ಗೋವಾ ಚುನಾವಣಾ ಕಣ: ಮೈತ್ರಿ, ಮತ ವಿಭಜನೆ - ಬಿಜೆಪಿ ತಂತ್ರಗಳೇನು?
ನವದೆಹಲಿ: ಬಹುಜನ ರಾಜಕೀಯ ಚಳವಳಿ ಎಂದಾಕ್ಷಣ ಉತ್ತರ ಪ್ರದೇಶದ ಕಾನ್ಶಿರಾಮ್ ನೆನಪಾಗುತ್ತಾರೆ. ಆದರೆ, ಶೋಷಿತ ಮತ್ತು ಹಿಂದುಳಿದ ಸಮುದಾಯಗಳನ್ನು ರಾಜಕೀಯವಾಗಿ ಸಂಘಟಿಸಿದ ಮೊದಲ ಯಶಸ್ವಿ ಪ್ರಯತ್ನ ನಡೆದದ್ದು ಗೋವಾದಲ್ಲಿ. ಅದರ ನೇತೃತ್ವ ವಹಿಸಿದ್ದವರು ದಯಾನಂದ ಬಂಡೋಡ್ಕರ್.1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತಗೊಂಡ ಗೋವಾ ಭಾರತಕ್ಕೆ ಸೇರ್ಪಡೆಯಾಯಿತು. ಎರಡು ವರ್ಷಗ

ನವದೆಹಲಿ: ಬಹುಜನ ರಾಜಕೀಯ ಚಳವಳಿ ಎಂದಾಕ್ಷಣ ಉತ್ತರ ಪ್ರದೇಶದ ಕಾನ್ಶಿರಾಮ್ ನೆನಪಾಗುತ್ತಾರೆ. ಆದರೆ, ಶೋಷಿತ ಮತ್ತು ಹಿಂದುಳಿದ ಸಮುದಾಯಗಳನ್ನು ರಾಜಕೀಯವಾಗಿ ಸಂಘಟಿಸಿದ ಮೊದಲ ಯಶಸ್ವಿ ಪ್ರಯತ್ನ ನಡೆದದ್ದು ಗೋವಾದಲ್ಲಿ. ಅದರ ನೇತೃತ್ವ ವಹಿಸಿದ್ದವರು ದಯಾನಂದ ಬಂಡೋಡ್ಕರ್.1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತಗೊಂಡ ಗೋವಾ ಭಾರತಕ್ಕೆ ಸೇರ್ಪಡೆಯಾಯಿತು. ಎರಡು ವರ್ಷಗಳ ಬಳಿಕ ಹೊಸದಾಗಿ ರಚನೆಯಾದ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆಯಿತು.ಆಗ ಸಾಮಾಜಿಕವಾಗಿ ಹಿಂದುಳಿದ ಗೊಮಂತಕ ಮರಾಠ ಸಮುದಾಯಕ್ಕೆ ಸೇರಿದ ಗಣಿಗಾರಿಕೆ ಉದ್ಯಮಿ ದಯಾನಂದ ಬಂಡೋಡ್ಕರ್, ಮಹಾರಾಷ್ಟ್ರವಾದಿ ಗೊಮಂತಕ ಪಕ್ಷದ (ಎಂಜಿಪಿ) ಮೂಲಕ ಕೆಳಜಾತಿ ಸಮುದಾಯಗಳನ್ನು ಒಗ್ಗೂಡಿಸಿದರು. ಈ ಸಂಘಟಿತ ಬೆಂಬಲದೊಂದಿಗೆ ಕಾಂಗ್ರೆಸ್ಗೆ ಸೋಲುಣಿಸಿ ಅಧಿಕಾರಕ್ಕೇರಿದರು.ಈಗ, ಮುಂದಿನ ವರ್ಷದ ಆರಂಭದಲ್ಲಿ ಗೋವಾದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಂದಿನ ರಾಜಕೀಯ ಇತಿಹಾಸ ಮತ್ತೆ ಮುನ್ನೆಲೆಗೆ ಬಂದಿದೆ.ಕೇವಲ 40 ವಿಧಾನಸಭಾ ಕ್ಷೇತ್ರಗಳು ಮತ್ತು 10.5 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಗೋವಾದಲ್ಲಿ ಸಣ್ಣ ಪಕ್ಷಗಳು ಹಾಗೂ ಚುನಾವಣಾ ಪೂರ್ವ ಮೈತ್ರಿಗಳು ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಇಲ್ಲಿ ರಾಜಕೀಯ ಲೆಕ್ಕಾಚಾರಗಳು ಕ್ಷಣಾರ್ಧದಲ್ಲಿ ಬದಲಾಗಬಲ್ಲವು. ಔತಣಕೂಟಗಳಲ್ಲಿ ರೂಪುಗೊಂಡ ಮೈತ್ರಿಗಳು ಬೆಳಗಾಗುವಷ್ಟರಲ್ಲಿ ಮುರಿದುಬಿದ್ದ ಉದಾಹರಣೆಗಳೂ ಇವೆ.