿಯುತ್ತಿದ್ದಂತೆಯೇ ಇತ್ತ ನಗರದಲ್ಲಿ ರಾತ್ರಿ ಹತ್ತು ಮಂಟಪಗಳು ಬೆಳಕು ಸೂಸುತ್ತಾ ಸಾಗಲಿವೆ. ಪ್ರತಿ ಮಂಟಪವೂ ಪುರಾಣದ ಒಂದೊಂದು ಕತೆ ಪ್ರದರ್ಶಿಸಲಿದೆ. ಟ್ರ್ಯಾಕ್ಟರ್ಗಳ ಮೇಲೆ ಮಂಟಪ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. 1451 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಲ್ಲಿನ ಪೇಟೆ ಶ್ರೀರಾಮಮಂದಿರ ದೇಚೂರು ಶ್ರೀರಾಮಮಂದಿರ ದಂಡಿನ ಮಾರಿಯಮ್ಮ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ಕಂಚಿ ಕಾಮಾಕ್ಷಮ್ಮ ಮುತ್ತುಮಾರಿಯಮ್ಮ ಬಾಲಕ ಮಂಡಳಿ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಕೋದಂಡ ರಾಮ ದೇವಾಲಯ ಸಮಿತಿ ಕೋಟೆ ಮಾರಿಯಮ್ಮ ಕೋಟೆ ಗಣಪತಿ ಮತ್ತು ಕರವಲೆ ಭಗವತಿ ಮಂಟಪ ಸಮಿತಿಯವರು ತಮ್ಮ ಮಂಟಪಗಳನ್ನು ಶೋಭಾಯಾತ್ರೆಗೆ ತರಲಿದ್ದಾರೆ. ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲೂ ವಿಜಯದಶಮಿಯಂದು ಮಧ್ಯಾಹ್ನದಿಂದಲೇ ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾಗಲಿದೆ. ನಂತರ ರಾತ್ರಿ ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ.ರಂಗೇರಿದ ಮಂಗಳೂರು ಮಂಗಳೂರು: ಇಲ್ಲಿಯ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ‘ಮಂಗಳೂರು ದಸರಾ‘ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪ್ರತಿಷ್ಠಾಪನೆಗೊಂಡಿರುವ ಶ್ರೀಶಾರದೆ ಗಣಪತಿ ಹಾಗೂ ನವದುರ್ಗೆಯರ ಮೂರ್ತಿಗಳ ಶೋಭಾಯಾತ್ರೆ ಇದೇ 21ರಂದು ಸಂಜೆ 4ರಿಂದ ನಡೆಯಲಿದೆ. ಕರಾವಳಿಗರ ಬದುಕು– ಕಲಾ ಪರಂಪರೆ ಭಕ್ತಿ ಸೌಹಾರ್ದ ಹಾಗೂ ಯುವ ಉತ್ಸಾಹದ ಮಿಳಿತದೊಂದಿಗೆ ರಂಗೇರುವ ದಸರಾ ಮೆರವಣಿಗೆಯ ಮಾಧುರ್ಯವನ್ನು ಆಸ್ವಾದಿಸಲು ಮಂಗಳೂರು ಸಜ್ಜಾಗಿದೆ. ಬಣ್ಣ–ಬೆಳಕುಗಳ ಬೆರಗಿನ ಲೋಕವನ್ನೇ ಸೃಷ್ಟಿಸಿ ಪೌರಾಣಿಕ ಕಥನಗಳ ದೃಶ್ಯರೂಪಕಗಳನ್ನು ಪ್ರಸ್ತುತಿಪಡಿಸುವ ವೈವಿಧ್ಯಮಯ ಸ್ತಬ್ಧ ಚಿತ್ರಗಳು ಹುಲಿವೇಷ ಕುಣಿತದ ರೋಮಾಂಚನ ಜಾನಪದ ನೃತ್ಯಗಳ ಸೊಬಗು ಕಲಾ ಪರಂಪರೆಯ ಮಾಧುರ್ಯ ಚೆಂಡೆ-ನಾಸಿಕ್ ಬ್ಯಾಂಡ್ ವಾದನದ ಅಬ್ಬರದೊಂದಿಗೆ ನಾಡಿನ ಜನರನ್ನು ಭಕ್ತಿ– ಭಾವ ಪರವಶಗೊಳಿಸುವ ಶೋಭಾಯಾತ್ರೆಯ ಅಂತಿಮ ತಯಾರಿಗಳು ನಡೆಯುತ್ತಿವೆ. ಶೋಭಾಯಾತ್ರೆ ಸಾಗುವ ಈ ಮಾರ್ಗವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಮಂಗಳೂರಿನ ಇತಿಹಾಸ ಪ್ರಸಿದ್ಧ ಮಂಗಳಾದೇವಿ ದೇವಸ್ಥಾನದಲ್ಲಿ ಇದೇ 21ರಂದು ಸಂಜೆ 7ರಿಂದ ರಥೋತ್ಸವ ನೆರವೇರಲಿದೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆಯುವ ಉಡುಪಿ ಉಚ್ಚಿಲ ದಸರಾ ಮಹೋತ್ಸವವು ವರ್ಷದಿಂದ ವರ್ಷಕ್ಕೆ ಕರಾವಳಿಯಲ್ಲಿ ಜನಪ್ರಿಯವಾಗುತ್ತಿದೆ. ದಸರಾ ಹಬ್ಬದ ಕೊನೆಯ ದಿನ (ಅ.21) ದೇವಿ ಮೂರ್ತಿಯ ಮೆರವಣಿಗೆಯ ಶೋಭಾಯಾತ್ರೆ ನಡೆದು ಸಮುದ್ರದಲ್ಲಿ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಗುತ್ತದೆ.