ಈ ರಾಜಕೀಯ ಅನಿಶ್ಚಿತತೆಯ ನಡುವೆಯೂ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸತತ ಏಳು ವರ್ಷ ಏಳು ತಿಂಗಳ ಕಾಲ ಅಧಿಕಾರದಲ್ಲಿದ್ದು, ಸ್ಥಿರ ನಾಯಕತ್ವ ನೀಡಿದ್ದಾರೆ.ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮುನ್ನಡೆಸಲಿರುವ ಸಾವಂತ್ ಅವರ ಗುರಿ, ಗೋವಾದ ಬಿಜೆಪಿಯ ಪ್ರಮುಖ ಮುಖವಾಗಿದ್ದ ಮನೋಹರ್ ಪರಿಕ್ಕರ್ ಅವರ ದೀರ್ಘಾವಧಿಯ ಮುಖ್ಯಮಂತ್ರಿ ದಾಖಲೆಯನ್ನು ಮೀರಿಸುವುದಾಗಿದೆ.ಪರಿಕ್ಕರ್ ತಂತ್ರ, ಮತ ವಿಭಜನೆ2017ರ ಗೋವಾ ವಿಧಾನಸಭಾ ಚುನಾವಣೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ಬಹುಮತಕ್ಕೆ ಅಗತ್ಯವಾದ ಸಂಖ್ಯೆಯನ್ನು ತಲುಪಿರಲಿಲ್ಲ. ಆದರೆ ಬಿಜೆಪಿಯ ಮನೋಹರ್ ಪರಿಕ್ಕರ್, ಗೋವಾ ಫಾರ್ವರ್ಡ್ ಸೇರಿದಂತೆ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಮೈತ್ರಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾದರು. ಹೀಗೆ ಕಾಂಗ್ರೆಸ್ ಅಧಿಕಾರಕ್ಕೇರುವುದನ್ನು ತಡೆದರು.2019ರಲ್ಲಿ ಪರಿಕ್ಕರ್ ನಿಧನರಾದ ಬಳಿಕ ಪ್ರಮೋದ್ ಸಾವಂತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮುಂದಿನ ವರ್ಷಗಳಲ್ಲಿ ಅವರು ತಮ್ಮ ರಾಜಕೀಯ ಹಿಡಿತವನ್ನು ಬಲಪಡಿಸಿಕೊಂಡರು. ಕಾಂಗ್ರೆಸ್ನ ದುರ್ಬಲತೆಯೂ ಬಿಜೆಪಿಗೆ ಅನುಕೂಲವಾಯಿತು. ಕಾಂಗ್ರೆಸ್ನ 11 ಶಾಸಕರ ಪೈಕಿ ಎಂಟು ಮಂದಿ ಬಿಜೆಪಿಗೆ ಸೇರ್ಪಡೆಯಾದರು.2022ರ ಚುನಾವಣೆಯ ವೇಳೆಗೆ ಕಾಂಗ್ರೆಸ್ ಮತ್ತಷ್ಟು ದುರ್ಬಲವಾಗಿತ್ತು. ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೋವಾದ ರಾಜಕೀಯ ಕಣಕ್ಕೆ ಪ್ರವೇಶಿಸಿದವು. ಎಂಜಿಪಿ ಮತ್ತು ಗೋವಾ ರೆವಲ್ಯೂಷನರಿ ಪಾರ್ಟಿಯಂತಹ ಪ್ರಾದೇಶಿಕ ಪಕ್ಷಗಳೂ ತಮ್ಮ ಪ್ರಭಾವ ವಿಸ್ತರಿಸಲು ಪ್ರಯತ್ನಿಸಿದವು.ಇದರಿಂದ ಬಿಜೆಪಿಯೇತರ ಮತಗಳು ವಿಭಜನೆಯಾದವು. ಈ ರಾಜಕೀಯ ಸಮೀಕರಣ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ನೆರವಾಯಿತು.ಬದಲಾಗುತ್ತಿದೆಯೇ ರಾಜಕೀಯ ಲೆಕ್ಕಾಚಾರ?ಆದರೆ, ಈ ಬಾರಿಯ ಚುನಾವಣೆಯಲ್ಲಿ ಪರಿಸ್ಥಿತಿ ಹಿಂದಿನಂತೆಯೇ ಇರಲಿದೆ ಎಂದು ಹೇಳಲಾಗದು.ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಟಿಎಂಸಿ ಗೋವಾದ ರಾಜಕೀಯದಿಂದ ಬಹುತೇಕ ಹಿಂದೆ ಸರಿದಿದೆ. ಮತ್ತೊಂದೆಡೆ, ಎಎಪಿ ಮತ್ತು ಗೋವಾ ಫಾರ್ವರ್ಡ್ ಪಕ್ಷಗಳು ಚುನಾವಣಾ ಮೈತ್ರಿ ಘೋಷಿಸಿದ್ದರೂ, ಇದೀಗ ಆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ.ಗೋವಾ ಫಾರ್ವರ್ಡ್ ನಾಯಕ ವಿಜಯ್ ಸರ್ದೇಸಾಯಿ ಮೈತ್ರಿಯ ಬಗ್ಗೆ ಮರುಚಿಂತನೆ ನಡೆಸುತ್ತಿದ್ದು, ಕಾಂಗ್ರೆಸ್ನೊಂದಿಗೆ ಮತ್ತೆ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿದ್ದಾರೆ.ಈ ಬೆಳವಣಿಗೆಯನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಬಿಜೆಪಿಯೇತರ ಪಕ್ಷಗಳ ನಡುವಿನ ಮೈತ್ರಿಗಳು ವಿರೋಧ ಪಕ್ಷಗಳ ಮತಗಳನ್ನು ವಿಭಜಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿವೆ ಎಂಬುದು ಕಾಂಗ್ರೆಸ್ನ ವಾದ. ಸಣ್ಣ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಮತ್ತೊಮ್ಮೆ ಲಾಭವಾಗಲಿದೆ ಎಂಬುದು ಅದರ ಆತಂಕ.ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ನಾಲ್ಕು ವಾರಗಳ ರಾಜ್ಯವ್ಯಾಪಿ ಯಾತ್ರೆ ಕೈಗೊಂಡಿದ್ದಾರೆ. ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸುವುದರ ಜತೆಗೆ, ನಿರ್ಣಾಯಕ ಮತಬಲ ಹೊಂದಿರುವ ವಿವಿಧ ಸಾಮಾಜಿಕ ಸಮುದಾಯಗಳನ್ನು ತಲುಪುವುದು ಯಾತ್ರೆಯ ಉದ್ದೇಶವಾಗಿದೆ.ರಾಹುಲ್ ಗಾಂಧಿ ಅವರು ಬುಡಕಟ್ಟು ಸಮುದಾಯಗಳನ್ನು ತಲುಪಲು ನಡೆಸುತ್ತಿರುವ ಪ್ರಯತ್ನಗಳ ಪರಿಣಾಮ ಗೋವಾದಲ್ಲೂ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಕಾಂಗ್ರೆಸ್ನಲ್ಲಿದೆ. ವಿಶೇಷವಾಗಿ ಉತ್ತರ ಗೋವಾದ ಪರಿಶಿಷ್ಟ ಜಾತಿ ಸಮುದಾಯಗಳು ರಾಜಕೀಯದಲ್ಲಿ ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸುತ್ತಿವೆ.ತೆರೆಗೆ ಸರಿದ ಬಂಡೋಡ್ಕರ್ ರಾಜಕಾರಣ:ದಯಾನಂದ ಬಂಡೋಡ್ಕರ್ ಅವರು ಗೋವಾದ ಸಾಂಪ್ರದಾಯಿಕ ಪ್ರಭಾವಿ ಸಾಮಾಜಿಕ ವರ್ಗಗಳಿಗೆ, ಅದರಲ್ಲೂ ಕ್ಯಾಥೋಲಿಕರು ಮತ್ತು ಬ್ರಾಹ್ಮಣರ ಪ್ರಾಬಲ್ಯಕ್ಕೆ ಸವಾಲೊಡ್ಡಿದ್ದರು. ಹಿಂದುಳಿದ ಸಮುದಾಯಗಳನ್ನು ಸಂಘಟಿಸುವ ಮೂಲಕ ಸುಮಾರು ಎರಡು ದಶಕಗಳ ಕಾಲ ಗೋವಾದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ್ದರು.ಆದರೆ ಈಗಿನ ಆಡಳಿತಾರೂಢ ಮೈತ್ರಿಕೂಟದ ರಾಜಕೀಯ ತಂತ್ರ ಮುಖ್ಯವಾಗಿ ಅಧಿಕಾರದ ಸಮೀಕರಣಗಳನ್ನು ನಿರ್ವಹಿಸುವುದರ ಸುತ್ತ ಸುತ್ತುತ್ತಿದೆ. ಮೈತ್ರಿ ಪಕ್ಷಗಳನ್ನು ಒಗ್ಗೂಡಿಸುವುದು, ವಿರೋಧ ಪಕ್ಷಗಳು ಒಂದಾಗದಂತೆ ನೋಡಿಕೊಳ್ಳುವುದು ಮತ್ತು ಅಸಮಾಧಾನ ಹೆಚ್ಚುತ್ತಿರುವ ಕ್ಷೇತ್ರಗಳಲ್ಲಿ ತನ್ನ ಹಿಡಿತ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರಮುಖ ಸವಾಲುಗಳಾಗಿವೆ.ದಕ್ಷಿಣ ಗೋವಾದ ಫಲಿತಾಂಶ ನೀಡಿದ ಎಚ್ಚರಿಕೆ2024ರ ಲೋಕಸಭಾ ಚುನಾವಣೆಯ ಫಲಿತಾಂಶ ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಗಂಟೆ ಬಾರಿಸಿತ್ತು. ಕಾಂಗ್ರೆಸ್ ದಕ್ಷಿಣ ಗೋವಾ ಕ್ಷೇತ್ರವನ್ನು ಬಿಜೆಪಿಯಿಂದ ಕಸಿದುಕೊಂಡಿತ್ತು. ರಾಜ್ಯದ ಎಲ್ಲೆಡೆ ಬಿಜೆಪಿಯ ಹಿಡಿತ ಒಂದೇ ರೀತಿಯಲ್ಲಿಲ್ಲ ಎಂಬುದಕ್ಕೆ ಇದು ಸೂಚನೆಯಾಗಿತ್ತು.ಈಗ ಸಾವಂತ್ ಮುಂದಿರುವ ದೊಡ್ಡ ಪ್ರಶ್ನೆ, ಈ ರಾಜಕೀಯ ಹಿನ್ನಡೆಯ ಲಕ್ಷಣಗಳನ್ನು ತಡೆಯಲು ಸಾಧ್ಯವೇ ಎಂಬುದು. ವಿರೋಧ ಪಕ್ಷಗಳು ಮತ್ತೆ ಒಗ್ಗೂಡಿದರೆ ಬಿಜೆಪಿಯ ಗೆಲುವಿನ ಲೆಕ್ಕಾಚಾರ ಬದಲಾಗಬಹುದೇ? ಅಥವಾ ಮತ ವಿಭಜನೆಯ ಲಾಭ ಪಡೆದು ಬಿಜೆಪಿ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಬಹುದೇ?ಕೇವಲ 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗೋವಾದಲ್ಲಿ ಸಣ್ಣ ಬದಲಾವಣೆಯೂ ದೊಡ್ಡ ರಾಜಕೀಯ ಪರಿಣಾಮ ಉಂಟುಮಾಡಬಲ್ಲದು. ಸಾಮಾಜಿಕ ಸಮೀಕರಣಗಳು, ಪ್ರಾದೇಶಿಕ ಪಕ್ಷಗಳ ನಿರ್ಧಾರಗಳು ಮತ್ತು ಮೈತ್ರಿಗಳ ಭವಿಷ್ಯ.... ಇವೆಲ್ಲವೂ ಮುಂದಿನ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆಯಿದೆ. (ಸೂಚನೆ: ಮೇಲೆ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಸ್ವಂತ ಅಭಿಪ್ರಾಯಗಳಾಗಿವೆ. ಅವು ಪ್ರಜಾವಾಣಿಯ ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪ್ರತಿಫಲಿಸುವುದಿಲ್ಲ)